Sunday, February 1, 2009

ಪಾಪಿ ದುನಿಯಾ..!

ಜನವರಿ ೨೫, ಭಾನುವಾರ.
ರಾತ್ರಿ ೨.೪೫ರ ಸಮಯ.
ಸ್ಥಳ: ಪಡೀಲ್ ಸಮೀಪದ ರೈಲ್ವೇ ಮೇಲ್ಸೇತುವೆಯ ಅಡಿ ರಾ.ಹೆ.೪೮.
ಅಲ್ಲೇ ನಾನು ಪ್ರಯಾಣಿಸುತ್ತಿದ್ದ ಕಾರಿಗೆ ಹೆದ್ದಾರಿ ಕಾಮಗರಿ ನಡೆಸುತ್ತಿದ್ದ ಹಿಟಾಚಿ ಯಂತ್ರದ ಕೈ ಅಪ್ಪಳಿಸಿದ್ದು.
ಕಾರಿನ ಮುಂಭಾಗದ ಗಾಜು ಹುಡಿಯಾಗಿತ್ತು. ಮುಂದೆ ಕುಳಿತಿದ್ದ ಚಾಲಕ, ನಾನು ಬದುಕಿದ್ದೇ ಒಂದು ಪವಾಡ...
ಇರಲಿ ಇದು ಮಾಮೂಲಿ ಸಂಗತಿ. ಇಂಥದ್ದೆಷ್ಟೋ ನಡೆಯುತ್ತವೆ.
**********
ಕುಂಟುತ್ತಾ ಸಾಗುತ್ತಿರುವ ಹೆದ್ದಾರಿ ಕಾಮಗಾರಿ, ಅತಿಭಾರದ ಅದಿರುಲಾರಿ ಸಂಚಾರ, ನೋಡಿಯೂ ನೋಡದಂತಿರುವ ಆಡಳಿತ, ಈ ಕುರಿತು ಸ್ಥಳೀಯ ಪತ್ರಿಕೆಗಳು ಬರೆದರೂ ಪ್ರಯೋಜನ ಆಗಿರಲಿಲ್ಲ..ಹೀಗಾಗಿ ನ್ಯಾಷನಲ್ ಚಾನಲ್ ನೋಡಿದೊಡನೇ ಛೇ..ನಮ್ಮ ಹೆದ್ದಾರಿಯ ಬಗ್ಗೆ, ಹಗಲು ರೈಲು ಓಡಾಟದ ಬಗ್ಗೆ ಬಿತ್ತರಿಸಲಿ ಎಂದು ಹಾರೈಸುತ್ತಿದ್ದೆ. ಮೊನ್ನೆ ಅಪಘಾತ ಆದಾಗಲೂ ಹಾಗೇ ಅಂದುಕೊಂಡೆ.
**************
ಮರುದಿನ ಸೋಮವಾರ ಮತ್ತೆ ಕೆಟ್ಟ ರಸ್ತೆಯಲ್ಲಿ ಮಧ್ಯಾಹ್ನ ಮಂಗಳೂರಿನತ್ತ ಬರುತ್ತಿದ್ದೆ. ಉದ್ದುದ್ದದ ಟ್ರಾಫಿಕ್ ಜಾಂ.. ಪ್ರಯಾಣಿಕರೆಲ್ಲರೂ ಹಿಡಿಶಾಪ ಹಾಕುತ್ತಿದ್ದರು...ಹಾಗೂ ಹೀಗೂ ಪಂಪ್ ವೆಲ್ ಬಳಿ ಬಂದಾಗ ಬುರ್ರನೆ ಟಿ.ವಿ(ನ್ಯಾಶನಲ್). ವ್ಯಾನೊಂದು ಪಾಸಾಯಿತು. ಅಬ್ಬ.. ಇನ್ನು ಮಂಗಳೂರಿಗರ ಸಮಸ್ಯೆ ಪರಿಹಾರ ಸ್ವಲ್ಪ ಮಟ್ಟಿಗಾದರೂ ದೆಹಲಿಮಟ್ಟಕ್ಕೆ ಹೋಗಬಹುದು ಅಂದುಕೊಂಡೆ.
ಆಗ ಸಮಯ ೧೨.೩೦..ಮಟ ಮಟ ಮಧ್ಯಾಹ್ನ..ಜನವರಿ ೨೬. ಮಂಗಳೂರು ಎಂದಿನಂತೇ ಇತ್ತು. ಮಹಿಳೆಯರು, ಮಕ್ಕಳು ನಿರ್ಭಯವಾಗಿ ನಗುನಗುತ್ತಾ ಪೇಟೆಸಂಚಾರ ಮಾಡುತ್ತಿದ್ದರು. ...
ನಮ್ಮ ಕೆ.ಎಸ್.ರಾವ್ ರಸ್ತೆಯಲ್ಲಿ ಎಂದಿಗಿಂತ ಹೆಚ್ಹಿನ ಜನ..ರಜೆ ಅಲ್ವಾ?
********
ಟಿ.ವಿ.ಯಲ್ಲಿ ನ್ಯಾಶನಲ್ ಚಾನೆಲ್ ನಲ್ಲಿ ಭಾರೀ ಸುದ್ದಿ ಬಿತ್ತರಗೊಳ್ಳುತ್ತಿತ್ತು. ಇಡೀ ಮಂಗಳೂರು ಭಯಭೀತವಾಗಿದೆ..ಹಾಗೆ, ಹೀಗೆ ಎಂದು..ಆ ಹೊತ್ತಿನ ಮಟ್ಟಿಗೆ ಅದು ಸುಳ್ಳೂ ಆಗಿತ್ತು...ಕೂಡಲೇ ಹೇಳಿದೆ ಏನು ಮಾರಾಯ್ರೆ, ಜ್ವಲಂತ ಸಮಸ್ಯೆಗಳು ಹಲವಾರಿವೆ. ಅವಕ್ಕೆಲ್ಲ ಈ ಟಿ.ವಿ. ಚಾನೆಲ್ ಗಳು ಮಂಗಳೂರಿಗೆ ಬರುವುದಿಲ್ಲ. ಈ ಸುದ್ದಿಗಿಂತ ಇನ್ನೂ ದೊಡ್ದ ಸುದ್ದಿ ಬೇಕಾದಸ್ಟಿದೆ ಮಾರಾಯ್ರೇ?
ತಕ್ಷಣ ಒಬ್ಬ ಉದ್ವೇಗದಿಂದ ಹೇಳಿದ ಹಾಗಾದರೆ ಹೆಣ್ಣು ಮಕ್ಕಳಿಗೆ ಹೊಡೆದದ್ದು ನಿಮಗೇನೂ ಅಲ್ವ?
************
ಹೆಣ್ಣು ಮಕ್ಕಳಿಗೆ ಹೊಡೆದದ್ದು ತಪ್ಪು. ಒಪ್ಪಿಕೊಳ್ಳೋಣ. ಅದು ಶನಿವಾರ ೨೪, ಜನವರಿಯಂದು ನಡೆದ ಘಟನೆ. ಅದರ ಬಗ್ಗೆ ಬೇಕಾದ ಚರ್ಚೆ ನಡೆದಿವೆ. ಆದರೆ ಪ್ರಾಣವನ್ನೇ ತೆಗೆಯುವಂಥ ಹೆದ್ದಾರಿ ಅವ್ಯವಸ್ಥೆಯೂ ಸಮಸ್ಯೆಯೇ ಅಲ್ಲವೇ..
********
ಈ ಗೊಂದಲ ನನ್ನ ತಲೆ ಹೊಕ್ಕಿತು. ಬಿಡಿ..ನಾನೊಬ್ಬ ಸಾಮಾನ್ಯ ಮನುಷ್ಯ. ಸತ್ತರೆಷ್ಟು, ಬಿಟ್ಟರೆಷ್ಟು? ಪಾಪ ಪಬ್ಬಿಗೆ ಹೋಗಿ ಕುಣಿದು ಕುಪ್ಪಳಿಸುವವರಿಗಾಗಿ, ಆಮಲು ಪದಾರ್ಥ ಸೇವಿಸಿ ರಾತ್ರಿ ಅಲ್ಲಲ್ಲಿ ಬಿದ್ದುಕೊಳ್ಳುವವರಿಗಾಗಿ ಅಲ್ಲವೇ ಸಪೋರ್ಟ್?
ಏನಂತೀರಿ?

