Wednesday, September 24, 2008

ಲಕ್ಷ್ಮಣ ರೇಖೆ..


ನಮ್ಮ ಗಡಿ ಯಾವುದು?
ನನ್ನನ್ನು ಸದಾ ಕಾಡುತ್ತಿರುವ ಪ್ರಶ್ನೆ ಇದು.
ನಮ್ಮನ್ನು ನಿಯಂತ್ರಿಸಲು ಪೂರ್ವಜರು ಮಾಡಿದ ಕಟ್ತುಪಾಡುಗಳಲ್ಲಿ ಇದೂ ಒಂದು ಎಂಬುದು ನನ್ನ ಗ್ರಹಿಕೆ. ಎಷ್ತೇ ಸ್ವಾತಂತ್ರ್ಯ ಇರಲಿ. ಗಡಿ ದಾಟುವ ಸಾಹಸ ಮಾಡುವವರು ಕಡಿಮೆ. ಇದು ಭಾಷೆ, ಸಂಸ್ಕ್ರತಿ, ಜಾತಿ ಇತ್ಯಾದಿಗಳಿಗೆ ಅನ್ವಯ ಆಗುತ್ತದೆ. ನೀವು ಮಂಗಳೂರಿನಿಂದ ಕಾಸರಗೋಡಿಗೆ ಹೋದಾಗ, ಶಿವಮೊಗ್ಗದಿಂದ ಹುಬ್ಬಳ್ಳಿಗೆ ಹೋದಾಗ, ಹಾಸನದಿಂದ ಬೆಂಗಳೂರು, ಮೈಸೂರಿನಿಂದ ಕೋಲಾರ, ಬಳ್ಳಾರಿಯಿಂದ ಆಂಧ್ರ, ಬೆಳಗಾವಿಯಿಂದ ನಿಪ್ಪಾಣಿಗೆ ನಿಮ್ಮ ಸ್ವಂತ ವಾಹನದಲ್ಲಿ ಅಲ್ಲಲ್ಲಿ ನಿಲ್ಲಿಸಿಕೊಂಡು ಅವರಿವರನ್ನು ಮಾತನಾಡಿಸಿಕೊಂಡು ಹೋದಾಗ ಅನುಭವಕ್ಕೆ ಬರುತ್ತದೆ.
ವಿಟ್ಲದಿಂದ ಅಡ್ಯನಡ್ಕ, ಅಲ್ಲಿಂದ ಪೆರ್ಲಕ್ಕೆ ಹೋಗಿ. ಅಲ್ಲಿನ ಬಸ್ ನಿಲ್ದಾಣದಲ್ಲಿ ಸುಮ್ಮನೆ ನಿಲ್ಲಿ. ಕನ್ನಡ ಭಾಷೆಯನ್ನು ಗಮನಿಸಿ. ಎಷ್ತೊಂದು ಬದಲಾವಣೆ? ಪೆರ್ಲ, ಬದಿಯಡ್ಕ, ಕುಂಬಳೆ, ಮಂಜೇಶ್ವರ, ಕಾಸರಗೋಡುವಿನ ಸಾಮಾನ್ಯ ವ್ಯಕ್ತಿಯ ಮನೆಮಾತು ಕನ್ನಡ ಇದ್ದರೂ ಅಪ್ಪಟ ಮಲಯಾಳಿ ಶೈಲಿಯಲ್ಲೇ ಆತನ ಹಾವ ಭಾವ ಇರುತ್ತದೆ. ನಮ್ಮ ಬೆಂಗಳೂರಿನ ಕೆಲವೊಂದು ಓರಾಟಗಾರರು ಮಾತ್ರ ಕಾಸರಗೋಡು ಕರ್ನಾಟಕಕ್ಕೆ ಸೇರಬೇಕು ಎಂದು ಹೂಂಕಾರ ಮಾಡುವುದು, ಕೆಲವೊಂದು ಸಾಹಿತಿಗಳು ಪಣ ತೊಡುವುದನ್ನು ಬಿಟ್ಟರೆ ಕಾಸರಗೋಡಿನ ಸಾಮಾನ್ಯ ಕನ್ನಡಿಗರು ಅಲ್ಲಿ ಹಾಯಾಗಿದ್ದಾರೆ. ಗೌರವದಿಂದಲೇ ಇದ್ದಾರೆ. ಮಲಯಾಳಿಗಳ ಮೇಲೆ ಕನ್ನಡಿಗರು, ಕನ್ನಡಿಗರ ಮೇಲೆ ಮಲಯಾಳಿಗಳು ಸವಾರಿ ಮಾಡಿದ್ದು ಕಡಿಮೆ.
ಇದೇ ಬಾಂಧವ್ಯ. ಪರಸ್ಪರ ಹೊಂದಾಣಿಕೆ ಇದ್ದಾಗ ಮಾತ್ರ ಇದು ಸಾಧ್ಯ.
‘ನಾನು ಕರ್ನಾಟಕಕ್ಕೆ ಬರುವುದಿಲ್ಲ’
ಕರ್ನಾಟಕದ ಕೆಂಪು ಪಟ್ತಿಯ ವ್ಯವಸ್ಠೆಯಿಂದ ರೋಸಿ ಹೋದ ಅಪ್ಪಟ ಕನ್ನಡ ಪ್ರೇಮಿ ಹಾಯಾಗಿ ಬದಿಯಡ್ಕ ಬಳಿ ನಿವ್ರತ್ತ ಜೀವನ ಸಾಗಿಸುತ್ತಿದ್ದಾರೆ. ಅವರ ಮಾತಿದು. ಇತ್ತೀಚೆಗೆ ಕೇರಳಕ್ಕೆ ಹೋಗಿದ್ದಾಗ ಹೀಗೆ ಅವರು ಹೇಳಿದ್ದರು.
ಇದು ಸುಳ್ಳು ಅಲ್ಲ ಎಂದು ನನಗನಿಸುತ್ತದೆ.....(ನನ್ನ ವೈಯಕ್ತಿಕ ನಿಲುವು)
ನಿಮಗೆ?




