Tuesday, December 15, 2009

ತುಳು ಜಾತ್ರೆ...



ಮತ್ತೊಂದು ಮಹಾಜಾತ್ರೆ ಉಜಿರೆಯಲ್ಲಿ ನಡೆಯಿತು.
ಅದು ವಿಶ್ವ ತುಳು ಸಮ್ಮೇಳನ. ಎಲ್ಲೆಂಲ್ಲಿಂದ ಬಂದಿದ್ದರೋ ಗೊತ್ತಿಲ್ಲ. ಆದರೆ ಲಕ್ಷಾಂತರ ಮಂದಿ ಆಗಮಿಸಿ ಉಜಿರೆಯ ತುಂಬ ತಿರುಗಾಡಿದರು. ಮಳಿಗೆಗಳಲ್ಲಿ ಏನುಂಟು ಎಂದು ನೋಡಿದರು. ಊರಿಗೆ ಊರೇ ಸಾಸಿವೆ ಕಾಳು ಹಾಕಲೂ ಜಾಗವಿಲ್ಲದಂತೆ ಜನದಟ್ಟಣೆ ಇದ್ದರೂ ಯಾರೂ ತಾಳ್ಮೆಗೆಡಲಿಲ್ಲ. ಎಲ್ಲೂ ಪೊಲೀಸ್ ಲಾಟಿ ಬೀಸಲಿಲ್ಲ. ಯಾರೂ ಹೊಡೆಯಲು ಪ್ರಚೋದಿಸಲಿಲ್ಲ. ನಾಲ್ಕು ದಿನ ಊರಿಡೀ ಅದೇ ಸುದ್ದಿ. ನೀವು ಉಜಿರೆಗೆ ಹೋಗಿದ್ದೀರ?
********
ಆದರೆ ಸಣ್ಣ ಸಣ್ಣ ವಿಷಯಕ್ಕೆಲ್ಲಾ ಪ್ಯಾನೆಲ್ ಚರ್ಚೆ ನಡೆಸುವ ನಮ್ಮ ಕನ್ನಡದ 24 ಗಂಟೆ ಸುದ್ದಿವಾಹಿನಿಗಳು ತುಳು ಸಮ್ಮೇಳನ, ತುಳುವರ ಸಮಸ್ಯೆ, ಕಷ್ಟ, ಸುಖ, ದು:ಖ ದುಮ್ಮಾನ, ರಾಜಧಾನಿಯ ತಾರತಮ್ಯ, ಭವಿಷ್ಯಗಳ ಕುರಿತು ಸೊಲ್ಲೆತ್ತಲೇ ಇಲ್ಲ.!
ವಿಪರ್ಯಾಸವೆಂದರೆ, ಪ್ರಮುಖ ಮಾಧ್ಯಮ ‘ಹುಲಿ’ಗಳೆಂದು ಹೇಳಿಕೊಳ್ಳುವವರೆಲ್ಲರೂ ತುಳುನಾಡಿನ ನಂಟು ಬೆಳೆಸಿಕೊಂಡವರು. ಯುವ ಬುಧ್ಹಿವಂತರು’ ಉಜಿರೆಯ ಹಳೇ ವಿಧ್ಯಾರ್ಥಿಗಳು. ಕನ್ನಡ ದೃಶ್ಯ ಮಾದ್ಯಮದ ಆಯಕಟ್ಟಿನ ಜಾಗದಲ್ಲಿ ಕುಳಿತಿರುವವರು.
************
ನೆಗೆಟಿವ್ ಅಂಶಗಳೇನೇ ಇರಲಿ,
ಡಿಸೆಂಬರ್ 10-13ರವರೆಗೆ ನಡೆದ ಸಮ್ಮೇಳನ 10 ಲಕ್ಷ ತುಳುವರನ್ನು ಒಟ್ಟು ಸೇರಿಸಿದ್ದಂತೂ ಹೌದು.ಅಲ್ಲಿ ಚರ್ಚೆಯಾದದ್ದು, ವಿಚಾರ ಮಂಡನೆಯಾದದ್ದು ಯಾರಿಗೆ ಎಷ್ಟು ಅರ್ಥ ಆಗಿದೆಯೋ ಗೊತ್ತಿಲ್ಲ. ಹಾಗೆ ಸುಮ್ಮನ ಬಂದು ಹೋದವರೂ ಇರಬಹುದು. ಆದರೂ ತುಳು ಮನಸ್ಸುಗಳನ್ನು ಒಗ್ಗೂಡಿಸಿದ್ದು ಹೌದು.
********
ದುರಂತ ಎಂದರೆ ತುಳು ಸಮ್ಮೇಳನದ ಮರುದಿನ ಬೆಂಗಳೂರು-ಮಂಗಳೂರು ರೈಲು ಕಣ್ಣೂರಿಗೆ ವಿಸ್ತರಣೆ ಆಯಿತು.
ಮುಂದೇನು?

Wednesday, November 11, 2009

ಹೊಸ ಕನWORRYಕೆ



*************
ಮುಂದೇನು? ಗೊತ್ತಿಲ್ಲ!ಗುರಿ ಇಲ್ಲದ ಪಯಣ
ಗತಿ ಇಲ್ಲದ ಬದುಕು
ಎಲ್ಲ ನಿರೀಕ್ಷೆ ಮಸುಕು
*************


ತಿನ್ನಲು ಪಿಜ್ಜಾ
ಉಡಲು ಬರ್ಮುಡಾ
ಇದ್ದರೆ ಸಾಕಾ
ನೋವಾದರೆ ನಾಕ
ನರಕವೂ ಇಲ್ಲೇ
ಯಾವುದೂ ಬದಲಾಗಲ್ಲ
*************
ಮೋಡಿಯ ಮಾತು
ಹೊನ್ನ ಶೂಲ
ಗಟ್ಟಿರೊಟ್ಟಿ ಚಮಚ ತುಪ್ಪ
ಗಲ್ಲವನ್ನೂ ಸವರಲಿಲ್ಲ!
ಅಂಗೈಗೆ ಚೊಂಬೂ ಸಿಕ್ಕಿಲ್ಲ
ಎಲ್ಲಾ ನಮ್ಮ ಹೆಸರಲ್ಲಿ
**********
2012ರಲ್ಲಿ ಮಹಾಪ್ರಳಯವಂತೆ!
ಅದಕ್ಕೂ ಮುನ್ನ ಹಾಲಾಹಲ
ಹೆಲೆಕಾಪ್ಟರ್ ನಲ್ಲೇ
ಬಂದಿಳಿದಿದೆ..
ಇನ್ನು ಮೂರೇ ವರ್ಷ..
ಗಣಿ ಧೂಳು ಹಾರಿಸಲು ಅದು ನಿಮಿಷ
*******
(ಚಿತ್ರ ಸಾಂಕೇತಿಕ)

Sunday, October 25, 2009

‘ಮೋಹ’ಜಾಲ





ಅವನಿಗೆ ಅವಳು ಸಿಕ್ಕಿದ್ದಾ?
ಅವಳಿಗೆ ಅವನು ಸಿಕ್ಕಿದ್ದಾ?
ಒಟ್ಟಿನಲ್ಲಿ ಮೊದಲ ನೋಟದಲ್ಲೇ ಅವಳು ಕರಗಿ ಹೋಗಿದ್ದಳು.
ಅವನ ಚುಂಬಕ ಮಾಂತ್ರಿಕ ಆಹ್ವಾನಕ್ಕೆ ಅವಳು ಸಮ್ಮತಿ ನೀಡಿದ್ದಳು.
ಅಲ್ಲಿಂದ ಆರಂಭವಾಯಿತು ಮೋಸದಾಟ!
ಅವಳು ಅವನನ್ನು ನಂಬಿದಳು, ತನ್ನ ಮನೆಯವರನ್ನು ವಂಚಿಸಿದಳು.
ಅವನ ಮನೆಯವರು ಅವನನ್ನೇ ನಂಬಿದ್ದರು,ಆದರೆ ಅವನು ಅವಳನ್ನು ವಂಚಿಸಿದ
ಒಂದು ದಿನ ಓಡಿ ಹೋದರು, ಮದುವೆಗೆ ಮೊದಲೇ ಮಧುಚಂದ್ರವಾಯಿತು.
ರಾತ್ರಿ ಬೆಳಗಾಗುವುದರೊಳಗೆ ಅವಳ ಗರ್ಭಧಾರಣೆ ತಡೆಯಲು ಅವನು ನೀಡಿದ್ದು ಸೈನೈಡ್..!
ಅನಾಥ ಮಹಿಳೆ ಶವ ಪತ್ತೆ ಶಿರೋನಾಮೆಯ ಸುದ್ದಿ ಪೇಪರಿನ ಯವುದೋ ಮೂಲೆಯಲ್ಲಿ ಬಂತು. ಕೇಸ್ ಕ್ಲೋಸ್ ಆಯ್ತು.

----ಇಂಥ 19 ಹೆಣ್ಣುಮಕ್ಕಳನ್ನು ‘ಮುಗಿಸಿದ’ ಕುಖ್ಯಾತಿ ಹೊತ್ತ ಆರೋಪಿ ಮೋಹನ ಈಗ ಪೊಲೀಸ್ ಕಸ್ಟಡಿಯಲ್ಲಿದ್ದಾನೆ..
ಇದರಲ್ಲಿ ಮೋಹನನದ್ದೇ ತಪ್ಪಾ, ಅವನನ್ನು ಪ್ರೀತ್ಸಿದ್ದು ಹುಡುಗಿಯರ ತಪ್ಪಾ, ಮನೆಯವರಿಗೆ ಹೇಳದೇ ಚಿನ್ನಾಭರಣ ಸಹಿತ ಹಣವನ್ನೆಲ್ಲ ಹೊತ್ತು ಮೋಹನನ ಜೊತೆ ಹೋದ ಹುಡುಗಿಯರು ‘ಅಮಾಯಕ’ರಾ? ಇಂಥ ಪ್ರಕರಣಗಳು ಇನ್ನೂ ಇರಬಹುದಾ?--ಇದು ಸಧ್ಯ ಎಲ್ಲರ ನಾಲಗೆ ತುದಿಯಲ್ಲಿ ಇರುವ ಪ್ರಶ್ನೆ.. (ಚಿತ್ರ: ಬಂಧಿತ ಆರೋಪಿ ಮೋಹನ )

Saturday, August 29, 2009

ಹಗಲುಗನಸಲ್ಲ!



(ರೈಲು ಹಗಲೂ ಬೆಂಗಳೂರಿಗೆ ಓಡುತ್ತದೆ ಎಂಬ ಖುಷಿಯಿಂದ ರೈಲಿನ ನಿರೀಕ್ಷೆಯಲ್ಲಿ ನನ್ನೂರು ಬಂಟ್ವಾಳ ರೈಲು ನಿಲ್ದಾಣದಲ್ಲಿ ಕುತೂಹಲದಿಂದ ಕಾಯುತ್ತಿದ್ದ ನನ್ನೂರಿನ ಜನ)

ಇದು ನೂರಕ್ಕೆ ನೂರು ಸತ್ಯ.
ಮಂಗಳೂರಿನಿಂದ ಬೆಂಗಳೂರಿಗೆ ರೈಲು ಹಗಲು ಹೊತ್ತೂ ಓಡುತ್ತದೆ!
ಇಂಥ ಹಳಸಿದ ಮಾತು ಕೇಳಿ ಕೇಳಿ ವಾಕರಿಕೆ ಬರುವಂತಾಗಿತ್ತು.
ರಾಜಕಾರಣಿಗಳಂತೂ ಅವರು ಮಾಡಲಿ ಎಂದು ಇವರು, ಇವರು ಮಾಡಲಿ ಎಂದು ಅವರು ಪರಸ್ಪರ ಪೈಪೋಟಿಯ ಹೇಳಿಕೆ ಕೊಡುತ್ತಾ ಇದ್ದರು. ಈ ಮಧ್ಯೆ ಹಿರಿಯರಾದ ಪರ್ಕಳದ ಆರ್.ಎಲ್.ಡಯಾಸ್, ಪುತ್ತೂರು ರೈಲ್ವೇ ಯಾತ್ರಿ ಸಂಘದ ದಿನೇಶ್ ಕೆ.ಭಟ್, ಬೆಂಗಳೂರಿನಲ್ಲಿರುವ ಅನಿಲ್ ಹೆಗ್ಡೆ ಮೊದಲಾದವರು ಬೇರೆ ಬೇರೆ ಕಡೆ ಇದ್ದ ಸ್ನೇಹಿತರನ್ನೆಲ್ಲಾ ಒಟ್ಟುಗೂಡಿಸಿ ಮನವಿಗಳ ಮೇಲೆ ಮನವಿ ಕೊಟ್ಟರು. ಸೈಲೆಂಟ್ ಹೋರಾಟ ಮಾಡಿದರು. ಕೊನೆಯ ಹಂತದಲ್ಲಿ ಮಂಗಳೂರಿನಲ್ಲಿ ಕನ್ನಡ ಸಂಘಟನೆ ಸಹಿತ ನಾಗರಿಕ ಪ್ರತಿಭಟನೆಗಳೂ ನಡೆದವು. ಇವರೆಲ್ಲರ ಜೊತೆ ನಾವು ಮಾಡ್ತೇವೆ ಎಂಬ ರಾಜಕಾರಣಿಗಳ ಹೇಳಿಕೆಗಳು.
ಎಲ್ಲರ ಪ್ರಯತ್ನದ ಫಲವಾಗಿ ಕೊನೆಗೂ
ಮಂಗಳೂರಿನಿಂದ ಬೆಂಗಳೂರಿಗೆ ಹಗಲು ಹೊತ್ತಿನಲ್ಲಿ ರೈಲು ಹೊರಟಿದೆ. ಆದರ ವಾರದಲ್ಲಿ ಮೂರು ಹೊತ್ತು ಅದೂ ಸಂಡೇ ಇಲ್ಲ ಎಂಬ ಬೇಸರವೂ ಇದೆ.
ಇನ್ನೇನಾಗುತ್ತೆ? ರೈಲು ಹೇಗಿದೆ? ಮುಂದೆ ನೋಡೋಣ.