Thursday, January 15, 2009

ಕುಡ್ಲವೆಂಬ ಬಲೂನು!

ಹಾಗೇ ಸುಮ್ಮನೆ ಹಿಂದಿರುಗಿ ನೋಡಿ!
ಕುಡ್ಲ ಹೇಗೆ ಕಾಣುತ್ತದೆ?
ತುಳು ಭಾಷೆಯಲ್ಲಿ ಕುಡ್ಲ, ಮಲಯಾಳಿಗಳಿಗೆ ಮಂಗಳಾಪುರ, ನಮಗೆಲ್ಲಾ ಮಂಗಳೂರು.
ಕರಾವಳಿಯ ಈ ಬಂದರು ಪಟ್ಟಣ ದಿಡೀರನೆ ಧೃಡಕಾಯವಾಗುತ್ತಿದೆ.
ಹುಟ್ಟಿದಾಗಿನಿಂದ ಇಲ್ಲಿಯವರೆಗೂ ಊರು ಬಿಡದೆ ಇಲ್ಲಿಯೇ ವಾಸಿಸುವ ನನ್ನಂಥ ಸಾಮಾನ್ಯರಿಗೂ ಅರ್ಥವಾಗದಷ್ಟು ಕುಡ್ಲ ಮಾರ್ಪಾಡಾಗಿದೆ. ಇಪ್ಪತ್ತು ವರ್ಷಗಳ ಹಿಂದೆ ಎಂಟನೇ ಕ್ಲಾಸಿಗೆ ಬೋಂದೇಲಿನಿಂದ ೧೯ ನಂಬ್ರದ ಬಸ್ಸಿನಲ್ಲಿ ಲಾಲ್ ಬಾಗ್ ಹೋಗುವಾಗ ಇದ್ದ ಸ್ಥಿತಿ ಈಗಿಲ್ಲ ಅನ್ನುವುದಾದರೆ ಅದು ಸಹಜ. ಆದರೆ ಮಿತಿಮೀರಿದ ವೇಗ ಮಾತ್ರ ಅಪಾಯಕ್ಕೆ ಆಹ್ವಾನ!.
ನಮ್ಮ ಕುಡ್ಲದಲ್ಲಿರುವ ಕೆಲವು ಶಾಪಿಂಗ್ ಕಾಂಪ್ಲೆಕ್ಸ್ ಗಳ ಒಳಹೊಕ್ಕು ನೋಡಿ. ಚಕ್ರವ್ಯೂಹದಂತಿರುವ ಕಟ್ಟಡಗಳೇ ಒಂದು ನಿಗೂಡ.ಅಲ್ಲೆಲ್ಲಾ ಎಂಥ ವಹಿವಾಟು ನಡೆಯುತ್ತಿದೆ? ಲಾಭ? ಕೇಳಿದರೆ ಲಾಸ್ ಮಾರ್ರೆ ಅನ್ನುತ್ತಾರೆ. ಹಾಗಾದರೆ ಒಂದೊಂದು ಅಂಗಡಿಯಲ್ಲಿ ಒಬ್ಬ ಹುಡುಗ, ಒಬ್ಬ ಹುಡುಗಿಯನ್ನಿಟ್ಟು ಮಾಲಕ ಮಾಡುವ ಕೆಲಸ ಏನು?
ಮುಂಬಯಿಯಲ್ಲಿ ಹೊಸ ಫ್ಯಾಷನ್ ಬಂದ ಕೂಡಲೇ ಮಂಗಳೂರಿನಲ್ಲಿ ಅದು ಕಾಣಿಸುತ್ತದೆ. ಅಲ್ಲಿ ಹೊಸ ಡಾನ್ ಹುಟ್ಟಿದರೆ ಇಲ್ಲಿ ಹೊಸ ಪೆಟ್ಟಿಸ್ಟ್(ಪೆಟ್ಟು ಮಾಡಲು ಗೊತ್ತಿದ್ದವ) ಹುಟ್ತುತ್ತಾನೆ. ಹೀಗೆ ನಮ್ಮ ಮಂಗಳೂರು ಮತ್ತು ಮುಂಬಯಿಯ ನಂಟು ಅಮೋಘ.
ಸುನಿಲ್ ಶೆಟ್ಟಿ ಮಂಗಳೂರಲ್ಲೇ ಎರಡೆರಡು ದೊಡ್ಡ ಅಂಗಡಿ ತೆರೆಯುವ ಸಾಹಸ ಮಾಡಿದ್ದಾನೆ. ದುಬಾಇ ಸಹಿತ ದೊಡ್ಡ ದೊಡ್ಡ ಕುಳಗಳು ಇಲ್ಲಿ ಭಾರೀ ಕಟ್ಟಡ ಕಟ್ಟಿಸುತ್ತಿದ್ದಾರೆ.
ಅದೆಲ್ಲಾ ಸರಿ, ಇದರಿಂದ ಯಾರಿಗೆ ಲಾಭ?
ಫುಟ್ ಪಾತ್ ಇಲ್ಲದ ರಸ್ತೆಗಳು, ಕ್ಲೀನ್ ಇಲ್ಲದ ಬಸ್ ನಿಲ್ದಾಣ, ಪ್ರಯೋಜನವಿಲ್ಲದ ನೇತಾರರ ನಡುವೆಯೂ ಕುಡ್ಲದ ಲ್ಯಾಂಡ್ ವ್ಯಾಲ್ಯೂ ಮಿತಿಮೀರಿ ಹೆಚ್ಹಿದೆ. ಚರ್ಚೆ ಮಾಡಲು ಹೋದಗೆ ‘ಪೆಟ್ಟಿಗೆ’ ಬರುತ್ತಾರೆ. ಹೀಗಾಗಿ ಬೆಂಗಳೂರಿಗೇನೂ ಕಮ್ಮಿ ಇಲ್ಲ.
ಇವೆಲ್ಲದರ ನಡುವೆ ಅದೇ ಕದ್ರಿ ಪಾರ್ಕ್, ಅದೇ ಸುಲ್ತಾನ್ ಬತ್ತೇರಿ, ಅದೇ ಪಣಂಬೂರು ಬೀಚ್ ಕೈಬೀಸಿ ಕರೆಯುತ್ತಿದೆ.
--ಇವಿಷ್ಟು ಸದ್ಯಕ್ಕೆ ಸಾಕು ಬರೆಯುವುದು ಬೇಕಾದಷ್ಟು ಇದೆ. ಅದಕ್ಕೂ ಮೊದಲು ನೀವೇನು ಕಂಡಿದ್ದೀರಿ ಹೇಳಿ.

