ರಾತ್ರಿಯೆಲ್ಲಾ ನಿದ್ದೆಯಿಲ್ಲ!
ಶಾರದಮ್ಮನಿಗೆ ಪ್ರತಿ ದಿನವೂ ಜಾಗರಣೆ..
ಮಾಡಿನಲ್ಲಿ ಬಡಬಡ ಶಬ್ದವಾದರೆ ದಿಗಿಲು
ಮೊನ್ನೆ ಮೊನ್ನೆಯಷ್ಟೇ ಕಟ್ಟಹಾವಿಗೆ ಸೀಮೆಎಣ್ಣೆ ಸುರಿದು ಸುಟ್ಟು ಬೂದಿ ಮಾಡಿದ್ದು ಇನ್ನೂ ನೆನಪಾಗಿಯೇ ಉಳಿದಿದೆ. ಹಾಗಿರುವಾಗ ಯಾವ ಹೊತ್ತಿಗೆ ಎಂಥ ಹಾವು ಬಂದು ಬೀಳುತ್ತದೆ ಎಂದು ಹೇಳಲು ಸಾಧ್ಯವೇ?
ಪತಿ ವಿಷ್ಣುಭಟ್ಟರು ಹತ್ತಿರದ ದೇವಸ್ಥಾನದಲ್ಲಿ ಅರ್ಚಕ.
ತಿಂಗಳಿಗೆ ಮೂರುವರೆ ಸಾವಿರ ಸಂಬಳ. ಮತ್ತೊಂದು ಮುರುಕಲು ಮನೆ. ಅದೂ ದೇವಸ್ಥಾನ ಕಮಿಟಿ ಕೊಟ್ಟದ್ದು. ಅವರಿಗೆ ಭಟ್ಟರ ತಟ್ಟೆ ಮೇಲೇ ಕಣ್ಣು.
"ಭಟ್ಟನಿಗೇನು? ಪುಳಿಚಾರು? ನೇವೇದ್ಯಕ್ಕೆ ಸಿಕ್ಕಿದ್ದನ್ನು ತಿಂದು ಮಣಮಣ ಮಂತ್ರ ಹೇಳಿದರೆ ಆಯ್ತಲ್ಲ? ಇನ್ನೇನುಂಟು? "- ಇದು ಕಮಿಟಿಯ ಅಭಿಪ್ರಾಯ. ತಟ್ಟೆಗೆ ಯಾರಾದರೂ ನೂರು ರುಪಾಯಿ ಕೊಡ್ತಾರೇನೋ ಎಂದು ನೋಡಲು ಸೋಡಕುಪ್ಪಿ ಗ್ಲಾಸಿನ ಕ್ಲಾರ್ಕ್.
ಮೊದಲೇ ಅಲ್ಲಿಂದಲ್ಲಿಗೆ ಹಿಡಿಜೀವದ ಪತಿ ಹಾರ್ಟ್ ಪೇಶಂಟ್. ಶಾರದಮ್ಮನೂ ಗಟ್ಟಿ ಜೀವವೇನಲ್ಲ. ಅವರ ಕಣ್ಣೂ ಮಂಜಾಗಿದೆ. ಇಬ್ಬರಿಗೂ ಬಾಳ ಮುಸ್ಸಂಜೆಯ ಹೊತ್ತು. ಆದರೆ ದಟ್ಟ ದಾರಿದ್ರ್ಯ.
ಹೆಸರಿಗೆ ಮಾತ್ರ ಮೇಲ್ಜಾತಿ. ಹಾಗಾಗಿ ಇರುವ ಒಬ್ಬ ಮಗನ ವಿದ್ಯಾಭ್ಯಾಸಕ್ಕೂ ಸಂಕಷ್ಟ.!
ಆದರೂ ದೊಡ್ಡ ಉದ್ಯೋಗಕ್ಕೆ ಹೋಗಿ ಅಪ್ಪ ಅಮ್ಮನನ್ನು ಸಾಕುತ್ತೇನೆ ಎಂಬ ಹುಚ್ಹು ಮಗ ಪ್ರಸಾದನಿಗೆ.
ಭಟ್ಟರ ಕೆಲಸವೇನು?
ಬೆಳಗ್ಗೆ ೫ ಗಂಟೆಗೆ ಎದ್ದು ತಣ್ಣೀರಲ್ಲಿ ಮಿಂದು ದೇವಸ್ಥಾನಕ್ಕೆ ಹೋಗಿ ಪೂಜಾ ಸಾಹಿತ್ರ ರೆಡಿ ಮಾಡಬೇಕು. ಎಲ್ಲಿಗೂ ಹೋಗೋ ಹಾಗಿಲ್ಲ. ಬೆಳಗ್ಗೆ ೯ರವರೆಗೆ ದೇವಸ್ಥಾನದಲ್ಲೇ. ಮತ್ತೆ ೧೧.೩೦ಗೆ ಮಧ್ಯಾಹ್ನದ ಪೂಜೆಗೆ ರೆಡಿಯಾಗಬೇಕು. ಸಂಜೆ ೪ಕ್ಕೆ ಮತ್ತೆ ದೇವಸ್ಥಾನಕ್ಕೆ ಹಾಜರಾಗಬೇಕು. ಪತ್ತೆ ರಾತ್ರಿ ೯.೩೦ಗೇ ಬಿಡುಗಡೆ.
