Saturday, August 29, 2009

ಹಗಲುಗನಸಲ್ಲ!



(ರೈಲು ಹಗಲೂ ಬೆಂಗಳೂರಿಗೆ ಓಡುತ್ತದೆ ಎಂಬ ಖುಷಿಯಿಂದ ರೈಲಿನ ನಿರೀಕ್ಷೆಯಲ್ಲಿ ನನ್ನೂರು ಬಂಟ್ವಾಳ ರೈಲು ನಿಲ್ದಾಣದಲ್ಲಿ ಕುತೂಹಲದಿಂದ ಕಾಯುತ್ತಿದ್ದ ನನ್ನೂರಿನ ಜನ)

ಇದು ನೂರಕ್ಕೆ ನೂರು ಸತ್ಯ.
ಮಂಗಳೂರಿನಿಂದ ಬೆಂಗಳೂರಿಗೆ ರೈಲು ಹಗಲು ಹೊತ್ತೂ ಓಡುತ್ತದೆ!
ಇಂಥ ಹಳಸಿದ ಮಾತು ಕೇಳಿ ಕೇಳಿ ವಾಕರಿಕೆ ಬರುವಂತಾಗಿತ್ತು.
ರಾಜಕಾರಣಿಗಳಂತೂ ಅವರು ಮಾಡಲಿ ಎಂದು ಇವರು, ಇವರು ಮಾಡಲಿ ಎಂದು ಅವರು ಪರಸ್ಪರ ಪೈಪೋಟಿಯ ಹೇಳಿಕೆ ಕೊಡುತ್ತಾ ಇದ್ದರು. ಈ ಮಧ್ಯೆ ಹಿರಿಯರಾದ ಪರ್ಕಳದ ಆರ್.ಎಲ್.ಡಯಾಸ್, ಪುತ್ತೂರು ರೈಲ್ವೇ ಯಾತ್ರಿ ಸಂಘದ ದಿನೇಶ್ ಕೆ.ಭಟ್, ಬೆಂಗಳೂರಿನಲ್ಲಿರುವ ಅನಿಲ್ ಹೆಗ್ಡೆ ಮೊದಲಾದವರು ಬೇರೆ ಬೇರೆ ಕಡೆ ಇದ್ದ ಸ್ನೇಹಿತರನ್ನೆಲ್ಲಾ ಒಟ್ಟುಗೂಡಿಸಿ ಮನವಿಗಳ ಮೇಲೆ ಮನವಿ ಕೊಟ್ಟರು. ಸೈಲೆಂಟ್ ಹೋರಾಟ ಮಾಡಿದರು. ಕೊನೆಯ ಹಂತದಲ್ಲಿ ಮಂಗಳೂರಿನಲ್ಲಿ ಕನ್ನಡ ಸಂಘಟನೆ ಸಹಿತ ನಾಗರಿಕ ಪ್ರತಿಭಟನೆಗಳೂ ನಡೆದವು. ಇವರೆಲ್ಲರ ಜೊತೆ ನಾವು ಮಾಡ್ತೇವೆ ಎಂಬ ರಾಜಕಾರಣಿಗಳ ಹೇಳಿಕೆಗಳು.
ಎಲ್ಲರ ಪ್ರಯತ್ನದ ಫಲವಾಗಿ ಕೊನೆಗೂ
ಮಂಗಳೂರಿನಿಂದ ಬೆಂಗಳೂರಿಗೆ ಹಗಲು ಹೊತ್ತಿನಲ್ಲಿ ರೈಲು ಹೊರಟಿದೆ. ಆದರ ವಾರದಲ್ಲಿ ಮೂರು ಹೊತ್ತು ಅದೂ ಸಂಡೇ ಇಲ್ಲ ಎಂಬ ಬೇಸರವೂ ಇದೆ.
ಇನ್ನೇನಾಗುತ್ತೆ? ರೈಲು ಹೇಗಿದೆ? ಮುಂದೆ ನೋಡೋಣ.

