Thursday, July 23, 2009

ಉತ್ತರ ಇಲ್ಲದ ಪ್ರಶ್ನೆ ?



ಮತ್ತೊಮ್ಮೆ ಈ ವಿಷಯ ಪ್ರಸ್ತಾಪ ಮಾಡುತ್ತಿದ್ದೇನೆ ಅಂದುಕೊಳ್ಳಬೇಡಿ.
ನಮ್ಮ ಕರಾವಳಿ (ನಿಮ್ಮೂರಿನ ಅವಸ್ಥೆಯೂ ಹೀಗೆ ಇರಬಹುದು) ರಸ್ತೆಗಳ ಖಾಯಂ ಕತೆ ಇದು.
ಅದರಲ್ಲೂ ರಾಷ್ಟ್ರೀಯ ಹೆದ್ದಾರಿ ಎಂದರೆ ಕೇಳುವುದೇ ಬೇಡ.
ಸೆಕೆಂಡ್ ಸೆಕೆಂಡ್ ಲೆಕ್ಕ ಹಾಕುವ ಬಸ್ಸು, ಲಾರಿಗಳು ತಮಗೆ ಜಾಗ ಕೊಡದ ಇತರ ವಾಹನಗಳನ್ನು ಕ್ಷುಲ್ಲಕ ಪೀಡೆಗಳಂತೆ ಕೆಕ್ಕರಿಸಿ ದಾಟುತ್ತವೆ.
ಅದರ ಜೊತೆ ಅಲ್ಲಲ್ಲಿ ರಸ್ತೆ ಅಗೆಯುವ ಕಾಮಗಾರಿ.
ಹೀಗೆ ಹೈರಾಣಾಗಿರುವ ರಸ್ತೆಗಳು ಪ್ರತೀ ಮಳೆಗಾಲ ಜನರ ತಾಳ್ಮೆಯನ್ನು ಕೆಣಕುತ್ತವೆ.
ದ.ಕ.ಜಿಲ್ಲೆಗೆ ದಿನಕ್ಕೆ ಸಾವಿರಾರು ಯಮಸ್ವರೂಪಿ ಅದಿರು ಲಾರಿಗಳು ಪ್ರವೇಶಿಸುತ್ತವೆ. ಸಣ್ನ ಪುಟ್ಟ ಅಪಘಾತಗಳಿಗಂತೂ ಲೆಕ್ಕ ಬರೆಯುವವರೇ ಇಲ್ಲ ಎನ್ನುವಂತಾಗಿದೆ. ಕಳೆದ ವಾರ ದ.ಕ-ಉಡುಪಿ ಜಿಲ್ಲೆಯಲ್ಲಿ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದವರ ಸಂಖ್ಯೆ ಎರಡಂಕಿ ತಲುಪಿದೆ.
ಹೀಗೇಕೆ?
********
ವಾಹನದಟ್ಟಣೆ ಹೆಚ್ಹಾಗಿದೆಯೋ?
ನಿಯಮ ಪಾಲನೆ ಆಗುತ್ತಿಲ್ಲವೋ?
ಇದು
ಉತ್ತರ ಇಲ್ಲದ ಪ್ರಶ್ನೆಯೇ
ಅಥವಾ ಸಿಲ್ಲಿ ವಿಷಯವೇ

(ಚಿತ್ರದಲ್ಲಿ ಕಾಣುವುದು ಐದಾರು ತಿಂಗಳ ಹಿಂದೆ ನಾನು ಪ್ರಯಾಣಿಸುತ್ತಿದ್ದ ಕಾರಿನ ಮೇಲೆ ಇದ್ದಕ್ಕಿದ್ದಂತೆ ಮಣ್ಣು ಅಗೆಯುವ ಯಂತ್ರವೊಂದು ಮೇಲೇರಿ ಅಪಘಾತಕ್ಕೀಡಾಗಿದ್ದು)

Friday, July 17, 2009

....................

