Thursday, July 23, 2009

ಉತ್ತರ ಇಲ್ಲದ ಪ್ರಶ್ನೆ ?



ಮತ್ತೊಮ್ಮೆ ಈ ವಿಷಯ ಪ್ರಸ್ತಾಪ ಮಾಡುತ್ತಿದ್ದೇನೆ ಅಂದುಕೊಳ್ಳಬೇಡಿ.
ನಮ್ಮ ಕರಾವಳಿ (ನಿಮ್ಮೂರಿನ ಅವಸ್ಥೆಯೂ ಹೀಗೆ ಇರಬಹುದು) ರಸ್ತೆಗಳ ಖಾಯಂ ಕತೆ ಇದು.
ಅದರಲ್ಲೂ ರಾಷ್ಟ್ರೀಯ ಹೆದ್ದಾರಿ ಎಂದರೆ ಕೇಳುವುದೇ ಬೇಡ.
ಸೆಕೆಂಡ್ ಸೆಕೆಂಡ್ ಲೆಕ್ಕ ಹಾಕುವ ಬಸ್ಸು, ಲಾರಿಗಳು ತಮಗೆ ಜಾಗ ಕೊಡದ ಇತರ ವಾಹನಗಳನ್ನು ಕ್ಷುಲ್ಲಕ ಪೀಡೆಗಳಂತೆ ಕೆಕ್ಕರಿಸಿ ದಾಟುತ್ತವೆ.
ಅದರ ಜೊತೆ ಅಲ್ಲಲ್ಲಿ ರಸ್ತೆ ಅಗೆಯುವ ಕಾಮಗಾರಿ.
ಹೀಗೆ ಹೈರಾಣಾಗಿರುವ ರಸ್ತೆಗಳು ಪ್ರತೀ ಮಳೆಗಾಲ ಜನರ ತಾಳ್ಮೆಯನ್ನು ಕೆಣಕುತ್ತವೆ.
ದ.ಕ.ಜಿಲ್ಲೆಗೆ ದಿನಕ್ಕೆ ಸಾವಿರಾರು ಯಮಸ್ವರೂಪಿ ಅದಿರು ಲಾರಿಗಳು ಪ್ರವೇಶಿಸುತ್ತವೆ. ಸಣ್ನ ಪುಟ್ಟ ಅಪಘಾತಗಳಿಗಂತೂ ಲೆಕ್ಕ ಬರೆಯುವವರೇ ಇಲ್ಲ ಎನ್ನುವಂತಾಗಿದೆ. ಕಳೆದ ವಾರ ದ.ಕ-ಉಡುಪಿ ಜಿಲ್ಲೆಯಲ್ಲಿ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದವರ ಸಂಖ್ಯೆ ಎರಡಂಕಿ ತಲುಪಿದೆ.
ಹೀಗೇಕೆ?
********
ವಾಹನದಟ್ಟಣೆ ಹೆಚ್ಹಾಗಿದೆಯೋ?
ನಿಯಮ ಪಾಲನೆ ಆಗುತ್ತಿಲ್ಲವೋ?
ಇದು
ಉತ್ತರ ಇಲ್ಲದ ಪ್ರಶ್ನೆಯೇ
ಅಥವಾ ಸಿಲ್ಲಿ ವಿಷಯವೇ

(ಚಿತ್ರದಲ್ಲಿ ಕಾಣುವುದು ಐದಾರು ತಿಂಗಳ ಹಿಂದೆ ನಾನು ಪ್ರಯಾಣಿಸುತ್ತಿದ್ದ ಕಾರಿನ ಮೇಲೆ ಇದ್ದಕ್ಕಿದ್ದಂತೆ ಮಣ್ಣು ಅಗೆಯುವ ಯಂತ್ರವೊಂದು ಮೇಲೇರಿ ಅಪಘಾತಕ್ಕೀಡಾಗಿದ್ದು)

Friday, July 17, 2009

....................

