Friday, February 27, 2009

ನನ್ನೊಳಗಿನ ಪ್ರಶ್ನೋತ್ತರ

ಹೀಗೊಂದು ಸಮಸ್ಯೆ
ನಾವೇನು? ದೇವನಿರ್ಮಿತರೇ,
ಹಾಗಾದರೆ ನಾವೆಲ್ಲರೂ ಪರಿಪೂರ್ಣರೇ?
ಕಾಮ, ಕ್ರೋಧಾದಿಗಳು ನಮ್ಮಲ್ಲೂ ಇಲ್ಲವೇ
ದೇವನಿರ್ಮಿತವಲ್ಲವೂ ಪರಿಪೂರ್ಣವೆಂದಾದರೆ
ಮಾನವನೂ ಸಂಪೂರ್ಣ ಅಲ್ಲವೇ?
ದೇವನೊಬ್ಬ ನಾಮ ಹಲವು ಎಂದಾದರೆ
ಈ ವಿರೋಧಾಭಾಸ ಯಾಕೆ ಅಲ್ಲವೇ?
*********
ಹೀಗೊಂದು ಸಮಾಧಾನ
ಸಭ್ಯತೆಯ ಮುಸುಕಿಗೆ ಅಸಭ್ಯತೆಯ ಸೋಂಕು
ಬಡಿಬಡಿದು ರಾಚಿದಾಗ, ಹೆದರಿಕೆ ಸತ್ತು
ಮಸಣ ಸೇರಿದಾಗ ಉಂಟಾದ ತಥ್ಯ ದೇವರಿದ್ದಾನೆ
ಅವನಿಗಾದರೂ ಅಂಜು,ನಾಚಿಕೆಪಡು, ಅವನಿಂದ
ನಿರ್ಮಿಸಲ್ಪಟ್ಟ ನಾವು ಅವನಂತೆ ಪರಿಪೊರ್ಣರಲ್ಲ
ಏಕೆಂದರೆ ಕಾಮ, ಕ್ರೋಧಾದಿಗಳು ನಮ್ಮನ್ನು ಬಿಡುವುದಿಲ್ಲ
ಅದಕ್ಕಾಗೇ ಇಸ್ಟೋಂದು ದೇವರಲ್ಲಿ ಯಾರನ್ನಾದರೂ ನಂಬು

Friday, February 20, 2009

ಇಂಥವರೂ ಇದ್ದಾರೆ

ಅದು ಬಂಟ್ವಾಳ ರೈಲ್ವೇ ನಿಲ್ದಾಣ.
ದಿನಕ್ಕೆ ಎರಡು ಪ್ರಯಾಣಿಕರ ರೈಲು ಓಡಾಡುವಾಗ ಜನಸೇರುವುದನ್ನು ಬಿಟ್ಟರೆ ಮತ್ತಲ್ಲಿ ಮೌನ.
ಉಳಿದಂತೆ ಇಡೀ ದಿನ ಅಲ್ಲಿ ವಾಕಿಂಗ್ ಹೋಗುವವರು, ಕಟ್ಟೆಯಲ್ಲಿ ಕುಳಿತುಕೊಳ್ಳುವ ಅಲೆಮಾರಿಗಳಿಗದು ಪ್ರಶಸ್ತ ತಾಣ.
ಹಾಗಾಗಿಯೋ ಏನೊ ಮೊನ್ನೆ ಆ ನಿವ್ರುತ್ತಿನಂಚಿನಲ್ಲಿರುವ ಟೀಚರ್ ಕೂಡಾ ಅಲ್ಲೇ ಗೌಜಿ ಮಾಡಿಕೊಂಡು ಬಿಡಾರ ಮಾಡಿದ್ದು. ಏನಮ್ಮಾ ಇಲ್ಲ್ಯಾಕೆ ಬಂದಿ ಎಂದು ಸ್ಟೇಶನ್ ಮಾಸ್ತರ್ ಕೇಳಿದರೆ ‘ನೀನ್ಯಾರು’ ಎಂದು ಜೋರು ಮಾಡುತ್ತಾ ಕುಳಿತಿದ್ದ ಟೀಚರ್ ಎಲ್ಲರ ಗಮನ ಸೆಳೆದರು.
*********
ಟೀಚರಿಂದು ದುರಂತದ ಕಥೆ. ಗಂಡ ಜತೆಗಿಲ್ಲ. ಮಗ ಓಡಿ ಹೋಗಿದ್ದಾನೆ. ಆ ಚಿಂತೆ ಮನಸ್ಸಿನ ತುಂಬೆಲ್ಲಾ ಹರಡಿ ಸ್ಥಿಮಿತ ಕಳೆದುಕೊಳ್ಳುವಂತೆ ಮಾಡಿತು. ಹಾಗೇ ಇದ್ದ ಬಾಡಿಗೆ ಮನೆ ಬಿಟ್ಟು ನೆಮ್ಮದಿ ಅರಸಿ ರೈಲ್ವೇ ನಿಲ್ದಾಣಕ್ಕೆ ಬಂದಿದ್ದು. ಹತ್ತಿರವೇ ಶಿಕ್ಷಣ ಇಲಾಖೆಯ ಕಚೇರಿ ಇದ್ದರೂ ಟೀಚರ್ ನೆರವಿಗೆ ಯರೂ ಬರಲಿಲ್ಲ. ಎಲ್ಲಾ ಇಲಾಖೆಗಳಿಗೂ ದೂರು ನೀಡಲಾಯಿತು. ಪ್ರಯೋಜನ ಶೂನ್ಯ..
*********

