Thursday, December 9, 2010

ಮೇಲೇರಿದ ಮೇಲೆ,

ಗಾಳಿಪಟ ಎಷ್ಟು ಚೆಂದ?
ಅದರ ಬಣ್ಣವೇನು? ಅಂದವೇನು?
ಗಾಳಿಪಟ ಹಾರುವ ಮೊದಲು ಹೇಳುತ್ತಲೂ ಇತ್ತು
ಓ ದಾರವೇ..ನೀನಿಲ್ಲದೆ ನಾನಿಲ್ಲ
ಹಾರಿದ ಮೇಲೆ ಹೇಳಿತು ನಾನು ಎತ್ತರದಲ್ಲಿದ್ದೇನೆ..
ಮತ್ತೆ ಯಾಕೆ ಬೇಕು ಸೂತ್ರ,
(ಅ)ಮೇಲೇರಿದ ಮೇಲೆ ಕೆಳಗಿದ್ದವರು ಕಾಣ್ತಾರಾ?
ಅದೇ ಗತಿ ಸೂತ್ರಕ್ಕಾಯ್ತು...ಮತದಾರನಂತೆ,
ಬಡ ರೈತನಂತೆ, ಥ್ಯಾಂಕ್ಸ್ ಲೆಸ್ ಕೆಲಸ ಮಾಡೋ ಶ್ರಮಜೀವಿಯಂತೆ

Monday, November 1, 2010

ಯಾರಿಗೇನು?

ಯಾವ ತಿಂಗಳು ಬಂದರೆ ಯಾರಿಗೇನು?
ಯಾವ ರಾಜ ಆಳಿದರೆ ಯಾರಿಗೇನು?
ಪ್ರತಿದಿನವೂ ನಮ್ಮ ತಲೇ ಮೇಲೆ ನಮ್ಮದೇ ಕೈ
ಯಾರದೋ ತಪ್ಪಿಗೆ ಯಾರಿಗೋ ಕಪ್ಪ
ತಾನು ಕಳ್ಳ ಪರರ ನಂಬ ಎಂಬ
ಚೋರರ ರಾಜ್ಯದ ಪ್ರಜೆ ಪ್ರಾಮಾಣಿಕನಾದರೆ
ಅವನಿಗೆ ಪ್ರತಿದಿನವೂ ಯಮಗಂಡಕಾಲ

Friday, June 18, 2010

ಬೆಚ್ಚನೆ ಹನಿಸದ್ದು

ಭೋರ್ಗರೆಯೋ ರಕ್ಕಸನ ಅಬ್ಬರಕೆ
ಮನೆಯೊಳಗೆ ಕತ್ತಲು ಕವಿದಂತೆ
ಗಾಢ ಮೌನ!
ನೀಲಾಂಧಕಾರ ಒದ್ದೋಡಿಸಲು
ಸಾಕು ಕಾಣದ ಮಾರುತ
ಒಮ್ಮೆ ಸದ್ದು ಮತ್ತೆ ಮೌನ!
ಶರಧಿಯೂ ಬೆಚ್ಹಿ ಬೀಳುತ್ತಾಳೆ

****************

ಮೋಡ ಬಿದ್ದಿದೆ
ಸುತ್ತಲೂ ಕಾರಂಜಿ
ನೆಲದ ಕೆಸರ ತೊಳೆಯುತಿದೆ
ಮನದ ಕೊಳೆಯನ್ನೂ ತೊಳೆಯಲಿ
ಬನ್ನಿ ಹೇಳೋಣ ಮಳೆ ಸದ್ದಿನ ಜೊತೆ
ಮತ್ತೆ ಬಾ