ಹೊರಗಿಂದ ನೋಡೋವರಿಗೆ ಭಟ್ಟರಿಗೇನು? ಮಣಮಣ ಹೇಳಿದರೆ ಸಾಕು....) ಎನ್ನೋರೇ ಜಾಸ್ತಿ. ಆದರೆ ಯಾರು ಕೇಳಿದ್ದಾರೆ ಭಟ್ಟರಿಗೆ ವಯಸ್ಸೆಷ್ಟು? ಅವರಿಗೆ ಅಸಿಡಿಟಿ ಇದೆಯಾ? ಗ್ಯಾಸ್ಟ್ರಿಕ್ ಇದ್ಯಾ? ಕಿಡ್ನಿ ಸ್ತೋನ್ ಇದ್ಯಾ? ಹಾರ್ಟ್ ಪ್ರಾಬ್ಲೆಂ ಇದ್ಯಾ? ಹಾಗೇನಾದರೂ ಆದರೆ ಸರ್ಕಾರ ಅವರನ್ನು ನೋಡುತ್ತಾ? ಸಂಘ ಸಂಸ್ಥೆಗಳು ಹತ್ತಿರ ಬರುತ್ತಾ?
ಇಡೀ ಜೀವಮಾನ ಜೀತದಾಳಿನಂತೆ ಕಮಿಟಿ ಹೇಳಿದ್ದನ್ನೆಲ್ಲಾ ಕೇಳಿಕೊಂಡು ಬಂದ ಭಟ್ಟರ ಸಪೋರ್ಟಿಗೆ ನಕ್ಸಲರೂ ಬರಲ್ಲ. ಅವರಿಗೆ ಭಟ್ಟರ ಜಾತಿಯೇ ಆಗಲ್ಲ.
ಹಾಗಾದರೆ ಭಟ್ಟರಿಗೆ ಯಾರು ಗತಿ?ದೇವರೇ ಗತಿ.
ಮೊನ್ನೆ ಶಾರದಮ್ಮನಿಗೆ ಕಟ್ಟಿಹಾವು ಕಚ್ಹಿದಾಗ ಯಾರು ಸಹಾಯಕ್ಕೆ ಬಂದಿದ್ದರು? ಭಟ್ಟರಿಗೆ ಆಸ್ಪತ್ರೆಗೆ ಕರ್ಕೊಂಡು ಹೋಗಲಿಕ್ಕೆ ಸಾಕುಬೇಕಾಯ್ತು. ಹೇಗೋ ಬದುಕುಳಿದ ಶಾರದಮ್ಮ ಈಗಲೂ ದಮ್ಮು ಕಟ್ಟಿ ದೇವಸ್ಥಾನದ ಕಮಿಟಿ ಚೇರ್ರ್ಮನ್ ಹೇಳಿದ ಕೂಡಲೇ "೨೫ ಜನಕ್ಕೆ ಮಧ್ಯಾಹ್ನದ ನೇವೇದ್ಯ” ಮಾಡ್ತಾರೆ. ಮನೆಯಲ್ಲಿ ಅಕ್ಕಿ, ಬೇಳೆ, ಬೆಲ್ಲ ಇದೆಯಾ ಎಂದು ಯಾರೂ ಕೇಳ್ತಾರೆ?
********
ಹಾಗೇ ದಿನ ಸಾಗ್ತಾ ಇದೆ. ಮೊನ್ನೆ ಪೇಪರ್ನಲ್ಲಿ ಕೇರಳ ಸರ್ಕಾರ ಧಾರ್ಮಿಕ ದತ್ತಿ ಇಲಾಖೆ ದೇವಸ್ಥಾನ ಅರ್ಚಕರ ವೇತನ ಇತ್ಯಾದಿಗಳ ಬಗ್ಗೆ ಬಂದಾಗ ೫೫ ವರ್ಷದ ಭಟ್ಟರೂ ಕನಸು ಕಾಣಲು ಆರಂಭಿಸಿದ್ದಾರೆ.
ಆದರೆ ಪಾಪ ಭಟ್ಟರಿರೋದು ಕರ್ನಾಟಕದಲ್ಲಿ...ದೊಡ್ಡ ದೊಡ್ಡ ಮಟಾಧೀಶರ ಮೇಲಷ್ಟೇ ಸರ್ಕಾರಕ್ಕೆ ಕಣ್ಣು.
ಸದಾ ಎಲ್ಲರಿಂದಲೂ ಅವಹೇಳನೆಗೆ ಗುರಿಯಾಗೋ ಭಟ್ಟರ ಗೋಳು ಕೇಳುವವರಾರು? ಸಪೋರ್ಟಿಗೆ ಬರೋ ಪಕ್ಷ, ಸಂಘಟನೆ ಯಾವ್ದಾದ್ರೂ ಇದ್ಯಾ?*****
ಪಾಪ ಭಟ್ಟರ ಸಂಸಾರ
ಕನಸು ಕಾಣಲಿ ಬಿಡಿ..
ಅವರ ಮನೆ ಮಾಡಿನಿಂದ ಅಪರಾತ್ರಿ ಹಾವು ಬೀಳದಿರಲಿ ಮಗನಿಗೆ ಬೇಗ ಕೆಲಸ ಸಿಗಲಿ ಎಂದು ಹಾರೈಸೋಣ.
*****