Friday, January 2, 2009

ಬಲ್ಲಿರೇನಯ್ಯ!



ಸುಮಾರು ೨೫ ವರ್ಷಗಳೇ ಕಳೆದು ಹೋದವು!
ಪ್ರಾಥಮಿಕ ಶಾಲೆಗೆ ಹೋಗುತ್ತಿದ್ದ ಸಮಯವದು. ನಮ್ಮೂರು ಕರೋಪಾಡಿ ಗ್ರಾಮ. ಅದಕ್ಕೆ ತಾಗಿಕೊಂಡಿರುವುದು ಕೇರಳ. ಆದರೆ ಅಲ್ಲಿ ಮಲಯಾಳಿಗಳು ಕಡಮೆ. ಕರೋಪಾಡಿಗೆ ಒಳಪಡುವ ಮಿತ್ತನಡ್ಕ, ಪದ್ಯಾಣ, ಮಾಂಬಾಡಿ, ಮುಗುಳಿ ಪ್ರದೇಶಗಳನ್ನು ದಾಟಿ ಬಾಯಾರು, ತಲೆಂಗಳ ಸಂಪರ್ಕಿಸಲು ಗುಡ್ಡೆಯ ದಾರಿ! ಇನ್ನೊಂದು ಗುಡ್ಡೆ ದಾಟಿದರೆ ಅಳಿಕೆ, ಅಡ್ಯನಡ್ಕ...ಹೀಗೆ ಊರೂರುಗಳನ್ನು ಬೆಸೆಯಲು ಬೆಟ್ಟ ಗುಡ್ಡಗಳು. ಜೊತೆಗೆ ಯಕ್ಷಗಾನ.
ನಮ್ಮೂರೇ ಹಾಗಿತ್ತು. ಸಂಜೆಯಾದರೆ ರೇಡಿಯೋ, ವಿಟ್ಲದಿಂದ ಯಾರಾದರೂ ತರುತಿದ್ದ ಪೇಪರ್. ಅದರಲ್ಲಿ
ಎಲ್ಲೆಲ್ಲಿ ಯಾವ್ಯಾವ ಮೇಳಗಳ ಆಟ ಇದೆ? ಎಂದು ನೋಡುವುದು. ಸಾಧ್ಯವಾದರೆ ಅಲ್ಲಿಗೆ ಹೋಗುವಲ್ಲಿವರೆಗೆ(ದೂರದಲ್ಲಿದ್ದರೂ ಸರಿ) ಊರ ಮಂದಿಯ ಅಭಿಮಾನ!. ರಜೆ ಕಳೆಯಲು ಊರಿಗೆ ಬಂದ ನಾನೂ ಅಷ್ಟೇ. ಮಿತ್ತನಡ್ಕದಲ್ಲಿ ಬಯಲಾಟ ಇದೆಯೆಂದಾದರೆ ಆಟ ಪ್ರಾರಂಭವಾಗುವ ಮುನ್ನ ಮನೆಯಲ್ಲೇ ಇಪ್ಪತ್ತು, ಮೂವತ್ತು ಸುತ್ತು ಲಾಗ ಹಾಕುತ್ತಾ ಆಟದ ಮೂಡ್ ಗೆ ಬರುವುದು. ಇರುಳಿಡೀ ಚುರುಮುರಿ, ಐಸ್ ಕ್ಯಾಂಡಿ ತಿನ್ನುತ್ತಾ ಆಟದ ಗೌಜಿ ನೋಡುವುದು.!
*************
ಅಂದ ಹಾಗೆ ನನ್ನ ಹಿರಿಯರ ಕುರಿತು ಒಂದಿಷ್ಟು.
ನನ್ನ ಹಿರಿಯರ ಮನೆ ಮಾಂಬಾಡಿಯೆಂದರೆ ತೆಂಕುತಿಟ್ಟಿನ ಯಕ್ಷಗಾನದ ಗುರುಕುಲ ಇದ್ದ ಹಾಗೆ. ನನ್ನಜ್ಜ (ಅಂದರೆ ತಂದೆಯ ತಂದೆ)ಮಾಂಬಾಡಿ ನಾರಾಯಣ ಭಾಗವತ(೧೯೦೦-೧೯೯೦) ಸುಮಾರು ೧೯೬೦ರವರೆಗೆ ವಿವಿಧ ಯಕ್ಷಗಾನ ಮೇಳಗಳಲ್ಲಿ ಭಾಗವತರಾಗಿದ್ದವರು. ೭೦ರ ದಶಕದಲ್ಲೇ ರಾಜ್ಯೋತ್ಸವ ಪ್ರಶಸ್ತಿ ಅವರಿಗೆ ಬಂದಿತ್ತು.
ಆದರೇನು? ಕೇವಲ ಮುಕ್ಕಾಲು ಎಕ್ರೆ ಭೂಮಿ, ಒಂದು ಮನೆ, ಆಕಳು.
ಇವಿಷ್ಟು ಜೊತೆಗೆ ಮನೆಗೆ ಭಾಗವತಿಕೆ, ಚೆಂಡೆ, ಮದ್ದಳೆ ಕಲಿಯಲು ಬರುತ್ತಿದ್ದವರು. ರಿಸರ್ಚ್ ಮಾಡಲು ಬರುವ ವಿದ್ಯಾರ್ಥಿಗಳು. ಮತ್ತು ಅಪಾರ ಅಭಿಮಾನಿಗಳು.