ಹೌದು. ಯಾಕೆ ಬರುತ್ತಾರೆ? ಮಹಿಳೆಯರ ಪರ ಹೋರಾಟ ಮಾಡುವ ಸಂಘಟನೆಗಳು, ಟಿ.ವಿ. ಕ್ಯಾಮೆರಾಗಳು, ಅದೇ ಸಮಯದಲ್ಲಿ ಪಬ್ಬಿಗೆ ಹೋದ ಇನ್ನೂ ಯಾರೆಂದು ಗೊತಿಲ್ಲದ ಶ್ರೀಮಂತ ಗಣ್ಯ ವ್ಯಕ್ತಿಗಳ ಮಕ್ಕಳ ಮಾನ ಹರಾಜಾದ ಘಟನೆಯನ್ನು ಲೋಕಕ್ಕೆಲ್ಲಾ ತಿಳಿಸಲು ಪೈಪೋಟಿ ನಡೆಸುತ್ತಿದ್ದ ಕಾಲ ಅದು. ಪತ್ರಿಕೆಗಳಲ್ಲಿ(ಒಂದು ಬೆಳಗ್ಗಿನ, ಎರಡು ಸಂಜೆಯ) ವರದಿ ಬಂತು. ಅದೇ ಸಮಯಕ್ಕೆ ಪಬ್ಬು, ಬಾರಿಗೆ ಬಂದ ಮಹಿಳಾ ಆಯೋಗದ ಎರಡೂ ಬಣದ ಸದಸ್ಯರಿಗೆ ಕೇವಲ ೨೫ ಕಿ.ಮೀ. ಇರುವ ಬಿ.ಸಿ.ರೋಡಿಗೆ ಬರಲಾಗಲಿಲ್ಲ...

*********
ಹೋಗಲಿ ಬಿಡಿ, ಯಾರು ಬರದಿದ್ದರೇನಾಯಿತಂತೆ ಎಂದು ಯಾವ ಊರು ಉಧ್ಹಾರದ ಸಂಘಟನೆಯಲ್ಲೂ ಗುರುತಿಸದ ಕೆಲವರು ಟೀಚರನ್ನು ಚಿಕಿತ್ಸೆಗಾಗಿ ಮಂಗಳೂರಿನ ಕಂಕನಾಡಿಯ ಮಾನಸಿಕ ತಪಾಸಣೆ ಆಸ್ಪತ್ರೆಗೆ ಕರೆದೊಯ್ದು ದಾಖಲಿಸಿದರು. ೮, ೯ ಸಾವಿರ ಖರ್ಚನ್ನು ತಾವೇ ಭರಿಸಿದರು..
ಈಗ ಟೀಚರ್ ಗುಣಮುಖರಾಗುತ್ತಿದ್ದಾರೆ...