ಮ್ಮೆಯೂ ತಿರುಗಿ ನೋಡದ ಜನರೀಗ ಮತ್ತೆ ಟೊಪ್ಪಿ ಹಾಕಿದ್ದಾರೆ.
ಇದುವರೆಗೆ ಬೆಂಗಳೂರಿಂದ ಮಂಗಳೂರಿನವರೆಗೆ ಮಾತ್ರ ಓಡುವ ರೈಲು ಇನ್ನು ಕೇರಳದ ಕಣ್ಣೊರಿಗೆ ವಿಸ್ತರಣೆಯಾಗಲಿದೆ.
ಇದಕ್ಕೆ ಕೇರಳದವರ ಒತಡವೇ ಕಾರಣವಂತೆ.
ಇದೊಂಥರಾ ಸ್ವಂತ ಮನೆ ಬಿಟ್ಟು ಬಾಡಿಗೆ ಮನೆಗೆ ಹೋಗುವಂಥ ಪರಿಸ್ಥಿತಿ.
ಕಣ್ಣೂರಿಂದ ರೈಲು ತುಂಬ ಮಲಯಾಳಿಗರು ಮಂಗಳೂರಿಗೆ ಬಂದು ನಮ್ಮನ್ನು ಹತ್ತಿಸಿಕೊಳ್ಳುತ್ತಾರೆ. ನಮಗೆ ಅವರು ಜಾಗ ಕೊಡುತ್ತಾರೆ.
ಅದಕ್ಕೆ ಅವರನ್ನು ದೂರಿ ಪ್ರಯೋಜನವಿಲ್ಲ.
ಮೊದಲೇ ದಕ್ಷಿಣ ಕನ್ನಡವೆಂದರೆ ಕರ್ನಾಟಕದಲ್ಲಿ ತಾತ್ಸರಕ್ಕೆ ಒಳಗಾದ ಊರು. ‘ಏನ್ರೀ ನಿಮ್ಮ ಮಂಗ್ಳೂರು. ಅದೊಂದು ಊರಾ. ಸೆಖೆ, ಮಳೆ, ಥೂ..’ ಎಂದು ಇಲ್ಲಿಗೆ ನೌಕರಿ ಮಾಡಲು ಬರುವ ಮೇಷ್ಟ್ರುಗಳು, ಅಧಿಕಾರಿಗಳು, ಬಸ್ ಕಂಡಕ್ಟರ್ ಗಳು, ಪತ್ರಕರ್ತರು ಇತ್ಯಾದಿ ಜನರು ದೂರುವುದನ್ನು ದ.ಕ.ಜನ ಕೇಳಿ ಸುಮ್ಮನೆ ನಕ್ಕುಬಿಡುವುದು ಮಾಮೂಲು.
ಈಗ ‘ನಿಮ್ಮ ಎಂಪಿಗಳು’ ಪ್ರಯೋಜನ ಇಲ್ಲ. ಕೇರಳದವರನ್ನು ನೋಡಿ ಕಲಿಯಲಿ ಎಂಬ ಸಲಹೆ ಈಗ ನಮ್ಮ ಬಳಿ ಬರ್ತಿದೆ.
ಇಸ್ಟೆಲ್ಲಾ ಆದರೂ ಹೆಣಕ್ಕೆ ಸಿಂಗಾರ ಮಾಡಿದಂತೆ ಕನಡಿಗರಿಗೆ ಯಾವ ರೀತಿಯಲ್ಲೂ ಉಪಕಾರ ಇಲ್ಲದ ಮಂಗಳೂರು ಅತ್ತಾವರದಲ್ಲಿರುವ ರೈಲ್ವೇ ನಿಲ್ದಾಣವನ್ನು ವಿಶ್ವದರ್ಜೆಗೇರಿಸುತ್ತಾರಂತೆ.
ಇನ್ನು ಏನೇನಾಗಲಿದೆಯೋ?

Sunday, July 5, 2009

ನಿಮ್ಮೂರಲ್ಲೂ ಇಂಥದ್ದು ಇದೆಯೋ?