ಇವು ಅಜ್ಜನ ಆಸ್ತಿ.
ಮನೆಗೆ ಬಂದವರನ್ನು ಯಾವ ಜಾತಿಯೆಂದು ಯಾರೂ ಕೇಳಿದವರಲ್ಲ. ಶ್ರೀಮಂತ, ಬಡವ ತಾರತಮ್ಯ ಮೊದಲೇ ಇಲ್ಲ. ಕೇವಲ ಫಲಾಪೇಕ್ಷೆ ಇಲ್ಲದೆ ವಿದ್ಯೆ ಕಲಿಸುವುದು ಅಜ್ಜನ ನೀತಿ.
ಕಡತೋಕ, ಪುತ್ತಿಗೆ, ಪದ್ಯಾಣ ಭಾಗವತರು ಅಜ್ಜನ ಬಳಿ ತಾಳ ಹಾಕಲು ಕಲಿತವರು. ಮಂಗಳೂರಿನಲ್ಲಿದ್ದ ನಾನು ರಜೆಯಲ್ಲಿ ಊರಿಗೆ ಹೋದಾಗಲೆಲ್ಲಾ ನನಗೆ ಕಾಣಸಿಗುತ್ತಿದ್ದದ್ದು ಚೆಂಡೆ ಮದ್ದಳೆ, ಭಾಗವತಿಕೆ.
ಇದೀಗ ಆ ಕೆಲಸವನ್ನು ನನ್ನ ಚಿಕ್ಕಪ್ಪ ಮುಂದುವರಿಸಿಕೊಂಡು ಹೋಗುತ್ತಿದ್ದಾರೆ. ಹಳೆಯ ತಲೆಮಾರಿನ ಕಲಾವಿದರು ಅಜ್ಜನ ಶಿಷ್ಯರಾದರೆ, ಹೊಸಬರಲ್ಲಿ ಹಲವರು ಚಿಕ್ಕಪ್ಪನ ಗರಡಿಯಲ್ಲಿ ಪಳಗಿದವರು.
**********
ಈಗ ನಮ್ಮೂರಿನ ಮನೆಗಳಲ್ಲಿ ಡಿಶ್ ಟಿ.ವಿ. ಬಂದಿದೆ. ಮೊಬ್ಬೈಲ್ ರೇಂಜ್ ಸಿಗುತ್ತಿದೆ. ಯುವಕರು ಬೆಂಗಳೂರಲ್ಲಿ ಸ್ಥಾಪಿತವಾಗಿದ್ದಾರೆ. ಎಲ್ಲಾ ಮುಂದುವರಿದ ಕರ್ನಾಟಕದ ಹಳ್ಳಿಗಳಂತೆ ನಮ್ಮ ಕರೋಪಾಡಿ ಆಧುನೀಕರಣಗೊಂಡಿದೆ.
***********
ಆದರೂ ಸಮಾಧಾನ ಎಂದರೆ ಇಡೀ ಗ್ರಾಮದ ಯಾವುದಾದರೂ ಒಂದು ಮನೆಯಲ್ಲಿ ದಿನಕ್ಕೊಂದು ಬಾರಿಯಾದರೂ ಚೆಂಡೆ ಪೆಟ್ಟು ಕೇಳಿಸುತ್ತದೆ. ಯಾವ ಕಲಾವಿದ ಇಂದು ಯಾವ ಮೇಳದಲ್ಲಿದ್ದಾನೆ ಎಂಬ ಚರ್ಚೆ ಇನ್ನೂ ನಡೆಯುತ್ತದೆ.
********
ಕಾಲ ಬದಲಾಗಿದೆ. ನಮ್ಮೂರಿನವರ ಮೂಡ್ ಬದಲಾಗಿಲ್ಲ. ಆಗುವುದೂ ಇಲ್ಲ. ಆತ ವಿಶ್ವದ ಯಾವ ಮೂಲೆಯಲ್ಲೇ ಇರಲಿ. ದೊಡ್ದ ಉದ್ಯೋಗದಲ್ಲಿರಲಿ, ಕರೋಪಾಡಿ ಗ್ರಾಮಕ್ಕೆ ಸಂಬಂಧಿಸಿದವನು ಹೌದೆಂದಾದರೆ..,
ಯಕ್ಷಗಾನಕ್ಕೆ ಕುತೂಹಲ ವ್ಯಕ್ತಪಡಿಸಿಯೇ ಸಿದ್ದ.
********
ಇದು ಕರೋಪಾಡಿಗರ ಕಲೆಯ ಪ್ರೀತಿ. ಕನ್ನಡವನ್ನೇ ಬಳಸುವ ಜಾನಪದ ಕಲೆ ಯಕ್ಷಗಾನ. ಹೀಗಾಗಿ ಯಕ್ಷಗಾನಪ್ರಿಯರೆಲ್ಲರೂ ಕನ್ನಡಪ್ರಿಯರು.
ಆದರೆ ಇಂದಿನ ಕಲಾವಿದರು ಯಕ್ಷಗಾನವನ್ನು ಉಳಿಸುತ್ತಿದ್ದಾರೆಯೆ? ಅಳಿದುಳಿದ ಪ್ರೀತಿಯನ್ನು ದ್ವೇಷಕ್ಕೆ ಮಾರ್ಪಡಿಸುತ್ತಿದ್ದಾರೆಯೆ?
ಯಕ್ಷಗಾನ ಬಲ್ಲವರು ಹೇಳಬೇಕು...
ಯಕ್ಷಗಾನಂ ಗೆಲ್ಗೆ!