Sunday, September 21, 2008

ಆನಂದ ಬೋಳಾರ ನೆನಪು


ಸುಮಾರು ಹದಿನೆಂಟು ವರ್ಷಗಳ ಹಿಂದೆ ನಡೆದ ಘಟನೆ. ನಾನಾಗ ಮಂಗಳೂರಿಂದ ಬೆಂಗಳೂರಿಗೆ ರೈಲಿನಲ್ಲಿ ಹೋಗುತ್ತಿದ್ದೆ. ಹತ್ತನೇ ಕ್ಲಾಸು ಮುಗಿಸಿ ಬೇಸಗೆ ರಜೆ ಕಳೆಯಲು ಬೆಂಗಳೂರು ನಗರಕ್ಕೆ ಹೋಗುವುದು ಎಂದರೆ ನಮ್ಮಂಥ ಹಳ್ಲಿ ಹುಡುಗರಿಗೆ ಸ್ವರ್ಗ ಸಿಕ್ಕಿದಂತೆ.
ಅದು ರಾತ್ರಿಯ ರೈಲು ಪ್ರಯಾಣ. ನನ್ನ ಮೊದಲ ಪ್ರಯಾಣವೂ ಹೌದು.

ಹಾಗಾಗಿ ಕಿಟಿಕಿಯವರೆಗೆ ಬೀಳ್ಕೊಡಲು ಅಪ್ಪ, ಅಮ್ಮ ಬಂದಿದ್ದರು. ಸಾವಿರಾರು ಜಾಗ್ರತೆಯನ್ನು ಕೇಳಿ ಕಾದಿರಿಸಿದ ಸೀಟಿನಲ್ಲಿ ತರಂಗ ಓದುತ್ತಾ ಕುಳಿತೆ....
ಸುಮಾರು ಹೊತ್ತಾದ ಮೇಲೆ ಹಾಗೆಯೆ ನಿದ್ದೆಗೆ ಜಾರಿದೆ.