Monday, August 24, 2009

ಗಣೇಶಾವತಾರ




ಸ್ನೇಹಿತರೆ,
ಇದು ಕಲಾವಿದ ಪುರುಷೋತ್ತಮ ಅಡ್ವೆ ಅವರ ಕಲಾಕೃತಿ. ಉಡುಪಿಯ ಶಿರೂರು ಮಠದಲ್ಲಿ ಅವರ ಕಲಾಕೃತಿಗಳ ಪ್ರದರ್ಶನ ಶನಿವಾರ, ಭಾನುವಾರ ನಡೆಯಿತು.
ಮಣಿಪಾಲದಲ್ಲಿ ನಡೆಯಬೇಕಿದ್ದ ಈ ಪ್ರದರ್ಶನಕ್ಕೆ ಕೆಲವರು ಚಿತ್ರ ‘ಅವರು’ ಬಯಸಿದಂತಿರಲಿಲ್ಲ ಎಂದು ಅಡ್ದಿಪಡಿಸಿದರು.
ಈ ಚಿತ್ರ ನೋಡಿ ನಿಮಗೇನನ್ನಿಸುತ್ತೆ?

Saturday, August 8, 2009

ದೊಡ್ಡ ಅಂಗಡಿ, ಸಣ್ಣ ಲೆಕ್ಕಾಚಾರ!



‘ದೊಡ್ದ ಅಂಗಡಿ’
ಬೋರ್ಡ್ ನೋಡಿದಾಗ ವ್ಹಾ...ವ್ಹಾ.. ಒಳಗೆ ನುಗ್ಗಿ ಏನಿದೆ ನೋಡೋಣ್ವಾ ಎಂದು ತಲೆಯೊಳಗೆ ಆಸೆಗಳು ಥೈ ಥೈ ಎಂದು ಕುಣಿಯುತ್ತದೆ ಮಾರಾಯ್ರ್ರೆ.
ಆದ್ರೆ ಪ್ರೈವೇಟ್ ಕಂಪೆನಿಯಲ್ಲಿ ತಿಂಗಳಿಗೊಂದಿಷ್ಟು ಎಂದು ದುಡ್ಡು ಲೆಕ್ಕ ಮಾಡುವ ಬಡ ನಗರವಾಸಿ ನಾನು. ಇದೆಲ್ಲಾ ಸಾಧ್ಯವುಂಟಾ? ಪಟ್ಟಣದಲ್ಲಿದ್ದೂ ನಿರ್ಲಕ್ಷಿತ ಪ್ರಜೆಯಲ್ವಾ? ಹೀಗಾಗಿ ಇಂಥದ್ದೆಲ್ಲಾ ತಲೆಯೊಳಗೆ ಬಂದರೆ ಸೀದಾ ಗೂಡಂಗಡಿಗೆ ಹೋಗಿ 4 ರುಪಾಯಿಯ ಚಾ ಕುಡಿಯುತ್ತೇನೆ.
ಆದ್ರೂ ಅಲ್ಲಿ ದೊಡ್ಡ ದೊಡ್ದ ಕಾರುಗಳಲ್ಲಿ ಅರ್ಧಮೈ ಕಾಣುವಂತೆ ಬರುವ ದೊಡ್ಡ ದೊಡ್ಡ ಮನುಷ್ಯರು, ಹತ್ತಿರದಲ್ಲೇ ದೊಡ್ದ ನೋಟು ಕೊಟ್ಟು ಕಾಫಿ ಕುಡಿಯುವವರು..ಎಲ್ಲರನ್ನೂ ಸಿಟಿ ಬಸ್ಸಿನ ಫುಟ್ ಬೋರ್ಡ್ನಲ್ಲಿ ನೇತಾಡಿಕೊಂಡ್ ಹೋಗುವ ನನ್ನಂಥ ಹರುಕಲಂಗಿಯ ಲೋ ಮಿಡಲ್ ಕ್ಲಾಸ್ ಪ್ರಾಣಿ ನೋಡುವುದೇ ತಪ್ಪಾ?
ಛೇ.. ಛೇ.
ತಪ್ಪಲ್ಲ. ಎಂದುಕೊಂಡು ಈ ಸರ್ತಿ ಸಂಬಳ ಬಂದ ಕೂಡಲೇ ಪರ್ಸು ತುಂಬ ಹಣ ತುಂಬಿಸಿ ಒಂದು ಚೆಸ್ ಬೋರ್ಡ್ ತೆಗೆಯಬೇಕು. ಅದೂ ಗಟ್ಟಿಮುಟ್ಟಿನ ಮರದ್ದು ಎಂದು ತೀರ್ಮಾನಿಸಿಯೇಬಿಟ್ಟೆ.
ಮೊನ್ನೆ ಸಾಫ್ಟ್ವೇರ್ ಇಂಜಿನಿಯರ್ ಮಗನ ಮನೆಗೆಂದು ಬೆಂಗ್ಳೂರಿಗೆ ಹೋಗಿ ಬಂದ ಮಾಸ್ಟ್ರು ಹೇಳಿದ್ರಲ್ವ? “ಅಲ್ಲಿ ತರ್ಕಾರಿಯನ್ನೂ ಜನ ಶಾಪ್ಪಿಂಗ್ ಮಾಲ್ ನಲ್ಲೇ ತೆಗೊಳ್ಳುದಂತೆ. ಒಮ್ಮೆ ಒಳಗೆ ಹೋದರೆ ಇಡೀ ಮನೆಗೆ ಬೇಕಾಗುವ ಸಾಮಾನು ತೆಕೊಳ್ಬಹುದಂತೆ.ಪ್ರಪಂಚದ ಎಲ್ಲಾ ವಸ್ತುಗಳನ್ನು ಅಲ್ಲಿ ಪೇರಿಸಿಡುತ್ತಾರೆ, ನಮಗೆ ಬೇಕಾದ್ದು ಆಯ್ಕೆ ಮಾಡಿ ಕೊಂಡುಕೊಳ್ಳಬಹುದು. ಸುಮ್ಮನೆ ಅಲ್ಲಿ ಇಲ್ಲಿ ಅಲೆಯುವುದು ಯಾಕೆ? ಈಗ ಮಂಗ್ಳೊರಲ್ಲೂ ಹಾಗೆ ಮಾರಾಯ ‘ನೀನೂ’ ಹೋಗ್ಬಹುದು. ಅಲ್ಲಿ ಎಲ್ಲ ಅಂಗಡಿಗಿಂತ ಕಮ್ಮಿ ರೇಟು..”
ಹೋ. ಹಾಗಾ? ಈ ಸರ್ತಿ ಸಂಬಳ ಬಂದ ಕೂಡಲೇ ಹೋಗ್ಬೇಕು ಎಂದು ಲೆಕ್ಕ ಹಾಕಿಯೇ ಬಿಟ್ಟೆ.
ಹೌದು ಮಾರಾಯ್ರೆ .. ಎಸ್ಟಾದ್ರೂ ನನ್ನಂತೆ ಮಂಗ್ಳೊರಲ್ಲಿ ಸಾವಿರ ಜನ ಇದ್ದಾರಲ್ವ ..ಇರಲಿ ಬಿಡಿ ಎಂದು ಸಾವಿರ ರುಪಾಇ ಕಿಸೆಯಲ್ಲಿಟ್ಟು ‘ದೊಡ್ಡ ಅಂಗಡಿ’ ಒಳಗೆ ಇದ್ದುದರಲ್ಲಿ ಸ್ವಲ್ಪ ಚೆನ್ನಾಗಿರೋ ಅಂಗಿ ಹಾಕಿಕೊಂಡು ಅಲ್ಲಿ ಕಾಲಿಟ್ಟಾಗ ಇಡೀ ಹಾಲ್ ಕೂಲ್ ಕೂಲ್ ಆಗಿ ಕಂಡಿತು. ಜೇಬನ್ನು ಮುಟ್ತಿ ದುಡ್ದಿದ್ಯಾ? ಎಂಬ ಲೆಕ್ಕಾಚಾರದೊಂದಿಗೆ ಒಳಪ್ರವೇಶ ಮಾಡಿದಾಗ ನನ್ನನ್ನೇ ಅಡಿಯಿಂದ ಮುಡಿಯ ವರೆಗೆ ಒಳ್ಳೇ ಹಳ್ಳಿ ಗಮಾರನನ್ನು ನೋಡುವಂತೆ ನನಗೇ ಭಾಸವಾಯಿತು.
‘ಹೋ ಹೋ..ನಾನು ಚಪ್ಪಲಿ ಹಾಕಿಕೊಂಡು ಬಂದದಲ್ವ?..ಛೇ..ನನ್ನಲ್ಲಿ ಒಂದು ಬೂಟೂ ಇಲ್ವಲ್ಲ’ ಎಂಬ ಕೀಳರಿಮೆ ನನಗೂ ಬಂತು.
ಇರಲಿ, ಅವರೇನು ಅಂದುಕೊಂಡ್ರೆ ನನಗೇನು? ನಾನೇನು ಅವರಲ್ಲಿ ಸಾಲ ಮಾಡಿದ್ದೇನಾ? ಎಂಬ ಸೆಡವಿನಿಂದಲೆ ಒಳಗೆ ಕಾಲಿಟ್ಟೆ.
‘ಮಾಸ್ಟ್ರು ಹೇಳಿದ್ದು ಸತ್ಯ..ಎಸ್ಟೊಂದು ಸಾಮಾನುಗಳಿತ್ತಲ್ವ? ಅಲ್ಲೇ ಪಕ್ಕದಲ್ಲಿ ಅದ್ರ ರೇಟು ಕೂಡ ನೇತಾಡಿಸಿಟ್ತಿದ್ದಾರೆ. ಛೇ. ಹಣ ಜಾಸ್ತಿ ತರ್ಬೇಕಿತ್ತು ಎಂದು ಅನ್ನಿಸಿತು.
ಹತ್ತಿರದಲ್ಲೇ ತಲೆತಿರುಗಿ ಹೊಟ್ಟೆ ತೊಳಸಿ ವಾಂತಿ ಬರುವಂಥ ಸೆಂಟ್ ಹಕಿಕೊಂಡಿರುವ ಇಂಗ್ಲೀಷ್ ಮತನಾಡುವ ಅಜ್ಜಿಯೊಬ್ಬರು ನನ್ನನ್ನು ಕೆಕ್ಕರಿಸಿ ನೋಡಿದರು. ಏನೋ ಹೇಳಿದರು. ನನಗೆ ಎಲ್ಲಿ ಇಂಗ್ಲೀಷ್ ಬರ್ತದೆ? ಪೆಚ್ಹುಪೆಚ್ಹಾಗಿ ನಕ್ಕೆ. ಮತ್ತೆ ಗೊತ್ತಾಯ್ತು. ನಾನವರಿಗೆ ದಾರಿ ಬಿಟ್ಟುಕೊಡಬೇಕು ಎಂದು ಅವರ ಮಾತಿನ ಸಾರಾಂಶ.
ಸರಿ ನಾನೂ ಒಂದೊಂದೇ ನೋಡುತ್ತಾ ಹೋದೆ. ನೂರು ರುಪಾಯಿ ಸೀರೆ(ಹೆಂಡತಿ ಇರದಿದ್ದದು ಒಳ್ಳೇದಾಯ್ತು), ಪ್ಯಾಂಟ್ ಪೀಸ್, ಶರ್ಟ್ ಪೀಸ್..
ಬೇಡಪ್ಪಾ ಬೇಡ. ನನಗೆ ಬೇಕಾದದ್ದು ಗಟ್ಟಿಮುಟ್ಟಿನ ಮರದ ಚೆಸ್ ಬೋರ್ಡ್. ಹೈಸ್ಕೂಲ್ ನಲ್ಲಿ ಪಿ.ಟಿ.ಮಾಸ್ಟ್ರು ಚೆಸ್ ಆಡುವ ಚಾಳಿ ನನಗೂ ಕಲಿಸಿದ್ದರು.ಒಂದು ಕೆಲಸ ಸಿಕ್ಕಿ ರೂಮು ಮಾಡಿದಾಗ ಒಂಟಿತನ ನೀಗಿಸಲು ಇದಕ್ಕಿಂತ ಒಳ್ಳೇ ಆಟದ ಸಾಮಾನು ಬೇರಾವುದಿದೆ?
ದೊಡ್ಡ ಜನದಂತೆ ನನ್ನಷ್ಟಕ್ಕೆ ನಾನೇ ಹುಡುಕಿದರೂ ನನಗೆ ಚೆಸ್ ಬೋರ್ಡ್ ಸಿಗಲೇ ಇಲ್ಲ.
ಏನೂ ತೆಗೊಳ್ಳದೆ ತಿರುಗುತಿದ್ದ ನನ್ನನ್ನು ನೋಡಿ ಯಾರಿಗೋ ಕರುಣೆ ಬಂದಿರಬೇಕು.
‘ಏನು ಬೇಕು ನಿಮಗೆ’
ಕೇಳಿದರು. ಹೇಳಿದೆ.
‘ಓ ಅಲ್ಲಿ ಪೆಟ್ಟಿಗೆ ಇದ್ಯಲ್ಲಾ.. ಅದೇ ಚೆಸ್ ಬೋರ್ಡ್.’ ಎಂದರು.
‘ಎಸ್ಟು ಅದಕ್ಕೆ’ - ಕೇಳಿದೆ. ‘ಬರ್ದಿದೆಯಲ್ಲಾ’ ಎಂದು ನನ್ನನ್ನೇ ವಿಚಿತ್ರವಾಗಿ ನೋಡಿ ಹೇಳಿದರು.
170 ರುಪಾಯಿ!
ಅಬ್ಬಬ್ಬಾ..ಸ್ವಲ್ಪ ಕಮ್ಮಿ ಮಾಡ್ತಾರಾ ಎಂದು ಸ್ಕೆಚ್ ಹಾಕಿ
‘ಇದು ಮರದ್ದಾ’ ಕೇಳಿದೆ.
‘ಗೊತ್ತಿಲ್ಲ. ಇಲ್ಲಿ ಓಪನ್ ಮಾಡಿ ನೋಡ್ಬಾದು. ಅದ್ರಲ್ಲಿ ಬರ್ದಿದ್ದ ರೇಟ್ ಅಸ್ಟೇ. ಒಳಗೆ ಏನಿದ ಅಂತ ನಮಗೂ ಗೊತ್ತಿಲ್ಲ. ಅದ್ರಲ್ಲೇ ಬರ್ದಿದೆಯಲ್ಲ.’
‘ಅದ್ರಲ್ಲಿ ಎಲ್ಲಿ ಬರ್ದಿದೆ? ಚೆಸ್ ಆಡುವುದು ಹೇಗೆ ಅಂತ ಮಾತ್ರ ಇರುವುದು. ಒಳಗೆ ಏನಿದೆ ಅಂತೆಲ್ಲಾ ನಾವು ನೋಡುವುದು ಬೇಡ್ವಾ’
‘ನಮ್ಮಲ್ಲಿ ಗುಡ್ ಕ್ವಾಲಿಟಿಯದ್ದೇ ಬರೋದು. ಹಂಗೆಲ್ಲಾ ನೋಡೋ ಹಂಗಿಲ್ಲ’
ಎಂಬ ಉತ್ತರ ಬಂತು.
ನನಗೆ ಮತ್ತೇನು ಕೆಲಸ.
ದೊಡ್ಡ ಅಂಗಡಿಗೆ ದೊಡ್ದ ನಮಸ್ಕಾರ ಎಂದು ಅಲ್ಲಿಂದ ಹೊರಬಿದ್ದೆ.
ಸೀದ ನಮ್ಮ ಮಂಗ್ಳೊರಿನ ಫೇಮಸ್ ಆಟದ ಸಾಮಾನು ಇರುವ ಅಂಗಡಿಗೆ ಸಿಟಿ ಬಸ್ಸಲ್ಲಿ ಹೋದೆ.
ಅಲ್ಲಿ ವ್ಯಾಪಾರ ಮಾಡುವುದಕ್ಕೆ ಹೇಗೂ ಧೈರ್ಯ ಇತ್ತಲ್ಲ?
‘ಚೆಸ್ ಬೋರ್ಡ್ ಉಂಟಾ.. ಗಟ್ತಿಮುಟ್ಟಿನ ಮರದ್ದು’
ನನ್ನ ವರಸೆ ತೋರಿದೆ.
ಮರ ಗಟ್ಟಿ ಇದೆಯಾ ಎಂದು ಕುಟ್ಟಿ ಕುಟ್ಟಿ ನೋಡಿ, ೩೨ ಚೆಸ್ ಕಾಯಿನ್ ಲೆಕ್ಕ ಮಾಡಿ ಅಂಗಡಿಯಾತನ ಹತ್ರ ಚರ್ಚೆ ಮಾಡಿ 160 ರುಪಾಯಿಗೆ ಅದನ್ನು ಹಿಡ್ಕೊಂಡು, ತಾಜ್ ಮಹಲ್ ನಲ್ಲಿ ಗೋಳಿಬಜೆ ತಿಂದು ಮನೆ ಸೇರಿದೆ.
ಆಡಲು ಯಾರೂ ಇಲ್ಲ. ನೀವು ಬರ್ತೀರಲ್ಲ?