Sunday, May 23, 2010

ರೆಕ್ಕೆ ಮುರಿದ ಲೋಹದ ಹಕ್ಕಿ

ಎಲ್ಲಾ ಅಳಿದ ಮೇಲೆ ಏನುಂಟು ಮುಂದಿನ ಮಾತು?
ಹೀಗನ್ನಿಸೋದು ನೆನ್ನೆ ಶನಿವಾರ ಬಜ್ಪೆಯ ದುರಂತ ಕಂಡು
ನೀವೆಲ್ಲಾ ಅಲ್ಲಿನ ಹೃದಯವಿದ್ರಾವಕ ಚಾಯಾಚಿತ್ರಗಳನ್ನು, ವರದಿಯನ್ನು ನೋಡಿರುತ್ತೀರಿ, ಓದಿರುತ್ತೀರಿ ಅಲ್ಲವೇ?
ವರ್ಶದ ಹಿಂದೆ ಮಂಗಳೂರಲ್ಲಿ ದ್ವೇಷದ ಅಗ್ನಿ ಉರಿಯುತ್ತಿತ್ತು. ಈಗ ನೋವಿನ ಅಗ್ನಿ.
ನಾನು ಅಲ್ಲಿ ಕಂಡದ್ದು ಕೇವಲ ಅವಷೇಶಗಳನ್ನಷ್ಟೇ ಅಲ್ಲ, ಸಾಮರಸ್ಯದ ಭ್ರಾತೃತ್ವ. ವಿಮಾನದಲ್ಲಿ ಇದ್ದವರು ಯಾವ ಜಾತಿ, ಕೋಮು ಎಂದು ನೋಡಲು ಯಾರು ಹೋಗಿದ್ದರು? ಸುಟ್ಟು ಕರಟಿದ ದೇಹದಲ್ಲಿ ಅವನ್ಯಾರು? ಶ್ರೀಮಂತನೋ, ಬಡವನೋ, ಹಿಂದೂವಾ? ಮುಸ್ಲಿಮಾ? ಕ್ರೈಸ್ತನಾ? ಎಂದು ನೋಡಲು ಯಾರಿಗೆ ಪುರುಸೊತ್ತಿತ್ತು?
ವಿಮಾನ ಬಿದ್ದ ಜಾಗದ ಕೆಲವೇ ಕಿ.ಮೀ. ಪರಿಸರದಲ್ಲಿ ಕೆಲವು ವರ್ಷಗಳ ಹಿಂದೆ ಕೋಮು ಗಲಭೆಯಿಂದ ಮರ್ಡರ್ ಆಗಿತ್ತು. ಆದರೆ ನಿನ್ನೆ ಅಲ್ಲಿ ಬೆಂದ ದೇಹಗಳನ್ನು ಹೊತ್ತೊಯ್ಯುವವರಲ್ಲಿ ಮುಸ್ಲಿಮರೂ ಇದ್ದರು, ಹಿಂದೂಗಳೂ ಇದ್ದರು.
ಯಾರೂ ಯಾರ ಹೆಸರೂ ಕೇಳಲಿಲ್ಲ

ನಾನೂ ನನ್ನ ಕರ್ತವ್ಯ ಮಾಡಬೇಕಿತ್ತು. ಸಾವನ್ನಪ್ಪಿದವರ ಬಂಧುಗಳಿಂದ ಅವರ ಕುರಿತು ವಿವರ ಪಡೆಯಲು ಹೋದ ನನಗೆ ಕಂಡದ್ದು ಬಹುತೇಕ ಮಧ್ಯಮ ವರ್ಗದ ಜನರ ಕರುಣ ಕಥೆಗಳೇ.
ವಿಮಾನದ ರೆಕ್ಕೆಯ ಪಕ್ಕ ಸೀಟ್ ನಂ 19 ಸಿಯಲ್ಲಿದ್ದ ಉಸ್ಮಾನ್ ಹಾರಿ ಬದುಕುಳಿದದ್ದು, ಟೂರಿಗೆಂದು ಹೋದ ಕುಟುಂಬ ಮತ್ತೆ ಬಾರದೇ ಇದ್ದದ್ದು... ಹೀಗೆ...
ಅದರಲ್ಲೂ ಉಸ್ಮಾನ್ ಹೇಳಿದ್ದು ನನಗೆ ಇನ್ನೂ ಕಣ್ಣಿಗೆ ಕಟ್ಟಿದಂತೆ ಇದೆ..
ಏನೋ ಅವ್ಯಕ್ತ ಶಕ್ತಿ ನಮ್ಮನ್ನು ಆಡಿಸುತ್ತಾ ಇದೆ. ದೇವರೆಂಬವ ಇದ್ದಾನೆ. ಆದರೆ ವಿಮಾನ ಹತ್ತುವಾಗ ನನ್ನೊಡನೆ ಇದ್ದವರನ್ನೆಲ್ಲಾ ಅವನ್ಯಾಕೆ ಕರೆದುಕೊಂಡ?
ಈ ಪ್ರಶ್ನೆಗೆ ನನ್ನಲ್ಲಿ ಉತ್ತರವಿಲ್ಲ..
ನಿಮ್ಮಲ್ಲಿದೆಯಾ?
(ಮತ್ತೆ ಮತ್ತೆ ಆ ದುರಂತ ಚಿತ್ರಗಳನ್ನು ನಿಮಗೆ ತೋರಿಸೋದು ಬೇಡ ಎಂದು ಹಾಕಿಲ್ಲ)