(ಚಿತ್ರದಲ್ಲಿರುವವರು ನನ್ನ ಅಜ್ಜ ಮಾಂಬಾಡಿ ನಾರಾಯಣ ಭಾಗವತರು)

Wednesday, December 17, 2008

ಕಾರಂತ ನೆನಪಿನೊಂದಿಗೆ..




ಬಾಬುಕೋಡಿ ವೆಂಕಟ್ರಮಣ ಕಾರಂತ...!
ಹಾಗಂತ ಹೇಳಿದರೆ ಫಕ್ಕನೆ ಗೊತ್ತಾಗಲಿಕ್ಕಿಲ್ಲ
ಬಿ.ವಿ.ಕಾರಂತ ಅಂದರೆ ಸಾಕು. ಮತ್ತೆ ವಿವರಣೆ ಬೇಕಿಲ್ಲ..!
ಅಂಥವರೊಬ್ಬರು ಹುಟ್ಟಿ ಬೆಳೆದ ಊರಿಗೆ ಸಮೀಪವೇ ನಾನೂ ಇದ್ದೇನೆ ಅನ್ನುವುದೇ ರೋಮಾಂಚನ ತರುವ ವಿಷಯ. ಮೊನ್ನೆ ಅವರ ಹುಟ್ಟೂರಲ್ಲಿ (ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಮಂಚಿ ಕುಕ್ಕಾಜೆಯಲ್ಲಿ) ಊರವರು ಮತ್ತು ಕಾರಂತರ ಬೆಂಗಳೂರು, ಇತ್ಯಾದಿಗಳ ಒಡನಾಡಿಗಳೆಲ್ಲಾ ಸೇರಿ ಬಿ.ವಿ.ಕಾರಂತ ನೆನಪು ಜೊತೆಗೆ ನಾಟಕೋತ್ಸವ, ವಿಚಾರ ಸಂಕಿರಣಗಳನ್ನು ಆಯೋಜಿಸಿದರು. ಸ್ನೇಹಿತ ಕಜೆ ನರಸಿಂಹ ಭಟ್ ಜೊತೆ ಆ ಶುಕ್ರವಾರ ಬಿ.ಸಿ.ರೋಡಿನಿಂದ ಬೈಕಿನಲ್ಲಿ ಮಂಚಿಗೆ ತಲುಪಿದಾಗ ಸೂರ್ಯ ಹೊರಡುವ ತಯಾರಿ ನಡೆಸಿದ್ದ. ಆಗಲೇ ಕಾರಂತರ ಶಾಲೆಯಾದ ಮಂಚಿ ಕುಕ್ಕಾಜೆ ಸರ್ಕಾರಿ ಶಾಲೆಯಲ್ಲಿ ಸ್ತೇಜ್ ಸೆಟ್ತಿಂಗ್ ನಡೆಯುತ್ತಿತ್ತು. ತುಮರಿಯ ಕೃಷ್ಣಮೂರ್ತಿ, ಪುತ್ತೂರಿನ ಐ.ಕೆ.ಬೊಳುವಾರು ಸಂಗಡಿಗರಿಗೆ ಹಾಗಲ್ಲ, ಹೀಗೆ ಅನ್ನುತ್ತಾ ನಿರ್ದೇಶನ ತಯಾರಿ ಮಾಡಿತ್ತಿದ್ದರು. ಇವರೊಂದಿಗೆ ಅಂದು ಅಭ್ಯಾಗತದಾಗಿ ಡುಂಡಿರಾಜ್, ನಾಟಕ ಅಕಾಡೆಮಿ ಸದಸ್ಯ ಕುಮಾರಸ್ವಾಮಿ ಮೊದಲಾದವರು ಇದ್ದರು. ಅದೊಂದು ಅಪ್ಪಟ ಹಳ್ಳಿಯ ವಾತಾವರಣ. ಸ್ವಚ್ಹ ನಿಷ್ಕಲ್ಮಶ ಮನಸ್ಸಿನ ಆತ್ತಿಥೇಯರು. ಪ್ರಶಾಂತವಾದ ಗಾಳಿ, ಬೆರಗುಗಣ್ಣಿನ ಸ್ಥಳೀಯರು ನೋಡನೋಡುತ್ತಿದ್ದಂತೆ ಸಭಾ ಕಾರ್ಯಕ್ರಮ ಆರಂಭ ಆಯಿತು. ಕಾರಂತರ ಒಡನಾಡಿಗಳು, ಅವರ ಸ್ಮರಣೆ ಮಾಡಿದರು. ಬಳಿಕ ಮಕ್ಕಳ ನಾಟಕ. ಹೊತ್ತು ಹೋದದ್ದೇ ಗೊತ್ತಾಗಲಿಲ್ಲ.
ಮರುದಿನ ಶನಿವಾರವೂ ಸಂಜೆ ನಾಟಕ ಪ್ರದರ್ಶನ. ಅದೂ ಹೌಸ್ ಫುಲ್..!
ಭಾನುವಾರ ವಿಚಾರಸಂಕಿರಣ. ಮೈಸೂರಿನ ರಮೇಶ್, ಉಡುಪಿಯ ವೈದೇಹಿ, ದೆಹಲಿಯ ಶ್ರೀನಿವಾಸ್, ಐತಾಳ್ ....ಹೀಗೆ ನಾಟಕಗಳ ಬಗ್ಗೆ ಇದ್ದ ವಿಚಾರಸಂಕಿರಣವೆಲ್ಲಾ ಕಾರಂತ ಸ್ಮರಣೆಯೇ ಆಯಿತು. ಸಮಾರೋಪಕ್ಕೂ ಅರ್ಥಪೂರ್ಣವಾದ ನಾಟಕ ಪ್ರದರ್ಶನ.

