ಹಳೇ ಪೇಪರ್ ರಾಶಿಯನ್ನು ನೋಡುತ್ತಿದ್ದಾಗ ಆ ಘೋಷಣೆ ಕಣ್ಣಿಗೆ ಬಿತ್ತು.
‘ಕಾಸರಗೋಡನ್ನೂ ಕರ್ನಾಟಕಕ್ಕೆ ಸೇರಿಸಿಯೇ ಸಿದ್ದ’
******
ಹಳೆಯ ಮಾತು ಹಾಗಿರಲಿ,
ನಿಜಕ್ಕೂ ಈಗಿನ ಕಾಸರಗೋಡಿನ ಕನ್ನಡಿಗರು ಗಂಭೀರ ಸಮಸ್ಯೆಯಲ್ಲಿದ್ದಾರಾ?
ಗಡಿನಾಡಿನ ಜನತೆ ‘ಭಾಷೆ’ಯಿಂದಾಗಿ ಪರಕೀಯರಾಗುತ್ತಿದ್ದಾರ?
ಕೇರಳ ಸರ್ಕಾರ ಕನ್ನಡಿಗರಿಗೆ ಅಷ್ಟೊಂದು ಅನ್ಯಾಯ ಮಾಡುತ್ತಿದೆಯಾ?
ಆ ಘೋಷಣೆ ಓದಿದ ಕರ್ನಾಟಕದ ಇತರ ಪ್ರಾಂತ್ಯದವರಿಗೆ ಈ ಕುತೂಹಲ ಮೂಡುವುದು ಸಹಜ.
ಆದರೆ ವಿಷಯ ಹಾಗಿಲ್ಲ.
********
ಈಗಿನ ಕಾಸರಗೋಡು ಪ್ರದೇಶ(ಜಿಲ್ಲೆ) ಎರಡು ಸಂಸ್ಕೃತಿಗಳನ್ನೂ ಮೈಗೂಡಿಸಿಕೊಂಡಿರುವ ತಾಣ. ಇಡೀ ಜಿಲ್ಲೆಯನ್ನೊಮ್ಮೆ ಸುತ್ತಾಡಿ. ಕ್ರೀಮ್ ಕಲರ್ ಪಂಚೆ, ಅರ್ಧ ತೋಳಿನ ಶರಟು, ಮುಖದಲ್ಲಿ ಅಡ್ಡನಾಮ.(ಹಿಂದೂವಾದರೆ), ನೀಟಾಗಿ ಬಾಚಿದ ತಲೆ ಇದು ಟಿಪಿಕಲ್ ಕಾಸರಗೋಡು ಪ್ರದೇಶದ ಪುರುಷರ ರೀತಿ. ಮಹಿಳೆಯರೂ ಅಪ್ಪಟ ಮಲೆಯಾಳಿಗಳಂತೆ. ಕನ್ನಡ, ತುಳುವಿನಲ್ಲಿ ಮಾತನಾಡಿದರೂ ಮಲಯಾಳದಲ್ಲೇ ಉತ್ತರ. ನಿಮಗೆ ಅರ್ಥವಾಗದಿದ್ದರೆ ಮಾತ್ರ ಕನ್ನಡ, ತುಳು ಮಾತು.
ಹಾಗಾದರೆ ಇವರು ಕನ್ನಡಿಗರೇ, ಮಲಯಾಳಿಗಳೇ?
ಇವರಲ್ಲಿ ಹಲವರು ಮನೆಯಲ್ಲಿ ಕನ್ನಡ, ತುಳು ಮಾತನಾಡುವವರು. ಹೊರಗೆ ಅಪ್ಪಟ ಮಲಯಾಳಿಗಳು. ಹಾಗೆಂದು ಅವರಿಗೆ ಯಾವ ಭಾಷೆಯ ಮೇಲೆ ತಿರಸ್ಕಾರ ಇಲ್ಲ.
ಇಲ್ಲಿ ಕನ್ನಡ ಶಾಲೆಗಳಿವೆ. ಯಾರೂ ಅಲ್ಲಿಗೆ ಹೋಗಬೇಡಿ ಎಂಬ ಬಲವಂತ ಮಾಡುವುದಿಲ್ಲ. ನೀನು ‘ಕನ್ನಡದವನು’ ಎಂದು ಅಂಗಡಿಯಲ್ಲಿ ಅಕ್ಕಿಗೆ ೨ ರು. ಜಾಸ್ತಿ ಚಾರ್ಜ್ ಮಾಡುವುದಿಲ್ಲ. ಒಟ್ಟಿನಲ್ಲಿ ಅನ್ಯೋನ್ಯತೆಯಿದೆ.