Saturday, March 13, 2010

ಭಟ್ಟರ ಗೋಳು

ರಾತ್ರಿಯೆಲ್ಲಾ ನಿದ್ದೆಯಿಲ್ಲ!
ಶಾರದಮ್ಮನಿಗೆ ಪ್ರತಿ ದಿನವೂ ಜಾಗರಣೆ..
ಮಾಡಿನಲ್ಲಿ ಬಡಬಡ ಶಬ್ದವಾದರೆ ದಿಗಿಲು
ಮೊನ್ನೆ ಮೊನ್ನೆಯಷ್ಟೇ ಕಟ್ಟಹಾವಿಗೆ ಸೀಮೆಎಣ್ಣೆ ಸುರಿದು ಸುಟ್ಟು ಬೂದಿ ಮಾಡಿದ್ದು ಇನ್ನೂ ನೆನಪಾಗಿಯೇ ಉಳಿದಿದೆ. ಹಾಗಿರುವಾಗ ಯಾವ ಹೊತ್ತಿಗೆ ಎಂಥ ಹಾವು ಬಂದು ಬೀಳುತ್ತದೆ ಎಂದು ಹೇಳಲು ಸಾಧ್ಯವೇ?
ಪತಿ ವಿಷ್ಣುಭಟ್ಟರು ಹತ್ತಿರದ ದೇವಸ್ಥಾನದಲ್ಲಿ ಅರ್ಚಕ.
ತಿಂಗಳಿಗೆ ಮೂರುವರೆ ಸಾವಿರ ಸಂಬಳ. ಮತ್ತೊಂದು ಮುರುಕಲು ಮನೆ. ಅದೂ ದೇವಸ್ಥಾನ ಕಮಿಟಿ ಕೊಟ್ಟದ್ದು. ಅವರಿಗೆ ಭಟ್ಟರ ತಟ್ಟೆ ಮೇಲೇ ಕಣ್ಣು.
"ಭಟ್ಟನಿಗೇನು? ಪುಳಿಚಾರು? ನೇವೇದ್ಯಕ್ಕೆ ಸಿಕ್ಕಿದ್ದನ್ನು ತಿಂದು ಮಣಮಣ ಮಂತ್ರ ಹೇಳಿದರೆ ಆಯ್ತಲ್ಲ? ಇನ್ನೇನುಂಟು? "- ಇದು ಕಮಿಟಿಯ ಅಭಿಪ್ರಾಯ. ತಟ್ಟೆಗೆ ಯಾರಾದರೂ ನೂರು ರುಪಾಯಿ ಕೊಡ್ತಾರೇನೋ ಎಂದು ನೋಡಲು ಸೋಡಕುಪ್ಪಿ ಗ್ಲಾಸಿನ ಕ್ಲಾರ್ಕ್.
ಮೊದಲೇ ಅಲ್ಲಿಂದಲ್ಲಿಗೆ ಹಿಡಿಜೀವದ ಪತಿ ಹಾರ್ಟ್ ಪೇಶಂಟ್. ಶಾರದಮ್ಮನೂ ಗಟ್ಟಿ ಜೀವವೇನಲ್ಲ. ಅವರ ಕಣ್ಣೂ ಮಂಜಾಗಿದೆ. ಇಬ್ಬರಿಗೂ ಬಾಳ ಮುಸ್ಸಂಜೆಯ ಹೊತ್ತು. ಆದರೆ ದಟ್ಟ ದಾರಿದ್ರ್ಯ.