Thursday, July 23, 2009

ಉತ್ತರ ಇಲ್ಲದ ಪ್ರಶ್ನೆ ?



ಮತ್ತೊಮ್ಮೆ ಈ ವಿಷಯ ಪ್ರಸ್ತಾಪ ಮಾಡುತ್ತಿದ್ದೇನೆ ಅಂದುಕೊಳ್ಳಬೇಡಿ.
ನಮ್ಮ ಕರಾವಳಿ (ನಿಮ್ಮೂರಿನ ಅವಸ್ಥೆಯೂ ಹೀಗೆ ಇರಬಹುದು) ರಸ್ತೆಗಳ ಖಾಯಂ ಕತೆ ಇದು.
ಅದರಲ್ಲೂ ರಾಷ್ಟ್ರೀಯ ಹೆದ್ದಾರಿ ಎಂದರೆ ಕೇಳುವುದೇ ಬೇಡ.
ಸೆಕೆಂಡ್ ಸೆಕೆಂಡ್ ಲೆಕ್ಕ ಹಾಕುವ ಬಸ್ಸು, ಲಾರಿಗಳು ತಮಗೆ ಜಾಗ ಕೊಡದ ಇತರ ವಾಹನಗಳನ್ನು ಕ್ಷುಲ್ಲಕ ಪೀಡೆಗಳಂತೆ ಕೆಕ್ಕರಿಸಿ ದಾಟುತ್ತವೆ.
ಅದರ ಜೊತೆ ಅಲ್ಲಲ್ಲಿ ರಸ್ತೆ ಅಗೆಯುವ ಕಾಮಗಾರಿ.
ಹೀಗೆ ಹೈರಾಣಾಗಿರುವ ರಸ್ತೆಗಳು ಪ್ರತೀ ಮಳೆಗಾಲ ಜನರ ತಾಳ್ಮೆಯನ್ನು ಕೆಣಕುತ್ತವೆ.
ದ.ಕ.ಜಿಲ್ಲೆಗೆ ದಿನಕ್ಕೆ ಸಾವಿರಾರು ಯಮಸ್ವರೂಪಿ ಅದಿರು ಲಾರಿಗಳು ಪ್ರವೇಶಿಸುತ್ತವೆ. ಸಣ್ನ ಪುಟ್ಟ ಅಪಘಾತಗಳಿಗಂತೂ ಲೆಕ್ಕ ಬರೆಯುವವರೇ ಇಲ್ಲ ಎನ್ನುವಂತಾಗಿದೆ. ಕಳೆದ ವಾರ ದ.ಕ-ಉಡುಪಿ ಜಿಲ್ಲೆಯಲ್ಲಿ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದವರ ಸಂಖ್ಯೆ ಎರಡಂಕಿ ತಲುಪಿದೆ.
ಹೀಗೇಕೆ?
********
ವಾಹನದಟ್ಟಣೆ ಹೆಚ್ಹಾಗಿದೆಯೋ?
ನಿಯಮ ಪಾಲನೆ ಆಗುತ್ತಿಲ್ಲವೋ?
ಇದು
ಉತ್ತರ ಇಲ್ಲದ ಪ್ರಶ್ನೆಯೇ
ಅಥವಾ ಸಿಲ್ಲಿ ವಿಷಯವೇ

(ಚಿತ್ರದಲ್ಲಿ ಕಾಣುವುದು ಐದಾರು ತಿಂಗಳ ಹಿಂದೆ ನಾನು ಪ್ರಯಾಣಿಸುತ್ತಿದ್ದ ಕಾರಿನ ಮೇಲೆ ಇದ್ದಕ್ಕಿದ್ದಂತೆ ಮಣ್ಣು ಅಗೆಯುವ ಯಂತ್ರವೊಂದು ಮೇಲೇರಿ ಅಪಘಾತಕ್ಕೀಡಾಗಿದ್ದು)

Friday, July 17, 2009

....................

ಮ್ಮೆಯೂ ತಿರುಗಿ ನೋಡದ ಜನರೀಗ ಮತ್ತೆ ಟೊಪ್ಪಿ ಹಾಕಿದ್ದಾರೆ.
ಇದುವರೆಗೆ ಬೆಂಗಳೂರಿಂದ ಮಂಗಳೂರಿನವರೆಗೆ ಮಾತ್ರ ಓಡುವ ರೈಲು ಇನ್ನು ಕೇರಳದ ಕಣ್ಣೊರಿಗೆ ವಿಸ್ತರಣೆಯಾಗಲಿದೆ.
ಇದಕ್ಕೆ ಕೇರಳದವರ ಒತಡವೇ ಕಾರಣವಂತೆ.
ಇದೊಂಥರಾ ಸ್ವಂತ ಮನೆ ಬಿಟ್ಟು ಬಾಡಿಗೆ ಮನೆಗೆ ಹೋಗುವಂಥ ಪರಿಸ್ಥಿತಿ.
ಕಣ್ಣೂರಿಂದ ರೈಲು ತುಂಬ ಮಲಯಾಳಿಗರು ಮಂಗಳೂರಿಗೆ ಬಂದು ನಮ್ಮನ್ನು ಹತ್ತಿಸಿಕೊಳ್ಳುತ್ತಾರೆ. ನಮಗೆ ಅವರು ಜಾಗ ಕೊಡುತ್ತಾರೆ.
ಅದಕ್ಕೆ ಅವರನ್ನು ದೂರಿ ಪ್ರಯೋಜನವಿಲ್ಲ.
ಮೊದಲೇ ದಕ್ಷಿಣ ಕನ್ನಡವೆಂದರೆ ಕರ್ನಾಟಕದಲ್ಲಿ ತಾತ್ಸರಕ್ಕೆ ಒಳಗಾದ ಊರು. ‘ಏನ್ರೀ ನಿಮ್ಮ ಮಂಗ್ಳೂರು. ಅದೊಂದು ಊರಾ. ಸೆಖೆ, ಮಳೆ, ಥೂ..’ ಎಂದು ಇಲ್ಲಿಗೆ ನೌಕರಿ ಮಾಡಲು ಬರುವ ಮೇಷ್ಟ್ರುಗಳು, ಅಧಿಕಾರಿಗಳು, ಬಸ್ ಕಂಡಕ್ಟರ್ ಗಳು, ಪತ್ರಕರ್ತರು ಇತ್ಯಾದಿ ಜನರು ದೂರುವುದನ್ನು ದ.ಕ.ಜನ ಕೇಳಿ ಸುಮ್ಮನೆ ನಕ್ಕುಬಿಡುವುದು ಮಾಮೂಲು.
ಈಗ ‘ನಿಮ್ಮ ಎಂಪಿಗಳು’ ಪ್ರಯೋಜನ ಇಲ್ಲ. ಕೇರಳದವರನ್ನು ನೋಡಿ ಕಲಿಯಲಿ ಎಂಬ ಸಲಹೆ ಈಗ ನಮ್ಮ ಬಳಿ ಬರ್ತಿದೆ.
ಇಸ್ಟೆಲ್ಲಾ ಆದರೂ ಹೆಣಕ್ಕೆ ಸಿಂಗಾರ ಮಾಡಿದಂತೆ ಕನಡಿಗರಿಗೆ ಯಾವ ರೀತಿಯಲ್ಲೂ ಉಪಕಾರ ಇಲ್ಲದ ಮಂಗಳೂರು ಅತ್ತಾವರದಲ್ಲಿರುವ ರೈಲ್ವೇ ನಿಲ್ದಾಣವನ್ನು ವಿಶ್ವದರ್ಜೆಗೇರಿಸುತ್ತಾರಂತೆ.
ಇನ್ನು ಏನೇನಾಗಲಿದೆಯೋ?

Sunday, July 5, 2009

ನಿಮ್ಮೂರಲ್ಲೂ ಇಂಥದ್ದು ಇದೆಯೋ?




ಮಳೆಯ ದೊಡ್ಡ ದೊಡ್ಡ ಹನಿ ಮತ್ತು ದೊಡ್ದ ದೊಡ್ಡ ಹೊಂಡ.
ಕರಾವಳಿಯ ಯಾವ ರಸ್ತೆಯನ್ನು ನೋಡಿದರೂ ಇದೇ ಅವಸ್ಥೆ.
ಅದರಲ್ಲೂ ಅದಿರು ಲಾರಿ ಎಲ್ಲೆಲ್ಲಿ ಓಡಾಡುತ್ತವೆಯೋ ಅಲ್ಲಲ್ಲಿ ಇದು ಕಾಮನ್ ಎನ್ನುವಂಥ ಪರಿಸ್ಥಿತಿ.
ಯಾರೂ ಸೊಲ್ಲೆತ್ತುವಂತಿಲ್ಲ! ಒಂದು ವೇಳೆ ಮಾತನಾಡಿದರೂ ಪ್ರಯೋಜನ ಇಲ್ಲ.
ಏಕೆಂದರೆ ಅದಿರು ಲಾರಿಗಳನ್ನು ಅದುರಿಸಿದರೆ ಇಂದಿನ ರಾಜಕಾರಣವೇ ಉದುರಿ ಹೋಗುತ್ತದೆ.
ಶಿರಾಡಿ ಘಾಟಿಯನ್ನು ಲಗಾಡಿ ತೆಗೆದದ್ದೇ ಈ ಅತಿಕಾಯ ಅದಿರು ಲಾರಿಗಳು!
ಇವುಗಳ ಜತೆಯಲ್ಲಿ ಇತರ ದೊಡ್ಡ ದೊಡ್ದ ಲಾರಿಗಳು ಸಂಚಾರಿ ನಿಯಮ ಉಲ್ಲಂಘಿಸಿ ರಸ್ತೆಯನ್ನೇ ಆಕ್ರಮಿಸುತ್ತವೆ. ಪುರುಸೊತ್ತಿದ್ದಾಗ ಓಡುತ್ತವೆ. ಇಲ್ಲವಾದರೆ ಅಲ್ಲೇ ರಸ್ತೆಯ ಬದಿಯಲ್ಲಿ ಟಿಕಾಣಿ ಹೂಡುತ್ತವೆ.ಪಾರ್ಕ್ ಲೈಟ್ ಇಲ್ಲದೆ.
ಹೀಗೆ ನಿಂತಿದ್ದ ಲಾರಿಗೆ ಬಡಿದು ಅದೆಷ್ಟೋ ಜೀವಗಳು ಬಲಿಯಾದ ಇತಿಹಾಸವೂ ಉಂಟು.
ಈಗ ಮಂಗಳೂರು-ಬೆಂಗಳೂರು ಸಾಗುವ ರಾಷ್ಟ್ರೀಯ ಹೆದ್ದಾರಿ 48 ಅತಿಭಾರದ ಲಾರಿಗಳಿಂದ ನಲುಗಿ ಹೋಗಿದೆ.
ಎಂಥ ಗಟ್ಟಿ ಡಾಮರೂ ಈ ಅತಿಕಾಯ ವಾಹನಗಳ ಅಡಿಯಲ್ಲಿ ಪುಡಿಯಾಗುತ್ತಾ ಹೋಗುತ್ತದೆ.
ಚಿತ್ರದಲ್ಲಿರುವುದು ಬಿ.ಸಿ.ರೋಡ್ (ಮಂಗಳೂರಿನಿಂದ 25 ಕಿ.ಮೀ. ದೂರ)ಮೂಲಕ ಹಾದು ಹೋಗುವ ಹೆದ್ದಾರಿಯ ಆಳೆತ್ತರದ ಹೊಂಡ!
ಮಳೆಗಾಲವೆಲ್ಲಾ ಹೀಗೆ ಕಳೆಯಬೇಕಾದೀತೇನೋ.
ನಿಮ್ಮೂರಲ್ಲೂ ಇಂಥದ್ದು ಇದೆಯೋ?
ಅದು ಕೇರಳವಂತೂ ಖಂಡಿತ ಆಗಿರಲಿಕ್ಕಿಲ್ಲ.
ಅಲ್ವ?