Monday, August 24, 2009

ಗಣೇಶಾವತಾರ




ಸ್ನೇಹಿತರೆ,
ಇದು ಕಲಾವಿದ ಪುರುಷೋತ್ತಮ ಅಡ್ವೆ ಅವರ ಕಲಾಕೃತಿ. ಉಡುಪಿಯ ಶಿರೂರು ಮಠದಲ್ಲಿ ಅವರ ಕಲಾಕೃತಿಗಳ ಪ್ರದರ್ಶನ ಶನಿವಾರ, ಭಾನುವಾರ ನಡೆಯಿತು.
ಮಣಿಪಾಲದಲ್ಲಿ ನಡೆಯಬೇಕಿದ್ದ ಈ ಪ್ರದರ್ಶನಕ್ಕೆ ಕೆಲವರು ಚಿತ್ರ ‘ಅವರು’ ಬಯಸಿದಂತಿರಲಿಲ್ಲ ಎಂದು ಅಡ್ದಿಪಡಿಸಿದರು.
ಈ ಚಿತ್ರ ನೋಡಿ ನಿಮಗೇನನ್ನಿಸುತ್ತೆ?

Saturday, August 8, 2009

ದೊಡ್ಡ ಅಂಗಡಿ, ಸಣ್ಣ ಲೆಕ್ಕಾಚಾರ!



