Friday, January 2, 2009

ಬಲ್ಲಿರೇನಯ್ಯ!



ಸುಮಾರು ೨೫ ವರ್ಷಗಳೇ ಕಳೆದು ಹೋದವು!
ಪ್ರಾಥಮಿಕ ಶಾಲೆಗೆ ಹೋಗುತ್ತಿದ್ದ ಸಮಯವದು. ನಮ್ಮೂರು ಕರೋಪಾಡಿ ಗ್ರಾಮ. ಅದಕ್ಕೆ ತಾಗಿಕೊಂಡಿರುವುದು ಕೇರಳ. ಆದರೆ ಅಲ್ಲಿ ಮಲಯಾಳಿಗಳು ಕಡಮೆ. ಕರೋಪಾಡಿಗೆ ಒಳಪಡುವ ಮಿತ್ತನಡ್ಕ, ಪದ್ಯಾಣ, ಮಾಂಬಾಡಿ, ಮುಗುಳಿ ಪ್ರದೇಶಗಳನ್ನು ದಾಟಿ ಬಾಯಾರು, ತಲೆಂಗಳ ಸಂಪರ್ಕಿಸಲು ಗುಡ್ಡೆಯ ದಾರಿ! ಇನ್ನೊಂದು ಗುಡ್ಡೆ ದಾಟಿದರೆ ಅಳಿಕೆ, ಅಡ್ಯನಡ್ಕ...ಹೀಗೆ ಊರೂರುಗಳನ್ನು ಬೆಸೆಯಲು ಬೆಟ್ಟ ಗುಡ್ಡಗಳು. ಜೊತೆಗೆ ಯಕ್ಷಗಾನ.
ನಮ್ಮೂರೇ ಹಾಗಿತ್ತು. ಸಂಜೆಯಾದರೆ ರೇಡಿಯೋ, ವಿಟ್ಲದಿಂದ ಯಾರಾದರೂ ತರುತಿದ್ದ ಪೇಪರ್. ಅದರಲ್ಲಿ
ಎಲ್ಲೆಲ್ಲಿ ಯಾವ್ಯಾವ ಮೇಳಗಳ ಆಟ ಇದೆ? ಎಂದು ನೋಡುವುದು. ಸಾಧ್ಯವಾದರೆ ಅಲ್ಲಿಗೆ ಹೋಗುವಲ್ಲಿವರೆಗೆ(ದೂರದಲ್ಲಿದ್ದರೂ ಸರಿ) ಊರ ಮಂದಿಯ ಅಭಿಮಾನ!. ರಜೆ ಕಳೆಯಲು ಊರಿಗೆ ಬಂದ ನಾನೂ ಅಷ್ಟೇ. ಮಿತ್ತನಡ್ಕದಲ್ಲಿ ಬಯಲಾಟ ಇದೆಯೆಂದಾದರೆ ಆಟ ಪ್ರಾರಂಭವಾಗುವ ಮುನ್ನ ಮನೆಯಲ್ಲೇ ಇಪ್ಪತ್ತು, ಮೂವತ್ತು ಸುತ್ತು ಲಾಗ ಹಾಕುತ್ತಾ ಆಟದ ಮೂಡ್ ಗೆ ಬರುವುದು. ಇರುಳಿಡೀ ಚುರುಮುರಿ, ಐಸ್ ಕ್ಯಾಂಡಿ ತಿನ್ನುತ್ತಾ ಆಟದ ಗೌಜಿ ನೋಡುವುದು.!
*************
ಅಂದ ಹಾಗೆ ನನ್ನ ಹಿರಿಯರ ಕುರಿತು ಒಂದಿಷ್ಟು.
ನನ್ನ ಹಿರಿಯರ ಮನೆ ಮಾಂಬಾಡಿಯೆಂದರೆ ತೆಂಕುತಿಟ್ಟಿನ ಯಕ್ಷಗಾನದ ಗುರುಕುಲ ಇದ್ದ ಹಾಗೆ. ನನ್ನಜ್ಜ (ಅಂದರೆ ತಂದೆಯ ತಂದೆ)ಮಾಂಬಾಡಿ ನಾರಾಯಣ ಭಾಗವತ(೧೯೦೦-೧೯೯೦) ಸುಮಾರು ೧೯೬೦ರವರೆಗೆ ವಿವಿಧ ಯಕ್ಷಗಾನ ಮೇಳಗಳಲ್ಲಿ ಭಾಗವತರಾಗಿದ್ದವರು. ೭೦ರ ದಶಕದಲ್ಲೇ ರಾಜ್ಯೋತ್ಸವ ಪ್ರಶಸ್ತಿ ಅವರಿಗೆ ಬಂದಿತ್ತು.
ಆದರೇನು? ಕೇವಲ ಮುಕ್ಕಾಲು ಎಕ್ರೆ ಭೂಮಿ, ಒಂದು ಮನೆ, ಆಕಳು.
ಇವಿಷ್ಟು ಜೊತೆಗೆ ಮನೆಗೆ ಭಾಗವತಿಕೆ, ಚೆಂಡೆ, ಮದ್ದಳೆ ಕಲಿಯಲು ಬರುತ್ತಿದ್ದವರು. ರಿಸರ್ಚ್ ಮಾಡಲು ಬರುವ ವಿದ್ಯಾರ್ಥಿಗಳು. ಮತ್ತು ಅಪಾರ ಅಭಿಮಾನಿಗಳು.