********************
ಯಾರೋ ಮಂಚಿಯನ್ನು ಹೆಗ್ಗೋಡಿನಂತೆ ಮಾರ್ಪಡಿಸಬೇಕು. ಇದು ಬಿ.ವಿ.ಕಾರಂತರಿಗೆ ಅರ್ಥಪೂರ್ಣ ಶ್ರ ಧಾಂಜಲಿ ಅಂದರು. ಆದರೆ ನನಗನಿಸುತ್ತದೆ. ಅದಕ್ಕಿಂತಲೂ ಮುಖ್ಯವಾಗಿ ಇಂದು ನಾಟಕಕಾರರು, ವಿಚಾರವಂತರು ಅದರಲ್ಲೂ ಅಕಾಡೆಮಿಕ್ ವಲಯದವರು ಗಂಭೀರವಾಗಿ ಆಲೋಚಿಸುವ ಕಾಲ. ಎಲ್ಲಾ ರಂಗಕರ್ಮಿಗಳನ್ನೂ ಒಗೊಡಿಸುವುದು.
ನಮ್ಮ ದ.ಕ.ಜಿಲ್ಲೆಯನ್ನೇ ತೆಗೆದುಕೊಳ್ಳಿ. ಇಂದಿಗೂ ತುಳು ರಂಗಭೂಮಿ ಇಲ್ಲಿ ಜನಪ್ರಿಯ. ಇಲ್ಲಿನ ಕಲಾವಿದರು ಈಗಲೂ ಸ್ಟಾರ್ ಗಳು. ನಾಟಕ ಪ್ರದರ್ಶನವಿರುವ ಕಡೆ ಇಲ್ಲಿ ಇಂದಿಗೂ ನೂಕು ನುಗ್ಗಲು ಇದೆ. ಆದರೆ ಅದೇ ಜಾಗದಲ್ಲಿ ನೀನಾಸಂ ನಂಥ ತಂಡ ನಾಟಕ ಪ್ರದರ್ಷಿಸಿದರೆ ನೋಡಲು ಜನವೇ ಇಲ್ಲ. ಇದ್ದರೂ ಯು.ಜಿ.ಸಿ. ಸಂಬಳ ಪಡೆಯುವ ಕಾಲೇಜು ಉಪನ್ಯಾಸಕರು, ಸಾಹಿತ್ಯದ ಒಲವಿರುವ ಸಣ್ಣ ವರ್ಗ. ಹೀಗಾದರೆ ಆ ನಾಟಕ ಯಾರನ್ನು ತಲ್ಪುತ್ತದೆ?
ನಾವ್ಯಾಕೆ ಜನಪ್ರಿಯ ನಾಟಕಗಳ ಕಲಾವಿದರನ್ನು ನೀನಾಸಂ ಥರದ ಕಲಾವಿದರನ್ನು ಒಟ್ಟು ಸೇರಿಸಬಾರದು?
ಇಂಥದ್ದೇ ಪ್ರಶ್ನೆಯನ್ನು ಮೊನ್ನೆ ಮಂಚಿಗೆ ಬೆಂಗಳೂರಿನಿಂದ ಬಂದ ಬುದ್ದಿವಂತ "ರಂಗಕರ್ಮಿ’ಯನ್ನು ಯಾರೋ ಖಾಸಗಿಯಾಗಿ ಕೇಳಿದರಂತೆ. ಆಗವರು ಕೆಕ್ಕರಿಸಿ ನೋಡಿದರಂತೆ.

ಅಟ್ ಲೀಸ್ಟ್ ಬಿ.ವಿ.ಕಾರಂತ ಜೀವನಗಾಥೆಯನ್ನಾದರೂ ಅಂಥ ಮನೋಸ್ಥಿತಿಯುಳ್ಳವರು ಓದಲಿ..
ರಂಗಭೂಮಿ ಒಟ್ಟಾಗಲಿ... ಯುನಿವರ್ಸಿಟಿ ಪ್ರೊಫೆಸರ್, ಆಟೋ ಡ್ರೈವರ್ ಜತೆಜತೆಯಾಗಿ ಕುಳಿತು ಒಂದೇ ನಾಟಕವನ್ನು ನೋಡಿ, ಸರಿ ತಪ್ಪುಗಳ ವಿಮರ್ಷೆ ಮಾಡಲಿ..
ಹಾಗಾಗಬಹುದೇ?

