Saturday, October 27, 2018

ನಮ್ಮೂರಿನ ಜನರಿಗೆ ರೈಲು ಪ್ರಯಾಣ ಯಾತಕ್ಕೆ ಬೇಡ?

  • ಹರೀಶ ಮಾಂಬಾಡಿ
www.bantwalnews.com
ಈ ಹಿಂದೆ ಈ ವಿಷಯವನ್ನು ನಾವು ಚರ್ಚಿಸಿದ್ದೆವು. ಇದು ಅದರ ಮುಂದುವರಿದ ಭಾಗವಷ್ಟೇ. ಕರಾವಳಿ ಮೂಲದ ಸಾಕಷ್ಟು ಹೋರಾಟಗಾರರ ಪ್ರಯತ್ನದಿಂದ ಇಂದು ನಾವು ಮಂಗಳೂರಿನಿಂದ ಬೆಂಗಳೂರಿಗೆ ರೈಲಿನಲ್ಲಿ ಓಡಾಡಲು ಸಾಧ್ಯವಾಗಿದೆ. ಆದರೆ ಪ್ರಾಕೃತಿಕ ವಿಕೋಪಗಳು ಉಂಟಾದರೆ (ಸಕಲೇಶಪುರ ಘಾಟಿಯಲ್ಲಿ) ರೈಲು ಬಂದ್ ಆಗುತ್ತದೆ. ಕೇರಳೀಯರಂತೆ ನಮ್ಮಲ್ಲಿ ಲೋಕಲ್ ರೈಲಿನ ಕುರಿತು ಆಸಕ್ತಿ ಇಲ್ಲ.
ಯಾಕೆ ಹೀಗೆ?
ಸುಮ್ಮನೆ ಒಂದು ಬಾರಿ ರೈಲ್ವೆ ನಿಲ್ದಾಣಕ್ಕೆ ಸುತ್ತು ಹಾಕಿ. ಅಲ್ಲಿ ಜನಜಂಗುಳಿಯೇ ಕಾಣಿಸುವುದಿಲ್ಲ. ಬಸ್ ನಿಲ್ದಾಣದಲ್ಲಿ ಇರುವ ಜನರು ರೈಲ್ವೆ ನಿಲ್ದಾಣದಲ್ಲೂ ಸಮಾನವಾಗಿ ಇರುತ್ತಾರೆ ಎಂದಾದರೆ ನೀವು ಮಂಜೇಶ್ವರ, ಉಪ್ಪಳ, ಕಾಞಂಗಾಡ್ ನಂಥ ಜಿಲ್ಲಾ ಕೇಂದ್ರವಲ್ಲದ ಸಣ್ಣ ಪಟ್ಟಣಗಳಿಗೆ ಹೋಗಬೇಕು. ನಮ್ಮ ಪುತ್ತೂರು, ಬಂಟ್ವಾಳಗಳಲ್ಲಿ ಅದನ್ನು ನಿರೀಕ್ಷಿಸಬಹುದೇ? ಯಾಕೆ ರೈಲ್ವೆ ನಿಲ್ದಾಣಕ್ಕೆ ಜನರು ಬರುತ್ತಿಲ್ಲ ಎಂದು ಯಾರಾದರೂ (ಹೋರಾಟಗಾರರು ಅಲ್ಲದ ಜನಸಾಮಾನ್ಯರು) ಚಿಂತಿಸಿದ್ದಾರೆಯೇ? ರಾಜಕಾರಣಿಗಳು ಎಷ್ಟು ಬಾರಿ ರೈಲ್ವೆ ನಿಲ್ದಾಣಕ್ಕೆ ಬರುತ್ತಾರೆ? ಜನರಿಗೆ ಇದು ಉಪಯೋಗವಾಗುತ್ತದೆಯೋ ಇಲ್ಲವೋ ಎಂದು ಎಷ್ಟು ಬಾರಿ ಚಿಂತಿಸುತ್ತಾರೆ? ತಮ್ಮ ಹಿಂಬಾಲಕರನ್ನು ಬೆಂಗಳೂರಿಗೆ ಸಮಾವೇಶವೋ ಇನ್ನಿತರ ಕಾರ್ಯಕ್ರಮಗಳಿಗೋ ಕರೆದುಕೊಂಡು ಹೋಗಬೇಕಾದರೆ ಕೆಲವೆಡೆ ರೈಲು ಟಿಕೆಟ್ ಬುಕ್ ಮಾಡುವ ಪದ್ಧತಿ ಉಂಟು. ಆದರೆ ಇಲ್ಲಿನ ರಾಜಕಾರಣಿಗಳಿಗೆ ರೈಲು ಉಂಟೋ, ಇಲ್ಲವೋ ಎಂಬುದೇ ಗೊತ್ತಿಲ್ಲ ಎಂಬುದು ಕ್ಲೀಷೆ ಅಲ್ಲ.