ಇವು ಅಜ್ಜನ ಆಸ್ತಿ.
ಮನೆಗೆ ಬಂದವರನ್ನು ಯಾವ ಜಾತಿಯೆಂದು ಯಾರೂ ಕೇಳಿದವರಲ್ಲ. ಶ್ರೀಮಂತ, ಬಡವ ತಾರತಮ್ಯ ಮೊದಲೇ ಇಲ್ಲ. ಕೇವಲ ಫಲಾಪೇಕ್ಷೆ ಇಲ್ಲದೆ ವಿದ್ಯೆ ಕಲಿಸುವುದು ಅಜ್ಜನ ನೀತಿ.
ಕಡತೋಕ, ಪುತ್ತಿಗೆ, ಪದ್ಯಾಣ ಭಾಗವತರು ಅಜ್ಜನ ಬಳಿ ತಾಳ ಹಾಕಲು ಕಲಿತವರು. ಮಂಗಳೂರಿನಲ್ಲಿದ್ದ ನಾನು ರಜೆಯಲ್ಲಿ ಊರಿಗೆ ಹೋದಾಗಲೆಲ್ಲಾ ನನಗೆ ಕಾಣಸಿಗುತ್ತಿದ್ದದ್ದು ಚೆಂಡೆ ಮದ್ದಳೆ, ಭಾಗವತಿಕೆ.
ಇದೀಗ ಆ ಕೆಲಸವನ್ನು ನನ್ನ ಚಿಕ್ಕಪ್ಪ ಮುಂದುವರಿಸಿಕೊಂಡು ಹೋಗುತ್ತಿದ್ದಾರೆ. ಹಳೆಯ ತಲೆಮಾರಿನ ಕಲಾವಿದರು ಅಜ್ಜನ ಶಿಷ್ಯರಾದರೆ, ಹೊಸಬರಲ್ಲಿ ಹಲವರು ಚಿಕ್ಕಪ್ಪನ ಗರಡಿಯಲ್ಲಿ ಪಳಗಿದವರು.
**********
ಈಗ ನಮ್ಮೂರಿನ ಮನೆಗಳಲ್ಲಿ ಡಿಶ್ ಟಿ.ವಿ. ಬಂದಿದೆ. ಮೊಬ್ಬೈಲ್ ರೇಂಜ್ ಸಿಗುತ್ತಿದೆ. ಯುವಕರು ಬೆಂಗಳೂರಲ್ಲಿ ಸ್ಥಾಪಿತವಾಗಿದ್ದಾರೆ. ಎಲ್ಲಾ ಮುಂದುವರಿದ ಕರ್ನಾಟಕದ ಹಳ್ಳಿಗಳಂತೆ ನಮ್ಮ ಕರೋಪಾಡಿ ಆಧುನೀಕರಣಗೊಂಡಿದೆ.
***********
ಆದರೂ ಸಮಾಧಾನ ಎಂದರೆ ಇಡೀ ಗ್ರಾಮದ ಯಾವುದಾದರೂ ಒಂದು ಮನೆಯಲ್ಲಿ ದಿನಕ್ಕೊಂದು ಬಾರಿಯಾದರೂ ಚೆಂಡೆ ಪೆಟ್ಟು ಕೇಳಿಸುತ್ತದೆ. ಯಾವ ಕಲಾವಿದ ಇಂದು ಯಾವ ಮೇಳದಲ್ಲಿದ್ದಾನೆ ಎಂಬ ಚರ್ಚೆ ಇನ್ನೂ ನಡೆಯುತ್ತದೆ.
********
ಕಾಲ ಬದಲಾಗಿದೆ. ನಮ್ಮೂರಿನವರ ಮೂಡ್ ಬದಲಾಗಿಲ್ಲ. ಆಗುವುದೂ ಇಲ್ಲ. ಆತ ವಿಶ್ವದ ಯಾವ ಮೂಲೆಯಲ್ಲೇ ಇರಲಿ. ದೊಡ್ದ ಉದ್ಯೋಗದಲ್ಲಿರಲಿ, ಕರೋಪಾಡಿ ಗ್ರಾಮಕ್ಕೆ ಸಂಬಂಧಿಸಿದವನು ಹೌದೆಂದಾದರೆ..,
ಯಕ್ಷಗಾನಕ್ಕೆ ಕುತೂಹಲ ವ್ಯಕ್ತಪಡಿಸಿಯೇ ಸಿದ್ದ.
********
ಇದು ಕರೋಪಾಡಿಗರ ಕಲೆಯ ಪ್ರೀತಿ. ಕನ್ನಡವನ್ನೇ ಬಳಸುವ ಜಾನಪದ ಕಲೆ ಯಕ್ಷಗಾನ. ಹೀಗಾಗಿ ಯಕ್ಷಗಾನಪ್ರಿಯರೆಲ್ಲರೂ ಕನ್ನಡಪ್ರಿಯರು.
ಆದರೆ ಇಂದಿನ ಕಲಾವಿದರು ಯಕ್ಷಗಾನವನ್ನು ಉಳಿಸುತ್ತಿದ್ದಾರೆಯೆ? ಅಳಿದುಳಿದ ಪ್ರೀತಿಯನ್ನು ದ್ವೇಷಕ್ಕೆ ಮಾರ್ಪಡಿಸುತ್ತಿದ್ದಾರೆಯೆ?
ಯಕ್ಷಗಾನ ಬಲ್ಲವರು ಹೇಳಬೇಕು...
ಯಕ್ಷಗಾನಂ ಗೆಲ್ಗೆ!