ಹೆಸರಿಗೆ ಮಾತ್ರ ಮೇಲ್ಜಾತಿ. ಹಾಗಾಗಿ ಇರುವ ಒಬ್ಬ ಮಗನ ವಿದ್ಯಾಭ್ಯಾಸಕ್ಕೂ ಸಂಕಷ್ಟ.!
ಆದರೂ ದೊಡ್ಡ ಉದ್ಯೋಗಕ್ಕೆ ಹೋಗಿ ಅಪ್ಪ ಅಮ್ಮನನ್ನು ಸಾಕುತ್ತೇನೆ ಎಂಬ ಹುಚ್ಹು ಮಗ ಪ್ರಸಾದನಿಗೆ.
ಭಟ್ಟರ ಕೆಲಸವೇನು?
ಬೆಳಗ್ಗೆ ೫ ಗಂಟೆಗೆ ಎದ್ದು ತಣ್ಣೀರಲ್ಲಿ ಮಿಂದು ದೇವಸ್ಥಾನಕ್ಕೆ ಹೋಗಿ ಪೂಜಾ ಸಾಹಿತ್ರ ರೆಡಿ ಮಾಡಬೇಕು. ಎಲ್ಲಿಗೂ ಹೋಗೋ ಹಾಗಿಲ್ಲ. ಬೆಳಗ್ಗೆ ೯ರವರೆಗೆ ದೇವಸ್ಥಾನದಲ್ಲೇ. ಮತ್ತೆ ೧೧.೩೦ಗೆ ಮಧ್ಯಾಹ್ನದ ಪೂಜೆಗೆ ರೆಡಿಯಾಗಬೇಕು. ಸಂಜೆ ೪ಕ್ಕೆ ಮತ್ತೆ ದೇವಸ್ಥಾನಕ್ಕೆ ಹಾಜರಾಗಬೇಕು. ಪತ್ತೆ ರಾತ್ರಿ ೯.೩೦ಗೇ ಬಿಡುಗಡೆ.
ಹೊರಗಿಂದ ನೋಡೋವರಿಗೆ ಭಟ್ಟರಿಗೇನು? ಮಣಮಣ ಹೇಳಿದರೆ ಸಾಕು....) ಎನ್ನೋರೇ ಜಾಸ್ತಿ. ಆದರೆ ಯಾರು ಕೇಳಿದ್ದಾರೆ ಭಟ್ಟರಿಗೆ ವಯಸ್ಸೆಷ್ಟು? ಅವರಿಗೆ ಅಸಿಡಿಟಿ ಇದೆಯಾ? ಗ್ಯಾಸ್ಟ್ರಿಕ್ ಇದ್ಯಾ? ಕಿಡ್ನಿ ಸ್ತೋನ್ ಇದ್ಯಾ? ಹಾರ್ಟ್ ಪ್ರಾಬ್ಲೆಂ ಇದ್ಯಾ? ಹಾಗೇನಾದರೂ ಆದರೆ ಸರ್ಕಾರ ಅವರನ್ನು ನೋಡುತ್ತಾ? ಸಂಘ ಸಂಸ್ಥೆಗಳು ಹತ್ತಿರ ಬರುತ್ತಾ?
ಇಡೀ ಜೀವಮಾನ ಜೀತದಾಳಿನಂತೆ ಕಮಿಟಿ ಹೇಳಿದ್ದನ್ನೆಲ್ಲಾ ಕೇಳಿಕೊಂಡು ಬಂದ ಭಟ್ಟರ ಸಪೋರ್ಟಿಗೆ ನಕ್ಸಲರೂ ಬರಲ್ಲ. ಅವರಿಗೆ ಭಟ್ಟರ ಜಾತಿಯೇ ಆಗಲ್ಲ.