ಮಧ್ಯರಾತ್ರಿ ಕಳೆದು ಬೆಳಕು ಹರಿಯುವ ಹೊತ್ತು.

ಜೋರಾಗಿ ಕೇಕೆ, ನಗು ಕೇಳಿ ಬೆಚ್ಹಿ ಕುಳಿತೆ. ಹಾಗೆಯೇ ಹತ್ತಿರದ ಸೀಟಿನ ಬಳಿ ಇಣುಕಿ ನೋಡಿದೆ.ಹತ್ತು ಹದಿನೈದು ಮಂದಿ ತುಳುವಿನಲ್ಲಿ ಮಾತನಾಡುತ್ತಾ ಜೋಕ್ ಮಾಡುತ್ತಾ ಕುಂತಿದ್ದರು.

ಅವರಲ್ಲೊಬ್ಬ ಮಧ್ಯ ವಯಸ್ಕ ನನ್ನನ್ನು ನೋಡಿ ಎಲ್ಲಿ, ಯಾವೂರು ಎಂದೆಲ್ಲ ವಿಚಾರಿಸಿದರು.

ಮಾಂಬಾಡಿ ಎಂದಾಗ ನನ್ನಜ್ಜ, ಯಕ್ಶಗಾನದ ಬಗ್ಗೆ ಕೇಳಿದರು. ನನ್ನನ್ನು ಗೊತ್ತಾ ಎಂದು ಕೇಳಿದರು. ಗೊತ್ತಿಲ್ಲ ಎಂದೆ. ನಾನು ಆನಂದ ಬೋಳಾರ. ನಾಟಕದಲ್ಲಿ ಹಾಸ್ಯ ಮಾಡುತ್ತೇನೆ. ಇವರೆಲ್ಲಾ ಚಾ ಪರ್ಕ ತಂಡದ ಕಲಾವಿದರು. ಬೆಂಗಳೂರಿನಲ್ಲಿ ಶೋ ಇದೆ. ನೀನೂ ಬಾ ಅಂದರು.

ಬೆಂಗಳೂರು ರೈಲು ನಿಲ್ದಾಣದಲ್ಲಿ ನನ್ನನ್ನು ಕರಕೊಂಡು ಹೋಗಲು ಬಂದ ದೊಡ್ಡಪ್ಪಗೆ ಅವರನ್ನು ಪರಿಚಯಿಸಿದೆ.
ಅದೇ ಮೊದಲು ಮತ್ತು ಕೊನೆ. ನನ್ನ ಮತ್ತು ಆನಂದ ಬೋಳಾರ ಭೇಟಿ.

ಇವತ್ತ್ತು ಅಂಥ ಸರಳ ಸಜ್ಜನ ಮಹಾನ್ ಕಲಾವಿದ ನಿಧನರಾಗಿದ್ದಾರೆ. ಅವರು ತುಳು ರಂಗಭೂಮಿಯ ಮೇರುನಟ ಎಂದು ಗೊತ್ತಾದ ಮೇಲೆ ಅವರ ಹಲವಾರು ನಾಟಕಗಳನ್ನು ನೋಡಿದ್ದೆ.

ಈ ಸುದ್ದಿ ನೋಡಿದಾಗ ಹಳೆಯದೆಲ್ಲಾ ನೆನಪಾಯಿತು ನೋಡಿ.

ಬಹುಶ ಬೋಳಾರರು ಬೆಂಗಳೂರಿನಲ್ಲಿ ಸಿನೆಮಾ ರಂಗದಲ್ಲಿ ಇದ್ದಿದ್ದರೆ ಇನ್ನೂ ಮಿಂಚುತ್ತಿದ್ದರೋ ಏನೋ..

Wednesday, September 17, 2008

ಕಂದನ ಅಳಲು....