(ಚಿತ್ರದಲ್ಲಿರುವವರು ನನ್ನ ಅಜ್ಜ ಮಾಂಬಾಡಿ ನಾರಾಯಣ ಭಾಗವತರು)

10 comments:

shivu.k said...

ಹರೀಶ್,

ನಿಮ್ಮ ತಾತನವರ ಸಾಧನೆ ಬಹಳ...

ಅದಕ್ಕೆ ನಿಮ್ಮೂರಲ್ಲಿ ಈಗಲು ಚಂಡೆ ಪೆಟ್ಟು ಕೇಳಿಸುತ್ತದೆ...

ಅಂತ ಊರಿನಲ್ಲಿರುವ ನೀವೆ ಭಾಗ್ಯವಂತರು....

ನಿಮ್ಮೂರಿನ ಕೀರ್ತಿ ವಿಶ್ವವ್ಯಾಪಿಯಾಗಲಿ...
ನಿಮಗೆ ಹೊಸ ವರುಷದ ಶುಭಾಶಯಗಳು....

ಮಹೇಶ್ ಪುಚ್ಚಪ್ಪಾಡಿ said...

ಹೌದು ಇಂದು ಯಾರಿಗೆ ಬೇಕಾಗಿದೆ ಯಕ್ಷಗಾನ."ಮಹಾ"ನಗರಿಯೊಂದು ಇದ್ದರೆ , ಸಿಕ್ಕರೇ ಅದೇ ಸ್ವರ್ಗ ಎನ್ನುವ ಕಾಲವಿದು. ಹಾಗಾಗಿ "ಬಲ್ಲಿರೇನಯ್ಯ" ನಮ್ಮ ಕತೆ..?. ನಿಜಕ್ಕೂ ಅಜ್ಜನ ಚೆನ್ನಾಗಿದೆ. ಹಿಂದಿನವರೆಲ್ಲಾ ತೀರಾ ಬಡತನದ ಹಿನ್ನೆಲೆಯಿಂದ ಬಂದವರಲ್ಲವೇ. ಇಂದು ನಾವು ಅದೆಲ್ಲವನ್ನೂ ಮೀರಿ ಇನ್ನೇನು ವಿಮಾನವೇ ಬೇಕು ಎನ್ನುವ ಹಂತದಲ್ಲಿದ್ದೇವೆ. ಆದರೆ ಇಂದಿಗೂ ಒಂದಷ್ಟು ಜನ ಬಡ ಜೀವಗಳು ಕಾಣಸಿಗುತ್ತಲ್ವಾ?. ಇನ್ನೊಂದು ವಿಷ್ಯ. ಇಂದು ಯಕ್ಷಗಾನಗಳು ಜನರಿಗೆ ತಕ್ಕಂತೆ ಬದಲಾಗಿವೆ. ೧ ಗಂಟೆ , ೨ ಗಂಟೆ, ೩ ಗಂಟೆಗೆ ಪ್ರಸಂಗ ಮುಗಿಯುವ ಹಂತಕ್ಕೆ ಬಂದಿದೆ ಅಲ್ವಾ?