*********
ಒಬ್ಬ ಮಹಿಳೆಯನ್ನು ಯಾವುದೇ ಸಂಘ, ಸಂಸ್ಥೆಗಳ ನೆರವಿಲ್ಲದೇ ಮಾನವೀಯತೆಯಿಂದ ಸಹಾಯ ಮಾಡುವವರು ಎಶ್ಟೋ ಮಂದಿ ನಮ್ಮ ಮಂಗಳೂರಲ್ಲಿದ್ದಾರೆ. ಇಂಥವರು ನಿಮ್ಮೂರಲ್ಲೂ ಇರಬಹುದು.
ನಿಮಗಿದು ತಿಳಿದಿರಲೆಂದು ಬರೆದೆ. ಸುಮ್ಮನೇ ಎಲ್ಲಿಂದಲೋ ಬಂದವರು ನಮ್ಮೂರನ್ನು ‘ತಾಲಿಬಾನ್’ ಎಂದಾಗ ಬೇಸರವಾಗುತ್ತದೆ. ಭಾರತದ ಎಲ್ಲಾ ಊರಿನಂತೇ ನಮ್ಮ ದಕ್ಷಿಣ ಕನ್ನಡ ಜಿಲ್ಲೆ ಇದೆ. ಮತಾಂಧರ ಜೊತೆ ಮಾನವೀಯತೆ ಇದ್ದವರೂ ಇದ್ದಾರೆ..
*********
ಅಂದ ಹಾಗೆ, ಟೀಚರನ್ನು ಆಸ್ಪತ್ರೆಗೆ ಕರೆದೊಯ್ದವರಲ್ಲಿ ಹಿಂದೂ, ಕ್ರೈಸ್ತ, ಮುಸ್ಲಿಮ್ - ಎಲ್ಲಾ ಧರ್ಮದವರೂ ಇದ್ದರು.. ಯಾರೂ ನಾನಿಂಥವನು ಎಂದು ಹೇಳಿಕೊಳ್ಳಲಿಲ್ಲ..

Friday, February 13, 2009

ಪ್ರೀತಿಯ ಸೆಲೆ

ಹಸಿವ ಕಂಗಳು,ಒಣಗಿದ ತುಟಿಗಳ ಏರು ಜವ್ವನೆಗೆ
ಬಿಗಿದಪ್ಪಿ ಮುತ್ತಿನ ಮಳೆ ಎರೆಯಲು ಎಲ್ಲಿದೆ ಪುರುಸೊತ್ತು?
ಹಳ್ಳಿಯ ಹವೆಯೂ ಈಗ ಮಲಿನಗೊಂಡಿದೆ ಹುಟ್ಟಿದ್ದಕ್ಕೆ,
ಅಪ್ಪುವುದಕ್ಕೆ, ಬಟ್ಟೆ ಹಾಕುವುದಕ್ಕೆ, ಕಳಚುವುದಕ್ಕೊಂದು
ದಿನ ಎಂಬ ಆಚರಣೆಯೇ ಸೋಜಿಗ ತಂದಿದೆ..
ತೊದಲು ನುಡಿಯನಾಡುವ ಹಸುಳೆಗೇನು ಗೊತ್ತು?
ಇನ್ನು ಮುಂದೆ ಬಾಳ ಪಯಣ ಯಾರ ಮನೆಯ ತೊತ್ತು?
ಸಧ್ಯಕ್ಕೆ ಅಮ್ಮನ ಬೆಚ್ಹನೆಯ ಮುತ್ತೇ ಸಾಕೆನುತಿದೆ
ಸೆಂಟ್,ಪೌಡರ್ ಹಾಕಿ ಕೆಂಭೂತದಂತೆ ಪಾರ್ಕುಗಳಲ್ಲಿ
ಅಂಡಲೆದು ಕೆಟ್ಟ ಜಾಗತೀಕರಣದ ಲಿಪ್ ಸ್ಟಿಕ್ ನ ಚುಂಬನಕ್ಕೆ
ದಿನ, ಮುಹೂರ್ತ ಪ್ರತ್ಯೇಕ ಯಾಕೆ?
ಪ್ರೀತಿಯ ಸೆಲೆ ಕಾಣಲು ಕಳ್ಳತನವೇಕೆ?

Sunday, February 1, 2009

ಪಾಪಿ ದುನಿಯಾ..!

