Thursday, January 15, 2009

ಕುಡ್ಲವೆಂಬ ಬಲೂನು!

ಹಾಗೇ ಸುಮ್ಮನೆ ಹಿಂದಿರುಗಿ ನೋಡಿ!
ಕುಡ್ಲ ಹೇಗೆ ಕಾಣುತ್ತದೆ?
ತುಳು ಭಾಷೆಯಲ್ಲಿ ಕುಡ್ಲ, ಮಲಯಾಳಿಗಳಿಗೆ ಮಂಗಳಾಪುರ, ನಮಗೆಲ್ಲಾ ಮಂಗಳೂರು.
ಕರಾವಳಿಯ ಈ ಬಂದರು ಪಟ್ಟಣ ದಿಡೀರನೆ ಧೃಡಕಾಯವಾಗುತ್ತಿದೆ.
ಹುಟ್ಟಿದಾಗಿನಿಂದ ಇಲ್ಲಿಯವರೆಗೂ ಊರು ಬಿಡದೆ ಇಲ್ಲಿಯೇ ವಾಸಿಸುವ ನನ್ನಂಥ ಸಾಮಾನ್ಯರಿಗೂ ಅರ್ಥವಾಗದಷ್ಟು ಕುಡ್ಲ ಮಾರ್ಪಾಡಾಗಿದೆ. ಇಪ್ಪತ್ತು ವರ್ಷಗಳ ಹಿಂದೆ ಎಂಟನೇ ಕ್ಲಾಸಿಗೆ ಬೋಂದೇಲಿನಿಂದ ೧೯ ನಂಬ್ರದ ಬಸ್ಸಿನಲ್ಲಿ ಲಾಲ್ ಬಾಗ್ ಹೋಗುವಾಗ ಇದ್ದ ಸ್ಥಿತಿ ಈಗಿಲ್ಲ ಅನ್ನುವುದಾದರೆ ಅದು ಸಹಜ. ಆದರೆ ಮಿತಿಮೀರಿದ ವೇಗ ಮಾತ್ರ ಅಪಾಯಕ್ಕೆ ಆಹ್ವಾನ!.
ನಮ್ಮ ಕುಡ್ಲದಲ್ಲಿರುವ ಕೆಲವು ಶಾಪಿಂಗ್ ಕಾಂಪ್ಲೆಕ್ಸ್ ಗಳ ಒಳಹೊಕ್ಕು ನೋಡಿ. ಚಕ್ರವ್ಯೂಹದಂತಿರುವ ಕಟ್ಟಡಗಳೇ ಒಂದು ನಿಗೂಡ.ಅಲ್ಲೆಲ್ಲಾ ಎಂಥ ವಹಿವಾಟು ನಡೆಯುತ್ತಿದೆ? ಲಾಭ? ಕೇಳಿದರೆ ಲಾಸ್ ಮಾರ್ರೆ ಅನ್ನುತ್ತಾರೆ. ಹಾಗಾದರೆ ಒಂದೊಂದು ಅಂಗಡಿಯಲ್ಲಿ ಒಬ್ಬ ಹುಡುಗ, ಒಬ್ಬ ಹುಡುಗಿಯನ್ನಿಟ್ಟು ಮಾಲಕ ಮಾಡುವ ಕೆಲಸ ಏನು?
ಮುಂಬಯಿಯಲ್ಲಿ ಹೊಸ ಫ್ಯಾಷನ್ ಬಂದ ಕೂಡಲೇ ಮಂಗಳೂರಿನಲ್ಲಿ ಅದು ಕಾಣಿಸುತ್ತದೆ. ಅಲ್ಲಿ ಹೊಸ ಡಾನ್ ಹುಟ್ಟಿದರೆ ಇಲ್ಲಿ ಹೊಸ ಪೆಟ್ಟಿಸ್ಟ್(ಪೆಟ್ಟು ಮಾಡಲು ಗೊತ್ತಿದ್ದವ) ಹುಟ್ತುತ್ತಾನೆ. ಹೀಗೆ ನಮ್ಮ ಮಂಗಳೂರು ಮತ್ತು ಮುಂಬಯಿಯ ನಂಟು ಅಮೋಘ.