*****
ಇದು ಭಾಷೆಯ ಮಾತಾಯಿತು. ಇನ್ನು ಆಡಳಿತದ ಕಡೆ ನೋಡೋಣ.
ಬಹುಪಾಲು ಕನ್ನಡಿಗರು ಕಾರ್ಮಿಕರು. ಇಲ್ಲಿನ ಕಾರ್ಮಿಕರಿಗೆ ಸಿಕ್ಕುವ ಉದ್ಯೋಗ ಭದ್ರತೆ ಕರ್ನಾಟಕದಲ್ಲಿ ಇಲ್ಲ.!
ಭ್ರಷ್ಟಾಚಾರಿಗಳ ಸಂಖ್ಯೆ ಕರ್ನಾಟಕಕ್ಕಿಂತ ಕಡಿಮೆ. ನೀವು ಇಲ್ಲಿ ಭೂಮಿಯನ್ನು ಹೊಂದಿದ್ದರೆ ಇಲ್ಲಿ ಪಂಚಾಯತ್ ಸೌಕರ್ಯಗಳನ್ನು, ಸುಲಭವಾಗಿ ಹೊಂದಬಹುದು. ನಮ್ಮ ‘ನೆಮ್ಮದಿ’ ಕೇಂದ್ರದಂತಲ್ಲ!
ಕಾಸರಗೋಡಿನ ರಸ್ತೆಗಳನ್ನು ನೋಡಿ. ಕರ್ನಾಟಕದ ರಸ್ತೆಗಳನ್ನು ನೋಡಿ. ವಿಟ್ಲದಿಂದ(ಕರ್ನಾಟಕ) ಬದಿಯಡ್ಕ(ಕೇರಳ)ಕ್ಕೆ ಹೋಗುವಾಗ ಅಡ್ಕಸ್ಥಳ ಎಂಬಲ್ಲಿಂದ ರಸ್ತೆ ಹೇಗಿರುತ್ತೆ ಎಂಬುದನ್ನು ಅಲ್ಲಿ ಡ್ರೈವ್ ಮಾಡಿದವನೇ ಹೇಳಬೇಕು.
*****
ಕನ್ನಡ ಕರಾವಳಿಯ ಯಕ್ಷಗಾನಕ್ಕೆ, ಕಲಾವಿದರಿಗೆ ಮನ್ನಣೆ ನೀಡುವಲ್ಲಿ ಕೇರಳ ಸರ್ಕಾರ ಒಂದು ಹೆಜ್ಜೆ ಮುಂದಿದೆ. ದಕ್ಷಿಣ ಕನ್ನಡ, ಕಾಸರಗೋಡಿನ ಯಕ್ಷಗಾನ ಕಲಾವಿದರ ಬಳಿ ‘ಖಾಸಗಿ’ಯಾಗಿ ಮಾತನಾಡಿ. ಕನ್ನಡ ಕರಾವಳಿಯ ಕಲಾವಿದರು, ಸಾಹಿತಿಗಳು ಬೆಂಗಳೂರಿಗೆ ಹೋಗದೆ ಊರಿನಲ್ಲಿ ತಮ್ಮ ಪಾಡಿಗೆ ಇದ್ದರೆ ಕರ್ನಾಟಕ ಸರ್ಕಾರ ಮಲತಾಯಿ ಧೋರಣೆ ತಾಳುತ್ತದೆ ಎಂಬುದು ಅವರ ಮಾತು. ಇನ್ನು ಇಲ್ಲಿನ ಅನೇಕ ಪ್ರತಿಭಾವಂತರು ಗಡಿನಾಡ ಕನ್ನಡಿಗರ ಕೋಟಾದಿಂದ ಕಲಿತು ಈಗ ಸುಖವಾಗಿದ್ದಾರೆ.