ಜನವರಿ ೨೫, ಭಾನುವಾರ.
ರಾತ್ರಿ ೨.೪೫ರ ಸಮಯ.
ಸ್ಥಳ: ಪಡೀಲ್ ಸಮೀಪದ ರೈಲ್ವೇ ಮೇಲ್ಸೇತುವೆಯ ಅಡಿ ರಾ.ಹೆ.೪೮.
ಅಲ್ಲೇ ನಾನು ಪ್ರಯಾಣಿಸುತ್ತಿದ್ದ ಕಾರಿಗೆ ಹೆದ್ದಾರಿ ಕಾಮಗರಿ ನಡೆಸುತ್ತಿದ್ದ ಹಿಟಾಚಿ ಯಂತ್ರದ ಕೈ ಅಪ್ಪಳಿಸಿದ್ದು.
ಕಾರಿನ ಮುಂಭಾಗದ ಗಾಜು ಹುಡಿಯಾಗಿತ್ತು. ಮುಂದೆ ಕುಳಿತಿದ್ದ ಚಾಲಕ, ನಾನು ಬದುಕಿದ್ದೇ ಒಂದು ಪವಾಡ...
ಇರಲಿ ಇದು ಮಾಮೂಲಿ ಸಂಗತಿ. ಇಂಥದ್ದೆಷ್ಟೋ ನಡೆಯುತ್ತವೆ.
**********
ಕುಂಟುತ್ತಾ ಸಾಗುತ್ತಿರುವ ಹೆದ್ದಾರಿ ಕಾಮಗಾರಿ, ಅತಿಭಾರದ ಅದಿರುಲಾರಿ ಸಂಚಾರ, ನೋಡಿಯೂ ನೋಡದಂತಿರುವ ಆಡಳಿತ, ಈ ಕುರಿತು ಸ್ಥಳೀಯ ಪತ್ರಿಕೆಗಳು ಬರೆದರೂ ಪ್ರಯೋಜನ ಆಗಿರಲಿಲ್ಲ..ಹೀಗಾಗಿ ನ್ಯಾಷನಲ್ ಚಾನಲ್ ನೋಡಿದೊಡನೇ ಛೇ..ನಮ್ಮ ಹೆದ್ದಾರಿಯ ಬಗ್ಗೆ, ಹಗಲು ರೈಲು ಓಡಾಟದ ಬಗ್ಗೆ ಬಿತ್ತರಿಸಲಿ ಎಂದು ಹಾರೈಸುತ್ತಿದ್ದೆ. ಮೊನ್ನೆ ಅಪಘಾತ ಆದಾಗಲೂ ಹಾಗೇ ಅಂದುಕೊಂಡೆ.
**************
ಮರುದಿನ ಸೋಮವಾರ ಮತ್ತೆ ಕೆಟ್ಟ ರಸ್ತೆಯಲ್ಲಿ ಮಧ್ಯಾಹ್ನ ಮಂಗಳೂರಿನತ್ತ ಬರುತ್ತಿದ್ದೆ. ಉದ್ದುದ್ದದ ಟ್ರಾಫಿಕ್ ಜಾಂ.. ಪ್ರಯಾಣಿಕರೆಲ್ಲರೂ ಹಿಡಿಶಾಪ ಹಾಕುತ್ತಿದ್ದರು...ಹಾಗೂ ಹೀಗೂ ಪಂಪ್ ವೆಲ್ ಬಳಿ ಬಂದಾಗ ಬುರ್ರನೆ ಟಿ.ವಿ(ನ್ಯಾಶನಲ್). ವ್ಯಾನೊಂದು ಪಾಸಾಯಿತು. ಅಬ್ಬ.. ಇನ್ನು ಮಂಗಳೂರಿಗರ ಸಮಸ್ಯೆ ಪರಿಹಾರ ಸ್ವಲ್ಪ ಮಟ್ಟಿಗಾದರೂ ದೆಹಲಿಮಟ್ಟಕ್ಕೆ ಹೋಗಬಹುದು ಅಂದುಕೊಂಡೆ.