ಚಿತ್ರಾ ಸಂತೋಷ್ said...

ಯಕ್ಷಗಾನಕ್ಕೆ ಹೋಗ ಬಂದಂಗಾಯಿತು ಸರ್..ನಾನೂ ಹಿಂದೊಮ್ಮೆ ಯಕ್ಷಗಾನದ ಬಗ್ಗೆ ಬರೆದಿದ್ದೆ. ಊರುದ ಪರಿಚಯ ಮಸ್ತ್.
-ಚಿತ್ರಾ

ಸಂದೀಪ್ ಕಾಮತ್ said...

ಯಕ್ಷಗಾನದವರ ಸ್ಪಷ್ಟ ಕನ್ನಡದ ಬಗ್ಗೆ ನನಗೆ ತುಂಬಾ ಅಭಿಮಾನ ಇದೆ!

ಹರೀಶ ಮಾಂಬಾಡಿ said...

ಶಿವು,ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು.

ಮಹೇಶ್, ನೀವು ಹೇಳುವುದು ಸರಿ. ಕಾಲಮಿತಿಯ ಯಕ್ಷಗಾನ ಪ್ರದರ್ಶನ ಬಂದಿದೆ. ಆದರೆ ಕಲಾವಿದರ ನಖರಾ ನೋಡಿದರೆ ನೋಡುವಿದೇ ಬೇಡ ಅನಿಸುತ್ತೆ.

ಚಿತ್ರಾ,ಹಿಂದೊಮ್ಮೆ ಯಕ್ಷಗಾನದ ಬಗ್ಗೆ ಬರೆದ ನಿದ್ದೆಯಲ್ಲಿ ನಿಮ್ಮ "ಆಟ” ಓದಿದೆ. ಆ ಗೌಜಿ, ಮರುದಿನ ಇಡೀ ಹಗಲು ಗುಂಯ್ಗುಡುವ ಚೆಂಡೆ ಸದ್ದು ಖುಷಿ ಕೊಡುತ್ತೆ ಅಲ್ವಾ?

ಸಂದೀಪ್ ಓದಿ, ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು.

Ragu Kattinakere said...

kadatooka ru astudoora bartidru andre yeno aatmiyate irle beku. nimma ajjaavra audio iddre utubellli haaki aasaktaarige sigohage aagbeku.
~r

ಹರೀಶ ಮಾಂಬಾಡಿ said...

ರಾಘು, ಪ್ರಯತ್ನಿಸುತ್ತೇನೆ. ಸಿಗುವುದು ಕಷ್ಟ.

Padyana Ramachandra said...

"ಕಾಲ ಬದಲಾಗಿದೆ. ನಮ್ಮೂರಿನವರ ಮೂಡ್ ಬದಲಾಗಿಲ್ಲ. ಆಗುವುದೂ ಇಲ್ಲ. ಆತ ವಿಶ್ವದ ಯಾವ ಮೂಲೆಯಲ್ಲೇ ಇರಲಿ. ದೊಡ್ದ ಉದ್ಯೋಗದಲ್ಲಿರಲಿ, ಕರೋಪಾಡಿ ಗ್ರಾಮಕ್ಕೆ ಸಂಬಂಧಿಸಿದವನು ಹೌದೆಂದಾದರೆ..,ಯಕ್ಷಗಾನಕ್ಕೆ ಕುತೂಹಲ ವ್ಯಕ್ತಪಡಿಸಿಯೇ ಸಿದ್ದ."

- ಇದು ವಾಸ್ತವಾಂಶ.

"ಕರೋಪಾಡಿಗರ ಕಲೆಯ ಪ್ರೀತಿ. ಕನ್ನಡವನ್ನೇ ಬಳಸುವ ಜಾನಪದ ಕಲೆ ಯಕ್ಷಗಾನ. ಹೀಗಾಗಿ ಯಕ್ಷಗಾನಪ್ರಿಯರೆಲ್ಲರೂ ಕನ್ನಡಪ್ರಿಯರು."

-ಇದು ವಾಸ್ತವಾಂಶದ ಪೂರಕ.

Unknown said...

Harishanna..
Sooper!!!

Anonymous said...

Thanks Vidya

-Harishanna