ಸಿಂಗಲ್ ಕಾಲಂ ಸುದ್ದಿ ! ?

"ನಮಸ್ಕಾರ ಮಾರಾಯ್ರೆ”
ಬಿ.ಸಿ.ರೋಡಿನ ಸ್ಟೇಟ್ ಬ್ಯಾಂಕಿನ ಎದುರು ನಿಲ್ಲುವ ಟ್ಯಾಕ್ಸಿಗಳಲ್ಲಿ ಕುಳಿತುಕೊಳ್ಳುವ ಚಾಲಕರ ಪೈಕಿ ಆ ನಗುಮುಖದ ವ್ಯಕ್ತಿ ಹಾಗೆ ಹೇಳುವುದುಂಟು. ಇದು ಪ್ರತಿನಿತ್ಯದ ಕಾಯಕವಾದ ಕಾರಣ ಅಲ್ಲೇ ಬಸ್ಸಿಗೆಯೋ, ಇತರ ಕೆಲಸಕ್ಕೆಂದು ಹೋಗುವಾಗಲೋ ನಾನೂ ನಮಸ್ಕಾರ ಹೇಗಿದ್ದೀರಿ ಎಂಬ ಮಾಮೂಲಿ ಡೈಲಾಗ್ ಹೇಳುತ್ತೇನೆ. ಆತ ಸುಮ್ಮನೆ ನಗುತ್ತಾನೆ. ಅಲ್ಲಿಗೆ ನಮ್ಮ ಸಂಭಾಷಣೆ ಖತಂ.
ತಿಂಗಳ ಹಿಂದೆ ಸಾರಿಗೆ ಮಂತ್ರಿ ಅಶೋಕ್ ಖಾಸಗಿ ಬಸ್ಸುಗ್ಗಳನ್ನು ನಿಲ್ಲಿಸುವ ಪ್ರಸ್ತಾಪ ಇದೆ ಎಂದಾಗ ನಾನು ಆತನನ್ನು ಮಾತಿಗೆಳೆದೆ.
"ನಿಮ್ಮ ಚಾನ್ಸ್..ಇನ್ನು ಬಾಡಿಗೆ ಹೆಚ್ಹಾಗಬಹುದು”
’ಯಾರು ಹೇಳಿದ್ದು ನಿಮಗೆ’ ಆತ ಹೇಳಿದ. "ನಮ್ಮ ಬಾಡಿಗೆ, ವಹಿವಾಟು ಮಾಮೂಲಿಯಾಗೇ ಇರುತ್ತದೆ. ನನ್ನದು ಫಿಕ್ಸೆಡ್ ರೇಟ್. ಬೆಳಗ್ಗೆ ೬ಕ್ಕೆಲ್ಲಾ ಟ್ಯಕ್ಸಿ ಸ್ಟೇಂಡ್ ನಲ್ಲಿ ಇರ್ತೇನೆ. ಏರ್ಪೋರ್ಟ್, ರೈಲ್ವೇ ಸ್ಟೇಶನ್ ಗೆಂದು ಬರುವವರು, ಜಾಗ ಅಳೆಯಲು ಬರುವ ವಕೀಲರು ಹೀಗೆ ನನ್ನದೇ ಆದ ಕೆಲವು ಪಾರ್ಟಿ ಇರ್ತದೆ. ಹೇಗೋ ಹೊಟ್ಟೆಪಾಡು ನಡೆಯುತ್ತದೆ. ಎಲ್ಲಾ ಉಳಿಸಿ, ದಿನಕ್ಕೆ ೨೫೦ ರು. ಆದರೆ ಪುಣ್ಯ”
ಹೀಗೆ ಮಾತನಾಡಿದ ಮೇಲೆ ಆತ ತನ್ನ ಹೆಸರು ಹೇಳಿದ. "ನನ್ನ ಹೆಸರು ಸೂರ್ಯನಾರಾಯಣ. ಬಾಡಿಗೆ ಇದ್ದರೆ ಹೇಳಿ”
ಆಯ್ತು ಎಂದು ನಾನು ಹೊರಟೆ..
ಅದಾದ ಬಳಿಕ ನಮಸ್ಕಾರದಲ್ಲೇ ಮುಕ್ತಾಯ..
ಮೊನ್ನೆ ಎಂದಿನಂತೆ ಮಂಗಳೂರಿಗೆ ಹೋಗುವಾಗ ತುಂಬೆ ರಾಮಲ್ಕಟ್ಟೆ ಹತ್ತಿರ ನಜ್ಜುಗುಜ್ಜಾದ ಅಂಬಾಸಿಡರ್ ಕಾರು ಕಂಡಿತು. ಛೇ.. ಎಂದು ಮರುಕ ವ್ಯಕ್ತಪಡಿಸಿ ಅಫೀಸ್ ನ ಇತರ ವ್ಯವಹಾರದಲ್ಲಿ ಮುಳುಗಿದೆ. ಆದರೆ ರಾತ್ರಿ ಬಂದ ವರದಿ ಹೀಗಿತ್ತು.
ಅದಿರು ಲಾರಿ ಟೂರಿಸ್ಟ್ ಕಾರು ಮುಖಾಮುಖಿ, ಕಾರು ಚಾಲಕ ಸಾವು..
ಚಾಲಕನ ಹೆಸರು ಸೂರ್ಯನಾರಾಯಣ.
ಬೆಳಗಿನ ಜಾವ ರಾಂಗ್ ಸೈಡ್ದ್ನಲ್ಲಿ ಬಂದ ಅದಿರು ಲಾರಿ ಚಾಲಕನ್ನನ್ನು ಬಲಿ ತೆಗೆದುಕೊಂಡಿತು..
ಸಿಂಗಲ್ ಕಾಲಂ ಸುದ್ದಿ ಯಲ್ಲಿ ಸೂರ್ಯನಾರಾಯಣನ ಬದುಕು ಕೊನೆಗೊಂಡಿತ್ತು.
ಸೂರ್ಯ ಮೂಡುವುದಕ್ಕೆ ಸ್ವಲ್ಪ ಮೊದಲು ಅರ್ಧಕ್ಕೆ ನಿಂತ ಹೆದ್ದಾರಿ ಕಾಮಗಾರಿಯ ಅವಶೇಷಗಳಿಂದ ಎದ್ದ ಧೂಳು ನಿದ್ದೆಗಣ್ಣಲ್ಲಿ ರಾಂಗ್ ಸೈಡ್ನಲ್ಲಿ ಸಾಗಿದ ಅದಿರು ಲಾರಿಯು, ಸೂರ್ಯನಾರಾಯಣನ ಬದುಕಿನಲ್ಲಿ ಮತ್ತೆ ಸೂರ್ಯ ಮೂಡದಂತೆ ಮಾಡಿತ್ತು.
----------------
ನಿಮಗಿದು ಬೋರ್ ಶಬ್ದಗಳು ಎನಿಸಬಹುದೇನೋ..ಆದರೆ ಪ್ರತಿರಾತ್ರಿ ನಾನು ಮನೆಗೆ ಹೋಗುವ ವೇಳೆ ತುಂಬೆಯತ್ತ ನನ್ನ ವಾಹನ ಹೋಗುವಾಗಲೆಲ್ಲಾ ಸೂರ್ಯನಾರಾಯಣ ನೆನಪಾಗುತ್ತಾನೆ..