****
ಕಾಸರಗೋಡನ್ನು ಕೇರಳದಿಂದ ಬಿಡಿಸಿ ಕರ್ನಾಟಕಕ್ಕೆ ಸೇರಿಸಿ ಎಂದು ಹೇಳಿಕೆ ನೀಡುವವರು, ಅವರನ್ನು ಬೆಂಬಲಿಸುವವರು ಪ್ರಾಕ್ಟಿಕಲ್ ಆಗಿ ಆಲೋಚಿಸುವುದು ಒಳ್ಳೇದು.
15 comments:
ಚೆನ್ನಾಗಿದೆ ಲೇಖನ.
ನಿಮ್ಮ ಲೇಖನ ಓದಿ ತುಂಬಾ ಸಂತೋಷ ಆಯಿತು. ನಾವೀಗ ಯೋಚನೆ ಮಾಡಬೇಕಾದ ರೀತಿಯನ್ನು ನೀವು ಸರಿಯಾಗಿ ನಿರೂಪಿಸಿದ್ದೀರಿ. ನನ್ನ ಮಾವನ ಮನೆ ಬದಿಯಡ್ಕದ ಸಮೀಪದಲ್ಲಿ ಇರುವುದರಿಂದ ನಾನು ಆಗಾಗ ಅಲ್ಲಿಗೆ ಹೋಗುತ್ತೇನೆ. ಅಡ್ಯನಡ್ಕ ದಾಟಿದ ಕೂಡಲೇ ಸಿಗುವ ಒಳ್ಳೆಯ ಮಾರ್ಗ ನನ್ನಲ್ಲಿ ಕೇರಳದ ಬಗ್ಗೆ ಮೆಚ್ಚುಗೆಯನ್ನು ಕರ್ನಾಟಕದ ಬಗ್ಗೆ ಅಸಹನೆಯನ್ನು ತಾನೆ ತಾನಾಗಿ ಹುಟ್ಟಿಸುತ್ತದೆ. ಕರ್ನಾಟಕಕ್ಕೆ ಸೇರುವುದರಿಂದ ಕಾಸರಗೋಡಿನ ಕನ್ನಡಿಗರು ಏನನ್ನಾದರೂ ಹೊಸದಾಗಿ ಪಡೆದು ಕೊಂಡಾರು ಎಂದು ನನಗೆ ಅನ್ನಿಸುತ್ತಿಲ್ಲ. ಕನ್ನಡ ಶಾಲೆಗಳನ್ನು ಕರ್ನಾಟಕದಲ್ಲೇ ಕೇಳುವವರಿಲ್ಲ. ಹೀಗಾಗಿ ನಿಮ್ಮ ಬರಹ ಸತ್ಯವಾಗಿದ್ದು ಹೊಸ ಬಗೆಯಲ್ಲಿ ಯೋಚಿಸಲು ಪ್ರಚೋದನೆ ನೀಡಿದೆ. ಅಬಿನಂದನೆಗಳು.
ಕಾಸರಗೋಡಿನ ಕನ್ನಡಿಗರು ಸಮಸ್ಯೆಯಲ್ಲಿ ಇದ್ದರೋ ಇಲ್ಲವೋ ಗೊತ್ತಿಲ್ಲ. ಆದರೆ ಕಾಸರಗೋಡಿನ ಕನ್ನಡಿಗರೂ ಕನ್ನದನಾಡಿನವರೆ ಆಗಿರಬೇಕು. ಇನ್ನು ಅಲ್ಲಿನ ಸೌಲಭ್ಯಗಳ ಬಗ್ಗೆ ಹೇಳಿದ್ದಿರಿ. ನಮ್ಮಲ್ಲಿಂತ ಅಲ್ಲಿ ಚೆನ್ನಾಗಿಯೇ ಇರಬಹುದು. ಕಾರಣ ಅಲ್ಲಿ ಪ್ರವಾಸೋದ್ಯಮಕ್ಕೆ ಕರ್ನಾಟಕಕ್ಕಿಂತ ಜಾಸ್ತಿ ಮಹತ್ವ ನೀಡಲಾಗಿದೆ...ಅಲ್ಲವೇ?