ಸುನಿಲ್ ಶೆಟ್ಟಿ ಮಂಗಳೂರಲ್ಲೇ ಎರಡೆರಡು ದೊಡ್ಡ ಅಂಗಡಿ ತೆರೆಯುವ ಸಾಹಸ ಮಾಡಿದ್ದಾನೆ. ದುಬಾಇ ಸಹಿತ ದೊಡ್ಡ ದೊಡ್ಡ ಕುಳಗಳು ಇಲ್ಲಿ ಭಾರೀ ಕಟ್ಟಡ ಕಟ್ಟಿಸುತ್ತಿದ್ದಾರೆ.
ಅದೆಲ್ಲಾ ಸರಿ, ಇದರಿಂದ ಯಾರಿಗೆ ಲಾಭ?
ಫುಟ್ ಪಾತ್ ಇಲ್ಲದ ರಸ್ತೆಗಳು, ಕ್ಲೀನ್ ಇಲ್ಲದ ಬಸ್ ನಿಲ್ದಾಣ, ಪ್ರಯೋಜನವಿಲ್ಲದ ನೇತಾರರ ನಡುವೆಯೂ ಕುಡ್ಲದ ಲ್ಯಾಂಡ್ ವ್ಯಾಲ್ಯೂ ಮಿತಿಮೀರಿ ಹೆಚ್ಹಿದೆ. ಚರ್ಚೆ ಮಾಡಲು ಹೋದಗೆ ‘ಪೆಟ್ಟಿಗೆ’ ಬರುತ್ತಾರೆ. ಹೀಗಾಗಿ ಬೆಂಗಳೂರಿಗೇನೂ ಕಮ್ಮಿ ಇಲ್ಲ.
ಇವೆಲ್ಲದರ ನಡುವೆ ಅದೇ ಕದ್ರಿ ಪಾರ್ಕ್, ಅದೇ ಸುಲ್ತಾನ್ ಬತ್ತೇರಿ, ಅದೇ ಪಣಂಬೂರು ಬೀಚ್ ಕೈಬೀಸಿ ಕರೆಯುತ್ತಿದೆ.
--ಇವಿಷ್ಟು ಸದ್ಯಕ್ಕೆ ಸಾಕು ಬರೆಯುವುದು ಬೇಕಾದಷ್ಟು ಇದೆ. ಅದಕ್ಕೂ ಮೊದಲು ನೀವೇನು ಕಂಡಿದ್ದೀರಿ ಹೇಳಿ.

Friday, January 2, 2009

ಬಲ್ಲಿರೇನಯ್ಯ!



ಸುಮಾರು ೨೫ ವರ್ಷಗಳೇ ಕಳೆದು ಹೋದವು!
ಪ್ರಾಥಮಿಕ ಶಾಲೆಗೆ ಹೋಗುತ್ತಿದ್ದ ಸಮಯವದು. ನಮ್ಮೂರು ಕರೋಪಾಡಿ ಗ್ರಾಮ. ಅದಕ್ಕೆ ತಾಗಿಕೊಂಡಿರುವುದು ಕೇರಳ. ಆದರೆ ಅಲ್ಲಿ ಮಲಯಾಳಿಗಳು ಕಡಮೆ. ಕರೋಪಾಡಿಗೆ ಒಳಪಡುವ ಮಿತ್ತನಡ್ಕ, ಪದ್ಯಾಣ, ಮಾಂಬಾಡಿ, ಮುಗುಳಿ ಪ್ರದೇಶಗಳನ್ನು ದಾಟಿ ಬಾಯಾರು, ತಲೆಂಗಳ ಸಂಪರ್ಕಿಸಲು ಗುಡ್ಡೆಯ ದಾರಿ! ಇನ್ನೊಂದು ಗುಡ್ಡೆ ದಾಟಿದರೆ ಅಳಿಕೆ, ಅಡ್ಯನಡ್ಕ...ಹೀಗೆ ಊರೂರುಗಳನ್ನು ಬೆಸೆಯಲು ಬೆಟ್ಟ ಗುಡ್ಡಗಳು. ಜೊತೆಗೆ ಯಕ್ಷಗಾನ.