Monday, June 8, 2009

ಕನವರಿಕೆ 4

ಕಡಲ ಭೋರ್ಗರೆತ ಕವಿಕಿವಿಗಿಂಪು
ಬೆಸ್ತರಿಗೆ ಘೋರ ಕಿರಿಕಿರಿ
ಹಿರಿಹಿರಿ ಹಿಗ್ಗಿವೆ ಮತ್ಸ್ಯಸಂಕುಲ
ಉಕ್ಕೇರಿದ ನದಿಯಲ್ಲಿ ಮೀನುರಾಶಿ
ಹಿಡಿಯಲು ಎಂಟೆದೆ ಬೇಕು
ತೇಲಿಬರುವುದೇ, ತೆಂಗಿನಕಾಯಿ
ಹುಡುಕಹೊರಟರೆ ಪ್ರಾಣಾಪಾಯ
ಹೊಟ್ತೆಪಾಡು, ದಿನಕೂಲಿಯೂ ಮಾಯ
ರಾಜದರ್ಬಾರಿಗೆ ಪರ್ಸೆಂಟೇಜ್ ಪರಿಹಾರ
ಹುಯ್ಯೋ ಮಳೆರಾಯ ಯಾರಿಗುಂಟು
ಯಾರಿಗಿಲ್ಲ ಕೆಸರು, ಮುಳುಗುವ ಆಟ?
ಮಳೆದರ್ಬಾರು!

Tuesday, May 26, 2009

ಕನವರಿಕೆ - 3

ವ್ಯತ್ಯಾಸ

ಆಟಗಾರ
ವಿಜಯವನ್ನರಸುವುದು
ನದಿ
ಸಮುದ್ರವನ್ನರಸಿದಂತಲ್ಲ...
ವ್ಯಾಪಾರಿ
ಗಿರಾಕಿಯನ್ನರಸುವುದು
ಹುಡುಗ ಹುಡುಗಿಯನ್ನರಸಿದಂತಲ್ಲ...
ನಿರುದ್ಯೋಗಿ
ಕೆಲಸವರಸುವುದು
ದುಂಬಿ
ಹೂವನ್ನರಸಿದಂತಲ್ಲ
**********

ಚರಂಡಿ

ಹಸಿದ ವ್ಯಕ್ತಿ
ಓಲಾಡುತ್ತಾ ಬೀಳುವ ಜಾಗ
ಕುಡಿದ ವ್ಯಕ್ತಿ
ತೂರಾಡುತ್ತಾ ಮಲಗುವ ಜಾಗ
***********

ಪರಿಸರ

ಈಗ
ರಮಣೀಯ ಪ್ರಕೃತಿ,
ಹಸಿರು ವನ, ಬೆಟ್ಟ
ಪ್ರಶಾಂತ ಪರಿಸರ
ಬೇಕೆಂದರೆ
ಸಿಗುವುದು ಕಲಾವಿದನ
ಕುಂಚದಲ್ಲಿ ಮಾತ್ರ
(ಇವು ನನ್ನ ಕಾಲೇಜು ದಿನಗಳ ಕನವರಿಕೆಗಳು)

Monday, May 18, 2009

ಯಾಕೆ ಹೀಗೆ

ಚುನಾವಣೆ ರಿಸಲ್ಟ್ ಬಳಿಕ ಗೊಂದಲ ಮೂಡಿದ್ದು ನನ್ನೂರು ಮಂಗಳೂರಿನ ಆಯ್ಕೆ ಕುರಿತ ಕಮೆಂಟ್ ಗಳು.
‘ಮಂಗಳೂರಲ್ಲಿ ಕೋಮುವಾದಿಗಳ ವಿಜಯ’
‘ಇನ್ನು ಮಂಗಳೂರಿನಲ್ಲಿ ಜನಸಾಮಾನ್ಯರಿಗೆ ನಡೆದಾಡಲೂ ಸಾಧ್ಯವಿಲ್ಲ, ಇಡೀ ದ.ಕ. ಕ್ರೂರ ಜನರ, ಅನಾಗರೀಕರ ನಾಡಾಗಿರತ್ತೆ, ತಾಲಿಬಾನಿಗಳ ಬೀಡಾಗುತ್ತೆ, ಅದರಲ್ಲೂ ಮಹಿಳೆಯರಿಗೆ ಕಷ್ಟ!..’
ಸಾಮಾನ್ಯ ರಾಜಕೀಯ ಹೇಳಿಕೆಗಳಾಗಿದ್ದರೆ ಇದನ್ನು ತಳ್ಳಿ ಹಾಕಬಹುದು. ನೆನಪಿಡಿ, ಸೋತ ಜನಾರ್ಧನ ಪೂಜಾರಿಯವರೂ ವಿನಮ್ರವಾಗಿ ಸೋಲೊಪ್ಪಿಕೊಂಡಿದಾರೆ. ಆದರೆ ಇಂಥದ್ದೆಲ್ಲಾ ಮಂಗಳೂರಿನ ಹೊರಗಿರುವವರು, ಆದರೆ ಬುಧ್ಹಿಜೀವಿಗಳೆನಿಸಿಕೊಂಡವರು ವಿವಿಧ ಮಾಧ್ಯಮಗಳನ್ನು ಬಳಸುತ್ತಾ ಪ್ರಚಾರ ಮಾಡುತ್ತಿದ್ದಾರೆ. ಇದು ನನ್ನಂತೆ ಹಲವರನ್ನು ಗೊಂದಲಕ್ಕೀಡುಮಾಡಿದೆ.
ಹಾಗಾದರೆ ನಳಿನ್ ಗೆ ಓಟು ಹಾಕಿದ ಸುಮಾರು ೪,೯೯,೦೦೦ ಮಂದಿಯೆಲ್ಲಾ ಅತಿಕ್ರೂರಿ ಕೋಮುವಾದಿಗಳೇ, ತಾಲಿಬಾನಿಗಳೇ ? ಜನರು ಬುದ್ದಿಗೇಡಿಗಳೇ?
ಇಂಥ ಹೇಳಿಕೆಗಳನ್ನು ನೀಡುವ ಉದ್ದೇಶವೇನು? ಜನರ ತೀರ್ಮಾನಕ್ಕೆ ಹಾಗೂ ಜನರ ಭಾವನೆಗಳಿಗೆ ಇದು ಘಾಸಿ ಮಾಡಿದಂತಾಗುವುದಿಲ್ಲವೇ? ಆತ ಬಿಜೆಪಿ ಇರಲಿ, ಕಾಂಗ್ರೆಸ್ ಇರಲಿ ಗೆದ್ದವರೆಲ್ಲರೂ ಜನರ ಆಯ್ಕೆಗಳೇ ಅಲ್ಲವೇ..
ತಿಳಿದವರು ಸ್ಪಷ್ಟಪಡಿಸಬೇಕು.
( ಮೊದಲೇ ಸ್ಪಷ್ಟಪಡಿಸುತ್ತಿದ್ದೇನೆ. ಯಾವುದೇ ಪೂರ್ವಾಗ್ರಹವಿಲ್ಲದೆ ಬರೆಯುತ್ತಿದ್ದೇನೆ. )

Thursday, May 14, 2009

ಕನವರಿಕೆ ೨




ಹೌದಲ್ಲ! ನಾವೀಗ ಗಗನಚುಂಬಿಸಲು ಹೊರಟಿದ್ದೇವೆ
ಗಮ್ಯವೆತ್ತ ಗಮನವೆತ್ತ? ತಿಳಿದಿದೆಯಾ
ಬೆಂಕಿಯೂ ಕೆನ್ನಾಲಿಗೆ ಚಾಚಿ ಹೊರಟಿದೆ ನಮ್ಮೊಂದಿಗೆ
ಅಗಾಧ ಮರಳು, ನೀರ ರಾಶಿ ಇದ್ದರೂ ನಂದಿಸಲಿಲ್ಲವಲ್ಲ
ಯಾರಿಗೂ ಬೇಡ ನಮ್ಮೊಳಗೆ ಸ್ನೇಹದ ಸಹನೆಯೇ ಇಲ್ಲ
ಒಬ್ಬರಿಗಿಂತ ಒಬ್ಬರು ಹೊರಟಿದ್ದೇವೆ ಗಗನಚುಂಬಿಸಲು
ತ್ವೇಷಮಯ ಜಗಜೀವನದಲ್ಲಿ ಎಲ್ಲವೂ ಲೆಕ್ಕಾಚಾರ
ಎಲ್ಲಿದೆ ಸಂಬಂಧದ ಸಹಕಾರ?
ಉಗುಳಿದರೆ ಬೆಂಕಿ, ಕಾರುವುದೂ ವಿಷವೇ
ಜಗತ್ತು ಕಿರಿದಾದಂತೆ ಮಾನವತೆ ಸುಟ್ಟುಹೋಗಿದೆ
ನಂದಿಸಲು ನಾವೆಲ್ಲಿ?
ನಾವೀಗ ಗಗನಚುಂಬಿಸಲು ಹೊರಟಿದ್ದೇವೆ

Monday, May 4, 2009

ಬೇಲಿ, ಹೊಲ ಮತ್ತು ಕಾನೂನು

ರ್ನಾಟಕದಲ್ಲಿ ಚುನಾವಣೆ ಸಂದರ್ಭ ಕರ್ತವ್ಯಕ್ಕೆಂದು ಹೊರರಾಜ್ಯಗಳಿಂದ ಆಗಮಿಸಿದ್ದ ಆರಕ್ಷಕರ ‘ದುರ್ವರ್ತನೆ’ಯ ಮೂರು ಪ್ರಕರಣಗಳು ದಾಖಲಾದವು. ಅವುಗಳಲ್ಲಿ ಎರಡು ನಡೆದದ್ದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ. ಮೊದಲನೆ ಪ್ರಕರಣದಲ್ಲಿ ಬಂಟ್ವಾಳದಲ್ಲಿ ನಿಯೋಜಿತರಾಗಿದ್ದ ಕೇರಳ ಪೊಲೀಸರು ಮಂಗಳೂರಿನ ಪಣಂಬೂರು ಬೀಚ್ ನಲ್ಲಿ ಮಹಿಳೆಯರೊಂದಿಗೆ ಅನುಚಿತವಾಗಿ ವರ್ತಿಸಿದ್ದು ಕಾರಣ. ಅಲ್ಲಿ ಇದ್ದ ಸಾರ್ವಜನಿಕರು ಈ ಪೊಲೀಸರನ್ನು ‘ವಿಚಾರಿಸಿ’ ಬಳಿಕ ಸ್ಥಳೀಯ ಪೊಲೀಸರಿಗೆ ಒಪ್ಪಿಸಿದರು. ಈ ಸಂದರ್ಭ ತಳ್ಳಾಟ, ಹೊಡೆದಾಟಗಳು ಆದವು. ಬಳಿಕ ಕೋರ್ಟಿಗೆ ಹಾಜರುಪಡಿಸುವ ವೇಳೆ ಪತ್ರಿಕಾ ಛಾಯಾಗ್ರಾಹಕರನ್ನು ಇದೇ ಆರೋಪಿಗಳು ದುರುಗುಟ್ಟಿ ನೋಡಿದ್ದೂ ಆಯಿತು.
ಇನ್ನೊಂದು ಪ್ರಕರಣ ದುರಂತಮಯವಾಯಿತು. ಧರ್ಮಸ್ಥಳದಲ್ಲಿ ದೇವಸ್ಥಾನದಲ್ಲೇ ‘ಜಬರ್ದಸ್ತ್’ ಮಾಡುತ್ತಿದ ಆಂಧ್ರ ಪೊಲೀಸರು ಸಂಜೆ ಮೈದಾನದಲ್ಲಿ ಕ್ರಿಕೆಟ್ ಆಡುತ್ತಿದ್ದ ಹುಡುಗರೊಂದಿಗೆ ಕದನಕ್ಕಿಳಿದರು. ಇಲ್ಲೂ ಮಾತಿನ ವಿನಿಮಯವಾದವು. ಗುಂಡು ಹಾರಿಸಿ ಒಬ್ಬನನ್ನು ಕೊಂದದ್ದೂ ಆಯಿತು. ಸಾರ್ವಜನಿಕರು ಟಯರ್ ಪೇರಿಸಿ ಕಿಚ್ಹು ಕೊಟ್ಟು ಪ್ರತಿಭಟನೆ ನಡೆಸಿದರು. ಮರುದಿನ ಊರು ಬಂದ್ ಮಾಡಿದರು.
ಕೆಲವು ಪತ್ರಿಕೆ, ವಬ್ ಸೈಟ್ ಗಳಲ್ಲಿ “ಪೊಲೀಸರು ‘ಪಾಪ’ ಅವರು ಹೆಂಡತಿ ಮಕ್ಕಳನ್ನು ಬಿಟ್ಟು ಬರುತ್ತಾರೆ ನೋಡಿ ಹೀಗಾಗಿಯೇ ಸ್ವಲ್ಪ ಗುಂಡು ಹಾಕಿ ಹೆಂಗಸರ ಮೈಮೇಲೆ ಕೈ ಹಾಕಿದರೆ ಅದು ವ್ಯವಸ್ಥೆಯದ್ದೇ ತಪ್ಪು. ಸಾರ್ವಜನಿಕರು ಹಾಗೆ ದನಕ್ಕೆ ಬಡಿದ ಹಾಗೆ ಹೊಡೆಯುವಿದು ಎಲ್ಲಾದರೂ ಉಂಟಾ” ಎಂಬ ಅರ್ಥ ನೀಡುವ ಬರೆಹಗಳನ್ನು ಪ್ರಕಟಿಸಿದವು. ಬಿಡಿ, ಅದು ಅವರವರ ಅಭಿಪ್ರಾಯ ಎಂದಾಯಿತು.
ಆದರೆ ಸಾಮಾನ್ಯ ನಾಗರಿಕನೊಬ್ಬ ಪೊಲೀಸ್ ಮಾಡುವ ತಪ್ಪಿಗೆ ಕಾನೂನು ಕೈಗೆತ್ತಿಕೊಂಡು ಯಾತಕ್ಕಾಗಿ ಪ್ರತಿಭಟಿಸುತ್ತಾನೆ? ಇದು ಸರಿಯಾ, ತಪ್ಪಾ, ಹಾಗಾದರೆ ಪೊಲೀಸರು ಕೆಟ್ಟ ಕೆಲಸ ಮಾಡಿದಾಗ ಯಾವ ರೀತಿ ಪ್ರತಿಭಟಿಸಬೇಕು? ಉದಾ: ಮಂಗಳೂರು, ಧರ್ಮಸ್ಥಳ ಘಟನೆಗಳಲ್ಲಿ ಏನು ಮಾಡಬಹುದಿತ್ತು?
ಪ್ರಾಕ್ಟಿಕಲ್ ಆದ ಉತ್ತರಗಳು ಸಿಗಬಹುದೇ?

Friday, May 1, 2009

ನಮ್ಮೂರು ಚೆನ್ನಾಗಿದೆ !

ಅಂತೂ ಮುಗಿಯಿತು.ನಮ್ಮೂರಲ್ಲಿ ಚುನಾವಣೆ. ಯಾರು ಗೆಲ್ಲುತ್ತಾರೆ, ಸೋಲುತ್ತಾರೆ ಎಂಬುದು ಮುಂದಿನ ಮಾತು.
ಯಾರು ಗೆದ್ದರೂ ಅದು ಜನತೆಯ ವಿಜಯ ಎಂಬುದು ನನ್ನ ಅನಿಸಿಕೆ.
ಏಕೆಂದರೆ, ನಮ್ಮ ಮಂಗಳೂರು ಮತ್ತು ಉಡುಪಿಯಲ್ಲಿ ಗರಿಷ್ಟ ಮತ ಚಲಾವಣೆಯಾಗಿದೆ. ನಾವು ಬೆಂಗಳೂರಿನವರಷ್ಟು ಬುದ್ದಿವಂತರಲ್ಲದಿರಬಹುದು. ಆದರೆ ಹೆಚ್ಹಿನ ಪಾಲು ಓಟು ಹಾಕಿದ್ದೇವೆ. ಯಾವುದೇ ಹೆಂಡ, ಹಣಕ್ಕೆ ಯಾರೂ ಬಗ್ಗಿಲ್ಲ. ಯಾರು ನಮ್ಮ ಕಣ್ಣಿಗೆ ಸೂಕ್ತ ಎಂದು ಕಾಣುತ್ತಾರೋ ಅವರಿಗೆ ಓಟು ಹಾಕಿದ್ದೇವೆ. ನಕಲಿ ಮತದಾನ ಮಾಡಿಲ್ಲ. ಹೇಡಿ ನಕ್ಸಲರ ಬೆದರಿಕೆಗೆ ಜಗ್ಗಿಲ್ಲ. ಪ್ರಜಾತಂತ್ರ ವ್ಯವಸ್ಥೆಯಲ್ಲಿ ನಾವು ನಂಬಿಕೆ ಇಟ್ಟಿದ್ದೇವೆ. ಯಾರೋ ಅರೆಬುದ್ದಿಜೀವಿಗಳು ಇಡೀ ಮಂಗಳೂರಿನವರನ್ನು ‘ತಾಲಿಬಾನಿಗಳು’ ಎಂದು ಹೇಳಿದ್ದಕ್ಕೆ ನಾವ್ಯಾರೂ ಸೊಪ್ಪು ಹಾಕಿಲ್ಲ.
ಹಲವಾರು ಮಂದಿಗೆ ಸಂಕಟವಾಗಿದ್ದಿರಬಹುದು. ಏನೆಂದರೆ ನಮ್ಮೂರಲ್ಲಿ ಚುನಾವಣೆ ಶಾಂತಿಯುತವಾಯಿತು ಎಂಬುದೇ ಮಿರಾಕಲ್.
ಅದಕ್ಕೇ ನೋಡಿ ಸುಳ್ಯದಲ್ಲಿ ಕುಡಿದು ಮಾಡಿದ ಸಣ್ಣ ತಕರಾರೊಂದನ್ನು ಬ್ರೇಕಿಂಗ್ ನ್ಯೂಸ್ ಆಗಿ ಚಾನೆಲೊಂದು ಬಿತ್ತರಿಸಿತು. ಅದನ್ನು ನೋಡಿ ಇನ್ನೊಂದು ಚಾನೆಲ್ ಕೂಡ ಫ್ಲ್ಯಾಷ್ ನ್ಯೂಸ್ ಆಗಿ ತೋರಿಸಿತು. ಆದರೆ Sorry..
ಈಗ ಎಲ್ಲೆಲ್ಲೂ ಶಾಂತಿ. ಧರ್ಮಸ್ಥಳ ಘಟನೆಯೊಂದನ್ನು ಬಿಟ್ಟರೆ..
ಕುಡಿದ ಮತ್ತಿನಲ್ಲಿ ‘ಪೋಲೀ’ಸ್ ಧರ್ಮಸ್ಥಳ ದೇವಸ್ಥಾನದ ಪಾಪದ ನೌಕರನಿಗೆ ಗುಂಡು ಹಾರಿಸಿಬಿಟ್ಟ ಘಟನೆ ಪತ್ರಿಕೆಗಳಲ್ಲಿ ಓದಿರಬಹುದು. ಟಿ.ವಿ.ಗಳಿಂದ ಸುದ್ದಿ ಗೊತ್ತಾಗಿರಬಹುದು. ಆದರೂ ನಮ್ಮ ಜನ ಆ ಪಾಪಿಯ ಬಂಧನವಾಗುವ ಕುರಿತು ಒತ್ತಾಯಿಸಿದರು. ಊರು ಬಂದ್ ಮಾಡಿದರು. ಇಲ್ಲಿಯೂ ಜಾತಿ, ಮತ ಎಂದು ಯಾರೂ ಲೆಕ್ಕ ಹಾಕಲಿಲ್ಲ.
ನೀವು ಬಿಜೆಪಿಯೋ , ಕಾಂಗ್ರೆಸ್ಸೋ, ಕಮ್ಯೂನಿಷ್ಟೋ ಬೇರೆ ಮಾತು. ಚುನಾವಣೆಯಲ್ಲಿ ಗೆದ್ದ ಪಕ್ಷವೋ ಅಭ್ಯರ್ಥಿಯೋ ‘ಸರಿ ಇಲ್ಲ’ ಎಂದು ಇನ್ನು ನೀವು ಹೇಳಿದರೆ, ನಮ್ಮೂರ ಜನರೇ ಸರಿ ಇಲ್ಲ ಎಂದು ನಾನು ತಿಳಿದುಕೊಳ್ಳಬೇಕದೀತು. ನಾನಂತೂ ಜನರ ತೀರ್ಮಾನವನ್ನು ಗೌರವಿಸುತ್ತೇನೆ.
ಇರಲಿ ಅದು ಮುಂದಿನ ಮಾತು.
ನಮ್ಮೂರು ಚೆನ್ನಾಗಿದೆ ಎಂಬುದೇ ಈಗಿರುವ ಸತ್ಯ.

Thursday, April 9, 2009

ಕನವರಿಕೆ ೧

ಬ್ಬಾ ಅದೇನು ಹಾರಾಟ
ಕಡುನೀಲಿ ಬಣ್ಣದ ಜಲರಾಶಿಗೆ
ಜಿಗಿಜಿಗಿದು ಆಕಾಶ ಚುಂಬಿಸುವಂತೆ
ಉಕ್ಕೇರಿ ತಿಳಿಯಾಗಿ ಹರಿದು
ಶುಶ್ಕ ಮರಳನ್ನು ಮುತ್ತಿಕ್ಕುತ್ತದೆ
ಮತ್ತೆ ಮತ್ತೆ ಹಾರಿ ಅಪ್ಪಳಿಸಿ ಮರಳುತ್ತದೆ
ಬೇಕನಿಸಿದಾಗ ಕೈಸಿಗದ ಮರೀಚಿಕೆಯಂತೆ
ಮರುಳು ಮಾನವನಿಗೋ ತಡೆಯಲಾರದ
ಹಸಿವು,ನೀರಡಿಕೆ, ಉಪ್ಪುನೀರೇನು ನೀಡಬಲ್ಲದು
ಬರೀ ಆಸೆ, ಕುಡಿಯಲಾಗುವುದಿಲ್ಲ
ಕುಡಿದರೂ ಹೊರಕಕ್ಕಬೇಕು ಎಲ್ಲಾ ಆಕಾಂಕ್ಷೆ

Monday, March 30, 2009

ಕನ್ನಡ, ಮಲಯಾಳ, ಕಾಸರಗೋಡು..

ಹಳೇ ಪೇಪರ್ ರಾಶಿಯನ್ನು ನೋಡುತ್ತಿದ್ದಾಗ ಆ ಘೋಷಣೆ ಕಣ್ಣಿಗೆ ಬಿತ್ತು.
‘ಕಾಸರಗೋಡನ್ನೂ ಕರ್ನಾಟಕಕ್ಕೆ ಸೇರಿಸಿಯೇ ಸಿದ್ದ’
******
ಹಳೆಯ ಮಾತು ಹಾಗಿರಲಿ,
ನಿಜಕ್ಕೂ ಈಗಿನ ಕಾಸರಗೋಡಿನ ಕನ್ನಡಿಗರು ಗಂಭೀರ ಸಮಸ್ಯೆಯಲ್ಲಿದ್ದಾರಾ?
ಗಡಿನಾಡಿನ ಜನತೆ ‘ಭಾಷೆ’ಯಿಂದಾಗಿ ಪರಕೀಯರಾಗುತ್ತಿದ್ದಾರ?
ಕೇರಳ ಸರ್ಕಾರ ಕನ್ನಡಿಗರಿಗೆ ಅಷ್ಟೊಂದು ಅನ್ಯಾಯ ಮಾಡುತ್ತಿದೆಯಾ?
ಆ ಘೋಷಣೆ ಓದಿದ ಕರ್ನಾಟಕದ ಇತರ ಪ್ರಾಂತ್ಯದವರಿಗೆ ಈ ಕುತೂಹಲ ಮೂಡುವುದು ಸಹಜ.
ಆದರೆ ವಿಷಯ ಹಾಗಿಲ್ಲ.
********
ಈಗಿನ ಕಾಸರಗೋಡು ಪ್ರದೇಶ(ಜಿಲ್ಲೆ) ಎರಡು ಸಂಸ್ಕೃತಿಗಳನ್ನೂ ಮೈಗೂಡಿಸಿಕೊಂಡಿರುವ ತಾಣ. ಇಡೀ ಜಿಲ್ಲೆಯನ್ನೊಮ್ಮೆ ಸುತ್ತಾಡಿ. ಕ್ರೀಮ್ ಕಲರ್ ಪಂಚೆ, ಅರ್ಧ ತೋಳಿನ ಶರಟು, ಮುಖದಲ್ಲಿ ಅಡ್ಡನಾಮ.(ಹಿಂದೂವಾದರೆ), ನೀಟಾಗಿ ಬಾಚಿದ ತಲೆ ಇದು ಟಿಪಿಕಲ್ ಕಾಸರಗೋಡು ಪ್ರದೇಶದ ಪುರುಷರ ರೀತಿ. ಮಹಿಳೆಯರೂ ಅಪ್ಪಟ ಮಲೆಯಾಳಿಗಳಂತೆ. ಕನ್ನಡ, ತುಳುವಿನಲ್ಲಿ ಮಾತನಾಡಿದರೂ ಮಲಯಾಳದಲ್ಲೇ ಉತ್ತರ. ನಿಮಗೆ ಅರ್ಥವಾಗದಿದ್ದರೆ ಮಾತ್ರ ಕನ್ನಡ, ತುಳು ಮಾತು.
ಹಾಗಾದರೆ ಇವರು ಕನ್ನಡಿಗರೇ, ಮಲಯಾಳಿಗಳೇ?
ಇವರಲ್ಲಿ ಹಲವರು ಮನೆಯಲ್ಲಿ ಕನ್ನಡ, ತುಳು ಮಾತನಾಡುವವರು. ಹೊರಗೆ ಅಪ್ಪಟ ಮಲಯಾಳಿಗಳು. ಹಾಗೆಂದು ಅವರಿಗೆ ಯಾವ ಭಾಷೆಯ ಮೇಲೆ ತಿರಸ್ಕಾರ ಇಲ್ಲ.
ಇಲ್ಲಿ ಕನ್ನಡ ಶಾಲೆಗಳಿವೆ. ಯಾರೂ ಅಲ್ಲಿಗೆ ಹೋಗಬೇಡಿ ಎಂಬ ಬಲವಂತ ಮಾಡುವುದಿಲ್ಲ. ನೀನು ‘ಕನ್ನಡದವನು’ ಎಂದು ಅಂಗಡಿಯಲ್ಲಿ ಅಕ್ಕಿಗೆ ೨ ರು. ಜಾಸ್ತಿ ಚಾರ್ಜ್ ಮಾಡುವುದಿಲ್ಲ. ಒಟ್ಟಿನಲ್ಲಿ ಅನ್ಯೋನ್ಯತೆಯಿದೆ.
*****
ಇದು ಭಾಷೆಯ ಮಾತಾಯಿತು. ಇನ್ನು ಆಡಳಿತದ ಕಡೆ ನೋಡೋಣ.
ಬಹುಪಾಲು ಕನ್ನಡಿಗರು ಕಾರ್ಮಿಕರು. ಇಲ್ಲಿನ ಕಾರ್ಮಿಕರಿಗೆ ಸಿಕ್ಕುವ ಉದ್ಯೋಗ ಭದ್ರತೆ ಕರ್ನಾಟಕದಲ್ಲಿ ಇಲ್ಲ.!
ಭ್ರಷ್ಟಾಚಾರಿಗಳ ಸಂಖ್ಯೆ ಕರ್ನಾಟಕಕ್ಕಿಂತ ಕಡಿಮೆ. ನೀವು ಇಲ್ಲಿ ಭೂಮಿಯನ್ನು ಹೊಂದಿದ್ದರೆ ಇಲ್ಲಿ ಪಂಚಾಯತ್ ಸೌಕರ್ಯಗಳನ್ನು, ಸುಲಭವಾಗಿ ಹೊಂದಬಹುದು. ನಮ್ಮ ‘ನೆಮ್ಮದಿ’ ಕೇಂದ್ರದಂತಲ್ಲ!
ಕಾಸರಗೋಡಿನ ರಸ್ತೆಗಳನ್ನು ನೋಡಿ. ಕರ್ನಾಟಕದ ರಸ್ತೆಗಳನ್ನು ನೋಡಿ. ವಿಟ್ಲದಿಂದ(ಕರ್ನಾಟಕ) ಬದಿಯಡ್ಕ(ಕೇರಳ)ಕ್ಕೆ ಹೋಗುವಾಗ ಅಡ್ಕಸ್ಥಳ ಎಂಬಲ್ಲಿಂದ ರಸ್ತೆ ಹೇಗಿರುತ್ತೆ ಎಂಬುದನ್ನು ಅಲ್ಲಿ ಡ್ರೈವ್ ಮಾಡಿದವನೇ ಹೇಳಬೇಕು.
*****
ಕನ್ನಡ ಕರಾವಳಿಯ ಯಕ್ಷಗಾನಕ್ಕೆ, ಕಲಾವಿದರಿಗೆ ಮನ್ನಣೆ ನೀಡುವಲ್ಲಿ ಕೇರಳ ಸರ್ಕಾರ ಒಂದು ಹೆಜ್ಜೆ ಮುಂದಿದೆ. ದಕ್ಷಿಣ ಕನ್ನಡ, ಕಾಸರಗೋಡಿನ ಯಕ್ಷಗಾನ ಕಲಾವಿದರ ಬಳಿ ‘ಖಾಸಗಿ’ಯಾಗಿ ಮಾತನಾಡಿ. ಕನ್ನಡ ಕರಾವಳಿಯ ಕಲಾವಿದರು, ಸಾಹಿತಿಗಳು ಬೆಂಗಳೂರಿಗೆ ಹೋಗದೆ ಊರಿನಲ್ಲಿ ತಮ್ಮ ಪಾಡಿಗೆ ಇದ್ದರೆ ಕರ್ನಾಟಕ ಸರ್ಕಾರ ಮಲತಾಯಿ ಧೋರಣೆ ತಾಳುತ್ತದೆ ಎಂಬುದು ಅವರ ಮಾತು. ಇನ್ನು ಇಲ್ಲಿನ ಅನೇಕ ಪ್ರತಿಭಾವಂತರು ಗಡಿನಾಡ ಕನ್ನಡಿಗರ ಕೋಟಾದಿಂದ ಕಲಿತು ಈಗ ಸುಖವಾಗಿದ್ದಾರೆ.
****
ಕಾಸರಗೋಡನ್ನು ಕೇರಳದಿಂದ ಬಿಡಿಸಿ ಕರ್ನಾಟಕಕ್ಕೆ ಸೇರಿಸಿ ಎಂದು ಹೇಳಿಕೆ ನೀಡುವವರು, ಅವರನ್ನು ಬೆಂಬಲಿಸುವವರು ಪ್ರಾಕ್ಟಿಕಲ್ ಆಗಿ ಆಲೋಚಿಸುವುದು ಒಳ್ಳೇದು.