ಹರೀಶ್
ನೀವು ಹೇಳಿದ್ದರಲ್ಲಿ ಸತ್ಯವಿದೆ. ನಾನು ಕೂಡ ಕಾಸರಗೋಡು, ಕು೦ಬ್ಳೆ , ಬದಿಯಡ್ಕ, ಮು೦ತಾದೆಡೆ ತಿರುಗಾಡಿದವನು. ಅಲ್ಯಾರಿಗೂ ತಮ್ಮ ನೆಲ ಕರ್ನಾಟಕಕ್ಕೇ ಸೇರಲೇಬೇಕೆ೦ಬ ದರ್ದು ಇಲ್ಲ ಅನಿಸುತ್ತದೆ. ಆದರೆ ನಮ್ಮ ರಾಜಕಾರಣಿಗಳು ನವೆ೦ಬರ ಬ೦ದಾಗ ಒಮ್ಮೆ ಈ ಬಗ್ಗೆ ಕೂಗು ಹಾಕಿ ಮತ್ತೆ ಮಲಗುತ್ತಾರೆ. ಅವರಿಗೆ ವಾಸ್ತವದ ಅರಿವಿಲ್ಲ, ನಮ್ಮ ರಾಜಕಾರಣಿಗಳಿಗೆ ಪ್ರಾಕ್ಟಿಕಲ್ ಚಿ೦ತನೆಯ ಗೊಡವೆ ಇಲ್ಲವಲ್ಲ.
ಹರೀಶ್,
ನಿಮ್ಮ ಲೇಖನ ತುಂಬಾ ಚೆನ್ನಾಗಿದೆ...ಸುಮ್ಮನೆ ಪತ್ರಿಕೆಗಳಲ್ಲಿ ಓದಿ ಇಲ್ಲಸಲ್ಲದ್ದನ್ನು ಕಲ್ಪಿಸಿಕೊಳ್ಳುವವರಿಗೆ ಒಂದು ಚೆನ್ನಾದ ಬರಹದ ಮುಖಾಂತರ ಉಪಯುಕ್ತ ಮಾಹಿತಿ ನೀಡಿದ್ದೀರಿ....ನನಗೆ ತುಂಬಾ ಖುಷಿಯಾಯಿತು...ಧನ್ಯವಾದಗಳು...
ನೀವು ಹೇಳಿದ್ದು ನಿಜ.. ನಮ್ಮೂರಿನ ಬಗ್ಗೆ ಒಂದು ಒಳ್ಳೆಯ ಲೇಖನ..
ನಿಮ್ಮ ಲೇಖನ ತುಂಬಾ ಚೆನ್ನಾಗಿದೆ.
ಗಡಿನಾಡು ಕಾಸರಗೋಡಿನವರ ಕನ್ನಡ ಪ್ರೇಮ ಕರ್ನಾಟಕ ರಾಜ್ಯದ ಕನ್ನಡಿಗರಿಗೆ ಪ್ರೇರಣೆಯಾಗಲಿ.
ಪ. ರಾಮಚಂದ್ರ,
ರಾಸ್ ಲಫ್ಫಾನ್ , ಕತಾರ್ ದೇಶ- ಕೊಲ್ಲಿ ಪ್ರದೇಶ.
ನಿಮ್ಮ ಲೇಖನ ತುಂಬಾ ಚೆನ್ನಾಗಿದೆ.
ಗಡಿನಾಡು ಕಾಸರಗೋಡಿನವರ ಕನ್ನಡ ಪ್ರೇಮ ಕರ್ನಾಟಕ ರಾಜ್ಯದ ಕನ್ನಡಿಗರಿಗೆ ಪ್ರೇರಣೆಯಾಗಲಿ.
ಪ. ರಾಮಚಂದ್ರ,
ರಾಸ್ ಲಫ್ಫಾನ್ , ಕತಾರ್ ದೇಶ- ಕೊಲ್ಲಿ ಪ್ರದೇಶ.
ಪ್ರಿಯ ಹರೀಶ್,
ನಿಮ್ಮ ಲೇಖನ ಓದಿದೆ. ಖುಷಿಯಾಯಿತು. ಕಾಸರಗೋಡಿನ ಪರಿಸ್ಥಿತಿಯ ಬಗ್ಗೆ ಅಲ್ಲಿರುವ ನೀವು ಹೇಳಿದ ಮಾತು ಗಳು ಸತ್ಯವಾಗಿದೆ. ಬರಹ ಹರಿತವಾಗಿದ್ದು, ಓರಾಟಗಾರರಿಗೆ ಬೇಸರವಾಗಲಿಕ್ಕಿಲ್ಲವೇ,. ನಿಮ್ಮ ಹಳೆಯ ಲೇಖನದ ಬಗ್ಗೆ ನಿಮಗೆ ಸಿಕ್ಕಿದ ಪ್ರತಿಕ್ರಿಯೆ ನೋಡಿ ಆತಂಕವಾಯಿತು. ಆದರೆ ಧೈರ್ಯವಾಗಿ ಬರೆಯಿರಿ. ನಿಮ್ಮ ಲೇಖನಗಳಲ್ಲಿ ಓದುಗರನ್ನು ಸೆಳೆಯುವ ಗುಣವಿದೆ. ಶುಭಾಶಯಗಳೊಂದಿಗೆ.