ಹೆಡ್ಲೈಟ್ ಡಿಮ್ ಮಾಡದ ಅತಿಕಾಯ ಅದಿರು ಲಾರಿಗಳೆಲ್ಲಾ ಯಮದೂತರಂತೆ ಕಾಡುತ್ತಾರೆ..

Sunday, November 30, 2008

ಅಳಿದ ಮೇಲೆ..

ಸತ್ಯಮೇವ ಜಯತೇ ಎನ್ನಲು ನಾಲಗೆ
ಹೊರಳುತ್ತಿಲ್ಲ ಕಾರಣ ಊರು ತುಂಬ
ಅಸತ್ಯ, ಅನೀತಿ, ಅಸಹ್ಯ ಮಾತುಗಳ
ಬರೆಹಗಳ ಸುರಿಮಳೆಯ ದರ್ಶನ
ದುಸ್ಸಾಹಸ, ದುಷ್ಟಬುದ್ದಿ, ದುರಾಕ್ರಮಣ
ಎಂದು ನಾವು ಮತ್ತೆ ಮತ್ತೆ ನಮ್ಮನ್ನೇ
ದೂರುವ ಸಂದರ್ಭ ಬೇಕಿತ್ತೆ
ಮುಂಬಯಿಯಲ್ಲಿ ದೊಡ್ಡ ದೊಡ್ದ ಮನುಜರ
ಕತ್ತರಿಸಿ ಕೊಂದ ನೆತ್ತರ ಕೋಡಿ ಹರಿಸಿದ
ಮೇಲಷ್ಟೇ ಪ್ರಪಂಚಕ್ಕೆ ಅರಿವಾಯಿತು
ಮತಾಂಧರ ಉನ್ಮತ್ತ ಹೆಜ್ಜೆಯ ಗುರುತು
ಮೈಕು ಹಿಡಿಸುವ ಮಲ್ಟಿನ್ಯಾಶನಲ್ ಮೀಡಿಯಾ
ದೊರೆಗಳು, ಕೊಚ್ಹೆಗುಂಡಿಗಳಿಗೆ ಹೋಗಲು
ಹೇಳುತ್ತಿಲ್ಲ, ಏಕೆಂದರೆ ಅವಕ್ಕೂ ಬೇಕು ಮಾರ್ಕೆಟ್
ಅದಕ್ಕಾಗಿ ಭಾರತವಿಂದು ಭೀತಿವಾದಿಗಳ, ಕೊಳಕು
ಜನರ ಬೇಳೆ ಬೇಯಿಸುವ ಟಾರ್ಗೆಟ್..

Monday, November 10, 2008

ಪಯಣದ ಹಾದಿ..

ಅಂದು ಸುಮ್ಮನೇ ಕುಳಿತು
ಪರ್ವತದ ಶಿಖರದಿಂದ
ಬಗ್ಗಿ ನೋಡಿ ಪುಟ್ಟ ಮನೆ,
ಬಸ್ಸುಗಳ ನೋಡಿ ಖುಷಿಯಿಂದ
ಕುಣಿದಿದ್ದೆ....
ನಾನೆಷ್ಟು ಎತ್ತರದಲ್ಲಿದ್ದೇನೆ?
ಮತ್ತೆ ಹಾಗೇ ಇಳಿದು ಸುಮ್ಮನೇ
ರಸ್ತೆಯಲ್ಲಿರುವ ದೊಡ್ಡ ದೊಡ್ದ
ಲಾರಿ ಬಸ್ಸುಗಳ ನೋಡಿ
ಮಂಕಾದೆ...
ನಾನೆಷ್ಟು ಕೆಳಗಿದ್ದೇನೆ?
ಯಾರೋ ಹೇಳಿದರು,
ನಾನು ನೋಡಿ ತಿಳಿದೆ
ಎತ್ತರಕ್ಕೆ, ಪಾತಾಳಕ್ಕೆ
ಪಯಣಿಸುವುದು ನಮ್ಮ ಕೈಯಲ್ಲೇ
ಇದೆ..ಅದು ಸುಮ್ಮನೇ ನಮ್ಮ ಹಾದಿಯಲ್ಲಿ
ಬೇಡವಾದಾಗಲೂ ಸಿಗುತ್ತದೆ
ಆದರೆ ಬೆಟ್ಟ ಅಣಕಿಸುತ್ತದೆ
ನಾನೇರಿದೆತ್ತರಕೆ ನೀನೇರಬಲ್ಲೆಯಾ?