Monday, March 30, 2009

ಕನ್ನಡ, ಮಲಯಾಳ, ಕಾಸರಗೋಡು..

ಹಳೇ ಪೇಪರ್ ರಾಶಿಯನ್ನು ನೋಡುತ್ತಿದ್ದಾಗ ಆ ಘೋಷಣೆ ಕಣ್ಣಿಗೆ ಬಿತ್ತು.
‘ಕಾಸರಗೋಡನ್ನೂ ಕರ್ನಾಟಕಕ್ಕೆ ಸೇರಿಸಿಯೇ ಸಿದ್ದ’
******
ಹಳೆಯ ಮಾತು ಹಾಗಿರಲಿ,
ನಿಜಕ್ಕೂ ಈಗಿನ ಕಾಸರಗೋಡಿನ ಕನ್ನಡಿಗರು ಗಂಭೀರ ಸಮಸ್ಯೆಯಲ್ಲಿದ್ದಾರಾ?
ಗಡಿನಾಡಿನ ಜನತೆ ‘ಭಾಷೆ’ಯಿಂದಾಗಿ ಪರಕೀಯರಾಗುತ್ತಿದ್ದಾರ?
ಕೇರಳ ಸರ್ಕಾರ ಕನ್ನಡಿಗರಿಗೆ ಅಷ್ಟೊಂದು ಅನ್ಯಾಯ ಮಾಡುತ್ತಿದೆಯಾ?
ಆ ಘೋಷಣೆ ಓದಿದ ಕರ್ನಾಟಕದ ಇತರ ಪ್ರಾಂತ್ಯದವರಿಗೆ ಈ ಕುತೂಹಲ ಮೂಡುವುದು ಸಹಜ.
ಆದರೆ ವಿಷಯ ಹಾಗಿಲ್ಲ.
********
ಈಗಿನ ಕಾಸರಗೋಡು ಪ್ರದೇಶ(ಜಿಲ್ಲೆ) ಎರಡು ಸಂಸ್ಕೃತಿಗಳನ್ನೂ ಮೈಗೂಡಿಸಿಕೊಂಡಿರುವ ತಾಣ. ಇಡೀ ಜಿಲ್ಲೆಯನ್ನೊಮ್ಮೆ ಸುತ್ತಾಡಿ. ಕ್ರೀಮ್ ಕಲರ್ ಪಂಚೆ, ಅರ್ಧ ತೋಳಿನ ಶರಟು, ಮುಖದಲ್ಲಿ ಅಡ್ಡನಾಮ.(ಹಿಂದೂವಾದರೆ), ನೀಟಾಗಿ ಬಾಚಿದ ತಲೆ ಇದು ಟಿಪಿಕಲ್ ಕಾಸರಗೋಡು ಪ್ರದೇಶದ ಪುರುಷರ ರೀತಿ. ಮಹಿಳೆಯರೂ ಅಪ್ಪಟ ಮಲೆಯಾಳಿಗಳಂತೆ. ಕನ್ನಡ, ತುಳುವಿನಲ್ಲಿ ಮಾತನಾಡಿದರೂ ಮಲಯಾಳದಲ್ಲೇ ಉತ್ತರ. ನಿಮಗೆ ಅರ್ಥವಾಗದಿದ್ದರೆ ಮಾತ್ರ ಕನ್ನಡ, ತುಳು ಮಾತು.
ಹಾಗಾದರೆ ಇವರು ಕನ್ನಡಿಗರೇ, ಮಲಯಾಳಿಗಳೇ?
ಇವರಲ್ಲಿ ಹಲವರು ಮನೆಯಲ್ಲಿ ಕನ್ನಡ, ತುಳು ಮಾತನಾಡುವವರು. ಹೊರಗೆ ಅಪ್ಪಟ ಮಲಯಾಳಿಗಳು. ಹಾಗೆಂದು ಅವರಿಗೆ ಯಾವ ಭಾಷೆಯ ಮೇಲೆ ತಿರಸ್ಕಾರ ಇಲ್ಲ.
ಇಲ್ಲಿ ಕನ್ನಡ ಶಾಲೆಗಳಿವೆ. ಯಾರೂ ಅಲ್ಲಿಗೆ ಹೋಗಬೇಡಿ ಎಂಬ ಬಲವಂತ ಮಾಡುವುದಿಲ್ಲ. ನೀನು ‘ಕನ್ನಡದವನು’ ಎಂದು ಅಂಗಡಿಯಲ್ಲಿ ಅಕ್ಕಿಗೆ ೨ ರು. ಜಾಸ್ತಿ ಚಾರ್ಜ್ ಮಾಡುವುದಿಲ್ಲ. ಒಟ್ಟಿನಲ್ಲಿ ಅನ್ಯೋನ್ಯತೆಯಿದೆ.