ಮಳೆಯ ದೊಡ್ಡ ದೊಡ್ಡ ಹನಿ ಮತ್ತು ದೊಡ್ದ ದೊಡ್ಡ ಹೊಂಡ.
ಕರಾವಳಿಯ ಯಾವ ರಸ್ತೆಯನ್ನು ನೋಡಿದರೂ ಇದೇ ಅವಸ್ಥೆ.
ಅದರಲ್ಲೂ ಅದಿರು ಲಾರಿ ಎಲ್ಲೆಲ್ಲಿ ಓಡಾಡುತ್ತವೆಯೋ ಅಲ್ಲಲ್ಲಿ ಇದು ಕಾಮನ್ ಎನ್ನುವಂಥ ಪರಿಸ್ಥಿತಿ.
ಯಾರೂ ಸೊಲ್ಲೆತ್ತುವಂತಿಲ್ಲ! ಒಂದು ವೇಳೆ ಮಾತನಾಡಿದರೂ ಪ್ರಯೋಜನ ಇಲ್ಲ.
ಏಕೆಂದರೆ ಅದಿರು ಲಾರಿಗಳನ್ನು ಅದುರಿಸಿದರೆ ಇಂದಿನ ರಾಜಕಾರಣವೇ ಉದುರಿ ಹೋಗುತ್ತದೆ.
ಶಿರಾಡಿ ಘಾಟಿಯನ್ನು ಲಗಾಡಿ ತೆಗೆದದ್ದೇ ಈ ಅತಿಕಾಯ ಅದಿರು ಲಾರಿಗಳು!
ಇವುಗಳ ಜತೆಯಲ್ಲಿ ಇತರ ದೊಡ್ಡ ದೊಡ್ದ ಲಾರಿಗಳು ಸಂಚಾರಿ ನಿಯಮ ಉಲ್ಲಂಘಿಸಿ ರಸ್ತೆಯನ್ನೇ ಆಕ್ರಮಿಸುತ್ತವೆ. ಪುರುಸೊತ್ತಿದ್ದಾಗ ಓಡುತ್ತವೆ. ಇಲ್ಲವಾದರೆ ಅಲ್ಲೇ ರಸ್ತೆಯ ಬದಿಯಲ್ಲಿ ಟಿಕಾಣಿ ಹೂಡುತ್ತವೆ.ಪಾರ್ಕ್ ಲೈಟ್ ಇಲ್ಲದೆ.
ಹೀಗೆ ನಿಂತಿದ್ದ ಲಾರಿಗೆ ಬಡಿದು ಅದೆಷ್ಟೋ ಜೀವಗಳು ಬಲಿಯಾದ ಇತಿಹಾಸವೂ ಉಂಟು.
ಈಗ ಮಂಗಳೂರು-ಬೆಂಗಳೂರು ಸಾಗುವ ರಾಷ್ಟ್ರೀಯ ಹೆದ್ದಾರಿ 48 ಅತಿಭಾರದ ಲಾರಿಗಳಿಂದ ನಲುಗಿ ಹೋಗಿದೆ.
ಎಂಥ ಗಟ್ಟಿ ಡಾಮರೂ ಈ ಅತಿಕಾಯ ವಾಹನಗಳ ಅಡಿಯಲ್ಲಿ ಪುಡಿಯಾಗುತ್ತಾ ಹೋಗುತ್ತದೆ.
ಚಿತ್ರದಲ್ಲಿರುವುದು ಬಿ.ಸಿ.ರೋಡ್ (ಮಂಗಳೂರಿನಿಂದ 25 ಕಿ.ಮೀ. ದೂರ)ಮೂಲಕ ಹಾದು ಹೋಗುವ ಹೆದ್ದಾರಿಯ ಆಳೆತ್ತರದ ಹೊಂಡ!
ಮಳೆಗಾಲವೆಲ್ಲಾ ಹೀಗೆ ಕಳೆಯಬೇಕಾದೀತೇನೋ.
ನಿಮ್ಮೂರಲ್ಲೂ ಇಂಥದ್ದು ಇದೆಯೋ?
ಅದು ಕೇರಳವಂತೂ ಖಂಡಿತ ಆಗಿರಲಿಕ್ಕಿಲ್ಲ.
ಅಲ್ವ?