ಹಾಗಾದರೆ ನಮಗೆ ರೈಲು ಬೇಡವೇ? ಬೇಕು. ಇಂದಿಗೂ ಮಂಗಳೂರು, ಬಿ.ಸಿ.ರೋಡಿನಿಂದ ಬೆಂಗಳೂರಿಗೆ ಹೋಗುವ ರೈಲುಗಳೆಲ್ಲವೂ ಹೌಸ್ ಫುಲ್ ಎಂಬಂತೆ ಪ್ರಯಾಣಿಸುತ್ತವೆ. ಜನರು ಬರುವುದಿಲ್ಲ ಎನ್ನುತ್ತೀರಿ, ಹೌಸ್ ಫುಲ್ ಎನ್ನುತ್ತೀರಿ ಯಾಕೆ ಎಂದು ಕೇಳಿದಿರಾ? ಇವೆಲ್ಲವೂ ಬಸ್ ಗೆ ಪರ್ಯಾಯವಾಗಿ ಹೋಗುವವರು. ಬಸ್ ನಲ್ಲಿ ಹೋಗಲು ಅಸಾಧ್ಯವಾದವರು ಹಾಗೂ ಕಡಿಮೆ ಖರ್ಚಿನಲ್ಲಿ ಪುರುಸೊತ್ತಿನಲ್ಲಿ ಹೋಗಲು ಇಚ್ಛಿಸುವವರು ಎಂಬುದನ್ನು ಗುರುತು ಮಾಡಿಕೊಳ್ಳಬೇಕು.
ಉಳಿದ ಕಡೆ ಹಾಗಲ್ಲ. ಅರ್ಜೆಂಟ್ ಬೆಂಗಳೂರಿಗೆ ಹೋಗಬೇಕು ಎಂದರೂ ರೈಲನ್ನು ಬಳಸುವವರಿದ್ದಾರೆ. ಕೇರಳೀಯರಂತೆ ರೈಲು awareness ಹೊಂದಿದವರು ಇಲ್ಲಿ ಇಲ್ಲ. ಇಂದಿಗೂ ಮಂಗಳೂರು – ಪುತ್ತೂರು, ಮಂಗಳೂರು – ಉಡುಪಿ ಲೋಕಲ್ ಪ್ಯಾಸೆಂಜರ್ ಗಳಿಲ್ಲ. ಹೀಗಾಗಿಯೇ ದ.ಕ. ಜಿಲ್ಲೆಯಲ್ಲಿ ರೈಲ್ವೆ ವ್ಯವಸ್ಥೆ ಸಂಪೂರ್ಣ ನಿರ್ಲಕ್ಷಿಸಲ್ಪಟ್ಟಿದೆ.
ಮಂಗಳೂರಿನ ಕಂಕನಾಡಿ ರೈಲ್ವೆ (ಜಂಕ್ಷನ್) ನಿಲ್ದಾಣ ಕೆಲವೊಮ್ಮೆ ಹೊತ್ತು ಕಳೆಯಲು ಬಳಕೆಯಾಗುತ್ತದೆ. ಉದಾ: ಬಿ.ಸಿ.ರೋಡಿನಿಂದ ಮಂಗಳೂರಿಗೆ ಬಸ್ಸಿನಲ್ಲಿ ಹೋಗುವುದಾದರೆ 24 ರೂ. ಹಾಗೂ ಅರ್ಧ ಗಂಟೆಯ ಸಮಯ. ಅದೇ ಹೊತ್ತಿನಲ್ಲಿ ರೈಲಿನಲ್ಲಿ (ಪ್ಯಾಸೆಂಜರ್) ಹೋಗುವುದಾದರೆ 10 ರೂ. ಮತ್ತು 1 ಗಂಟೆ ಬೇಕು. 30 ನಿಮಿಷ ಕಂಕನಾಡಿಗೆ, 20 ನಿಮಿಷ ಅಲ್ಲೇ ಹೊತ್ತು ಕಳೆದು ಕಾಲಹರಣಕ್ಕೆ.
ಇಂಥದ್ದನ್ನೆಲ್ಲ ನಿವಾರಿಸಲು ಶಕ್ತವಾದರೆ ನಮ್ಮ ಸ್ಥಳಿಯರಿಗೆ ಪುತ್ತೂರು – ಮಂಗಳೂರು ಪ್ಯಾಸೆಂಜರ್ ರೈಲುಗಳು ಹತ್ತಿರವಾಗಬಹುದು.
ಕಣ್ಣೂರು-ಬೆಂಗಳೂರು, ಅಥವಾ ಕಾರವಾರ – ಬೆಂಗಳೂರು ರೈಲಿನ  DISADVANTAGE ಏನೆಂದರೆ, ಕಣ್ಣೂರು ಅಥವಾ ಕಾರವಾರದಿಂದ ರೈಲು ಬರುವಾಗ ತಡವಾದರೆ ಮಂಗಳೂರಿನ ಪ್ಯಾಸೆಂಜರ್ ಗಳೂ ತೊಂದರೆ ಅನುಭವಿಸಬೇಕು. ಕಾರವಾರ ಅಥವಾ ಕಣ್ಣೂರಿನಿಂದ ಬರುವವರಿಗೆ ಮಂಗಳೂರಿನವರು ಮೊದಲ ಆದ್ಯತೆ ಕೊಡಬೇಕು. ಇದರ ಜೊತೆಗೆ ಮಂಗಳೂರಿನಿಂದಲೇ ಬೆಂಗಳೂರಿಗೆ ಹೊರಡುವ ರೈಲು ಬೆಂಗಳೂರಿಗೆ ಅವೇಳೆಯಲ್ಲಿ ತಲುಪದೆ ಪ್ರಯಾಣಿಕರಿಗೆ ಅಗತ್ಯವಾದ ಹೊತ್ತಿನಲ್ಲಿ ತಲುಪುವಂತಾದರೆ, ಮಂಗಳೂ ಸೀಟು ಹೆಚ್ಚಳವಾಗುತ್ತದೆ, ಮಂಗಳೂರು ಮೊದಲ ಸ್ಟಾಪ್ ಆಗುವ ಬದಲು ಕೇವಲ ಹತ್ತು ನಿಮಿಷಕ್ಕೆ ಹತ್ತಲು ಇರುವುದು ಎಂದಾದರೆ, ಜಿಲ್ಲಾ ಕೇಂದ್ರ, ದೊಡ್ಡ ನಗರ, ಸ್ಮಾರ್ಟ್ ಸಿಟಿ ಎಂಬ ಹಣೆಪಟ್ಟಿ ಯಾತಕ್ಕೆ? ಮಂಗಳೂರಿಂದಲೇ ಹೊರಡುವ ರೈಲು ಇದ್ದರೆ, ಮಂಗಳೂರು, ಬಂಟ್ವಾಳ, ಪುತ್ತೂರಿನ ಪ್ರಯಾಣಿಕರಿಗೆ ಹೆಚ್ಚು ಸೀಟುಗಳು ದೊರಕುತ್ತವೆ. ಕಡಿಮೆ ದರದಲ್ಲಿ ಸುಖವಾಗಿ ಬೆಂಗಳೂರಿಗೆ ಪ್ರಯಾಣಿಸಲು ಸಾಧ್ಯ.
ನಮ್ಮ ರೈಲ್ವೆ ನಿಲ್ದಾಣಗಳನ್ನು ಜನಸ್ನೇಹಿಯಾಗಿಸಲು ಪ್ರಯತ್ನಗಳು ಆಗಬೇಕು. ಮೂಲಸೌಕರ್ಯಗಳು ಹೆಚ್ಚಾಗಬೇಕು. ಜನರಿಗೆ ಇದು ನಮ್ಮದು ಎಂಬಂತೆ ಭಾಸವಾಗಲು ಸ್ಥಳೀಯರು (ಕನ್ನಡ ಬಲ್ಲವರು) ನಿಲ್ದಾಣಗಳಲ್ಲಿ ಕೆಲಸ ಮಾಡಬೇಕು. ಎಲ್ಲಕ್ಕಿಂತ ಹೆಚ್ಚಾಗಿ ರೈಲ್ವೆ ಸಲಹಾ ಸಮಿತಿ ಹಾಗೂ ಸ್ಥಳೀಯ ನಿಲ್ದಾಣ ಸಮಿತಿಗಳು ಇದ್ದಲ್ಲಿ ಸ್ಥಳೀಯರನ್ನೇ ರಾಜಕೀಯ ರಹಿತವಾಗಿ ಸೇರಿಸಿಕೊಳ್ಳಬೇಕು. ಬಂಟ್ವಾಳಕ್ಕೆ ಬಂಟ್ವಾಳದವರು, ಪುತ್ತೂರಿಗೆ ಪುತ್ತೂರಿನವರು, ಮಂಗಳೂರಿಗೆ ಮಂಗಳೂರಿನವರು ಒಟ್ಟಾದರೆ ರೈಲು ನಿಲ್ದಾಣ ನಮ್ಮೂರಿನದ್ದು ಎಂಬ ಭಾವನೆ ಮೂಡಲು ಸಾಧ್ಯ. ಇದೆಲ್ಲ ಸಾಧ್ಯವೇ? ನೋಡೋಣ. ಆಶಾದಾಯಕ ಬೆಳವಣಿಗೆಗಳನ್ನು ನಿರೀಕ್ಷಿಸೋಣ. ಬಂಟ್ವಾಳನ್ಯೂಸ್ ಜನಸ್ನೇಹಿ ರೈಲು ನಿಲ್ದಾಣವಾಗಬೇಕು ಎಂಬ ಆಶಯದ ವರದಿಯನ್ನು ಹಿಂದೆಯೂ ಮಾಡಿತ್ತು. ಈಗಲೂ ಅಷ್ಟೇ. ಬಡವರ ವಾಹನ ತಮ್ಮದು ಎಂಬುದು ಬಡವರಿಗೆ ಗೊತ್ತಾಗಲಿ. ಬಸ್ ನಿಲ್ದಾಣದಷ್ಟೇ ಜನಜಂಗುಳಿ ರೈಲು ನಿಲ್ದಾಣದಲ್ಲೂ ಇರಲಿ. ಅದಕ್ಕೆಲ್ಲ ರೈಲು ಬಂಡಿ ಸಿಳ್ಳೆ ಹೊಡೆದು ಬರಲಿ.

Tuesday, June 19, 2018

ನಾವಲ್ಲ, ನೀವು, ನೀವಲ್ಲ ನಾವು - ಯಾವುದನ್ನು ಯಾರು ಮಾಡಿದರೇನು?