ಮ್ಮೆಯೂ ತಿರುಗಿ ನೋಡದ ಜನರೀಗ ಮತ್ತೆ ಟೊಪ್ಪಿ ಹಾಕಿದ್ದಾರೆ.
ಇದುವರೆಗೆ ಬೆಂಗಳೂರಿಂದ ಮಂಗಳೂರಿನವರೆಗೆ ಮಾತ್ರ ಓಡುವ ರೈಲು ಇನ್ನು ಕೇರಳದ ಕಣ್ಣೊರಿಗೆ ವಿಸ್ತರಣೆಯಾಗಲಿದೆ.
ಇದಕ್ಕೆ ಕೇರಳದವರ ಒತಡವೇ ಕಾರಣವಂತೆ.
ಇದೊಂಥರಾ ಸ್ವಂತ ಮನೆ ಬಿಟ್ಟು ಬಾಡಿಗೆ ಮನೆಗೆ ಹೋಗುವಂಥ ಪರಿಸ್ಥಿತಿ.
ಕಣ್ಣೂರಿಂದ ರೈಲು ತುಂಬ ಮಲಯಾಳಿಗರು ಮಂಗಳೂರಿಗೆ ಬಂದು ನಮ್ಮನ್ನು ಹತ್ತಿಸಿಕೊಳ್ಳುತ್ತಾರೆ. ನಮಗೆ ಅವರು ಜಾಗ ಕೊಡುತ್ತಾರೆ.
ಅದಕ್ಕೆ ಅವರನ್ನು ದೂರಿ ಪ್ರಯೋಜನವಿಲ್ಲ.
ಮೊದಲೇ ದಕ್ಷಿಣ ಕನ್ನಡವೆಂದರೆ ಕರ್ನಾಟಕದಲ್ಲಿ ತಾತ್ಸರಕ್ಕೆ ಒಳಗಾದ ಊರು. ‘ಏನ್ರೀ ನಿಮ್ಮ ಮಂಗ್ಳೂರು. ಅದೊಂದು ಊರಾ. ಸೆಖೆ, ಮಳೆ, ಥೂ..’ ಎಂದು ಇಲ್ಲಿಗೆ ನೌಕರಿ ಮಾಡಲು ಬರುವ ಮೇಷ್ಟ್ರುಗಳು, ಅಧಿಕಾರಿಗಳು, ಬಸ್ ಕಂಡಕ್ಟರ್ ಗಳು, ಪತ್ರಕರ್ತರು ಇತ್ಯಾದಿ ಜನರು ದೂರುವುದನ್ನು ದ.ಕ.ಜನ ಕೇಳಿ ಸುಮ್ಮನೆ ನಕ್ಕುಬಿಡುವುದು ಮಾಮೂಲು.
ಈಗ ‘ನಿಮ್ಮ ಎಂಪಿಗಳು’ ಪ್ರಯೋಜನ ಇಲ್ಲ. ಕೇರಳದವರನ್ನು ನೋಡಿ ಕಲಿಯಲಿ ಎಂಬ ಸಲಹೆ ಈಗ ನಮ್ಮ ಬಳಿ ಬರ್ತಿದೆ.
ಇಸ್ಟೆಲ್ಲಾ ಆದರೂ ಹೆಣಕ್ಕೆ ಸಿಂಗಾರ ಮಾಡಿದಂತೆ ಕನಡಿಗರಿಗೆ ಯಾವ ರೀತಿಯಲ್ಲೂ ಉಪಕಾರ ಇಲ್ಲದ ಮಂಗಳೂರು ಅತ್ತಾವರದಲ್ಲಿರುವ ರೈಲ್ವೇ ನಿಲ್ದಾಣವನ್ನು ವಿಶ್ವದರ್ಜೆಗೇರಿಸುತ್ತಾರಂತೆ.
ಇನ್ನು ಏನೇನಾಗಲಿದೆಯೋ?

Sunday, July 5, 2009

ನಿಮ್ಮೂರಲ್ಲೂ ಇಂಥದ್ದು ಇದೆಯೋ?