ಹಾಗಾದರೆ ಭಟ್ಟರಿಗೆ ಯಾರು ಗತಿ?
ದೇವರೇ ಗತಿ.
ಮೊನ್ನೆ ಶಾರದಮ್ಮನಿಗೆ ಕಟ್ಟಿಹಾವು ಕಚ್ಹಿದಾಗ ಯಾರು ಸಹಾಯಕ್ಕೆ ಬಂದಿದ್ದರು? ಭಟ್ಟರಿಗೆ ಆಸ್ಪತ್ರೆಗೆ ಕರ್ಕೊಂಡು ಹೋಗಲಿಕ್ಕೆ ಸಾಕುಬೇಕಾಯ್ತು. ಹೇಗೋ ಬದುಕುಳಿದ ಶಾರದಮ್ಮ ಈಗಲೂ ದಮ್ಮು ಕಟ್ಟಿ ದೇವಸ್ಥಾನದ ಕಮಿಟಿ ಚೇರ್ರ್ಮನ್ ಹೇಳಿದ ಕೂಡಲೇ "೨೫ ಜನಕ್ಕೆ ಮಧ್ಯಾಹ್ನದ ನೇವೇದ್ಯ” ಮಾಡ್ತಾರೆ. ಮನೆಯಲ್ಲಿ ಅಕ್ಕಿ, ಬೇಳೆ, ಬೆಲ್ಲ ಇದೆಯಾ ಎಂದು ಯಾರೂ ಕೇಳ್ತಾರೆ?
********
ಹಾಗೇ ದಿನ ಸಾಗ್ತಾ ಇದೆ. ಮೊನ್ನೆ ಪೇಪರ್ನಲ್ಲಿ ಕೇರಳ ಸರ್ಕಾರ ಧಾರ್ಮಿಕ ದತ್ತಿ ಇಲಾಖೆ ದೇವಸ್ಥಾನ ಅರ್ಚಕರ ವೇತನ ಇತ್ಯಾದಿಗಳ ಬಗ್ಗೆ ಬಂದಾಗ ೫೫ ವರ್ಷದ ಭಟ್ಟರೂ ಕನಸು ಕಾಣಲು ಆರಂಭಿಸಿದ್ದಾರೆ.
ಆದರೆ ಪಾಪ ಭಟ್ಟರಿರೋದು ಕರ್ನಾಟಕದಲ್ಲಿ...ದೊಡ್ಡ ದೊಡ್ಡ ಮಟಾಧೀಶರ ಮೇಲಷ್ಟೇ ಸರ್ಕಾರಕ್ಕೆ ಕಣ್ಣು.
ಸದಾ ಎಲ್ಲರಿಂದಲೂ ಅವಹೇಳನೆಗೆ ಗುರಿಯಾಗೋ ಭಟ್ಟರ ಗೋಳು ಕೇಳುವವರಾರು? ಸಪೋರ್ಟಿಗೆ ಬರೋ ಪಕ್ಷ, ಸಂಘಟನೆ ಯಾವ್ದಾದ್ರೂ ಇದ್ಯಾ?*****
ಪಾಪ ಭಟ್ಟರ ಸಂಸಾರ
ಕನಸು ಕಾಣಲಿ ಬಿಡಿ..
ಅವರ ಮನೆ ಮಾಡಿನಿಂದ ಅಪರಾತ್ರಿ ಹಾವು ಬೀಳದಿರಲಿ ಮಗನಿಗೆ ಬೇಗ ಕೆಲಸ ಸಿಗಲಿ ಎಂದು ಹಾರೈಸೋಣ.
*****