  • ಅವರು ಇಷ್ಟು ದಿನ ಏನು ಮಾಡುತ್ತಿದ್ದರು, ಛೇ ಒಂದು ರಸ್ತೆ ಸರಿ ಮಾಡಲು ಯೋಗ್ಯತೆ ಇಲ್ವೋ?
ನೀವು ಅವರನ್ನು ಯಾಕೆ ದೂರುತ್ತೀರಿ, ಇವರು ಇಷ್ಟು ವರ್ಷ ಇಲ್ಲಿರಲಿಲ್ವಾ, ದಿನಾ ನೋಡ್ತಾ ಹೋಗುದಿಲ್ವಾ, ಇವರೂ ಮನಸ್ಸು ಮಾಡಿದ್ರೆ ಆಗ್ತಿತ್ತು..
ಛೇ ಅವರು ಅಲ್ಲಿಂದ ಇಷ್ಟು ಕೋಟಿ ತರಿಸಿದರು..
ಹಾಗಲ್ಲ ಸ್ವಾಮಿ ಇವರೂ ಇಲ್ಲಿಂದ ಇಷ್ಟು ಕೋಟಿ ತರಿಸಿದರು, ಏನು ಸುಮ್ಮನೆಯಾ?
ಅವರು ಅಷ್ಟು ಕೋಟಿ ಎಂದು ಹೇಳ್ತಾರಲ್ಲ ದುಡ್ಡು ಯಾರದ್ದು ನಮ್ಮದಲ್ವಾ?
ಇವರು ಇಷ್ಟು ಕೋಟಿ ಹೇಳ್ತಾರಲ್ಲ, ದುಡ್ಡು ಇವರು ಕೊಟ್ಟದ್ದಾ, ನಮ್ಮದಲ್ವಾ?
ಛೇ ನಮಗ್ಯಾಕೆ ಸ್ವಾಮಿ, ಯಾವುದನ್ನು ಯಾರು ಮಾಡಿದರೇನು? ಮಂಗ್ಳೂರಿಗೆ ಬಸ್ಸಿಗೆ ಹೋಗಬೇಕಾದರೆ ಬಿಸಿಲಲ್ಲೇ ನಿಲ್ಲಬೇಕು, ಅವರ ಕಾರೂ ಇಲ್ಲೇ ಬುರ್ರನೆ ಹೋಗ್ತದೆ, ಇವರ ಕಾರೂ ಇಲ್ಲೇ ಬುರ್ರನೆ ಹೋಗ್ತದೆ. ನಾವಿಬ್ಬರೂ ಟಾಟಾ ಮಾಡ್ಬೇಕಷ್ಟೇ.
ಮತ್ತೆ ಎಂಥದ್ದು ಮಾರಾಯ್ರೇ, ನೋಡಿ ಅಲ್ಲಿ ದುಡ್ಡು ಕೊಡದೆ ಕೆಲಸ ಆಗ್ತದಾ? ಇಲ್ಲಿ ಆಧಾರದ ಟೋಕನ್ನಿಗೂ ಕ್ಯೂ ನಿಲ್ಬೇಕಲ್ವಾ? ಇದನ್ನು ಅವರು ಮಾಡ್ತಾರಾ, ಇವರೂ ಮಾಡ್ತಾರಾ?  ಯಾರು ಸರಿ ಮಾಡ್ತಾರೆ? ಎಲ್ಲರೂ ಒಂದೇ
ಹೌದು ಮಾರಾಯ್ರೆ, ಮೊನ್ನೆ ಅವರು ಇವರ ಹೆಗಲಿಗೆ ಕೈ ಹಾಕಿದ್ರಲ್ವಾ, ನಾವೆಂಥಕ್ಕೆ ಚೊರೆ ಮಾಡುದು?
ಹೌದು ಸ್ವಾಮಿ, ಒಟ್ಟಾರೆಯಾಗಿ ನಾವು ಬಂಗ ಬರುವುದನ್ನು ಯಾರಾದರೂ ತಪ್ಪಿಸ್ಲಿಕ್ಕಾಗ್ತದಾ, ಬನ್ನಿ ನಾಗಣ್ಣನ ಕ್ಯಾಂಟೀನಿನಲ್ಲಿ ಬಿಸಿಬಿಸಿ ಗೋಳಿಬಜೆ ಉಂಟು. ಅದಕ್ಕೆ ಚಟ್ನಿ ಹಾಕಿ ತಿನ್ನುವ.
ಹಾಂ ಅದು ಒಳ್ಳೆದು, ಅಲ್ಲೀಗ ದೋಸೆಯೂ ಉಂಟಂತೆ. ಹೌದು ಮಾರಾಯ್ರೆ, ನೀವು ಕೆಎಸ್ಸಾರ್ಟಿಸಿ ಬಸ್ಸಲ್ಲಿ ಬಂದದ್ದಾ?
ಹೌದು. ನಾನು ಬಸ್ಸಲ್ಲಿ ಬಂದದ್ದೇನೋ ಹೌದು. ಆದರೆ ಇಳಿಯುವಾಗ ಉಂಟಲ್ಲ, ಭಾರೀ ಕಷ್ಟ ಆಯ್ತು ಮಾರ್ರೆ.
ಎಂಥ ಆಯ್ತು?
ಅಲ್ಲ ಮಾರ್ರೆ, ಬಿ.ಸಿ.ರೋಡಿನ ಸರ್ವೀಸ್ ರಸ್ತೆ ಶುರು ಆಗುವ ಜಾಗದಲ್ಲಿ ಬಿಗಿಲು ಹಾಕಿದ್ರು ಕಂಡಕ್ಟರು. ಬೇಗ ಬೇಗ ಬೇಗ ಇಳೀರಿ ಅಜ್ಜೆರೆ ಎಂದು ನನ್ನ ತಲೆಯಲ್ಲಿದ್ದ ನಾಲ್ಕು ಬಿಳಿ ಕೂದ್ಲು ನೋಡಿ ತಮಾಷೆ ಮಾಡುದುಂಟ ಮಾರಾಯ್ರೆ, ನಾನು ಹಿಂದೆ ಮುಂದೆ ನೋಡದೆ ಇಳಿದೆ. ಬುರುಕ್ಕನೆ ಅಲ್ಲೊಂದು ಬೈಕು ಸಡನ್ ಬ್ರೇಕ್ ಹಾಕಿದ್ದಲ್ವಾ ಮಾರಾಯ್ರೆ, ಅಂವ ಹೆಲ್ಮೆಟ್ ತೆಗೆದು ನನಗೆ ಸಮಾ ಬೈದ, ನಾನೂ ನಾಲ್ಕು ಬೈದೆ. ಮತ್ತೆಂತದ್ದು, ನಾವು ಬಿ.ಸಿ.ರೋಡಿಗೆ ಬಂದ್ರೆ ಬಸ್ಸಿನವರು ಇಳಿಸುದು ಇಲ್ಲೇ ಅಲ್ವಾ ಮಾರ್ರೆ
ಛೇ, ಹೌದಾ, ಅಲ್ಲಿ ಪೊಲೀಸರು ಇರ್ಲಿಲ್ವಾ?
ಕೆಲವೊಮ್ಮೆ ಇರ್ತಾರಂತೆ. ನಾನು ಇಳೀವಾಗ ಇರ್ಲಿಲ್ಲ. ಯಾರೋ ಮೊಬೈಲಲ್ಲಿ ಮಾತಾಡಿಕೊಂಡು ಇದ್ರು. ಆದ್ರೆ ಬಸ್ಸಿನವರು ಅಲ್ಲೇ ಇಳ್ಸಿದ್ರೆ ಇವರೇನು ಮಾಡ್ತಾರೆ? ಬಸ್ಸಿನವರಿಗೆ ಬೇರೆ ಜಾಗ ಇಲ್ವಾ? ನಮ್ಮನ್ನು ಇಳಿಸ್ಲಿಕ್ಕೆ? ನಿಮ್ಮ ಅವರು ಎಂಥ ಮಾಡ್ತಾರೆ, ಸುಮ್ಮನೆ ಹೋಗುದಾ?
ಅಯ್ಯೋ, ಮತ್ತೆ ನೀವು ಅವರನ್ನು ದೂರ್ತೀರಲ್ಲ, ನಿಮ್ಮ ಇವರೂ ಏನು ಮಾಡಿದ್ದಾರೆ, ಇವರಿಗೂ ಹೇಳ್ಬಹುದಿತ್ತಲ್ವಾ? ನಾವ್ಯಾಕೆ ಚರ್ಚೆ ಮಾಡುದು? ಓ. ಗೋಳಿಬಜೆ ತಿಂದ್ರಾ, ಇನ್ನೊಂದು ಪ್ಲೇಟ್ ತೆಕೊಳ್ಳಿ, ಮತ್ತೆ ಬಸ್ಸು ಹತ್ತಬೇಕಿದ್ರೆ ಆ ಬದಿ ನಿಲ್ಬೇಕು. ಅಲ್ಲೂ ಶೆಲ್ಟರ್ ಇಲ್ಲ.
ಹೌದಲ್ವಾ, ನನಗೆ ಆ ಬಿಳಿ ಬಿಲ್ಡಿಂಗ್ ಒಳಗೆ ಹೋಗಲಿದೆ. ನೋಡಬೇಕು ಇನ್ನು ಎಷ್ಟು ಹೊತ್ತು ಕಾಯಬೇಕು ಎಂದು ಗೊತ್ತಿಲ್ಲ.
ಹೌದಾ? ಅಲ್ಲೇನು ವಿಶೇಷ.
ಅದನ್ನು ಇನ್ನೊಮ್ಮೆ ಹೇಳ್ತೇನೆ ಮಾರಾಯ್ರೇ.