*****
ಇದು ಭಾಷೆಯ ಮಾತಾಯಿತು. ಇನ್ನು ಆಡಳಿತದ ಕಡೆ ನೋಡೋಣ.
ಬಹುಪಾಲು ಕನ್ನಡಿಗರು ಕಾರ್ಮಿಕರು. ಇಲ್ಲಿನ ಕಾರ್ಮಿಕರಿಗೆ ಸಿಕ್ಕುವ ಉದ್ಯೋಗ ಭದ್ರತೆ ಕರ್ನಾಟಕದಲ್ಲಿ ಇಲ್ಲ.!
ಭ್ರಷ್ಟಾಚಾರಿಗಳ ಸಂಖ್ಯೆ ಕರ್ನಾಟಕಕ್ಕಿಂತ ಕಡಿಮೆ. ನೀವು ಇಲ್ಲಿ ಭೂಮಿಯನ್ನು ಹೊಂದಿದ್ದರೆ ಇಲ್ಲಿ ಪಂಚಾಯತ್ ಸೌಕರ್ಯಗಳನ್ನು, ಸುಲಭವಾಗಿ ಹೊಂದಬಹುದು. ನಮ್ಮ ‘ನೆಮ್ಮದಿ’ ಕೇಂದ್ರದಂತಲ್ಲ!
ಕಾಸರಗೋಡಿನ ರಸ್ತೆಗಳನ್ನು ನೋಡಿ. ಕರ್ನಾಟಕದ ರಸ್ತೆಗಳನ್ನು ನೋಡಿ. ವಿಟ್ಲದಿಂದ(ಕರ್ನಾಟಕ) ಬದಿಯಡ್ಕ(ಕೇರಳ)ಕ್ಕೆ ಹೋಗುವಾಗ ಅಡ್ಕಸ್ಥಳ ಎಂಬಲ್ಲಿಂದ ರಸ್ತೆ ಹೇಗಿರುತ್ತೆ ಎಂಬುದನ್ನು ಅಲ್ಲಿ ಡ್ರೈವ್ ಮಾಡಿದವನೇ ಹೇಳಬೇಕು.
*****
ಕನ್ನಡ ಕರಾವಳಿಯ ಯಕ್ಷಗಾನಕ್ಕೆ, ಕಲಾವಿದರಿಗೆ ಮನ್ನಣೆ ನೀಡುವಲ್ಲಿ ಕೇರಳ ಸರ್ಕಾರ ಒಂದು ಹೆಜ್ಜೆ ಮುಂದಿದೆ. ದಕ್ಷಿಣ ಕನ್ನಡ, ಕಾಸರಗೋಡಿನ ಯಕ್ಷಗಾನ ಕಲಾವಿದರ ಬಳಿ ‘ಖಾಸಗಿ’ಯಾಗಿ ಮಾತನಾಡಿ. ಕನ್ನಡ ಕರಾವಳಿಯ ಕಲಾವಿದರು, ಸಾಹಿತಿಗಳು ಬೆಂಗಳೂರಿಗೆ ಹೋಗದೆ ಊರಿನಲ್ಲಿ ತಮ್ಮ ಪಾಡಿಗೆ ಇದ್ದರೆ ಕರ್ನಾಟಕ ಸರ್ಕಾರ ಮಲತಾಯಿ ಧೋರಣೆ ತಾಳುತ್ತದೆ ಎಂಬುದು ಅವರ ಮಾತು. ಇನ್ನು ಇಲ್ಲಿನ ಅನೇಕ ಪ್ರತಿಭಾವಂತರು ಗಡಿನಾಡ ಕನ್ನಡಿಗರ ಕೋಟಾದಿಂದ ಕಲಿತು ಈಗ ಸುಖವಾಗಿದ್ದಾರೆ.
****
ಕಾಸರಗೋಡನ್ನು ಕೇರಳದಿಂದ ಬಿಡಿಸಿ ಕರ್ನಾಟಕಕ್ಕೆ ಸೇರಿಸಿ ಎಂದು ಹೇಳಿಕೆ ನೀಡುವವರು, ಅವರನ್ನು ಬೆಂಬಲಿಸುವವರು ಪ್ರಾಕ್ಟಿಕಲ್ ಆಗಿ ಆಲೋಚಿಸುವುದು ಒಳ್ಳೇದು.