ಅಮ್ಮಾ ನಂಗೆ ಮೊಸರು ಬೇಕು
ಪುಟ್ಟ ಕಂದನ ಅಳಲು
ಹಾಲು ತರಲು ಹೋದ ಅಪ್ಪ
ಇನ್ನೂ ಬರಲು ಇಲ್ಲ
ಊರಿಡೀ ಹಾಲಾಹಲ
ಜನರ ಮಧ್ಯ ಎಲ್ಲಿ ಹಾಲು, ಮೊಸರು?
ಪುಟ್ಟ ಮಗುವಿಗೇನು ಗೊತ್ತು
ಜನರ ಜಗಳ ರಗಳೆ!
ಗಲಭೆಕೋರರಿಗೆ ಏನು ಗೊತ್ತು
ಪುಟ್ಟ ಕಂದನ ಕಷ್ಟ?
ಪುಟ್ಟ ಬಾಲೆಗೇನು ಗೊತ್ತು
ದಾಂಧಲೆಕೋರರ ಇಷ್ತ?

Monday, September 8, 2008

ಜಗಜೀವನ..

ತಹತಹಸಿತು ಇಳೆ
ಧಾರೆ ಅಲ್ಲಿ ರಕ್ತದ ಮಳೆ
ಕೇಸರಿ, ಹಸಿರು ಶಾಲು
ತ್ಯಾಗ ಇಲ್ಲ ಬರಿ ಭೋಗ
ವಸಾಹತುಶಾಹಿಯ ಸುಖ
ನಾಡು ಪ್ರಾಣಿ, ಕಾಡು ಮನುಷ್ಯ
ಕೆಂಪು ನೆತ್ತರು ಕಪ್ಪು ಪಟ್ಟಿ
ಒಳಗೂ ಹೊರಗೂ ಮೀರ್ ಸಾದಿಕರು
ಆಪಾತ್ರಗೆ ಆಧಿಕಾರ
ನೆಲ, ಜಲ ಮಾರಾಟದ ಸರಕು
ಎಲ್ಲಿ ಒಲವೆ ನಮ್ಮ ಬದುಕು?

Thursday, September 4, 2008

ಜಿಂಕೆ ಮರಿ ಮತ್ತು ಗಣಪ

"ಅಯೋಧ್ಯ” ಹೊಟೇಲ್ ಹತ್ತಿರ ರಾತ್ರಿ ಊಟ ಮುಗಿಸಿ ನಿಂತಿದ್ದೆ..
‘ಜಿಂಕೆ ಮರೀನ ’ ಹಾಡು ಕೇಳಿ ಬಂತು.
ಗೆಳೆಯ ಮಂಜು ಗೊಣಗಿದ. ‘ಶುರು ಆಯ್ತು ಈ ಮಕ್ಕಳ ಗಲಾಟೆ...’ .
‘ಏನು ಮಾರಾಯಾ’ ಕುತೂಹಲದಿಂದ ಕೇಳಿದೆ.
"ಇದು ಮೆಡಿಕಲ್ ಕಾಲೇಜು ಮಕ್ಕಳ ಗಣಪನ ವಿಸರ್ಜನೆ ಗೌಜಿ... "
ಹೌದಲ್ವ, ಇವತ್ತು ಚೌತಿ.. ವಿನಾಯಕನ ಆರಾಧನೆ. ಮಂಗಳೂರಿನ ಮೆಡಿಕಲ್ ಕಾಲೇಜಿನ ಮಕ್ಕಳ ಭಕ್ತಿ ಕಂಡು ಸೋಜಿಗವಾಯ್ತು.
ಆದರೆ ಒಂದು ವಿಷಯ ಗೊತ್ತಾಗಲಿಲ್ಲ.
‘ಜಿಂಕೆ ಮರೀನ ’ ಎಲ್ಲಿ? ಗಣಪನಿಗೂ ಏನು ಸಂಬಂಧ?
ತಿಳಿಸುತ್ತಿರಾ?