ನಿಮ್ಮ
ಜವಳಿ
ಕೇರಳದ ಕಾಸರಗೋಡನ್ನು ಕರ್ನಾಟಕಕ್ಕೆ ಸೇರಿಸಬೇಕೆಂಬ ಬೇಡಿಕೆ ಇದ್ದದ್ದೆ.ಆದ್ರೆ ಕರ್ನಾಟಕವನ್ನು ಕನ್ನಡನಾಡನ್ನಾಗಿಯೇ ಉಳಿಸಿಕೊಳ್ಳಬೇಕೆಂಬ ಆಲೋಚನೆಯು ನಮ್ಮಲ್ಲಿ ನಿತ್ಯ ಬೇಕಲ್ಲಾ!
ಕೇರಳದ ಕಾಸರಗೋಡನ್ನು ಕರ್ನಾಟಕಕ್ಕೆ ಸೇರಿಸಬೇಕೆಂಬ ಬೇಡಿಕೆ ಇದ್ದದ್ದೆ.ಆದ್ರೆ ಕರ್ನಾಟಕವನ್ನು ಕನ್ನಡನಾಡನ್ನಾಗಿಯೇ ಉಳಿಸಿಕೊಳ್ಳಬೇಕೆಂಬ ಆಲೋಚನೆಯು ನಮ್ಮಲ್ಲಿ ನಿತ್ಯ ಬೇಕಲ್ಲಾ!
ಅಭಿನಂದನೆಗಳು...ಒಳ್ಳೆಯ ಬರಹ. ನೀವು ಹೇಳಿದುದ್ದರರಲ್ಲಿ ನಿಜವಿದೆ.
ಏನ್ಸಾರ್ ಇತ್ತೀಚೆಗೆ ಬರಹದ ಟ್ರ್ಯಾಕ್ ಚೇಂಜ್ ಆಗಿದೆ? ಒಟ್ಟಿನಲ್ಲಿ ಸ್ವಲ್ಪ ತಲೆಗೆ ಕೆಲಸ ಕೊಡೋಕೆ ಶುರು ಮಾಡಿದ್ದೀರಿ. ಮುಂದುವರಿಯಲಿ....
-ಧರಿತ್ರಿ
ಪ್ರತಿಕ್ರಿಯಿಸಿದ ಎಲ್ಲಾ ಹಿರಿಯ, ಕಿರಿಯ ಸ್ನೇಹಿತರಿಗೂ ಧನ್ಯವಾದ
ನಮಸ್ತೆ,
ಕನ್ನಡದ ಎಲ್ಲ ಯುವ ಕವಿಗಳನ್ನು ಒಂದು ಗೂಡಿಸಲು ವೇದಿಕೆಯಾಗಿ ಯುವ ಕವಿ ಯನ್ನು ಪ್ರಾರಂಭಿಸುತ್ತಿದ್ದೇವೆ. ಕನ್ನಡದ ಎಲ್ಲ ಕವಿಗಳು ಮತ್ತು ಕಾವ್ಯ ಪ್ರೇಮಿಗಳು ಜೊತೆಸೇರಿ ಕಾವ್ಯವನ್ನು ಓದೋಣ, ಕಾವ್ಯವನ್ನು ಚರ್ಚಿಸೋಣ. ನಮ್ಮೊಡನೆ ಸೇರಿ..
http://yuvakavi.ning.com/
ಎಂಥದ್ದು ಬ್ಯುಸಿನಾ? ಮುಂದಿನ ಬರಹಕ್ಕಾಗಿ ಕಾಯುತ್ತಾ ಇದ್ದೇವೆ. ಚುನಾವಣಾ ಬ್ಯಸಿನಾ>ಏನಾದ್ರೂ ಬರೆಯಿರಿ
-ಧರಿತ್ರಿ
Post a Comment