‘ದೊಡ್ದ ಅಂಗಡಿ’
ಬೋರ್ಡ್ ನೋಡಿದಾಗ ವ್ಹಾ...ವ್ಹಾ.. ಒಳಗೆ ನುಗ್ಗಿ ಏನಿದೆ ನೋಡೋಣ್ವಾ ಎಂದು ತಲೆಯೊಳಗೆ ಆಸೆಗಳು ಥೈ ಥೈ ಎಂದು ಕುಣಿಯುತ್ತದೆ ಮಾರಾಯ್ರ್ರೆ.
ಆದ್ರೆ ಪ್ರೈವೇಟ್ ಕಂಪೆನಿಯಲ್ಲಿ ತಿಂಗಳಿಗೊಂದಿಷ್ಟು ಎಂದು ದುಡ್ಡು ಲೆಕ್ಕ ಮಾಡುವ ಬಡ ನಗರವಾಸಿ ನಾನು. ಇದೆಲ್ಲಾ ಸಾಧ್ಯವುಂಟಾ? ಪಟ್ಟಣದಲ್ಲಿದ್ದೂ ನಿರ್ಲಕ್ಷಿತ ಪ್ರಜೆಯಲ್ವಾ? ಹೀಗಾಗಿ ಇಂಥದ್ದೆಲ್ಲಾ ತಲೆಯೊಳಗೆ ಬಂದರೆ ಸೀದಾ ಗೂಡಂಗಡಿಗೆ ಹೋಗಿ 4 ರುಪಾಯಿಯ ಚಾ ಕುಡಿಯುತ್ತೇನೆ.
ಆದ್ರೂ ಅಲ್ಲಿ ದೊಡ್ಡ ದೊಡ್ದ ಕಾರುಗಳಲ್ಲಿ ಅರ್ಧಮೈ ಕಾಣುವಂತೆ ಬರುವ ದೊಡ್ಡ ದೊಡ್ಡ ಮನುಷ್ಯರು, ಹತ್ತಿರದಲ್ಲೇ ದೊಡ್ದ ನೋಟು ಕೊಟ್ಟು ಕಾಫಿ ಕುಡಿಯುವವರು..ಎಲ್ಲರನ್ನೂ ಸಿಟಿ ಬಸ್ಸಿನ ಫುಟ್ ಬೋರ್ಡ್ನಲ್ಲಿ ನೇತಾಡಿಕೊಂಡ್ ಹೋಗುವ ನನ್ನಂಥ ಹರುಕಲಂಗಿಯ ಲೋ ಮಿಡಲ್ ಕ್ಲಾಸ್ ಪ್ರಾಣಿ ನೋಡುವುದೇ ತಪ್ಪಾ?
ಛೇ.. ಛೇ.
ತಪ್ಪಲ್ಲ. ಎಂದುಕೊಂಡು ಈ ಸರ್ತಿ ಸಂಬಳ ಬಂದ ಕೂಡಲೇ ಪರ್ಸು ತುಂಬ ಹಣ ತುಂಬಿಸಿ ಒಂದು ಚೆಸ್ ಬೋರ್ಡ್ ತೆಗೆಯಬೇಕು. ಅದೂ ಗಟ್ಟಿಮುಟ್ಟಿನ ಮರದ್ದು ಎಂದು ತೀರ್ಮಾನಿಸಿಯೇಬಿಟ್ಟೆ.
ಮೊನ್ನೆ ಸಾಫ್ಟ್ವೇರ್ ಇಂಜಿನಿಯರ್ ಮಗನ ಮನೆಗೆಂದು ಬೆಂಗ್ಳೂರಿಗೆ ಹೋಗಿ ಬಂದ ಮಾಸ್ಟ್ರು ಹೇಳಿದ್ರಲ್ವ? “ಅಲ್ಲಿ ತರ್ಕಾರಿಯನ್ನೂ ಜನ ಶಾಪ್ಪಿಂಗ್ ಮಾಲ್ ನಲ್ಲೇ ತೆಗೊಳ್ಳುದಂತೆ. ಒಮ್ಮೆ ಒಳಗೆ ಹೋದರೆ ಇಡೀ ಮನೆಗೆ ಬೇಕಾಗುವ ಸಾಮಾನು ತೆಕೊಳ್ಬಹುದಂತೆ.ಪ್ರಪಂಚದ ಎಲ್ಲಾ ವಸ್ತುಗಳನ್ನು ಅಲ್ಲಿ ಪೇರಿಸಿಡುತ್ತಾರೆ, ನಮಗೆ ಬೇಕಾದ್ದು ಆಯ್ಕೆ ಮಾಡಿ ಕೊಂಡುಕೊಳ್ಳಬಹುದು. ಸುಮ್ಮನೆ ಅಲ್ಲಿ ಇಲ್ಲಿ ಅಲೆಯುವುದು ಯಾಕೆ? ಈಗ ಮಂಗ್ಳೊರಲ್ಲೂ ಹಾಗೆ ಮಾರಾಯ ‘ನೀನೂ’ ಹೋಗ್ಬಹುದು. ಅಲ್ಲಿ ಎಲ್ಲ ಅಂಗಡಿಗಿಂತ ಕಮ್ಮಿ ರೇಟು..”
ಹೋ. ಹಾಗಾ? ಈ ಸರ್ತಿ ಸಂಬಳ ಬಂದ ಕೂಡಲೇ ಹೋಗ್ಬೇಕು ಎಂದು ಲೆಕ್ಕ ಹಾಕಿಯೇ ಬಿಟ್ಟೆ.