Tuesday, March 10, 2009

ದೀಪದ ಕೆಳಗೆ!

ಅದ್ಯಾವುದೋ ಪನ್ನೀರ ಕೊಳ
ಅಲ್ಯಾವುದೋ ಬಿಳಿಹಂಸಜೋಡಿ
ಮತ್ತೆ ಮತ್ತೆ ಮುತ್ತಿಕ್ಕುತ್ತಿದೆ ಗೊತ್ತಿಲ್ಲ
ಆರ್ಥಿಕ ಹೊಡೆತ, ಬೆಲೆಯೇರಿಕೆಗಳ ಮಾರಿ
ಪನ್ನೀರನ್ನೂ ಕಲಕುತ್ತೆ,ಹಂಸದ ಬಣ್ಣ ಬದಲಿಸುತ್ತೆ
ಅದ್ಯಾವನೋ ಊರ ಡೊಂಕ ತಿದ್ದುವ
ಭ್ರಮೆಯ ಹಮ್ಮು ಬಿಮ್ಮಿನ ಲೇಖನಿಗ,
ಅಲ್ಯಾವುದೋ ಕುಟುಂಬ ಅವನ ನಿರೀಕ್ಷೆಯಲ್ಲಿ
ಗೊತ್ತುಂಟು ಅವನಿಗೂ,ಬಳಗಕ್ಕೂ ಬೆಲೆಯೇರಿದರೂ
ಕಿಸೆ ಭರ್ತಿಯಾಗುವುದಿಲ್ಲ, ಹಾಲುಗಲ್ಲದ ಕಂದಮ್ಮ
ಚಿನ್ನದ ಪುಟ್ಟ ಓಲೆಯ ಮಾತಾಡುವುದರ ಕೇಳುವ
ಧೈರ್ಯ ಅವನಿಗೆಲ್ಲಿ, ಊರಿಗಿಡೀ ಪ್ರಕಾಶಿಸುವ
ದೀಪದ ಕೆಳಗೆ ಕತ್ತಲೇ ತಾನೇ?
ಗುಲಾಮನೂ ದೊರೆಯಾದರೆ ಅವನು ದೊರೆಯಂತೇ
ಆಡುವ ಆದರೆ ಮತ್ತೊಬ್ಬ ನವಗುಲಾಮ ಹುಟ್ಟುತ್ತಾನೆ
ಇದು ಜಗಜೀವನ, ಇಲ್ಲೇನಿದೆ ಬರಿ ಕತ್ತಲು,
ಅಲ್ಲಲ್ಲ ದೊಡ್ಡ ದೊಡ್ಡ ಸೋಡಿಯಂ ದೀಪಗಳು!