Monday, June 8, 2009

ಕನವರಿಕೆ 4

ಕಡಲ ಭೋರ್ಗರೆತ ಕವಿಕಿವಿಗಿಂಪು
ಬೆಸ್ತರಿಗೆ ಘೋರ ಕಿರಿಕಿರಿ
ಹಿರಿಹಿರಿ ಹಿಗ್ಗಿವೆ ಮತ್ಸ್ಯಸಂಕುಲ
ಉಕ್ಕೇರಿದ ನದಿಯಲ್ಲಿ ಮೀನುರಾಶಿ
ಹಿಡಿಯಲು ಎಂಟೆದೆ ಬೇಕು
ತೇಲಿಬರುವುದೇ, ತೆಂಗಿನಕಾಯಿ
ಹುಡುಕಹೊರಟರೆ ಪ್ರಾಣಾಪಾಯ
ಹೊಟ್ತೆಪಾಡು, ದಿನಕೂಲಿಯೂ ಮಾಯ
ರಾಜದರ್ಬಾರಿಗೆ ಪರ್ಸೆಂಟೇಜ್ ಪರಿಹಾರ
ಹುಯ್ಯೋ ಮಳೆರಾಯ ಯಾರಿಗುಂಟು
ಯಾರಿಗಿಲ್ಲ ಕೆಸರು, ಮುಳುಗುವ ಆಟ?
ಮಳೆದರ್ಬಾರು!

Tuesday, May 26, 2009

ಕನವರಿಕೆ - 3

ವ್ಯತ್ಯಾಸ

ಆಟಗಾರ
ವಿಜಯವನ್ನರಸುವುದು
ನದಿ
ಸಮುದ್ರವನ್ನರಸಿದಂತಲ್ಲ...
ವ್ಯಾಪಾರಿ
ಗಿರಾಕಿಯನ್ನರಸುವುದು
ಹುಡುಗ ಹುಡುಗಿಯನ್ನರಸಿದಂತಲ್ಲ...
ನಿರುದ್ಯೋಗಿ
ಕೆಲಸವರಸುವುದು
ದುಂಬಿ
ಹೂವನ್ನರಸಿದಂತಲ್ಲ
**********

ಚರಂಡಿ

ಹಸಿದ ವ್ಯಕ್ತಿ
ಓಲಾಡುತ್ತಾ ಬೀಳುವ ಜಾಗ
ಕುಡಿದ ವ್ಯಕ್ತಿ
ತೂರಾಡುತ್ತಾ ಮಲಗುವ ಜಾಗ
***********

ಪರಿಸರ

ಈಗ
ರಮಣೀಯ ಪ್ರಕೃತಿ,
ಹಸಿರು ವನ, ಬೆಟ್ಟ
ಪ್ರಶಾಂತ ಪರಿಸರ
ಬೇಕೆಂದರೆ
ಸಿಗುವುದು ಕಲಾವಿದನ
ಕುಂಚದಲ್ಲಿ ಮಾತ್ರ
(ಇವು ನನ್ನ ಕಾಲೇಜು ದಿನಗಳ ಕನವರಿಕೆಗಳು)

