Sunday, May 23, 2010

ರೆಕ್ಕೆ ಮುರಿದ ಲೋಹದ ಹಕ್ಕಿ

ಎಲ್ಲಾ ಅಳಿದ ಮೇಲೆ ಏನುಂಟು ಮುಂದಿನ ಮಾತು?
ಹೀಗನ್ನಿಸೋದು ನೆನ್ನೆ ಶನಿವಾರ ಬಜ್ಪೆಯ ದುರಂತ ಕಂಡು
ನೀವೆಲ್ಲಾ ಅಲ್ಲಿನ ಹೃದಯವಿದ್ರಾವಕ ಚಾಯಾಚಿತ್ರಗಳನ್ನು, ವರದಿಯನ್ನು ನೋಡಿರುತ್ತೀರಿ, ಓದಿರುತ್ತೀರಿ ಅಲ್ಲವೇ?
ವರ್ಶದ ಹಿಂದೆ ಮಂಗಳೂರಲ್ಲಿ ದ್ವೇಷದ ಅಗ್ನಿ ಉರಿಯುತ್ತಿತ್ತು. ಈಗ ನೋವಿನ ಅಗ್ನಿ.
ನಾನು ಅಲ್ಲಿ ಕಂಡದ್ದು ಕೇವಲ ಅವಷೇಶಗಳನ್ನಷ್ಟೇ ಅಲ್ಲ, ಸಾಮರಸ್ಯದ ಭ್ರಾತೃತ್ವ. ವಿಮಾನದಲ್ಲಿ ಇದ್ದವರು ಯಾವ ಜಾತಿ, ಕೋಮು ಎಂದು ನೋಡಲು ಯಾರು ಹೋಗಿದ್ದರು? ಸುಟ್ಟು ಕರಟಿದ ದೇಹದಲ್ಲಿ ಅವನ್ಯಾರು? ಶ್ರೀಮಂತನೋ, ಬಡವನೋ, ಹಿಂದೂವಾ? ಮುಸ್ಲಿಮಾ? ಕ್ರೈಸ್ತನಾ? ಎಂದು ನೋಡಲು ಯಾರಿಗೆ ಪುರುಸೊತ್ತಿತ್ತು?
ವಿಮಾನ ಬಿದ್ದ ಜಾಗದ ಕೆಲವೇ ಕಿ.ಮೀ. ಪರಿಸರದಲ್ಲಿ ಕೆಲವು ವರ್ಷಗಳ ಹಿಂದೆ ಕೋಮು ಗಲಭೆಯಿಂದ ಮರ್ಡರ್ ಆಗಿತ್ತು. ಆದರೆ ನಿನ್ನೆ ಅಲ್ಲಿ ಬೆಂದ ದೇಹಗಳನ್ನು ಹೊತ್ತೊಯ್ಯುವವರಲ್ಲಿ ಮುಸ್ಲಿಮರೂ ಇದ್ದರು, ಹಿಂದೂಗಳೂ ಇದ್ದರು.
ಯಾರೂ ಯಾರ ಹೆಸರೂ ಕೇಳಲಿಲ್ಲ

ನಾನೂ ನನ್ನ ಕರ್ತವ್ಯ ಮಾಡಬೇಕಿತ್ತು. ಸಾವನ್ನಪ್ಪಿದವರ ಬಂಧುಗಳಿಂದ ಅವರ ಕುರಿತು ವಿವರ ಪಡೆಯಲು ಹೋದ ನನಗೆ ಕಂಡದ್ದು ಬಹುತೇಕ ಮಧ್ಯಮ ವರ್ಗದ ಜನರ ಕರುಣ ಕಥೆಗಳೇ.
ವಿಮಾನದ ರೆಕ್ಕೆಯ ಪಕ್ಕ ಸೀಟ್ ನಂ 19 ಸಿಯಲ್ಲಿದ್ದ ಉಸ್ಮಾನ್ ಹಾರಿ ಬದುಕುಳಿದದ್ದು, ಟೂರಿಗೆಂದು ಹೋದ ಕುಟುಂಬ ಮತ್ತೆ ಬಾರದೇ ಇದ್ದದ್ದು... ಹೀಗೆ...
ಅದರಲ್ಲೂ ಉಸ್ಮಾನ್ ಹೇಳಿದ್ದು ನನಗೆ ಇನ್ನೂ ಕಣ್ಣಿಗೆ ಕಟ್ಟಿದಂತೆ ಇದೆ..
ಏನೋ ಅವ್ಯಕ್ತ ಶಕ್ತಿ ನಮ್ಮನ್ನು ಆಡಿಸುತ್ತಾ ಇದೆ. ದೇವರೆಂಬವ ಇದ್ದಾನೆ. ಆದರೆ ವಿಮಾನ ಹತ್ತುವಾಗ ನನ್ನೊಡನೆ ಇದ್ದವರನ್ನೆಲ್ಲಾ ಅವನ್ಯಾಕೆ ಕರೆದುಕೊಂಡ?
ಈ ಪ್ರಶ್ನೆಗೆ ನನ್ನಲ್ಲಿ ಉತ್ತರವಿಲ್ಲ..
ನಿಮ್ಮಲ್ಲಿದೆಯಾ?
(ಮತ್ತೆ ಮತ್ತೆ ಆ ದುರಂತ ಚಿತ್ರಗಳನ್ನು ನಿಮಗೆ ತೋರಿಸೋದು ಬೇಡ ಎಂದು ಹಾಕಿಲ್ಲ)