Tuesday, March 10, 2009

ದೀಪದ ಕೆಳಗೆ!

ಅದ್ಯಾವುದೋ ಪನ್ನೀರ ಕೊಳ
ಅಲ್ಯಾವುದೋ ಬಿಳಿಹಂಸಜೋಡಿ
ಮತ್ತೆ ಮತ್ತೆ ಮುತ್ತಿಕ್ಕುತ್ತಿದೆ ಗೊತ್ತಿಲ್ಲ
ಆರ್ಥಿಕ ಹೊಡೆತ, ಬೆಲೆಯೇರಿಕೆಗಳ ಮಾರಿ
ಪನ್ನೀರನ್ನೂ ಕಲಕುತ್ತೆ,ಹಂಸದ ಬಣ್ಣ ಬದಲಿಸುತ್ತೆ
ಅದ್ಯಾವನೋ ಊರ ಡೊಂಕ ತಿದ್ದುವ
ಭ್ರಮೆಯ ಹಮ್ಮು ಬಿಮ್ಮಿನ ಲೇಖನಿಗ,
ಅಲ್ಯಾವುದೋ ಕುಟುಂಬ ಅವನ ನಿರೀಕ್ಷೆಯಲ್ಲಿ
ಗೊತ್ತುಂಟು ಅವನಿಗೂ,ಬಳಗಕ್ಕೂ ಬೆಲೆಯೇರಿದರೂ
ಕಿಸೆ ಭರ್ತಿಯಾಗುವುದಿಲ್ಲ, ಹಾಲುಗಲ್ಲದ ಕಂದಮ್ಮ
ಚಿನ್ನದ ಪುಟ್ಟ ಓಲೆಯ ಮಾತಾಡುವುದರ ಕೇಳುವ
ಧೈರ್ಯ ಅವನಿಗೆಲ್ಲಿ, ಊರಿಗಿಡೀ ಪ್ರಕಾಶಿಸುವ
ದೀಪದ ಕೆಳಗೆ ಕತ್ತಲೇ ತಾನೇ?
ಗುಲಾಮನೂ ದೊರೆಯಾದರೆ ಅವನು ದೊರೆಯಂತೇ
ಆಡುವ ಆದರೆ ಮತ್ತೊಬ್ಬ ನವಗುಲಾಮ ಹುಟ್ಟುತ್ತಾನೆ
ಇದು ಜಗಜೀವನ, ಇಲ್ಲೇನಿದೆ ಬರಿ ಕತ್ತಲು,
ಅಲ್ಲಲ್ಲ ದೊಡ್ಡ ದೊಡ್ಡ ಸೋಡಿಯಂ ದೀಪಗಳು!

Friday, February 27, 2009

ನನ್ನೊಳಗಿನ ಪ್ರಶ್ನೋತ್ತರ

ಹೀಗೊಂದು ಸಮಸ್ಯೆ
ನಾವೇನು? ದೇವನಿರ್ಮಿತರೇ,
ಹಾಗಾದರೆ ನಾವೆಲ್ಲರೂ ಪರಿಪೂರ್ಣರೇ?
ಕಾಮ, ಕ್ರೋಧಾದಿಗಳು ನಮ್ಮಲ್ಲೂ ಇಲ್ಲವೇ
ದೇವನಿರ್ಮಿತವಲ್ಲವೂ ಪರಿಪೂರ್ಣವೆಂದಾದರೆ
ಮಾನವನೂ ಸಂಪೂರ್ಣ ಅಲ್ಲವೇ?
ದೇವನೊಬ್ಬ ನಾಮ ಹಲವು ಎಂದಾದರೆ
ಈ ವಿರೋಧಾಭಾಸ ಯಾಕೆ ಅಲ್ಲವೇ?
*********
ಹೀಗೊಂದು ಸಮಾಧಾನ
ಸಭ್ಯತೆಯ ಮುಸುಕಿಗೆ ಅಸಭ್ಯತೆಯ ಸೋಂಕು
ಬಡಿಬಡಿದು ರಾಚಿದಾಗ, ಹೆದರಿಕೆ ಸತ್ತು
ಮಸಣ ಸೇರಿದಾಗ ಉಂಟಾದ ತಥ್ಯ ದೇವರಿದ್ದಾನೆ
ಅವನಿಗಾದರೂ ಅಂಜು,ನಾಚಿಕೆಪಡು, ಅವನಿಂದ
ನಿರ್ಮಿಸಲ್ಪಟ್ಟ ನಾವು ಅವನಂತೆ ಪರಿಪೊರ್ಣರಲ್ಲ
ಏಕೆಂದರೆ ಕಾಮ, ಕ್ರೋಧಾದಿಗಳು ನಮ್ಮನ್ನು ಬಿಡುವುದಿಲ್ಲ
ಅದಕ್ಕಾಗೇ ಇಸ್ಟೋಂದು ದೇವರಲ್ಲಿ ಯಾರನ್ನಾದರೂ ನಂಬು

Friday, February 20, 2009

ಇಂಥವರೂ ಇದ್ದಾರೆ

ಅದು ಬಂಟ್ವಾಳ ರೈಲ್ವೇ ನಿಲ್ದಾಣ.
ದಿನಕ್ಕೆ ಎರಡು ಪ್ರಯಾಣಿಕರ ರೈಲು ಓಡಾಡುವಾಗ ಜನಸೇರುವುದನ್ನು ಬಿಟ್ಟರೆ ಮತ್ತಲ್ಲಿ ಮೌನ.
ಉಳಿದಂತೆ ಇಡೀ ದಿನ ಅಲ್ಲಿ ವಾಕಿಂಗ್ ಹೋಗುವವರು, ಕಟ್ಟೆಯಲ್ಲಿ ಕುಳಿತುಕೊಳ್ಳುವ ಅಲೆಮಾರಿಗಳಿಗದು ಪ್ರಶಸ್ತ ತಾಣ.
ಹಾಗಾಗಿಯೋ ಏನೊ ಮೊನ್ನೆ ಆ ನಿವ್ರುತ್ತಿನಂಚಿನಲ್ಲಿರುವ ಟೀಚರ್ ಕೂಡಾ ಅಲ್ಲೇ ಗೌಜಿ ಮಾಡಿಕೊಂಡು ಬಿಡಾರ ಮಾಡಿದ್ದು. ಏನಮ್ಮಾ ಇಲ್ಲ್ಯಾಕೆ ಬಂದಿ ಎಂದು ಸ್ಟೇಶನ್ ಮಾಸ್ತರ್ ಕೇಳಿದರೆ ‘ನೀನ್ಯಾರು’ ಎಂದು ಜೋರು ಮಾಡುತ್ತಾ ಕುಳಿತಿದ್ದ ಟೀಚರ್ ಎಲ್ಲರ ಗಮನ ಸೆಳೆದರು.
*********
ಟೀಚರಿಂದು ದುರಂತದ ಕಥೆ. ಗಂಡ ಜತೆಗಿಲ್ಲ. ಮಗ ಓಡಿ ಹೋಗಿದ್ದಾನೆ. ಆ ಚಿಂತೆ ಮನಸ್ಸಿನ ತುಂಬೆಲ್ಲಾ ಹರಡಿ ಸ್ಥಿಮಿತ ಕಳೆದುಕೊಳ್ಳುವಂತೆ ಮಾಡಿತು. ಹಾಗೇ ಇದ್ದ ಬಾಡಿಗೆ ಮನೆ ಬಿಟ್ಟು ನೆಮ್ಮದಿ ಅರಸಿ ರೈಲ್ವೇ ನಿಲ್ದಾಣಕ್ಕೆ ಬಂದಿದ್ದು. ಹತ್ತಿರವೇ ಶಿಕ್ಷಣ ಇಲಾಖೆಯ ಕಚೇರಿ ಇದ್ದರೂ ಟೀಚರ್ ನೆರವಿಗೆ ಯರೂ ಬರಲಿಲ್ಲ. ಎಲ್ಲಾ ಇಲಾಖೆಗಳಿಗೂ ದೂರು ನೀಡಲಾಯಿತು. ಪ್ರಯೋಜನ ಶೂನ್ಯ..
*********

ಹೌದು. ಯಾಕೆ ಬರುತ್ತಾರೆ? ಮಹಿಳೆಯರ ಪರ ಹೋರಾಟ ಮಾಡುವ ಸಂಘಟನೆಗಳು, ಟಿ.ವಿ. ಕ್ಯಾಮೆರಾಗಳು, ಅದೇ ಸಮಯದಲ್ಲಿ ಪಬ್ಬಿಗೆ ಹೋದ ಇನ್ನೂ ಯಾರೆಂದು ಗೊತಿಲ್ಲದ ಶ್ರೀಮಂತ ಗಣ್ಯ ವ್ಯಕ್ತಿಗಳ ಮಕ್ಕಳ ಮಾನ ಹರಾಜಾದ ಘಟನೆಯನ್ನು ಲೋಕಕ್ಕೆಲ್ಲಾ ತಿಳಿಸಲು ಪೈಪೋಟಿ ನಡೆಸುತ್ತಿದ್ದ ಕಾಲ ಅದು. ಪತ್ರಿಕೆಗಳಲ್ಲಿ(ಒಂದು ಬೆಳಗ್ಗಿನ, ಎರಡು ಸಂಜೆಯ) ವರದಿ ಬಂತು. ಅದೇ ಸಮಯಕ್ಕೆ ಪಬ್ಬು, ಬಾರಿಗೆ ಬಂದ ಮಹಿಳಾ ಆಯೋಗದ ಎರಡೂ ಬಣದ ಸದಸ್ಯರಿಗೆ ಕೇವಲ ೨೫ ಕಿ.ಮೀ. ಇರುವ ಬಿ.ಸಿ.ರೋಡಿಗೆ ಬರಲಾಗಲಿಲ್ಲ...

*********
ಹೋಗಲಿ ಬಿಡಿ, ಯಾರು ಬರದಿದ್ದರೇನಾಯಿತಂತೆ ಎಂದು ಯಾವ ಊರು ಉಧ್ಹಾರದ ಸಂಘಟನೆಯಲ್ಲೂ ಗುರುತಿಸದ ಕೆಲವರು ಟೀಚರನ್ನು ಚಿಕಿತ್ಸೆಗಾಗಿ ಮಂಗಳೂರಿನ ಕಂಕನಾಡಿಯ ಮಾನಸಿಕ ತಪಾಸಣೆ ಆಸ್ಪತ್ರೆಗೆ ಕರೆದೊಯ್ದು ದಾಖಲಿಸಿದರು. ೮, ೯ ಸಾವಿರ ಖರ್ಚನ್ನು ತಾವೇ ಭರಿಸಿದರು..
ಈಗ ಟೀಚರ್ ಗುಣಮುಖರಾಗುತ್ತಿದ್ದಾರೆ...

*********
ಒಬ್ಬ ಮಹಿಳೆಯನ್ನು ಯಾವುದೇ ಸಂಘ, ಸಂಸ್ಥೆಗಳ ನೆರವಿಲ್ಲದೇ ಮಾನವೀಯತೆಯಿಂದ ಸಹಾಯ ಮಾಡುವವರು ಎಶ್ಟೋ ಮಂದಿ ನಮ್ಮ ಮಂಗಳೂರಲ್ಲಿದ್ದಾರೆ. ಇಂಥವರು ನಿಮ್ಮೂರಲ್ಲೂ ಇರಬಹುದು.
ನಿಮಗಿದು ತಿಳಿದಿರಲೆಂದು ಬರೆದೆ. ಸುಮ್ಮನೇ ಎಲ್ಲಿಂದಲೋ ಬಂದವರು ನಮ್ಮೂರನ್ನು ‘ತಾಲಿಬಾನ್’ ಎಂದಾಗ ಬೇಸರವಾಗುತ್ತದೆ. ಭಾರತದ ಎಲ್ಲಾ ಊರಿನಂತೇ ನಮ್ಮ ದಕ್ಷಿಣ ಕನ್ನಡ ಜಿಲ್ಲೆ ಇದೆ. ಮತಾಂಧರ ಜೊತೆ ಮಾನವೀಯತೆ ಇದ್ದವರೂ ಇದ್ದಾರೆ..
*********
ಅಂದ ಹಾಗೆ, ಟೀಚರನ್ನು ಆಸ್ಪತ್ರೆಗೆ ಕರೆದೊಯ್ದವರಲ್ಲಿ ಹಿಂದೂ, ಕ್ರೈಸ್ತ, ಮುಸ್ಲಿಮ್ - ಎಲ್ಲಾ ಧರ್ಮದವರೂ ಇದ್ದರು.. ಯಾರೂ ನಾನಿಂಥವನು ಎಂದು ಹೇಳಿಕೊಳ್ಳಲಿಲ್ಲ..