Wednesday, April 19, 2017

ಸತ್ಯದ ಬೇರುಗಳ ಅನ್ವೇಷಣೆಯ ನಡುವೆ


ಇಬ್ಬರಿಗೂ ಗೊತ್ತು. ನಾವು ಹೇಳುತ್ತಿರುವುದು ಅಪ್ಪಟ ಸುಳ್ಳು. ಆದರೆ ಇಬ್ಬರೂ ನಾವಿಬ್ಬರು ಗಳಸ್ಯ ಕಂಠಸ್ಯ ಎನ್ನುತ್ತಾರೆ. ನಾವಿಬ್ಬರೂ ಜೊತೆಯಾಗಿ ದುಡಿಯುತ್ತೇವೆ ಎನ್ನುತ್ತಾರೆ. ಯಾರಾದರೂ ಆ ಇಬ್ಬರನ್ನೂ ಪ್ರಾಮಾಣಿಕತೆಯ ಮೂರ್ತಿ, ಸಜ್ಜನಿಕೆಯ ಪ್ರತಿರೂಪ ಎಂದು ಭಾವಿಸಿದರೆ ಶುದ್ಧ ತಪ್ಪು. ಏಕೆಂದರೆ ಒಬ್ಬರನ್ನು ನೋಡಿದರೆ ಮತ್ತೊಬ್ಬರಿಗೆ ಆಗುವುದಿಲ್ಲ. ಕೆಲ ರಾಜಕೀಯ ಪಕ್ಷಗಳಲ್ಲಿ ಸದ್ಯ ನಡೆಯುತ್ತಿರುವ ವಿದ್ಯಮಾನ ಇವು. ಪತ್ರಿಕೆಯ ಪುಟಗಳನ್ನು ತಿರುವಿದರೆ ದೇಶೋದ್ಧಾರದ ಮಾತುಗಳನ್ನು ರಾಜಕೀಯದವರು ಆಡಿದರೆ, ಅದನ್ನು ನಿಷ್ಠಾವಂತರಾಗಿ ಪಾಲಿಸುತ್ತೇವೆ ಎಂಬುದನ್ನು ಅಧಿಕಾರಿಗಳು ಉಲಿಯುತ್ತಾರೆ. ಪರಮಸತ್ಯ ಇದಲ್ಲ ಎಂದು ಗೊತ್ತಿದ್ದರೂ ನಾಗರಿಕರು ಅಹುದಹುದು ಎಂದು ತಲೆದೂಗುತ್ತಾರೆ. ಹೀಗೆ ಭ್ರಮಾಲೋಕವೊಂದನ್ನು ಕಟ್ಟಿಕೊಂಡು ನಾವು ಬದುಕುತ್ತೇವೆ.
ಸುಮ್ಮನೆ ತಣ್ಣಗೆ ಕುಳಿತು ಯೋಚಿಸಿ. ಮೊನ್ನೆ ತಾನೇ ಹುಟ್ಟಿದ ಮಗುವಿಗೆ ನೀವು ಯಾರನ್ನು ಆದರ್ಶ ಎಂದು ತೋರಿಸುತ್ತೀರಿ, ಯಾರ ಹಾಗೆ ಮಗು ಬೆಳೆಯಬೇಕು ಎಂದು ಹರಸುತ್ತೀರಿ?
ಇಲ್ಲೊಂದು ಪುಟ್ಟ ಕತೆ ಹೇಳುತ್ತೇನೆ.
ಇಬ್ಬರು ಸರಕಾರಿ ನೌಕರಿಗೆ ಸೇರಿದರು. ಇಬ್ಬರಿಗೂ ಸಮಾನ ಅಂಕ. ಇಬ್ಬರೂ ಬುದ್ಧಿವಂತರು. ಸಮಾಜಸೇವೆಯ ಕಾಳಜಿ ಇಬ್ಬರಿಗೂ ಇತ್ತು. ಆದರೆ ಬರಬರುತ್ತಾ ಒಬ್ಬನಿಗೆ ಮೇಲುಸಂಪಾದನೆಯ ರುಚಿ ಹತ್ತಿತು. ಮತ್ತೊಬ್ಬನಿಗೆ ಅದು ಸಹ್ಯವೇ ಆಗಲಿಲ್ಲ. ಸರಕಾರ ಇಬ್ಬರಿಗೂ ಸಂಬಳ ಕೊಡುತ್ತಿತ್ತು. ಆ ಸಂಬಳದಲ್ಲಿ ಮೇಲುಸಂಪಾದನೆ ತೆಗೆದುಕೊಳ್ಳದಾತನೂ ಯಾವ ತಾಪತ್ರಯಗಳಿಲ್ಲದೆ ಬದುಕಿದ. ಆದರೆ ಮೇಲುಸಂಪಾದನೆ ಮಾಡುವಾತ ವೈಭವದ ಬದುಕನ್ನು ಆಯ್ಕೆ ಮಾಡಿಕೊಂಡ. ಆತ ಐಶಾರಾಮೀ ವಾಹನದಲ್ಲಿ ಹೋದರೆ, ಈತ ತಾನೇ ಸಾಲ ಮಾಡಿ ಖರೀದಿಸಿದ ವಾಹನದಲ್ಲಿ ಹೋಗಲು ಆರಂಭಿಸಿದ. ಒಂದು ದಿನ ಇಬ್ಬರೂ ತಮ್ಮ ಕಚೇರಿಯ ಮೊಗಸಾಲೆಯಲ್ಲಿ ಹರಟುತ್ತಾ ಕುಳಿತಿದ್ದರು. ಅಲ್ಲಿಗೆ ಬಂದ ಸಾರ್ವಜನಿಕನೊಬ್ಬ ಮೇಲುಸಂಪಾದನೆ ಮಾಡುವಾತನನ್ನು ಅತಿ ವಿನಯದಿಂದ ಭಾರೀ ಗೌರವದಿಂದ ಕಂಡ. ಲಂಚ ಪಡೆಯದ ಅಧಿಕಾರಿ ಪುಟ್ಟ ನಮಸ್ಕಾರವೊಂದನ್ನಷ್ಟೇ ಪಡೆದ. ಸರಿ, ಇಬ್ಬರೂ ನಿವೃತ್ತಿ ಹೊಂದಿದರು. ನಿವೃತ್ತಿ ಹೊಂದಿದ ಇಬ್ಬರಲ್ಲಿ ಪ್ರಾಮಾಣಿಕನಿಗೆ ಪುಟ್ಟ ಸನ್ಮಾನವೊಂದು ನಡೆದರೆ, ಮೇಲುಸಂಪಾದನೆ ಮಾಡಿದಾತನಿಗೆ ಸಾರ್ವಜನಿಕ ಸನ್ಮಾನವೇ ನಡೆದವು.
ಈಗ ಹೇಳಿ. ಈ ಕತೆಯಲ್ಲಿ ಬರುವ ಯಾವ ಪಾತ್ರವಾಗಲಿ ಎಂದು ನೀವು ಬಯಸುತ್ತೀರಿ?
ಇಂದು ಲಂಚ ಪಡೆದರೂ ಅಡ್ಡಿ ಇಲ್ಲ, ಆತ ಕೆಲಸ ಮಾಡಿಕೊಡುತ್ತಾನೆ, ಇನ್ನೊಬ್ಬ ಬರೀ ರೂಲ್ಸ್ ಮಾತನಾಡುತ್ತಾ ಕಾಲಹರಣ ಮಾಡಿಕೊಡುತ್ತಾನೆ. ಕೆಲಸ ಅದೇ ದಿನ ಆಗುವುದಿಲ್ಲ. ನಮಗೆ ಅರ್ಜಂಟು, ಈಗಲೇ ಕೆಲಸ ಆಗಬೇಕು, ದೊಡ್ಡದೊಡ್ಡವರು ತೆಗೆದುಕೊಳ್ಳುವುದಿಲ್ಲವಾ, ಕೊಟ್ಟರೆ ಏನು ತಪ್ಪು, ಲಂಚ ಕೊಟ್ಟರೂ ಸರಿ, ಕೆಲಸ ಆದರೆ ಸಾಕು ಎಂಬ ಜನರ ಮನೋಭಾವನೆಗೆ ಪೂರಕವಾಗಿಯೇ ವ್ಯವಸ್ಥೆ ಇದೆ. ಅದು ಸರಿಯಲ್ಲ ಎಂದು ಹೇಳಿದರೆ, ಆತ ಸಮಾಜದ ಮುಖ್ಯವಾಹಿನಿಯಿಂದ ಹೊರಬೀಳಬೇಕಾಗುತ್ತದೆ.