ಆಗ ಸಮಯ ೧೨.೩೦..ಮಟ ಮಟ ಮಧ್ಯಾಹ್ನ..ಜನವರಿ ೨೬. ಮಂಗಳೂರು ಎಂದಿನಂತೇ ಇತ್ತು. ಮಹಿಳೆಯರು, ಮಕ್ಕಳು ನಿರ್ಭಯವಾಗಿ ನಗುನಗುತ್ತಾ ಪೇಟೆಸಂಚಾರ ಮಾಡುತ್ತಿದ್ದರು. ...
ನಮ್ಮ ಕೆ.ಎಸ್.ರಾವ್ ರಸ್ತೆಯಲ್ಲಿ ಎಂದಿಗಿಂತ ಹೆಚ್ಹಿನ ಜನ..ರಜೆ ಅಲ್ವಾ?
********
ಟಿ.ವಿ.ಯಲ್ಲಿ ನ್ಯಾಶನಲ್ ಚಾನೆಲ್ ನಲ್ಲಿ ಭಾರೀ ಸುದ್ದಿ ಬಿತ್ತರಗೊಳ್ಳುತ್ತಿತ್ತು. ಇಡೀ ಮಂಗಳೂರು ಭಯಭೀತವಾಗಿದೆ..ಹಾಗೆ, ಹೀಗೆ ಎಂದು..ಆ ಹೊತ್ತಿನ ಮಟ್ಟಿಗೆ ಅದು ಸುಳ್ಳೂ ಆಗಿತ್ತು...ಕೂಡಲೇ ಹೇಳಿದೆ ಏನು ಮಾರಾಯ್ರೆ, ಜ್ವಲಂತ ಸಮಸ್ಯೆಗಳು ಹಲವಾರಿವೆ. ಅವಕ್ಕೆಲ್ಲ ಈ ಟಿ.ವಿ. ಚಾನೆಲ್ ಗಳು ಮಂಗಳೂರಿಗೆ ಬರುವುದಿಲ್ಲ. ಈ ಸುದ್ದಿಗಿಂತ ಇನ್ನೂ ದೊಡ್ದ ಸುದ್ದಿ ಬೇಕಾದಸ್ಟಿದೆ ಮಾರಾಯ್ರೇ?
ತಕ್ಷಣ ಒಬ್ಬ ಉದ್ವೇಗದಿಂದ ಹೇಳಿದ ಹಾಗಾದರೆ ಹೆಣ್ಣು ಮಕ್ಕಳಿಗೆ ಹೊಡೆದದ್ದು ನಿಮಗೇನೂ ಅಲ್ವ?
************
ಹೆಣ್ಣು ಮಕ್ಕಳಿಗೆ ಹೊಡೆದದ್ದು ತಪ್ಪು. ಒಪ್ಪಿಕೊಳ್ಳೋಣ. ಅದು ಶನಿವಾರ ೨೪, ಜನವರಿಯಂದು ನಡೆದ ಘಟನೆ. ಅದರ ಬಗ್ಗೆ ಬೇಕಾದ ಚರ್ಚೆ ನಡೆದಿವೆ. ಆದರೆ ಪ್ರಾಣವನ್ನೇ ತೆಗೆಯುವಂಥ ಹೆದ್ದಾರಿ ಅವ್ಯವಸ್ಥೆಯೂ ಸಮಸ್ಯೆಯೇ ಅಲ್ಲವೇ..
********
ಈ ಗೊಂದಲ ನನ್ನ ತಲೆ ಹೊಕ್ಕಿತು. ಬಿಡಿ..ನಾನೊಬ್ಬ ಸಾಮಾನ್ಯ ಮನುಷ್ಯ. ಸತ್ತರೆಷ್ಟು, ಬಿಟ್ಟರೆಷ್ಟು? ಪಾಪ ಪಬ್ಬಿಗೆ ಹೋಗಿ ಕುಣಿದು ಕುಪ್ಪಳಿಸುವವರಿಗಾಗಿ, ಆಮಲು ಪದಾರ್ಥ ಸೇವಿಸಿ ರಾತ್ರಿ ಅಲ್ಲಲ್ಲಿ ಬಿದ್ದುಕೊಳ್ಳುವವರಿಗಾಗಿ ಅಲ್ಲವೇ ಸಪೋರ್ಟ್?
ಏನಂತೀರಿ?