Friday, February 13, 2009

ಪ್ರೀತಿಯ ಸೆಲೆ

ಹಸಿವ ಕಂಗಳು,ಒಣಗಿದ ತುಟಿಗಳ ಏರು ಜವ್ವನೆಗೆ
ಬಿಗಿದಪ್ಪಿ ಮುತ್ತಿನ ಮಳೆ ಎರೆಯಲು ಎಲ್ಲಿದೆ ಪುರುಸೊತ್ತು?
ಹಳ್ಳಿಯ ಹವೆಯೂ ಈಗ ಮಲಿನಗೊಂಡಿದೆ ಹುಟ್ಟಿದ್ದಕ್ಕೆ,
ಅಪ್ಪುವುದಕ್ಕೆ, ಬಟ್ಟೆ ಹಾಕುವುದಕ್ಕೆ, ಕಳಚುವುದಕ್ಕೊಂದು
ದಿನ ಎಂಬ ಆಚರಣೆಯೇ ಸೋಜಿಗ ತಂದಿದೆ..
ತೊದಲು ನುಡಿಯನಾಡುವ ಹಸುಳೆಗೇನು ಗೊತ್ತು?
ಇನ್ನು ಮುಂದೆ ಬಾಳ ಪಯಣ ಯಾರ ಮನೆಯ ತೊತ್ತು?
ಸಧ್ಯಕ್ಕೆ ಅಮ್ಮನ ಬೆಚ್ಹನೆಯ ಮುತ್ತೇ ಸಾಕೆನುತಿದೆ
ಸೆಂಟ್,ಪೌಡರ್ ಹಾಕಿ ಕೆಂಭೂತದಂತೆ ಪಾರ್ಕುಗಳಲ್ಲಿ
ಅಂಡಲೆದು ಕೆಟ್ಟ ಜಾಗತೀಕರಣದ ಲಿಪ್ ಸ್ಟಿಕ್ ನ ಚುಂಬನಕ್ಕೆ
ದಿನ, ಮುಹೂರ್ತ ಪ್ರತ್ಯೇಕ ಯಾಕೆ?
ಪ್ರೀತಿಯ ಸೆಲೆ ಕಾಣಲು ಕಳ್ಳತನವೇಕೆ?

Sunday, February 1, 2009

ಪಾಪಿ ದುನಿಯಾ..!

ಜನವರಿ ೨೫, ಭಾನುವಾರ.
ರಾತ್ರಿ ೨.೪೫ರ ಸಮಯ.
ಸ್ಥಳ: ಪಡೀಲ್ ಸಮೀಪದ ರೈಲ್ವೇ ಮೇಲ್ಸೇತುವೆಯ ಅಡಿ ರಾ.ಹೆ.೪೮.
ಅಲ್ಲೇ ನಾನು ಪ್ರಯಾಣಿಸುತ್ತಿದ್ದ ಕಾರಿಗೆ ಹೆದ್ದಾರಿ ಕಾಮಗರಿ ನಡೆಸುತ್ತಿದ್ದ ಹಿಟಾಚಿ ಯಂತ್ರದ ಕೈ ಅಪ್ಪಳಿಸಿದ್ದು.
ಕಾರಿನ ಮುಂಭಾಗದ ಗಾಜು ಹುಡಿಯಾಗಿತ್ತು. ಮುಂದೆ ಕುಳಿತಿದ್ದ ಚಾಲಕ, ನಾನು ಬದುಕಿದ್ದೇ ಒಂದು ಪವಾಡ...
ಇರಲಿ ಇದು ಮಾಮೂಲಿ ಸಂಗತಿ. ಇಂಥದ್ದೆಷ್ಟೋ ನಡೆಯುತ್ತವೆ.
**********
ಕುಂಟುತ್ತಾ ಸಾಗುತ್ತಿರುವ ಹೆದ್ದಾರಿ ಕಾಮಗಾರಿ, ಅತಿಭಾರದ ಅದಿರುಲಾರಿ ಸಂಚಾರ, ನೋಡಿಯೂ ನೋಡದಂತಿರುವ ಆಡಳಿತ, ಈ ಕುರಿತು ಸ್ಥಳೀಯ ಪತ್ರಿಕೆಗಳು ಬರೆದರೂ ಪ್ರಯೋಜನ ಆಗಿರಲಿಲ್ಲ..ಹೀಗಾಗಿ ನ್ಯಾಷನಲ್ ಚಾನಲ್ ನೋಡಿದೊಡನೇ ಛೇ..ನಮ್ಮ ಹೆದ್ದಾರಿಯ ಬಗ್ಗೆ, ಹಗಲು ರೈಲು ಓಡಾಟದ ಬಗ್ಗೆ ಬಿತ್ತರಿಸಲಿ ಎಂದು ಹಾರೈಸುತ್ತಿದ್ದೆ. ಮೊನ್ನೆ ಅಪಘಾತ ಆದಾಗಲೂ ಹಾಗೇ ಅಂದುಕೊಂಡೆ.
**************
ಮರುದಿನ ಸೋಮವಾರ ಮತ್ತೆ ಕೆಟ್ಟ ರಸ್ತೆಯಲ್ಲಿ ಮಧ್ಯಾಹ್ನ ಮಂಗಳೂರಿನತ್ತ ಬರುತ್ತಿದ್ದೆ. ಉದ್ದುದ್ದದ ಟ್ರಾಫಿಕ್ ಜಾಂ.. ಪ್ರಯಾಣಿಕರೆಲ್ಲರೂ ಹಿಡಿಶಾಪ ಹಾಕುತ್ತಿದ್ದರು...ಹಾಗೂ ಹೀಗೂ ಪಂಪ್ ವೆಲ್ ಬಳಿ ಬಂದಾಗ ಬುರ್ರನೆ ಟಿ.ವಿ(ನ್ಯಾಶನಲ್). ವ್ಯಾನೊಂದು ಪಾಸಾಯಿತು. ಅಬ್ಬ.. ಇನ್ನು ಮಂಗಳೂರಿಗರ ಸಮಸ್ಯೆ ಪರಿಹಾರ ಸ್ವಲ್ಪ ಮಟ್ಟಿಗಾದರೂ ದೆಹಲಿಮಟ್ಟಕ್ಕೆ ಹೋಗಬಹುದು ಅಂದುಕೊಂಡೆ.
ಆಗ ಸಮಯ ೧೨.೩೦..ಮಟ ಮಟ ಮಧ್ಯಾಹ್ನ..ಜನವರಿ ೨೬. ಮಂಗಳೂರು ಎಂದಿನಂತೇ ಇತ್ತು. ಮಹಿಳೆಯರು, ಮಕ್ಕಳು ನಿರ್ಭಯವಾಗಿ ನಗುನಗುತ್ತಾ ಪೇಟೆಸಂಚಾರ ಮಾಡುತ್ತಿದ್ದರು. ...
ನಮ್ಮ ಕೆ.ಎಸ್.ರಾವ್ ರಸ್ತೆಯಲ್ಲಿ ಎಂದಿಗಿಂತ ಹೆಚ್ಹಿನ ಜನ..ರಜೆ ಅಲ್ವಾ?
********
ಟಿ.ವಿ.ಯಲ್ಲಿ ನ್ಯಾಶನಲ್ ಚಾನೆಲ್ ನಲ್ಲಿ ಭಾರೀ ಸುದ್ದಿ ಬಿತ್ತರಗೊಳ್ಳುತ್ತಿತ್ತು. ಇಡೀ ಮಂಗಳೂರು ಭಯಭೀತವಾಗಿದೆ..ಹಾಗೆ, ಹೀಗೆ ಎಂದು..ಆ ಹೊತ್ತಿನ ಮಟ್ಟಿಗೆ ಅದು ಸುಳ್ಳೂ ಆಗಿತ್ತು...ಕೂಡಲೇ ಹೇಳಿದೆ ಏನು ಮಾರಾಯ್ರೆ, ಜ್ವಲಂತ ಸಮಸ್ಯೆಗಳು ಹಲವಾರಿವೆ. ಅವಕ್ಕೆಲ್ಲ ಈ ಟಿ.ವಿ. ಚಾನೆಲ್ ಗಳು ಮಂಗಳೂರಿಗೆ ಬರುವುದಿಲ್ಲ. ಈ ಸುದ್ದಿಗಿಂತ ಇನ್ನೂ ದೊಡ್ದ ಸುದ್ದಿ ಬೇಕಾದಸ್ಟಿದೆ ಮಾರಾಯ್ರೇ?
ತಕ್ಷಣ ಒಬ್ಬ ಉದ್ವೇಗದಿಂದ ಹೇಳಿದ ಹಾಗಾದರೆ ಹೆಣ್ಣು ಮಕ್ಕಳಿಗೆ ಹೊಡೆದದ್ದು ನಿಮಗೇನೂ ಅಲ್ವ?
************
ಹೆಣ್ಣು ಮಕ್ಕಳಿಗೆ ಹೊಡೆದದ್ದು ತಪ್ಪು. ಒಪ್ಪಿಕೊಳ್ಳೋಣ. ಅದು ಶನಿವಾರ ೨೪, ಜನವರಿಯಂದು ನಡೆದ ಘಟನೆ. ಅದರ ಬಗ್ಗೆ ಬೇಕಾದ ಚರ್ಚೆ ನಡೆದಿವೆ. ಆದರೆ ಪ್ರಾಣವನ್ನೇ ತೆಗೆಯುವಂಥ ಹೆದ್ದಾರಿ ಅವ್ಯವಸ್ಥೆಯೂ ಸಮಸ್ಯೆಯೇ ಅಲ್ಲವೇ..
********
ಈ ಗೊಂದಲ ನನ್ನ ತಲೆ ಹೊಕ್ಕಿತು. ಬಿಡಿ..ನಾನೊಬ್ಬ ಸಾಮಾನ್ಯ ಮನುಷ್ಯ. ಸತ್ತರೆಷ್ಟು, ಬಿಟ್ಟರೆಷ್ಟು? ಪಾಪ ಪಬ್ಬಿಗೆ ಹೋಗಿ ಕುಣಿದು ಕುಪ್ಪಳಿಸುವವರಿಗಾಗಿ, ಆಮಲು ಪದಾರ್ಥ ಸೇವಿಸಿ ರಾತ್ರಿ ಅಲ್ಲಲ್ಲಿ ಬಿದ್ದುಕೊಳ್ಳುವವರಿಗಾಗಿ ಅಲ್ಲವೇ ಸಪೋರ್ಟ್?
ಏನಂತೀರಿ?

Thursday, January 15, 2009

ಕುಡ್ಲವೆಂಬ ಬಲೂನು!