Monday, May 18, 2009

ಯಾಕೆ ಹೀಗೆ

ಚುನಾವಣೆ ರಿಸಲ್ಟ್ ಬಳಿಕ ಗೊಂದಲ ಮೂಡಿದ್ದು ನನ್ನೂರು ಮಂಗಳೂರಿನ ಆಯ್ಕೆ ಕುರಿತ ಕಮೆಂಟ್ ಗಳು.
‘ಮಂಗಳೂರಲ್ಲಿ ಕೋಮುವಾದಿಗಳ ವಿಜಯ’
‘ಇನ್ನು ಮಂಗಳೂರಿನಲ್ಲಿ ಜನಸಾಮಾನ್ಯರಿಗೆ ನಡೆದಾಡಲೂ ಸಾಧ್ಯವಿಲ್ಲ, ಇಡೀ ದ.ಕ. ಕ್ರೂರ ಜನರ, ಅನಾಗರೀಕರ ನಾಡಾಗಿರತ್ತೆ, ತಾಲಿಬಾನಿಗಳ ಬೀಡಾಗುತ್ತೆ, ಅದರಲ್ಲೂ ಮಹಿಳೆಯರಿಗೆ ಕಷ್ಟ!..’
ಸಾಮಾನ್ಯ ರಾಜಕೀಯ ಹೇಳಿಕೆಗಳಾಗಿದ್ದರೆ ಇದನ್ನು ತಳ್ಳಿ ಹಾಕಬಹುದು. ನೆನಪಿಡಿ, ಸೋತ ಜನಾರ್ಧನ ಪೂಜಾರಿಯವರೂ ವಿನಮ್ರವಾಗಿ ಸೋಲೊಪ್ಪಿಕೊಂಡಿದಾರೆ. ಆದರೆ ಇಂಥದ್ದೆಲ್ಲಾ ಮಂಗಳೂರಿನ ಹೊರಗಿರುವವರು, ಆದರೆ ಬುಧ್ಹಿಜೀವಿಗಳೆನಿಸಿಕೊಂಡವರು ವಿವಿಧ ಮಾಧ್ಯಮಗಳನ್ನು ಬಳಸುತ್ತಾ ಪ್ರಚಾರ ಮಾಡುತ್ತಿದ್ದಾರೆ. ಇದು ನನ್ನಂತೆ ಹಲವರನ್ನು ಗೊಂದಲಕ್ಕೀಡುಮಾಡಿದೆ.
ಹಾಗಾದರೆ ನಳಿನ್ ಗೆ ಓಟು ಹಾಕಿದ ಸುಮಾರು ೪,೯೯,೦೦೦ ಮಂದಿಯೆಲ್ಲಾ ಅತಿಕ್ರೂರಿ ಕೋಮುವಾದಿಗಳೇ, ತಾಲಿಬಾನಿಗಳೇ ? ಜನರು ಬುದ್ದಿಗೇಡಿಗಳೇ?
ಇಂಥ ಹೇಳಿಕೆಗಳನ್ನು ನೀಡುವ ಉದ್ದೇಶವೇನು? ಜನರ ತೀರ್ಮಾನಕ್ಕೆ ಹಾಗೂ ಜನರ ಭಾವನೆಗಳಿಗೆ ಇದು ಘಾಸಿ ಮಾಡಿದಂತಾಗುವುದಿಲ್ಲವೇ? ಆತ ಬಿಜೆಪಿ ಇರಲಿ, ಕಾಂಗ್ರೆಸ್ ಇರಲಿ ಗೆದ್ದವರೆಲ್ಲರೂ ಜನರ ಆಯ್ಕೆಗಳೇ ಅಲ್ಲವೇ..
ತಿಳಿದವರು ಸ್ಪಷ್ಟಪಡಿಸಬೇಕು.
( ಮೊದಲೇ ಸ್ಪಷ್ಟಪಡಿಸುತ್ತಿದ್ದೇನೆ. ಯಾವುದೇ ಪೂರ್ವಾಗ್ರಹವಿಲ್ಲದೆ ಬರೆಯುತ್ತಿದ್ದೇನೆ. )

Thursday, May 14, 2009

ಕನವರಿಕೆ ೨




ಹೌದಲ್ಲ! ನಾವೀಗ ಗಗನಚುಂಬಿಸಲು ಹೊರಟಿದ್ದೇವೆ
ಗಮ್ಯವೆತ್ತ ಗಮನವೆತ್ತ? ತಿಳಿದಿದೆಯಾ
ಬೆಂಕಿಯೂ ಕೆನ್ನಾಲಿಗೆ ಚಾಚಿ ಹೊರಟಿದೆ ನಮ್ಮೊಂದಿಗೆ
ಅಗಾಧ ಮರಳು, ನೀರ ರಾಶಿ ಇದ್ದರೂ ನಂದಿಸಲಿಲ್ಲವಲ್ಲ
ಯಾರಿಗೂ ಬೇಡ ನಮ್ಮೊಳಗೆ ಸ್ನೇಹದ ಸಹನೆಯೇ ಇಲ್ಲ
ಒಬ್ಬರಿಗಿಂತ ಒಬ್ಬರು ಹೊರಟಿದ್ದೇವೆ ಗಗನಚುಂಬಿಸಲು
ತ್ವೇಷಮಯ ಜಗಜೀವನದಲ್ಲಿ ಎಲ್ಲವೂ ಲೆಕ್ಕಾಚಾರ
ಎಲ್ಲಿದೆ ಸಂಬಂಧದ ಸಹಕಾರ?
ಉಗುಳಿದರೆ ಬೆಂಕಿ, ಕಾರುವುದೂ ವಿಷವೇ
ಜಗತ್ತು ಕಿರಿದಾದಂತೆ ಮಾನವತೆ ಸುಟ್ಟುಹೋಗಿದೆ
ನಂದಿಸಲು ನಾವೆಲ್ಲಿ?
ನಾವೀಗ ಗಗನಚುಂಬಿಸಲು ಹೊರಟಿದ್ದೇವೆ