Tuesday, October 21, 2008

ಅವಳು ಹಾಗೇ....

ಮಾಯಾಂಗನೆಯ ಕುಡಿನೋಟಕ್ಕೆ
ಮರುಳಾಗಿ, ತನುಮನದೊಂದಿಗೆ
ಬಿಜಯಂಗೈದರೂ
ಬಿಸಿಗಾಳಿ, ಹನಿಬೆವರು ಹರಿಸಿದರೂ
ವಿಕ್ರಮಿಗೆ ವಿಜಯ ಸಿಗಲಿಲ್ಲ!
ಏಕೆಂದರೆ ಅವಳು ವಸುಂಧರೆ
ಎಷ್ಟೇ ಆಕ್ರಮಣ, ಅತ್ಯಾಚಾರ,
ಅನಾಚಾರಕ್ಕೂ ಅವಳು
ತಲೆಬಾಗುವುದಿಲ್ಲ...!
ಅತಿಯಾಸೆಗೆಂದು ಆಕೆಯ
ಬಲಾತ್ಕಾರ ನಡೆದರೂ,
ಅವಳ ಹಸಿರು ಹೊದಿಕೆ,
ಸೆಳೆದೆಳೆದರೂ, ಆಕೆ
ನಳನಳಿಸುತ್ತಾಳೆ...
ಆದರೆ ಒಂದೊಮ್ಮೆ
ಅವಳು ಮಗ್ಗಲು ಬದಲಾಯಿಸಿದರೆ..
ಯಾವ ವಿಕ್ರಮಿಯೂ ಉಳಿಯುವುದಿಲ್ಲ..

Monday, October 6, 2008

ಗೊತ್ತಿದ್ದರೆ ಹೇಳಿ!

ಯಾರು ಭೀತಿವಾದಿ?
ನೆಲ, ಜಲ ನುಂಗುವವನಾ?
ಕಾಡಿನ ಮುಗ್ಧರ ನಂಬಿಸಿ
ಅವರನ್ನು ವ್ಯವಸ್ಥೆ ವಿರುಧ
ಎತ್ತಿಕಟ್ತುವವರಾ?
ಮಂದಿರ, ಮಸೀದಿ, ಚರ್ಚು
ಹಾನಿ ಮಾಡಿದವರಾ?
ಪ್ರಚಾರಕ್ಕೆ ಕಣ್ಣೊರಸುವ
ಕುಟಿಲ ರಾಜಕಾರಣಿಗಳಾ?
ಸೈಕಲ್, ರೈಲು, ಸೇತುವೆ
ಅಲ್ಲಿ, ಇಲ್ಲಿ ಎಲ್ಲೆಲ್ಲಿ
ಬಾಂಬಿಟ್ತು ನಮ್ಮನ್ನು ಉಡಾಯಿಸುವ
ಮತಾಂಧರಾ?
ಅಥವಾ ಅವರ
ಬೆನ್ನ ಹಿಂದೆ ನಿಂತು
ಮಾನವತಾವಾದಿಯಂತೆ
ಪೋಸು ಕೊಡುವ
ಸಾಹಿತಿ, ಚಿಂತಕರಾ?