ಹಾಗೇ ಸುಮ್ಮನೆ ಹಿಂದಿರುಗಿ ನೋಡಿ!
ಕುಡ್ಲ ಹೇಗೆ ಕಾಣುತ್ತದೆ?
ತುಳು ಭಾಷೆಯಲ್ಲಿ ಕುಡ್ಲ, ಮಲಯಾಳಿಗಳಿಗೆ ಮಂಗಳಾಪುರ, ನಮಗೆಲ್ಲಾ ಮಂಗಳೂರು.
ಕರಾವಳಿಯ ಈ ಬಂದರು ಪಟ್ಟಣ ದಿಡೀರನೆ ಧೃಡಕಾಯವಾಗುತ್ತಿದೆ.
ಹುಟ್ಟಿದಾಗಿನಿಂದ ಇಲ್ಲಿಯವರೆಗೂ ಊರು ಬಿಡದೆ ಇಲ್ಲಿಯೇ ವಾಸಿಸುವ ನನ್ನಂಥ ಸಾಮಾನ್ಯರಿಗೂ ಅರ್ಥವಾಗದಷ್ಟು ಕುಡ್ಲ ಮಾರ್ಪಾಡಾಗಿದೆ. ಇಪ್ಪತ್ತು ವರ್ಷಗಳ ಹಿಂದೆ ಎಂಟನೇ ಕ್ಲಾಸಿಗೆ ಬೋಂದೇಲಿನಿಂದ ೧೯ ನಂಬ್ರದ ಬಸ್ಸಿನಲ್ಲಿ ಲಾಲ್ ಬಾಗ್ ಹೋಗುವಾಗ ಇದ್ದ ಸ್ಥಿತಿ ಈಗಿಲ್ಲ ಅನ್ನುವುದಾದರೆ ಅದು ಸಹಜ. ಆದರೆ ಮಿತಿಮೀರಿದ ವೇಗ ಮಾತ್ರ ಅಪಾಯಕ್ಕೆ ಆಹ್ವಾನ!.
ನಮ್ಮ ಕುಡ್ಲದಲ್ಲಿರುವ ಕೆಲವು ಶಾಪಿಂಗ್ ಕಾಂಪ್ಲೆಕ್ಸ್ ಗಳ ಒಳಹೊಕ್ಕು ನೋಡಿ. ಚಕ್ರವ್ಯೂಹದಂತಿರುವ ಕಟ್ಟಡಗಳೇ ಒಂದು ನಿಗೂಡ.ಅಲ್ಲೆಲ್ಲಾ ಎಂಥ ವಹಿವಾಟು ನಡೆಯುತ್ತಿದೆ? ಲಾಭ? ಕೇಳಿದರೆ ಲಾಸ್ ಮಾರ್ರೆ ಅನ್ನುತ್ತಾರೆ. ಹಾಗಾದರೆ ಒಂದೊಂದು ಅಂಗಡಿಯಲ್ಲಿ ಒಬ್ಬ ಹುಡುಗ, ಒಬ್ಬ ಹುಡುಗಿಯನ್ನಿಟ್ಟು ಮಾಲಕ ಮಾಡುವ ಕೆಲಸ ಏನು?
ಮುಂಬಯಿಯಲ್ಲಿ ಹೊಸ ಫ್ಯಾಷನ್ ಬಂದ ಕೂಡಲೇ ಮಂಗಳೂರಿನಲ್ಲಿ ಅದು ಕಾಣಿಸುತ್ತದೆ. ಅಲ್ಲಿ ಹೊಸ ಡಾನ್ ಹುಟ್ಟಿದರೆ ಇಲ್ಲಿ ಹೊಸ ಪೆಟ್ಟಿಸ್ಟ್(ಪೆಟ್ಟು ಮಾಡಲು ಗೊತ್ತಿದ್ದವ) ಹುಟ್ತುತ್ತಾನೆ. ಹೀಗೆ ನಮ್ಮ ಮಂಗಳೂರು ಮತ್ತು ಮುಂಬಯಿಯ ನಂಟು ಅಮೋಘ.
ಸುನಿಲ್ ಶೆಟ್ಟಿ ಮಂಗಳೂರಲ್ಲೇ ಎರಡೆರಡು ದೊಡ್ಡ ಅಂಗಡಿ ತೆರೆಯುವ ಸಾಹಸ ಮಾಡಿದ್ದಾನೆ. ದುಬಾಇ ಸಹಿತ ದೊಡ್ಡ ದೊಡ್ಡ ಕುಳಗಳು ಇಲ್ಲಿ ಭಾರೀ ಕಟ್ಟಡ ಕಟ್ಟಿಸುತ್ತಿದ್ದಾರೆ.
ಅದೆಲ್ಲಾ ಸರಿ, ಇದರಿಂದ ಯಾರಿಗೆ ಲಾಭ?
ಫುಟ್ ಪಾತ್ ಇಲ್ಲದ ರಸ್ತೆಗಳು, ಕ್ಲೀನ್ ಇಲ್ಲದ ಬಸ್ ನಿಲ್ದಾಣ, ಪ್ರಯೋಜನವಿಲ್ಲದ ನೇತಾರರ ನಡುವೆಯೂ ಕುಡ್ಲದ ಲ್ಯಾಂಡ್ ವ್ಯಾಲ್ಯೂ ಮಿತಿಮೀರಿ ಹೆಚ್ಹಿದೆ. ಚರ್ಚೆ ಮಾಡಲು ಹೋದಗೆ ‘ಪೆಟ್ಟಿಗೆ’ ಬರುತ್ತಾರೆ. ಹೀಗಾಗಿ ಬೆಂಗಳೂರಿಗೇನೂ ಕಮ್ಮಿ ಇಲ್ಲ.
ಇವೆಲ್ಲದರ ನಡುವೆ ಅದೇ ಕದ್ರಿ ಪಾರ್ಕ್, ಅದೇ ಸುಲ್ತಾನ್ ಬತ್ತೇರಿ, ಅದೇ ಪಣಂಬೂರು ಬೀಚ್ ಕೈಬೀಸಿ ಕರೆಯುತ್ತಿದೆ.
--ಇವಿಷ್ಟು ಸದ್ಯಕ್ಕೆ ಸಾಕು ಬರೆಯುವುದು ಬೇಕಾದಷ್ಟು ಇದೆ. ಅದಕ್ಕೂ ಮೊದಲು ನೀವೇನು ಕಂಡಿದ್ದೀರಿ ಹೇಳಿ.

Friday, January 2, 2009

ಬಲ್ಲಿರೇನಯ್ಯ!



ಸುಮಾರು ೨೫ ವರ್ಷಗಳೇ ಕಳೆದು ಹೋದವು!
ಪ್ರಾಥಮಿಕ ಶಾಲೆಗೆ ಹೋಗುತ್ತಿದ್ದ ಸಮಯವದು. ನಮ್ಮೂರು ಕರೋಪಾಡಿ ಗ್ರಾಮ. ಅದಕ್ಕೆ ತಾಗಿಕೊಂಡಿರುವುದು ಕೇರಳ. ಆದರೆ ಅಲ್ಲಿ ಮಲಯಾಳಿಗಳು ಕಡಮೆ. ಕರೋಪಾಡಿಗೆ ಒಳಪಡುವ ಮಿತ್ತನಡ್ಕ, ಪದ್ಯಾಣ, ಮಾಂಬಾಡಿ, ಮುಗುಳಿ ಪ್ರದೇಶಗಳನ್ನು ದಾಟಿ ಬಾಯಾರು, ತಲೆಂಗಳ ಸಂಪರ್ಕಿಸಲು ಗುಡ್ಡೆಯ ದಾರಿ! ಇನ್ನೊಂದು ಗುಡ್ಡೆ ದಾಟಿದರೆ ಅಳಿಕೆ, ಅಡ್ಯನಡ್ಕ...ಹೀಗೆ ಊರೂರುಗಳನ್ನು ಬೆಸೆಯಲು ಬೆಟ್ಟ ಗುಡ್ಡಗಳು. ಜೊತೆಗೆ ಯಕ್ಷಗಾನ.
ನಮ್ಮೂರೇ ಹಾಗಿತ್ತು. ಸಂಜೆಯಾದರೆ ರೇಡಿಯೋ, ವಿಟ್ಲದಿಂದ ಯಾರಾದರೂ ತರುತಿದ್ದ ಪೇಪರ್. ಅದರಲ್ಲಿ
ಎಲ್ಲೆಲ್ಲಿ ಯಾವ್ಯಾವ ಮೇಳಗಳ ಆಟ ಇದೆ? ಎಂದು ನೋಡುವುದು. ಸಾಧ್ಯವಾದರೆ ಅಲ್ಲಿಗೆ ಹೋಗುವಲ್ಲಿವರೆಗೆ(ದೂರದಲ್ಲಿದ್ದರೂ ಸರಿ) ಊರ ಮಂದಿಯ ಅಭಿಮಾನ!. ರಜೆ ಕಳೆಯಲು ಊರಿಗೆ ಬಂದ ನಾನೂ ಅಷ್ಟೇ. ಮಿತ್ತನಡ್ಕದಲ್ಲಿ ಬಯಲಾಟ ಇದೆಯೆಂದಾದರೆ ಆಟ ಪ್ರಾರಂಭವಾಗುವ ಮುನ್ನ ಮನೆಯಲ್ಲೇ ಇಪ್ಪತ್ತು, ಮೂವತ್ತು ಸುತ್ತು ಲಾಗ ಹಾಕುತ್ತಾ ಆಟದ ಮೂಡ್ ಗೆ ಬರುವುದು. ಇರುಳಿಡೀ ಚುರುಮುರಿ, ಐಸ್ ಕ್ಯಾಂಡಿ ತಿನ್ನುತ್ತಾ ಆಟದ ಗೌಜಿ ನೋಡುವುದು.!
*************
ಅಂದ ಹಾಗೆ ನನ್ನ ಹಿರಿಯರ ಕುರಿತು ಒಂದಿಷ್ಟು.
ನನ್ನ ಹಿರಿಯರ ಮನೆ ಮಾಂಬಾಡಿಯೆಂದರೆ ತೆಂಕುತಿಟ್ಟಿನ ಯಕ್ಷಗಾನದ ಗುರುಕುಲ ಇದ್ದ ಹಾಗೆ. ನನ್ನಜ್ಜ (ಅಂದರೆ ತಂದೆಯ ತಂದೆ)ಮಾಂಬಾಡಿ ನಾರಾಯಣ ಭಾಗವತ(೧೯೦೦-೧೯೯೦) ಸುಮಾರು ೧೯೬೦ರವರೆಗೆ ವಿವಿಧ ಯಕ್ಷಗಾನ ಮೇಳಗಳಲ್ಲಿ ಭಾಗವತರಾಗಿದ್ದವರು. ೭೦ರ ದಶಕದಲ್ಲೇ ರಾಜ್ಯೋತ್ಸವ ಪ್ರಶಸ್ತಿ ಅವರಿಗೆ ಬಂದಿತ್ತು.
ಆದರೇನು? ಕೇವಲ ಮುಕ್ಕಾಲು ಎಕ್ರೆ ಭೂಮಿ, ಒಂದು ಮನೆ, ಆಕಳು.
ಇವಿಷ್ಟು ಜೊತೆಗೆ ಮನೆಗೆ ಭಾಗವತಿಕೆ, ಚೆಂಡೆ, ಮದ್ದಳೆ ಕಲಿಯಲು ಬರುತ್ತಿದ್ದವರು. ರಿಸರ್ಚ್ ಮಾಡಲು ಬರುವ ವಿದ್ಯಾರ್ಥಿಗಳು. ಮತ್ತು ಅಪಾರ ಅಭಿಮಾನಿಗಳು.
ಇವು ಅಜ್ಜನ ಆಸ್ತಿ.
ಮನೆಗೆ ಬಂದವರನ್ನು ಯಾವ ಜಾತಿಯೆಂದು ಯಾರೂ ಕೇಳಿದವರಲ್ಲ. ಶ್ರೀಮಂತ, ಬಡವ ತಾರತಮ್ಯ ಮೊದಲೇ ಇಲ್ಲ. ಕೇವಲ ಫಲಾಪೇಕ್ಷೆ ಇಲ್ಲದೆ ವಿದ್ಯೆ ಕಲಿಸುವುದು ಅಜ್ಜನ ನೀತಿ.
ಕಡತೋಕ, ಪುತ್ತಿಗೆ, ಪದ್ಯಾಣ ಭಾಗವತರು ಅಜ್ಜನ ಬಳಿ ತಾಳ ಹಾಕಲು ಕಲಿತವರು. ಮಂಗಳೂರಿನಲ್ಲಿದ್ದ ನಾನು ರಜೆಯಲ್ಲಿ ಊರಿಗೆ ಹೋದಾಗಲೆಲ್ಲಾ ನನಗೆ ಕಾಣಸಿಗುತ್ತಿದ್ದದ್ದು ಚೆಂಡೆ ಮದ್ದಳೆ, ಭಾಗವತಿಕೆ.
ಇದೀಗ ಆ ಕೆಲಸವನ್ನು ನನ್ನ ಚಿಕ್ಕಪ್ಪ ಮುಂದುವರಿಸಿಕೊಂಡು ಹೋಗುತ್ತಿದ್ದಾರೆ. ಹಳೆಯ ತಲೆಮಾರಿನ ಕಲಾವಿದರು ಅಜ್ಜನ ಶಿಷ್ಯರಾದರೆ, ಹೊಸಬರಲ್ಲಿ ಹಲವರು ಚಿಕ್ಕಪ್ಪನ ಗರಡಿಯಲ್ಲಿ ಪಳಗಿದವರು.
**********
ಈಗ ನಮ್ಮೂರಿನ ಮನೆಗಳಲ್ಲಿ ಡಿಶ್ ಟಿ.ವಿ. ಬಂದಿದೆ. ಮೊಬ್ಬೈಲ್ ರೇಂಜ್ ಸಿಗುತ್ತಿದೆ. ಯುವಕರು ಬೆಂಗಳೂರಲ್ಲಿ ಸ್ಥಾಪಿತವಾಗಿದ್ದಾರೆ. ಎಲ್ಲಾ ಮುಂದುವರಿದ ಕರ್ನಾಟಕದ ಹಳ್ಳಿಗಳಂತೆ ನಮ್ಮ ಕರೋಪಾಡಿ ಆಧುನೀಕರಣಗೊಂಡಿದೆ.
***********
ಆದರೂ ಸಮಾಧಾನ ಎಂದರೆ ಇಡೀ ಗ್ರಾಮದ ಯಾವುದಾದರೂ ಒಂದು ಮನೆಯಲ್ಲಿ ದಿನಕ್ಕೊಂದು ಬಾರಿಯಾದರೂ ಚೆಂಡೆ ಪೆಟ್ಟು ಕೇಳಿಸುತ್ತದೆ. ಯಾವ ಕಲಾವಿದ ಇಂದು ಯಾವ ಮೇಳದಲ್ಲಿದ್ದಾನೆ ಎಂಬ ಚರ್ಚೆ ಇನ್ನೂ ನಡೆಯುತ್ತದೆ.
********
ಕಾಲ ಬದಲಾಗಿದೆ. ನಮ್ಮೂರಿನವರ ಮೂಡ್ ಬದಲಾಗಿಲ್ಲ. ಆಗುವುದೂ ಇಲ್ಲ. ಆತ ವಿಶ್ವದ ಯಾವ ಮೂಲೆಯಲ್ಲೇ ಇರಲಿ. ದೊಡ್ದ ಉದ್ಯೋಗದಲ್ಲಿರಲಿ, ಕರೋಪಾಡಿ ಗ್ರಾಮಕ್ಕೆ ಸಂಬಂಧಿಸಿದವನು ಹೌದೆಂದಾದರೆ..,
ಯಕ್ಷಗಾನಕ್ಕೆ ಕುತೂಹಲ ವ್ಯಕ್ತಪಡಿಸಿಯೇ ಸಿದ್ದ.
********
ಇದು ಕರೋಪಾಡಿಗರ ಕಲೆಯ ಪ್ರೀತಿ. ಕನ್ನಡವನ್ನೇ ಬಳಸುವ ಜಾನಪದ ಕಲೆ ಯಕ್ಷಗಾನ. ಹೀಗಾಗಿ ಯಕ್ಷಗಾನಪ್ರಿಯರೆಲ್ಲರೂ ಕನ್ನಡಪ್ರಿಯರು.
ಆದರೆ ಇಂದಿನ ಕಲಾವಿದರು ಯಕ್ಷಗಾನವನ್ನು ಉಳಿಸುತ್ತಿದ್ದಾರೆಯೆ? ಅಳಿದುಳಿದ ಪ್ರೀತಿಯನ್ನು ದ್ವೇಷಕ್ಕೆ ಮಾರ್ಪಡಿಸುತ್ತಿದ್ದಾರೆಯೆ?
ಯಕ್ಷಗಾನ ಬಲ್ಲವರು ಹೇಳಬೇಕು...
ಯಕ್ಷಗಾನಂ ಗೆಲ್ಗೆ!

(ಚಿತ್ರದಲ್ಲಿರುವವರು ನನ್ನ ಅಜ್ಜ ಮಾಂಬಾಡಿ ನಾರಾಯಣ ಭಾಗವತರು)