Wednesday, December 17, 2008

ಸಿಂಗಲ್ ಕಾಲಂ ಸುದ್ದಿ ! ?

"ನಮಸ್ಕಾರ ಮಾರಾಯ್ರೆ”
ಬಿ.ಸಿ.ರೋಡಿನ ಸ್ಟೇಟ್ ಬ್ಯಾಂಕಿನ ಎದುರು ನಿಲ್ಲುವ ಟ್ಯಾಕ್ಸಿಗಳಲ್ಲಿ ಕುಳಿತುಕೊಳ್ಳುವ ಚಾಲಕರ ಪೈಕಿ ಆ ನಗುಮುಖದ ವ್ಯಕ್ತಿ ಹಾಗೆ ಹೇಳುವುದುಂಟು. ಇದು ಪ್ರತಿನಿತ್ಯದ ಕಾಯಕವಾದ ಕಾರಣ ಅಲ್ಲೇ ಬಸ್ಸಿಗೆಯೋ, ಇತರ ಕೆಲಸಕ್ಕೆಂದು ಹೋಗುವಾಗಲೋ ನಾನೂ ನಮಸ್ಕಾರ ಹೇಗಿದ್ದೀರಿ ಎಂಬ ಮಾಮೂಲಿ ಡೈಲಾಗ್ ಹೇಳುತ್ತೇನೆ. ಆತ ಸುಮ್ಮನೆ ನಗುತ್ತಾನೆ. ಅಲ್ಲಿಗೆ ನಮ್ಮ ಸಂಭಾಷಣೆ ಖತಂ.
ತಿಂಗಳ ಹಿಂದೆ ಸಾರಿಗೆ ಮಂತ್ರಿ ಅಶೋಕ್ ಖಾಸಗಿ ಬಸ್ಸುಗ್ಗಳನ್ನು ನಿಲ್ಲಿಸುವ ಪ್ರಸ್ತಾಪ ಇದೆ ಎಂದಾಗ ನಾನು ಆತನನ್ನು ಮಾತಿಗೆಳೆದೆ.
"ನಿಮ್ಮ ಚಾನ್ಸ್..ಇನ್ನು ಬಾಡಿಗೆ ಹೆಚ್ಹಾಗಬಹುದು”
’ಯಾರು ಹೇಳಿದ್ದು ನಿಮಗೆ’ ಆತ ಹೇಳಿದ. "ನಮ್ಮ ಬಾಡಿಗೆ, ವಹಿವಾಟು ಮಾಮೂಲಿಯಾಗೇ ಇರುತ್ತದೆ. ನನ್ನದು ಫಿಕ್ಸೆಡ್ ರೇಟ್. ಬೆಳಗ್ಗೆ ೬ಕ್ಕೆಲ್ಲಾ ಟ್ಯಕ್ಸಿ ಸ್ಟೇಂಡ್ ನಲ್ಲಿ ಇರ್ತೇನೆ. ಏರ್ಪೋರ್ಟ್, ರೈಲ್ವೇ ಸ್ಟೇಶನ್ ಗೆಂದು ಬರುವವರು, ಜಾಗ ಅಳೆಯಲು ಬರುವ ವಕೀಲರು ಹೀಗೆ ನನ್ನದೇ ಆದ ಕೆಲವು ಪಾರ್ಟಿ ಇರ್ತದೆ. ಹೇಗೋ ಹೊಟ್ಟೆಪಾಡು ನಡೆಯುತ್ತದೆ. ಎಲ್ಲಾ ಉಳಿಸಿ, ದಿನಕ್ಕೆ ೨೫೦ ರು. ಆದರೆ ಪುಣ್ಯ”
ಹೀಗೆ ಮಾತನಾಡಿದ ಮೇಲೆ ಆತ ತನ್ನ ಹೆಸರು ಹೇಳಿದ. "ನನ್ನ ಹೆಸರು ಸೂರ್ಯನಾರಾಯಣ. ಬಾಡಿಗೆ ಇದ್ದರೆ ಹೇಳಿ”
ಆಯ್ತು ಎಂದು ನಾನು ಹೊರಟೆ..
ಅದಾದ ಬಳಿಕ ನಮಸ್ಕಾರದಲ್ಲೇ ಮುಕ್ತಾಯ..
ಮೊನ್ನೆ ಎಂದಿನಂತೆ ಮಂಗಳೂರಿಗೆ ಹೋಗುವಾಗ ತುಂಬೆ ರಾಮಲ್ಕಟ್ಟೆ ಹತ್ತಿರ ನಜ್ಜುಗುಜ್ಜಾದ ಅಂಬಾಸಿಡರ್ ಕಾರು ಕಂಡಿತು. ಛೇ.. ಎಂದು ಮರುಕ ವ್ಯಕ್ತಪಡಿಸಿ ಅಫೀಸ್ ನ ಇತರ ವ್ಯವಹಾರದಲ್ಲಿ ಮುಳುಗಿದೆ. ಆದರೆ ರಾತ್ರಿ ಬಂದ ವರದಿ ಹೀಗಿತ್ತು.
ಅದಿರು ಲಾರಿ ಟೂರಿಸ್ಟ್ ಕಾರು ಮುಖಾಮುಖಿ, ಕಾರು ಚಾಲಕ ಸಾವು..
ಚಾಲಕನ ಹೆಸರು ಸೂರ್ಯನಾರಾಯಣ.
ಬೆಳಗಿನ ಜಾವ ರಾಂಗ್ ಸೈಡ್ದ್ನಲ್ಲಿ ಬಂದ ಅದಿರು ಲಾರಿ ಚಾಲಕನ್ನನ್ನು ಬಲಿ ತೆಗೆದುಕೊಂಡಿತು..
ಸಿಂಗಲ್ ಕಾಲಂ ಸುದ್ದಿ ಯಲ್ಲಿ ಸೂರ್ಯನಾರಾಯಣನ ಬದುಕು ಕೊನೆಗೊಂಡಿತ್ತು.
ಸೂರ್ಯ ಮೂಡುವುದಕ್ಕೆ ಸ್ವಲ್ಪ ಮೊದಲು ಅರ್ಧಕ್ಕೆ ನಿಂತ ಹೆದ್ದಾರಿ ಕಾಮಗಾರಿಯ ಅವಶೇಷಗಳಿಂದ ಎದ್ದ ಧೂಳು ನಿದ್ದೆಗಣ್ಣಲ್ಲಿ ರಾಂಗ್ ಸೈಡ್ನಲ್ಲಿ ಸಾಗಿದ ಅದಿರು ಲಾರಿಯು, ಸೂರ್ಯನಾರಾಯಣನ ಬದುಕಿನಲ್ಲಿ ಮತ್ತೆ ಸೂರ್ಯ ಮೂಡದಂತೆ ಮಾಡಿತ್ತು.
----------------
ನಿಮಗಿದು ಬೋರ್ ಶಬ್ದಗಳು ಎನಿಸಬಹುದೇನೋ..ಆದರೆ ಪ್ರತಿರಾತ್ರಿ ನಾನು ಮನೆಗೆ ಹೋಗುವ ವೇಳೆ ತುಂಬೆಯತ್ತ ನನ್ನ ವಾಹನ ಹೋಗುವಾಗಲೆಲ್ಲಾ ಸೂರ್ಯನಾರಾಯಣ ನೆನಪಾಗುತ್ತಾನೆ..