ಹೌದು ಮಾರಾಯ್ರೆ .. ಎಸ್ಟಾದ್ರೂ ನನ್ನಂತೆ ಮಂಗ್ಳೊರಲ್ಲಿ ಸಾವಿರ ಜನ ಇದ್ದಾರಲ್ವ ..ಇರಲಿ ಬಿಡಿ ಎಂದು ಸಾವಿರ ರುಪಾಇ ಕಿಸೆಯಲ್ಲಿಟ್ಟು ‘ದೊಡ್ಡ ಅಂಗಡಿ’ ಒಳಗೆ ಇದ್ದುದರಲ್ಲಿ ಸ್ವಲ್ಪ ಚೆನ್ನಾಗಿರೋ ಅಂಗಿ ಹಾಕಿಕೊಂಡು ಅಲ್ಲಿ ಕಾಲಿಟ್ಟಾಗ ಇಡೀ ಹಾಲ್ ಕೂಲ್ ಕೂಲ್ ಆಗಿ ಕಂಡಿತು. ಜೇಬನ್ನು ಮುಟ್ತಿ ದುಡ್ದಿದ್ಯಾ? ಎಂಬ ಲೆಕ್ಕಾಚಾರದೊಂದಿಗೆ ಒಳಪ್ರವೇಶ ಮಾಡಿದಾಗ ನನ್ನನ್ನೇ ಅಡಿಯಿಂದ ಮುಡಿಯ ವರೆಗೆ ಒಳ್ಳೇ ಹಳ್ಳಿ ಗಮಾರನನ್ನು ನೋಡುವಂತೆ ನನಗೇ ಭಾಸವಾಯಿತು.
‘ಹೋ ಹೋ..ನಾನು ಚಪ್ಪಲಿ ಹಾಕಿಕೊಂಡು ಬಂದದಲ್ವ?..ಛೇ..ನನ್ನಲ್ಲಿ ಒಂದು ಬೂಟೂ ಇಲ್ವಲ್ಲ’ ಎಂಬ ಕೀಳರಿಮೆ ನನಗೂ ಬಂತು.
ಇರಲಿ, ಅವರೇನು ಅಂದುಕೊಂಡ್ರೆ ನನಗೇನು? ನಾನೇನು ಅವರಲ್ಲಿ ಸಾಲ ಮಾಡಿದ್ದೇನಾ? ಎಂಬ ಸೆಡವಿನಿಂದಲೆ ಒಳಗೆ ಕಾಲಿಟ್ಟೆ.
‘ಮಾಸ್ಟ್ರು ಹೇಳಿದ್ದು ಸತ್ಯ..ಎಸ್ಟೊಂದು ಸಾಮಾನುಗಳಿತ್ತಲ್ವ? ಅಲ್ಲೇ ಪಕ್ಕದಲ್ಲಿ ಅದ್ರ ರೇಟು ಕೂಡ ನೇತಾಡಿಸಿಟ್ತಿದ್ದಾರೆ. ಛೇ. ಹಣ ಜಾಸ್ತಿ ತರ್ಬೇಕಿತ್ತು ಎಂದು ಅನ್ನಿಸಿತು.
ಹತ್ತಿರದಲ್ಲೇ ತಲೆತಿರುಗಿ ಹೊಟ್ಟೆ ತೊಳಸಿ ವಾಂತಿ ಬರುವಂಥ ಸೆಂಟ್ ಹಕಿಕೊಂಡಿರುವ ಇಂಗ್ಲೀಷ್ ಮತನಾಡುವ ಅಜ್ಜಿಯೊಬ್ಬರು ನನ್ನನ್ನು ಕೆಕ್ಕರಿಸಿ ನೋಡಿದರು. ಏನೋ ಹೇಳಿದರು. ನನಗೆ ಎಲ್ಲಿ ಇಂಗ್ಲೀಷ್ ಬರ್ತದೆ? ಪೆಚ್ಹುಪೆಚ್ಹಾಗಿ ನಕ್ಕೆ. ಮತ್ತೆ ಗೊತ್ತಾಯ್ತು. ನಾನವರಿಗೆ ದಾರಿ ಬಿಟ್ಟುಕೊಡಬೇಕು ಎಂದು ಅವರ ಮಾತಿನ ಸಾರಾಂಶ.
ಸರಿ ನಾನೂ ಒಂದೊಂದೇ ನೋಡುತ್ತಾ ಹೋದೆ. ನೂರು ರುಪಾಯಿ ಸೀರೆ(ಹೆಂಡತಿ ಇರದಿದ್ದದು ಒಳ್ಳೇದಾಯ್ತು), ಪ್ಯಾಂಟ್ ಪೀಸ್, ಶರ್ಟ್ ಪೀಸ್..
ಬೇಡಪ್ಪಾ ಬೇಡ. ನನಗೆ ಬೇಕಾದದ್ದು ಗಟ್ಟಿಮುಟ್ಟಿನ ಮರದ ಚೆಸ್ ಬೋರ್ಡ್. ಹೈಸ್ಕೂಲ್ ನಲ್ಲಿ ಪಿ.ಟಿ.ಮಾಸ್ಟ್ರು ಚೆಸ್ ಆಡುವ ಚಾಳಿ ನನಗೂ ಕಲಿಸಿದ್ದರು.ಒಂದು ಕೆಲಸ ಸಿಕ್ಕಿ ರೂಮು ಮಾಡಿದಾಗ ಒಂಟಿತನ ನೀಗಿಸಲು ಇದಕ್ಕಿಂತ ಒಳ್ಳೇ ಆಟದ ಸಾಮಾನು ಬೇರಾವುದಿದೆ?