ಮಳೆಯ ದೊಡ್ಡ ದೊಡ್ಡ ಹನಿ ಮತ್ತು ದೊಡ್ದ ದೊಡ್ಡ ಹೊಂಡ.
ಕರಾವಳಿಯ ಯಾವ ರಸ್ತೆಯನ್ನು ನೋಡಿದರೂ ಇದೇ ಅವಸ್ಥೆ.
ಅದರಲ್ಲೂ ಅದಿರು ಲಾರಿ ಎಲ್ಲೆಲ್ಲಿ ಓಡಾಡುತ್ತವೆಯೋ ಅಲ್ಲಲ್ಲಿ ಇದು ಕಾಮನ್ ಎನ್ನುವಂಥ ಪರಿಸ್ಥಿತಿ.
ಯಾರೂ ಸೊಲ್ಲೆತ್ತುವಂತಿಲ್ಲ! ಒಂದು ವೇಳೆ ಮಾತನಾಡಿದರೂ ಪ್ರಯೋಜನ ಇಲ್ಲ.
ಏಕೆಂದರೆ ಅದಿರು ಲಾರಿಗಳನ್ನು ಅದುರಿಸಿದರೆ ಇಂದಿನ ರಾಜಕಾರಣವೇ ಉದುರಿ ಹೋಗುತ್ತದೆ.
ಶಿರಾಡಿ ಘಾಟಿಯನ್ನು ಲಗಾಡಿ ತೆಗೆದದ್ದೇ ಈ ಅತಿಕಾಯ ಅದಿರು ಲಾರಿಗಳು!
ಇವುಗಳ ಜತೆಯಲ್ಲಿ ಇತರ ದೊಡ್ಡ ದೊಡ್ದ ಲಾರಿಗಳು ಸಂಚಾರಿ ನಿಯಮ ಉಲ್ಲಂಘಿಸಿ ರಸ್ತೆಯನ್ನೇ ಆಕ್ರಮಿಸುತ್ತವೆ. ಪುರುಸೊತ್ತಿದ್ದಾಗ ಓಡುತ್ತವೆ. ಇಲ್ಲವಾದರೆ ಅಲ್ಲೇ ರಸ್ತೆಯ ಬದಿಯಲ್ಲಿ ಟಿಕಾಣಿ ಹೂಡುತ್ತವೆ.ಪಾರ್ಕ್ ಲೈಟ್ ಇಲ್ಲದೆ.
ಹೀಗೆ ನಿಂತಿದ್ದ ಲಾರಿಗೆ ಬಡಿದು ಅದೆಷ್ಟೋ ಜೀವಗಳು ಬಲಿಯಾದ ಇತಿಹಾಸವೂ ಉಂಟು.
ಈಗ ಮಂಗಳೂರು-ಬೆಂಗಳೂರು ಸಾಗುವ ರಾಷ್ಟ್ರೀಯ ಹೆದ್ದಾರಿ 48 ಅತಿಭಾರದ ಲಾರಿಗಳಿಂದ ನಲುಗಿ ಹೋಗಿದೆ.
ಎಂಥ ಗಟ್ಟಿ ಡಾಮರೂ ಈ ಅತಿಕಾಯ ವಾಹನಗಳ ಅಡಿಯಲ್ಲಿ ಪುಡಿಯಾಗುತ್ತಾ ಹೋಗುತ್ತದೆ.
ಚಿತ್ರದಲ್ಲಿರುವುದು ಬಿ.ಸಿ.ರೋಡ್ (ಮಂಗಳೂರಿನಿಂದ 25 ಕಿ.ಮೀ. ದೂರ)ಮೂಲಕ ಹಾದು ಹೋಗುವ ಹೆದ್ದಾರಿಯ ಆಳೆತ್ತರದ ಹೊಂಡ!
ಮಳೆಗಾಲವೆಲ್ಲಾ ಹೀಗೆ ಕಳೆಯಬೇಕಾದೀತೇನೋ.
ನಿಮ್ಮೂರಲ್ಲೂ ಇಂಥದ್ದು ಇದೆಯೋ?
ಅದು ಕೇರಳವಂತೂ ಖಂಡಿತ ಆಗಿರಲಿಕ್ಕಿಲ್ಲ.
ಅಲ್ವ?