ಯಾವುದು ಸರಿ, ಯಾವುದು ತಪ್ಪು
ಶಾಲೆ, ಕಾಲೇಜು, ಪತ್ರಿಕೆ ಸಹಿತ ಎಲ್ಲ ರಂಗಗಳಲ್ಲೂ ಅವರವರ ಕೆಲಸವೇನು ಎಂಬುದೇ ಮರೆತುಹೋದಂತಿದೆ. ಒಬ್ಬ ಪತ್ರಕರ್ತ ಎಂದರೆ ಹೊರಗೆ ನಡೆಯುತ್ತಿರುವ ಘಟನೆಗಳನ್ನು ವರದಿ ಮಾಡುವುದು, ವಿಶೇಷ ವರದಿಗಳ ಮೂಲಕ ಸಮಾಜವನ್ನು ಜಾಗೃತಿಗೊಳಿಸುವುದನ್ನು ಮಾಡುವಾತ ಎಂಬ ಮಾತನ್ನು ವರ್ಷಗಟ್ಟಲೆ ಕೇಳಿ ಬಂದಿದ್ದೇವೆ. ಈಗಲೂ ಜರ್ನಲಿಸಂ ಪಠ್ಯದಲ್ಲಿ ಪತ್ರಕರ್ತನ ವ್ಯಾಖ್ಯಾನ ಹೀಗೆಯೇ ಇದೆ. ಆದರೆ ಇದ್ದಕ್ಕಿದ್ದಂತೆ ಇದೇ ವ್ಯಾಖ್ಯಾನ ಬದಲಾಗತೊಡಗಿತು. ಕೇವಲ ವರದಿಗಳನ್ನು ಬರೆದರೆ ಪತ್ರಕರ್ತ ಅನಿಸಿಕೊಳ್ಳುವುದಿಲ್ಲ, ವರದಿಗಳನ್ನು ಯಾರು ಬೇಕಾದರೂ ಬರೆಯಬಹುದು, ಆದರೆ ನಾಲ್ಕು ಜನರ ಸಂಪರ್ಕ ಹೊಂದಿದಾತನೇ ನಿಜವಾದ ಪತ್ರಕರ್ತ ಎಂಬ ಮಾತುಗಳು ಈಗ ಕೇಳಿಬರಲಾರಂಭಿಸಿವೆ. ಇದನ್ನು ಪತ್ರಿಕೆಗಳ ಸಂಪಾದಕೀಯ ವಿಭಾಗದವರೇನಾದರೂ ಕೇಳಿದರೆ ಏನನ್ನಬೇಕು? ಅಧಿಕಾರಿಗಳನ್ನೋ, ಸಾರ್ವಜನಿಕರನ್ನೋ ಅಥವಾ ಇನ್ಯಾರನ್ನೋ ಎಚ್ಚರಿಸಬೇಕು ಎಂದರೆ ಪತ್ರಕರ್ತ ತನ್ನ ವರದಿಗಳ ಮೂಲಕ ಅದನ್ನು ಪ್ರಸ್ತುತಪಡಿಸಬೇಕು, ದೂರವಾಣಿ ಮೂಲಕವೋ ಮಾತಿನ ಮೂಲಕವೋ ಅಲ್ಲ, ರಾಜಕಾರಣಿ, ಅಧಿಕಾರಿಗಳು, ಪೊಲೀಸರ ನಡುವೆ ಕೇವಲ ಒಡನಾಟ ಇಟ್ಟುಕೊಂಡರಷ್ಟೇ ಪತ್ರಕರ್ತನಾಗುವುದಲ್ಲ, ಆ ಸಂಪರ್ಕದಿಂದ ಸಮಾಜಕ್ಕೆ ಉಪಯೋಗವಾಗುವ ಎಷ್ಟು ವರದಿಗಳನ್ನು ಪ್ರಕಟಿಸಲಾಗುತ್ತದೆ ಎಂಬುದರ ಮೇಲೆ ಆತನ ಜಾಣ್ಮೆ ಅಡಗಿದೆ ಎಂಬ ಮಾತನ್ನು ಪತ್ರಿಕೋದ್ಯಮದ ಅನುಭವಿಗಳು ಹೇಳುತ್ತಿದ್ದರು. ಇಂಥದ್ದೇ ಲಕ್ಷ್ಮಣರೇಖೆಗಳು ಶಾಲಾ ವಿದ್ಯಾರ್ಥಿಗಳಿಗೆ, ಶಿಕ್ಷಕರಿಗೆ, ರಾಜಕೀಯದಲ್ಲಿರುವವರಿಗೆ, ಕ್ರೀಡಾಪಟುಗಳಿಗೆ ಇರುತ್ತದೆ. ಆದರೆ ತಮ್ಮ ಪಾಡಿಗೆ ಕೆಲಸ ಮಾಡುವವರನ್ನು ಸಮಾಜ ಮನ್ನಣೆ ಕೊಡುವುದರ ಬದಲು, ಅಪಾತ್ರರನ್ನು ಗುರುತಿಸಿ ಅವರನ್ನು ಅಟ್ಟಕ್ಕೇರಿಸಿ ಸನ್ಮಾನ, ಗೌರವ, ಹುದ್ದೆ, ಸ್ಥಾನಮಾನಗಳನ್ನು ನೀಡಿದರೆ ತಪ್ಪು ಸಂದೇಶವೊಂದು ರವಾನೆಯಾಗುವುದಂತೂ ಸತ್ಯ. ಸಮಾಜಕ್ಕೆ ನಾವು ಹೇಗಿರಬೇಕು ಎಂಬುದರ ಪ್ರಸ್ತುತಿಯೇ ಗೊಂದಲಕಾರಿ.
ವ್ಯವಸ್ಥೆಯ ವಿಶಾಲ ಅರ್ಥದಲ್ಲಿ ಹೇಳುವುದಾದರೆ ಸರಕಾರ ಮತ್ತು ಸಮಾಜದ ಒಟ್ಟು ಸ್ವರೂಪ ನಮ್ಮ ವರ್ತನೆಗಳ ಪ್ರತಿಬಿಂಬ. ನಾವು ಹೇಗಿದ್ದೇವೋ ಹಾಗೆ ಸಮಾಜ ಇರುತ್ತದೆ. ಇಂದು ಜನರು ನಮ್ಮ ಮಕ್ಕಳು ಬೇಗನೆ ದೊಡ್ಡವರಾಗಬೇಕು ಎಂದು ಬಯಸುತ್ತಾರೆ. ಆ ದೊಡ್ಡವರು ಎಂಬ ಪದಕ್ಕೆ ಹಲವಾರು ಅರ್ಥಗಳು ಇರುತ್ತವೆ. ಸರಕಾರಿ ಕಚೇರಿ ಸೇರಿದರೆ ಬೇಗ ಭಡ್ತಿ ದೊರಕಬೇಕು. ಸರಕಾರಿ ವಾಹನಗಳು ತಮ್ಮ ಮನೆ ಅಡುಗೆ ಮನೆಯ ಕೊತ್ತಂಬರಿ ಸೊಪ್ಪು ತರಲೂ ಬಳಕೆಯಾಗಬೇಕು ಎಂದು ಅಪೇಕ್ಷೆಪಡುವವರೂ ಇದ್ದಾರೆ. ಪ್ರೊಮೋಶನ್ ಪಡೆದು ಅಧಿಕಾರಿಯಾದ ವ್ಯಕ್ತಿಗಳು ತಮ್ಮ ‘ಸ್ಟೇಟಸ್’ ಬದಲಾಯಿಸಿಕೊಂಡದ್ದನ್ನೂ ನಾವು ಗಮನಿಸುತ್ತೇವೆ.