ದೊಡ್ಡ ಜನದಂತೆ ನನ್ನಷ್ಟಕ್ಕೆ ನಾನೇ ಹುಡುಕಿದರೂ ನನಗೆ ಚೆಸ್ ಬೋರ್ಡ್ ಸಿಗಲೇ ಇಲ್ಲ.
ಏನೂ ತೆಗೊಳ್ಳದೆ ತಿರುಗುತಿದ್ದ ನನ್ನನ್ನು ನೋಡಿ ಯಾರಿಗೋ ಕರುಣೆ ಬಂದಿರಬೇಕು.
‘ಏನು ಬೇಕು ನಿಮಗೆ’
ಕೇಳಿದರು. ಹೇಳಿದೆ.
‘ಓ ಅಲ್ಲಿ ಪೆಟ್ಟಿಗೆ ಇದ್ಯಲ್ಲಾ.. ಅದೇ ಚೆಸ್ ಬೋರ್ಡ್.’ ಎಂದರು.
‘ಎಸ್ಟು ಅದಕ್ಕೆ’ - ಕೇಳಿದೆ. ‘ಬರ್ದಿದೆಯಲ್ಲಾ’ ಎಂದು ನನ್ನನ್ನೇ ವಿಚಿತ್ರವಾಗಿ ನೋಡಿ ಹೇಳಿದರು.
170 ರುಪಾಯಿ!
ಅಬ್ಬಬ್ಬಾ..ಸ್ವಲ್ಪ ಕಮ್ಮಿ ಮಾಡ್ತಾರಾ ಎಂದು ಸ್ಕೆಚ್ ಹಾಕಿ
‘ಇದು ಮರದ್ದಾ’ ಕೇಳಿದೆ.
‘ಗೊತ್ತಿಲ್ಲ. ಇಲ್ಲಿ ಓಪನ್ ಮಾಡಿ ನೋಡ್ಬಾದು. ಅದ್ರಲ್ಲಿ ಬರ್ದಿದ್ದ ರೇಟ್ ಅಸ್ಟೇ. ಒಳಗೆ ಏನಿದ ಅಂತ ನಮಗೂ ಗೊತ್ತಿಲ್ಲ. ಅದ್ರಲ್ಲೇ ಬರ್ದಿದೆಯಲ್ಲ.’
‘ಅದ್ರಲ್ಲಿ ಎಲ್ಲಿ ಬರ್ದಿದೆ? ಚೆಸ್ ಆಡುವುದು ಹೇಗೆ ಅಂತ ಮಾತ್ರ ಇರುವುದು. ಒಳಗೆ ಏನಿದೆ ಅಂತೆಲ್ಲಾ ನಾವು ನೋಡುವುದು ಬೇಡ್ವಾ’
‘ನಮ್ಮಲ್ಲಿ ಗುಡ್ ಕ್ವಾಲಿಟಿಯದ್ದೇ ಬರೋದು. ಹಂಗೆಲ್ಲಾ ನೋಡೋ ಹಂಗಿಲ್ಲ’
ಎಂಬ ಉತ್ತರ ಬಂತು.
ನನಗೆ ಮತ್ತೇನು ಕೆಲಸ.
ದೊಡ್ಡ ಅಂಗಡಿಗೆ ದೊಡ್ದ ನಮಸ್ಕಾರ ಎಂದು ಅಲ್ಲಿಂದ ಹೊರಬಿದ್ದೆ.
ಸೀದ ನಮ್ಮ ಮಂಗ್ಳೊರಿನ ಫೇಮಸ್ ಆಟದ ಸಾಮಾನು ಇರುವ ಅಂಗಡಿಗೆ ಸಿಟಿ ಬಸ್ಸಲ್ಲಿ ಹೋದೆ.
ಅಲ್ಲಿ ವ್ಯಾಪಾರ ಮಾಡುವುದಕ್ಕೆ ಹೇಗೂ ಧೈರ್ಯ ಇತ್ತಲ್ಲ?
‘ಚೆಸ್ ಬೋರ್ಡ್ ಉಂಟಾ.. ಗಟ್ತಿಮುಟ್ಟಿನ ಮರದ್ದು’
ನನ್ನ ವರಸೆ ತೋರಿದೆ.
ಮರ ಗಟ್ಟಿ ಇದೆಯಾ ಎಂದು ಕುಟ್ಟಿ ಕುಟ್ಟಿ ನೋಡಿ, ೩೨ ಚೆಸ್ ಕಾಯಿನ್ ಲೆಕ್ಕ ಮಾಡಿ ಅಂಗಡಿಯಾತನ ಹತ್ರ ಚರ್ಚೆ ಮಾಡಿ 160 ರುಪಾಯಿಗೆ ಅದನ್ನು ಹಿಡ್ಕೊಂಡು, ತಾಜ್ ಮಹಲ್ ನಲ್ಲಿ ಗೋಳಿಬಜೆ ತಿಂದು ಮನೆ ಸೇರಿದೆ.
ಆಡಲು ಯಾರೂ ಇಲ್ಲ. ನೀವು ಬರ್ತೀರಲ್ಲ?