Tuesday, February 2, 2010

ಅಖಂಡ ಭಾರತ! ?



ಅಖಂಡ ಭಾರತ!
ಸಂಘಪರಿವಾರ ಪ್ರಸ್ತಾಪಿಸುವ ಭಾರತದ ಕಲ್ಪನೆಯ ಬಗ್ಗೆ ನಾನು ಹೇಳಲು ಹೊರಟಿಲ್ಲ. ಏಕೆಂದರೆ ಆ ‘ಗುರಿ’ ತಲುಪಲಂತೂ ಸಾಧ್ಯವೇ ಇಲ್ಲ. ನನಗೆ ಕಾಡುತ್ತಿರೋದು ಈಗಿರುವ ಭಾರತ ಅಖಂಡವಾಗಿದೆಯಾ ಎಂದು.
ಮುಂಬಯಿ ಮರಾಟಿಗರದ್ದು ಎಂಬ ಮಾತು ದಶಕಗಳ ಹಿಂದೆ ಹುಟ್ಟಿದಾಗ, ತಮಿಳನ್ನು ಅತಿಯಾಗಿ ಪ್ರೀತಿಸುವವರ ಸಂಖ್ಯೆ ಹೆಚ್ಹಾದಾಗಲೂ ಭಾರತ ಅಲ್ಲಾಡಲುಆರಂಭಿಸಿರಲಿಲ್ಲ. ಏಕೆಂದರೆ ಇವೆಲ್ಲದರ ಹಿಂದೆ ಪೊಲಿಟಿಕಲ್ ಅಜೆಂಡಾ ಮಾತ್ರ ಇತ್ತು. ಅದು ಸಾಧಿಸಿದ ಕೂಡಲೇ ಈ ಧ್ವನಿ ಕಮ್ಮಿಯಾಗುತ್ತಿತ್ತು. ಆದರೆ ಈಗ ನಮ್ಮನಮ್ಮಲ್ಲೇ ಇರೋ ಪ್ರತ್ಯೇಕತಾ ಭಾವನೆ ಮತ್ತಷ್ಟು ದಟ್ಟವಾಗಿದೆ.
ಒಂದು ಕ್ಷಣ ಯೋಚಿಸಿ. ಮುಂಬಯಿಯಿಂದ ತುಳು ಮಾತನಾಡುವವರು, ಹಿಂದಿ ಮಾತನಾಡುವವರು, ಕನ್ನಡ ಮಾತನಾಡುವವರು, ತಮಿಳು ಮಾತನಾಡುವವರು ಹಾಗೇ ಎದ್ದು ಹೋದರೆ ಏನಾಗಬಹುದು? ಮಲಯಾಳಿಗರು ಮಂಗಳೂರಿನ ವಾಣಿಜ್ಯ ಅಭಿವೃಧ್ಹಿಗೆ ತೆಲುಗರು ತಮಿಳರು ಬೆಂಗಳೂರಿನ ವಾಣಿಜ್ಯ ಅಭಿವೃಧ್ಹಿಗೆ ಕೊಡುಗೆ ಕೊಟ್ಟಿಲ್ಲವೇ? ಅವರನ್ನೆಲ್ಲಾ ಬೆತ್ತ ಹಿಡಿದು ಓಡಿಸಲು ಹೊರಟರೆ ಏನಾಗುತ್ತದೆ?
ಕಾಸರಗೋಡು ಕನ್ನಡನಾಡಿಗೆ ಸೇರಬೇಕು ಎಂದು ಉದ್ದುದ್ದ ಹೇಳಿಕೆ ಕೊಡುವ ಮಂದಿ ಖುದ್ದು ಅಲ್ಲಿಗೆ ಭೇಟಿ ಇತ್ತಿದ್ದಾರೆಯೆ? ಹಾಗೆ ನೋಡಿದರೆ ಕಾಸರಗೋಡು ಜಿಲ್ಲೆಯ ಕನ್ನಡ ಮಾತನಾಡುವವರನ್ನು ಕೇರಳ ಸರ್ಕಾರವೇ ಹೆಚ್ಹು ಗುರುತಿಸಿದೆ. ಯಕ್ಷಗಾನಕ್ಕೆ ಸರ್ಕಾರದ ಪ್ರೋತ್ಸಾಹ ಮೊದಲು ಸಿಕ್ಕಿದ್ದೇ ಕೇರಳದಿಂದ. ಇನ್ನು ಕನ್ನಡ ಮಾತನಾಡುವವರು, ತುಳು ಮಾತನಾಡುವವರು ಮಲಯಾಳಿಗಳೊಂದಿಗೆ ಅನ್ಯೋನ್ಯವಾಗಿಯೇ ಇದ್ದಾರೆ. ಸುಳ್ಯ, ಮಂಗಳೂರು, ಬಂಟ್ವಾಳ ತಾಲೂಕಿನ ಕೇರಳಕ್ಕೆ ತಾಗಿಕೊಂಡಿರುವವರ ಆಚಾರ,ವಿಚಾರಗಳಲ್ಲೂ ಕೇರಳ ಟಚ್ ಇದೆ. ಆದರೆ ಅವರೆಲ್ಲರೂ ಕನ್ನಡಿಗರೇ. ಆದರೂ ಕರ್ನಾಟಕ ಸರ್ಕಾರದ ಅಧೀನಕ್ಕೆ ಆ ಪ್ರದೇಶ ಬಂದು ಏನು ಸಾಧಿಸಿದ ಹಾಗಾಗುತ್ತದೆ?
ಇನ್ನು ಕರ್ನಾಟಕದ ಉತ್ತರ ಭಾಗದ ಮಹಾರಾಷ್ತ್ರಕ್ಕೆ ತಾಗಿಕೊಂಡಿರುವ ಪ್ರಾಂತ್ಯಗಳಲ್ಲಿ ಮರಾಟಿ ಪ್ರಭಾವ ಹೆಚ್ಹಾಗಿಯೇ ಇದೆ. ೧೯೯೦ರ ಸುಮಾರಿಗೆ ಗ್ರೇಟ್ ಮರಾಟಾ ಎಂಬ ಟೆಲಿ ಧಾರಾವಾಹಿ ಪ್ರಸಾರವಾಗುತ್ತಿದ್ದಾಗ ಕಾರವಾರದ ಹೆಚ್ಹಿನ ಮನೆಗಳಲ್ಲಿ ಟಿ.ವಿ. ಮುಂದೆ ಪಿನ್ ಡ್ರಾಪ್ ಸೈಲೆನ್ಸ್ ಇತ್ತು. ಎಲ್ಲರಿಗೂ ಆ ಧಾರಾವಾಹಿ ನೋಡಲು ಅದೊಂಥರಾ ಖುಷಿ. ಆದರೆ ಅವರು ಹುಟ್ಟು ಕರ್ನಾಟಕದವರು. ಅವರನ್ನೆಲ್ಲಾ ಮಹಾರಾಷ್ತ್ರಕ್ಕೆ ಓಡಿಸಿ ಎಂದರೆ ಏನಾದೀತು?
ಇದೀಗ ಮಹಾರಾಷ್ಟ್ರದ ‘ಸೈನಿಕರು’ ಇಂಥದ್ದೊಂದು ಪ್ರತ್ಯೇಕತೆಯ ಕಿಚ್ಹು ಹಚ್ಹಿದ್ದಾರೆ. ಅವರನ್ನೇ ಮಾದರಿಯಾಗಿ ದೇಶದ ಇತರ ಭಾಗಗಳಲ್ಲಿ ಆಯಾ ಭಾಷೆಯ ‘ರಕ್ಷಣಾ’ ವಿಭಾಗದವರು ಕೋಲು, ಕತ್ತಿ ಹಿಡಿದು ಹೊರಟರೆ ಏನಾದೀತು?
ಬೆಳಗಾವಿ, ಕಾಸರಗೋಡು, ಮುಂಬಯಿ, ಬೆಂಗಳೂರು, ಡೆಲ್ಲಿ, ಮಂಗಳೂರು, ಕೋಲ್ಕತ್ತಾ, ಗೋವಾಗಳನ್ನು ಭಾಷೆಯ ಆಧಾದಲ್ಲೇ ನೋಡಿದರೆ, ಆಯಾಭಾಷಿಕರೇ ಅಲ್ಲಿರಬೇಕು ಎಂದು ಹೊರಟರೆ ಭಾರತ - ಮತ್ತೊಂದು U.S.S.R. ಆದೀತು.
ಇದು ಕೇವಲ ನನ್ನ ಅಭಿಪ್ರಾಯ.. ಸರಿಯೋ, ತಪ್ಪೋ ಗೊತ್ತಿಲ್ಲ.!!!