ನಮ್ಮೂರೇ ಹಾಗಿತ್ತು. ಸಂಜೆಯಾದರೆ ರೇಡಿಯೋ, ವಿಟ್ಲದಿಂದ ಯಾರಾದರೂ ತರುತಿದ್ದ ಪೇಪರ್. ಅದರಲ್ಲಿ
ಎಲ್ಲೆಲ್ಲಿ ಯಾವ್ಯಾವ ಮೇಳಗಳ ಆಟ ಇದೆ? ಎಂದು ನೋಡುವುದು. ಸಾಧ್ಯವಾದರೆ ಅಲ್ಲಿಗೆ ಹೋಗುವಲ್ಲಿವರೆಗೆ(ದೂರದಲ್ಲಿದ್ದರೂ ಸರಿ) ಊರ ಮಂದಿಯ ಅಭಿಮಾನ!. ರಜೆ ಕಳೆಯಲು ಊರಿಗೆ ಬಂದ ನಾನೂ ಅಷ್ಟೇ. ಮಿತ್ತನಡ್ಕದಲ್ಲಿ ಬಯಲಾಟ ಇದೆಯೆಂದಾದರೆ ಆಟ ಪ್ರಾರಂಭವಾಗುವ ಮುನ್ನ ಮನೆಯಲ್ಲೇ ಇಪ್ಪತ್ತು, ಮೂವತ್ತು ಸುತ್ತು ಲಾಗ ಹಾಕುತ್ತಾ ಆಟದ ಮೂಡ್ ಗೆ ಬರುವುದು. ಇರುಳಿಡೀ ಚುರುಮುರಿ, ಐಸ್ ಕ್ಯಾಂಡಿ ತಿನ್ನುತ್ತಾ ಆಟದ ಗೌಜಿ ನೋಡುವುದು.!
*************
ಅಂದ ಹಾಗೆ ನನ್ನ ಹಿರಿಯರ ಕುರಿತು ಒಂದಿಷ್ಟು.
ನನ್ನ ಹಿರಿಯರ ಮನೆ ಮಾಂಬಾಡಿಯೆಂದರೆ ತೆಂಕುತಿಟ್ಟಿನ ಯಕ್ಷಗಾನದ ಗುರುಕುಲ ಇದ್ದ ಹಾಗೆ. ನನ್ನಜ್ಜ (ಅಂದರೆ ತಂದೆಯ ತಂದೆ)ಮಾಂಬಾಡಿ ನಾರಾಯಣ ಭಾಗವತ(೧೯೦೦-೧೯೯೦) ಸುಮಾರು ೧೯೬೦ರವರೆಗೆ ವಿವಿಧ ಯಕ್ಷಗಾನ ಮೇಳಗಳಲ್ಲಿ ಭಾಗವತರಾಗಿದ್ದವರು. ೭೦ರ ದಶಕದಲ್ಲೇ ರಾಜ್ಯೋತ್ಸವ ಪ್ರಶಸ್ತಿ ಅವರಿಗೆ ಬಂದಿತ್ತು.
ಆದರೇನು? ಕೇವಲ ಮುಕ್ಕಾಲು ಎಕ್ರೆ ಭೂಮಿ, ಒಂದು ಮನೆ, ಆಕಳು.
ಇವಿಷ್ಟು ಜೊತೆಗೆ ಮನೆಗೆ ಭಾಗವತಿಕೆ, ಚೆಂಡೆ, ಮದ್ದಳೆ ಕಲಿಯಲು ಬರುತ್ತಿದ್ದವರು. ರಿಸರ್ಚ್ ಮಾಡಲು ಬರುವ ವಿದ್ಯಾರ್ಥಿಗಳು. ಮತ್ತು ಅಪಾರ ಅಭಿಮಾನಿಗಳು.
ಇವು ಅಜ್ಜನ ಆಸ್ತಿ.
ಮನೆಗೆ ಬಂದವರನ್ನು ಯಾವ ಜಾತಿಯೆಂದು ಯಾರೂ ಕೇಳಿದವರಲ್ಲ. ಶ್ರೀಮಂತ, ಬಡವ ತಾರತಮ್ಯ ಮೊದಲೇ ಇಲ್ಲ. ಕೇವಲ ಫಲಾಪೇಕ್ಷೆ ಇಲ್ಲದೆ ವಿದ್ಯೆ ಕಲಿಸುವುದು ಅಜ್ಜನ ನೀತಿ.
ಕಡತೋಕ, ಪುತ್ತಿಗೆ, ಪದ್ಯಾಣ ಭಾಗವತರು ಅಜ್ಜನ ಬಳಿ ತಾಳ ಹಾಕಲು ಕಲಿತವರು. ಮಂಗಳೂರಿನಲ್ಲಿದ್ದ ನಾನು ರಜೆಯಲ್ಲಿ ಊರಿಗೆ ಹೋದಾಗಲೆಲ್ಲಾ ನನಗೆ ಕಾಣಸಿಗುತ್ತಿದ್ದದ್ದು ಚೆಂಡೆ ಮದ್ದಳೆ, ಭಾಗವತಿಕೆ.