ಎಲ್ಲೋ ಓದಿದ ಕತೆ ಇದು.
ಕಚೇರಿಯೊಂದರಲ್ಲಿ ಏಳೆಂಟು ಸಿಬ್ಬಂದಿ ಇದ್ದರು. ಅದರಲ್ಲಿ ಸೀನಿಯರ್ ಹುದ್ದೆಯಲ್ಲಿದ್ದವರಿಗೆ ಪ್ರತ್ಯೇಕ ಚೇಂಬರ್ ಏನೂ ಇರಲಿಲ್ಲ. ಎಲ್ಲರೊಂದಿಗೆ ಬೆರೆಯುತ್ತಿದ್ದರು. ಸಂಜೆ ಎಲ್ಲರೊಂದಿಗೆ ಒಟ್ಟಾಗಿ ಕಾಫಿ ಕುಡಿಯುತ್ತಿದ್ದರು. ಕಷ್ಟ ಸುಖ ಹಂಚಿಕೊಳ್ಳುತ್ತಿದ್ದರು.
ಹೀಗಿರುತ್ತ ಒಂದು ದಿನ ಮ್ಯಾನೇಜ್ ಮೆಂಟ್ ಆ ಸೀನಿಯರ್ ಗೆ ನೀವು ಎಲ್ಲರೊಂದಿಗೆ ಕುಳಿತುಕೊಳ್ಳುವುದನ್ನು ನಾವು ಗಮನಿಸಿದ್ದೇವೆ. ಹಾಗೆ ಮಾಡಬಾರದು, ನಿಮಗೊಂದು ಪ್ರತ್ಯೇಕ ಚೇಂಬರ್ ಮಾಡುತ್ತೇವೆ ಅಲ್ಲೇ ಕುಳಿತುಕೊಳ್ಳಿ. ನಿಮ್ಮೊಂದಿಗೆ ಇರುವವರು ಸಹೋದ್ಯೋಗಿಗಳಲ್ಲ. ಅವರು ನಿಮ್ಮ ಕೈಕೆಳಗೆ ಕೆಲಸ ಮಾಡುವವರು. ಅವರನ್ನು ಚೆನ್ನಾಗಿ ದುಡಿಸಿ, ನಗಬೇಡಿ, ಮುಖ ಗಂಟಿಕ್ಕಿಕೊಂಡು ಕೂತುಕೊಳ್ಳಿ ಎಂದು ಟ್ರೈನಿಂಗ್ ಕೊಟ್ಟಿತು.
ಮುಂದಿನ ವಾರದಲ್ಲೇ ಚಿತ್ರಣ ಬದಲಾಯಿತು. ಸೀನಿಯರ್ ಗೆ ಬೇರೆಯ ಛೇಂಬರ್ ಒಂದು ರಚನೆಯಾಯಿತು. ಸೀನಿಯರ್ ಉಳಿದವರೊಂದಿಗೆ ಅಂತರ ಕಾಯ್ದುಕೊಂಡರು. ಇದರಿಂದ ಅವರ ಸಹೋದ್ಯೋಗಿಗಳು ಪ್ರತ್ಯೇಕವಾಗಿ ಕಾಫಿ ಕುಡಿಯಲು ಹೋಗಲಾರಂಭಿಸಿದರು.  ಪ್ರತಿಯೊಂದು ಕೆಲಸ ಕಾರ್ಯಗಳಲ್ಲೂ ಉಳಿದವರೆಲ್ಲರೂ ತನ್ನ ಆದೇಶ ಪಾಲನೆ ಮಾಡತಕ್ಕದ್ದು, ಇಷ್ಟವಿಲ್ಲದವರು ಬಿಟ್ಟು ಹೋಗಬಹುದು ಎಂಬಂತೆ ಸೀನಿಯರ್ ವರ್ತಿಸಲು ಆರಂಭಿಸಿದರು. ತನ್ನ ಸಿಬ್ಬಂದಿಯ ನಡುವೆಯೇ ಭೇದ ತಂದರು. “ಕೈಕೆಳಗೆ’’ ಇದ್ದವರಲ್ಲೇ ಗುಂಪುಗಳನ್ನು ಸೃಷ್ಟಿಸಿ, ಸದಾ ಕಚ್ಚಾಡಿಕೊಳ್ಳುವಂತೆ ನೋಡಿಕೊಂಡರು. ಎಲ್ಲಿಯವರೆಗೆ ಅಂದರೆ ಇನ್ಯಾರೂ ತನ್ನ ಸ್ಥಾನವನ್ನು ಅಲ್ಲಾಡಿಸಲು ಸಾಧ್ಯವೇ ಇಲ್ಲ ಎಂಬಲ್ಲಿವರೆಗೆ. ಅದಾದ ಬಳಿಕ ಮ್ಯಾನೇಜ್ ಮೆಂಟ್ ಗೆ ಕಚೇರಿಯ ಎಲ್ಲ ಕೆಲಸಗಳೂ ನನ್ನಿಂದಲೇ ನಡೆಯುತ್ತಿದೆ, ನಾನಿಲ್ಲದಿದ್ದರೆ ಕಚೇರಿಯಲ್ಲಿ ಹುಲ್ಲುಕಡ್ಡಿಯೂ ಅಲ್ಲಾಡುವುದಿಲ್ಲ ಎಂಬ ವರದಿಗಳನ್ನು ಕಳಿಸತೊಡಗಿದರು. ಮ್ಯಾನೇಜ್ಮೆಂಟ್ ಗೂ ಸಿಬ್ಬಂದಿಯ ಒಗ್ಗಟ್ಟು ಬೇಕಾಗಿರಲಿಲ್ಲ.  ಇದು ಕಚೇರಿಯ ಒಟ್ಟು ವಾತಾವರಣವನ್ನೇ ಕುಲಗೆಡಿಸಿತು. ಮ್ಯಾನೇಜ್ಮೆಂಟ್ ತನ್ನ ಕೆಲಸ ಸಾಧಿಸಿತ್ತು.
ಇಂದು ಸಾಮಾನ್ಯವಾಗಿ ನಾವು ಕಾಣುತ್ತಿರುವುದೂ ಹಾಗೆಯೇ.
ಕಚೇರಿಯಲ್ಲಿ ತಮ್ಮ ಸಿಬ್ಬಂದಿ ಯಾವ ಪ್ರೊಟೋಕಾಲ್ ಅನುಸರಿಸಬೇಕು ಎಂಬುದನ್ನು ಮ್ಯಾಜೇಜ್ಮೆಂಟ್ ನಿರ್ಧರಿಸುತ್ತದೆ. ಯಾರೂ ಸ್ನೇಹಿತರಂತೆ ಇರಬಾರದು ಎಂಬುದನ್ನು ಪರೋಕ್ಷವಾಗಿ ಹೇಳುತ್ತದೆ. ಹೀಗಾದಾಗಲಷ್ಟೇ ಸ್ಪರ್ಧಾ ಭಾವನೆ ಮೂಡಿ ಉತ್ತಮ ಪ್ರೊಡಕ್ಟಿವಿಟಿ ಲಭಿಸುತ್ತದೆ ಎಂಬ ಟ್ರೈನಿಂಗ್ ನೀಡಲಾಗುತ್ತದೆ.
ಶಾಲಾ, ಕಾಲೇಜುಗಳಲ್ಲೂ ಹಾಗೆಯೇ. ಬೆಸ್ಟ್ ಸ್ಟುಡೆಂಟ್ ಆಫ್ ದಿ ಇಯರ್, ಕ್ಲಾಸ್ ಎಂದೆಲ್ಲ ಆಯ್ಕೆ ಮಾಡಿ, ವಿದ್ಯಾರ್ಥಿಗಳ ಮಧ್ಯೆ ತಾರತಮ್ಯ ಮೂಡಿಸುವ ಪ್ರಯತ್ನಗಳು ಆಗುತ್ತವೆ. ಇವೆಲ್ಲವೂ ಸಂಘಟಿತವಾಗುವ ಬದಲು ವಿಘಟನೆಯತ್ತ ಮತ್ತು ಮನಸ್ಸನ್ನು ಕುಗ್ಗಿಸುವ ಯತ್ನಗಳು ಎಂಬುದು ಅರಿವಿಗೆ ಬರುವುದೇ ಇಲ್ಲ.