ಇದೀಗ ಆ ಕೆಲಸವನ್ನು ನನ್ನ ಚಿಕ್ಕಪ್ಪ ಮುಂದುವರಿಸಿಕೊಂಡು ಹೋಗುತ್ತಿದ್ದಾರೆ. ಹಳೆಯ ತಲೆಮಾರಿನ ಕಲಾವಿದರು ಅಜ್ಜನ ಶಿಷ್ಯರಾದರೆ, ಹೊಸಬರಲ್ಲಿ ಹಲವರು ಚಿಕ್ಕಪ್ಪನ ಗರಡಿಯಲ್ಲಿ ಪಳಗಿದವರು.
**********
ಈಗ ನಮ್ಮೂರಿನ ಮನೆಗಳಲ್ಲಿ ಡಿಶ್ ಟಿ.ವಿ. ಬಂದಿದೆ. ಮೊಬ್ಬೈಲ್ ರೇಂಜ್ ಸಿಗುತ್ತಿದೆ. ಯುವಕರು ಬೆಂಗಳೂರಲ್ಲಿ ಸ್ಥಾಪಿತವಾಗಿದ್ದಾರೆ. ಎಲ್ಲಾ ಮುಂದುವರಿದ ಕರ್ನಾಟಕದ ಹಳ್ಳಿಗಳಂತೆ ನಮ್ಮ ಕರೋಪಾಡಿ ಆಧುನೀಕರಣಗೊಂಡಿದೆ.
***********
ಆದರೂ ಸಮಾಧಾನ ಎಂದರೆ ಇಡೀ ಗ್ರಾಮದ ಯಾವುದಾದರೂ ಒಂದು ಮನೆಯಲ್ಲಿ ದಿನಕ್ಕೊಂದು ಬಾರಿಯಾದರೂ ಚೆಂಡೆ ಪೆಟ್ಟು ಕೇಳಿಸುತ್ತದೆ. ಯಾವ ಕಲಾವಿದ ಇಂದು ಯಾವ ಮೇಳದಲ್ಲಿದ್ದಾನೆ ಎಂಬ ಚರ್ಚೆ ಇನ್ನೂ ನಡೆಯುತ್ತದೆ.
********
ಕಾಲ ಬದಲಾಗಿದೆ. ನಮ್ಮೂರಿನವರ ಮೂಡ್ ಬದಲಾಗಿಲ್ಲ. ಆಗುವುದೂ ಇಲ್ಲ. ಆತ ವಿಶ್ವದ ಯಾವ ಮೂಲೆಯಲ್ಲೇ ಇರಲಿ. ದೊಡ್ದ ಉದ್ಯೋಗದಲ್ಲಿರಲಿ, ಕರೋಪಾಡಿ ಗ್ರಾಮಕ್ಕೆ ಸಂಬಂಧಿಸಿದವನು ಹೌದೆಂದಾದರೆ..,
ಯಕ್ಷಗಾನಕ್ಕೆ ಕುತೂಹಲ ವ್ಯಕ್ತಪಡಿಸಿಯೇ ಸಿದ್ದ.
********
ಇದು ಕರೋಪಾಡಿಗರ ಕಲೆಯ ಪ್ರೀತಿ. ಕನ್ನಡವನ್ನೇ ಬಳಸುವ ಜಾನಪದ ಕಲೆ ಯಕ್ಷಗಾನ. ಹೀಗಾಗಿ ಯಕ್ಷಗಾನಪ್ರಿಯರೆಲ್ಲರೂ ಕನ್ನಡಪ್ರಿಯರು.
ಆದರೆ ಇಂದಿನ ಕಲಾವಿದರು ಯಕ್ಷಗಾನವನ್ನು ಉಳಿಸುತ್ತಿದ್ದಾರೆಯೆ? ಅಳಿದುಳಿದ ಪ್ರೀತಿಯನ್ನು ದ್ವೇಷಕ್ಕೆ ಮಾರ್ಪಡಿಸುತ್ತಿದ್ದಾರೆಯೆ?
ಯಕ್ಷಗಾನ ಬಲ್ಲವರು ಹೇಳಬೇಕು...
ಯಕ್ಷಗಾನಂ ಗೆಲ್ಗೆ!

(ಚಿತ್ರದಲ್ಲಿರುವವರು ನನ್ನ ಅಜ್ಜ ಮಾಂಬಾಡಿ ನಾರಾಯಣ ಭಾಗವತರು)