ಹೀಗಾಗಿಯೇ ಹುಟ್ಟಿದ ಮಗುವಿಗೆ ಆತ/ಆಕೆ ಮುಂದೆ ಏನಾಗಬೇಕು ಎಂಬ ಗೊಂದಲ ಹೆತ್ತವರಲ್ಲಿ ಕಾಡುತ್ತದೆ. ಆದರ್ಶನಾಗಿ ಬಾಳಬೇಕು, ಸಮಾಜಕ್ಕೆ ಉತ್ತಮ ಕೊಡುಗೆ ನೀಡಬೇಕು ಎಂದೆಲ್ಲಾ ನಾವು ಭಾಷಣಗಳಲ್ಲಿ ಹೇಳುವವರು ಎಷ್ಟರಮಟ್ಟಿಗೆ ಪ್ರಾಕ್ಟಿಕಲ್ ಆಗಿ ಹಾಗೆ ಮಾಡುತ್ತಿದ್ದೇವೆ ಎಂಬುದನ್ನು ಅರಿತುಕೊಳ್ಳಬೇಕು.
ಯಾರೋ ಹೇಳಿದ ಈ ಕತೆ ನೆನಪಿಗೆ ಬಂತು.
ಡಿಂಗಣ್ಣನ ಪಕ್ಷ ದುರಾಡಳಿತ ನಡೆಸಿದೆ, ನಮಗೆ ಅಧಿಕಾರ ಕೊಡಿ ಅವರು ಮಾಡದ್ದನ್ನು ನಾವು ಮಾಡುತ್ತೇವೆ ಎಂದು ಹೇಳಿ ಟಿಂಗಣ್ಣನ ಪಕ್ಷ ಅಧಿಕಾರಕ್ಕೆ ಬಂತು. ಹಾಗೆ ಅಧಿಕಾರ ಪಡೆಯುವ ವೇಳೆ ಅವರ ಜೊತೆ ನಿಸ್ವಾರ್ಥವಾಗಿ ಕೆಲಸ ಮಾಡುವ ಕೆಲವರು ಒಂದು ರೂಪಾಯಿಯನ್ನೂ ತೆಗೆದುಕೊಳ್ಳದೆ ಪ್ರಾಮಾಣಿಕವಾಗಿ ದುಡಿದವರಿದ್ದರು. ಅಧಿಕಾರ ಬಂದ ಮೇಲೆ ಕತೆಯೇ ಬೇರೆಯಾಯಿತು. ಪರಿಸ್ಥಿತಿ ಮೊದಲಿನಂತೆ ಆಯಿತು. ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಮೊದಲು ಡಿಂಗಣ್ಣನ ಪಕ್ಷದವರಿದ್ದರೆ ಈಗ ಟಿಂಗಣ್ಣನ ಪಕ್ಷದ ನಿಕಟವರ್ತಿಗಳು ಜಾಗ ರಿಜಿಷ್ಟ್ರೇಶನ್ ಗೆಂದು ಬರತೊಡಗಿದರು. ದಿಢೀರನೆ ಕೆಲವರಲ್ಲಿ ಐಶಾರಾಮಿ ಕಾರುಗಳು ಕಾಣಸಿಕ್ಕವು. ಪ್ರಾಮಾಣಿಕವಾಗಿ ಬೀದಿ, ಗಲ್ಲಿಯಲ್ಲಿ ದುಡಿದವರು ಹಾಗೆಯೇ ಉಳಿದರು. ಚುನಾವಣೆ ಬಂತು. ಜನರು ಆ ಪಕ್ಷವನ್ನು ಕಿತ್ತೆಸೆದು ಮತ್ತೆ ಇನ್ನೊಂದು ಪಕ್ಷವನ್ನು ಅಧಿಕಾರಕ್ಕೆ ತಂದರು. ಹಳೇ ಕತೆ ರಿಪೀಟ್…
ಹೌದು. ಕಾಗೆ ಬಣ್ಣ ಬಿಳಿ ಎಂದು ಯಾರಾದರೊಬ್ಬ ಪ್ರಭಾವಿ ಹೇಳಿದರೆ, ಹೌದೌದು ಎನ್ನುವ ತಂಡವೇ ಸೃಷ್ಟಿಯಾಗುತ್ತದೆ. ಆ ಕಾಗೆ ಬಿಳಿಯಾಗಿದೆ ಎಂದು ದಪ್ಪ ಅಕ್ಷರಗಳಲ್ಲಿ ಪತ್ರಿಕೆಗಳಲ್ಲಿ ಪ್ರಿಂಟ್ ಆಗುತ್ತದೆ. ಅದು ಬಿಳಿಯಲ್ಲ, ಕಪ್ಪು ನಿಮಗೆ ಗೊತ್ತಲ್ವಾ ಸುಮ್ಮನೆ ಹೇಳ್ತಾರೆ ಎಂದು ವಿರೋಧಿಸುವಾತ ಪತ್ರಕರ್ತರ ಪಕ್ಕ ಬಂದು ಹೇಳುತ್ತಾರೆಯೇ ವಿನ: ಪತ್ರಿಕಾಗೋಷ್ಠಿ ಮಾಡಿ ಅಧಿಕಾರಸ್ಥ ಹೇಳಿದ್ದೆಲ್ಲವೂ ಸುಳ್ಳು ಎನ್ನುವುದಿಲ್ಲ. ಮತ್ತೆ ಅದೇ ವಿರೋಧಿಸುವಾತ ಪ್ರಭಾವಿಯ ಜಾಗಕ್ಕೆ ಬಂದಾಗ ವಿಷಯ ಗೊತ್ತುಂಟಾ ಕಾಗೆ ಬಣ್ಣ ಬಿಳಿ ಎನ್ನುತ್ತಾರೆ. ಮೊದಲು ಪ್ರಭಾವಿಯಾಗಿದ್ದಾತ ಅದನ್ನು ವಿರೋಧಿಸುತ್ತಾನೆ. ಆಗ ಇಬ್ಬರದ್ದೂ ಸಮಾನ ಹೇಳಿಕೆ ಬರುತ್ತದೆ. ಅದೇನೆಂದರೆ ಗಾಜಿನ ಮನೆಯಲ್ಲಿ ಕುಳಿತು ಕಲ್ಲೆಸೆಯಬೇಡಿ.
ಆಗ ತಾನೇ ಹುಟ್ಟಿದ ಮಗುವನ್ನು ಪ್ರಭಾವಶಾಲಿಯನ್ನಾಗಿ ಹೇಗೆ ಮಾಡುವುದು ಎಂದು ಹೆತ್ತವರು ಯೋಚಿಸುತ್ತಾ, ಡೊನೇಶನ್ ಗೆ ಎಷ್ಟು ಅಟ್ಟಿ ನೋಟು ಸಂಗ್ರಹ ಮಾಡುವುದು ಎಂಬುದನ್ನು ಯೋಚಿಸುತ್ತಾರೆ. ಇದೇ ಸರಿಯಾದ ವ್ಯವಸ್ಥೆ ನೀವು ಕಂಡುಕೊಂಡದ್ದೆಲ್ಲವೂ ಇಲ್ಯೂಷನ್ ಎಂದು ಹೇಳುವ ತಂಡವೊಂದು ಸಿದ್ಧವಾಗುತ್ತದೆ. ಹೀಗಾಗಿ ಯಾರಾದರೂ ಸತ್ಯದ ಬೇರುಗಳ ಅನ್ವೇಷಣೆಗೆ ತೊಡಗಿದರೆ ಆತ ಅಪ್ರಸ್ತುತನಾಗುತ್ತಾನೆ.
ಇದು ವಾಸ್ತವ.

Sunday, November 25, 2012

ವಿ‍ಷಮದ್ದು

ಕೆಟ್ಟ ಸದ್ದಿನ
ಉಸಿರು ಕಟ್ಟಿಸುವ ವಿ‍ಷಗಾಳಿ
ಸುಟ್ಟರೂ ಹೋಗಲ್ಲ
ಬಣ್ಣದ ಸುಡುಮದ್ದು
ಮೊನ್ನೆ ಬೆಳಕಿನ ಹಬ್ಬವೆಂದು
ಸದ್ದು ಮಾಡಿ ನೋಟು ಸುಟ್ಟರು!
ಬರೀ ದೀಪಾವಳಿಗೆಂದೇ ಅಲ್ಲ,
ವಿಜಯೋತ್ಸವಕ್ಕೂ ಬೇಡ
 ಸದ್ದಿನ ಗದ್ದಲ ಯಾರಿಗೂ
 ಕೇಡುಗಾಲ ಹೇಳಿ ಕೇಳಿ ಬರೋಲ್ಲ

Wednesday, February 29, 2012

ಪ್ರತಿಸ್ಪಂದನ


ಕಡಲಗರ್ಭದಲ್ಲಿ ಹುಡುಕಿದರೆ
ಬಿಸಿನೀರು ಹೆಪ್ಪುಗಟ್ಟಿದ ಕತೆ
ಸಿಗಬಹುದು..ಅವಮಾನದಿಂದ
ಕುಗ್ಗಿದ್ದೂ ಇರಬಹುದು
ಮೆಟ್ಟಿಲು ಮೆಟ್ಟದೆ ಮೆಟ್ಟಿರಬಹುದು
ಹೀಯಾಳಿಕೆ, ಅಪಹಾಸ್ಯದ
ನಂಜಿನ ಎಂಜಲು ಬಿದ್ದಿರಬಹುದು
ಅದಕ್ಕಾಗಿಯೋ ಏನೋ,,
ಉಪ್ಪು ಜಾಸ್ತಿಯಾದರೆ
ಕಕ್ಕಿಬಿಡುತ್ತಾರೆ, ಮೆಟ್ಟಲಾರದೆ
ಕುಸಿದು ಬೀಳುತ್ತಾರೆ!!

Tuesday, February 14, 2012

ಬೀದಿಯಲ್ಲೇ

ಅಡುಗೆ ಅನಿಲಕ್ಕೆ ಹೈಡಿಮಾಂಡು
ನ್ಯಾಯಕ್ಕಾಗಿ ಮಾತಾಡೋರೆಲ್ಲಾ
ಬೀದಿಗಿಳಿದರು ಆಂಬುಲೆನ್ಸ್ ನ್ನೂ ಬಿಡದೆ
ಒಂದು ಕಪ್ ಚಹಾಕ್ಕೆ ದಿಡೀರನೆ
ಬೆಲೆ ಏರಿತು, ಹಾಲು ಪೆಟ್ರೋಲು
ಕರೆಂಟಿಗೂ ಬೀದಿಗಿಳಿಯಲು ಯಾರಿಗೂ
ಪುರುಸೊತ್ತಿಲ್ಲ...! ಏಕೆಂದರೆ
ಎಲ್ಲ್ರೂ ಬೀದಿಯಲ್ಲೇ ಇದ್ದಾರೆ!!

........!!!

ಮಡೆಯಾದ ಮನದೊಳಗೆ
ತನುವಿಂದೇ ಚಿಂತೆ ದಾನವ
ದಾವಾನಲವೆಂಬ ಕೆಂಡಸಂಪಿಗೆ
ಕೊಟ್ಟ ಪ್ರೇಮ ಪ್ರೀತಿಯಂಥ
ಅನುಭವದ ದಿನಕ್ಕಿಂತ ತಂಗಾಳಿಯ
ಚಂದಿರನ ಹಾಯೆನಿಸೋ
ಬೆಳಕಿನ ಅಪ್ಪುಗೆಯ ಕನಸೇ
ಪ್ರತಿನಿತ್ಯ ಇದ್ದರೆ ಚೆನ್ನ