ಹೆಡ್ಲೈಟ್ ಡಿಮ್ ಮಾಡದ ಅತಿಕಾಯ ಅದಿರು ಲಾರಿಗಳೆಲ್ಲಾ ಯಮದೂತರಂತೆ ಕಾಡುತ್ತಾರೆ..

6 comments:

KRISHNA said...

aneka nigle column suddigala hinde ondonu duranta kathe iruttave... patrikegalige adu suddi maatra. suddigalige eshto baari bhaavanegale irodilla... durantagalu, suddigalu nirantara. odugaru, suddi maaduvavaru maatra kshanika

shivu K said...

ಬಾನಾಡಿ ಸಾರ್,

ಅತ್ಮೀಯರಾದವರಿಗೆ ಇದ್ದಕ್ಕಿದ್ದಂತೆ ಈ ರೀತಿ ಮನಸ್ಸಿಗೆ ಆಗುವ ಆಘಾತ ಆಷ್ಟಿಷ್ಟಲ್ಲ. ಸೂರ್ಯನಾರಾಯಣನಿಗೆ ಶಾಂತಿ ಸಿಗಲಿ.
ಆಹಾಂ! ನನ್ನ ಮತ್ತೊಂದು ಬ್ಲಾಗ್ "ಕ್ಯಾಮೆರಾ ಹಿಂದೆ " ಅದರಲ್ಲಿ ಇಂತವೇ ಕೆಲವು ವಿಭಿನ್ನ ಲೇಖನಗಳಿವೆ ಬಿಡುವು ಮಾಡಿಕೊಂಡು ಬನ್ನಿ...

ಹರೀಶ ಮಾಂಬಾಡಿ said...

ಕೃಷ್ಣಮೋಹನ್, ಶಿವು, ಪ್ರತಿಕ್ರಿಯಿಸಿದ್ದಕ್ಕೆ ವಂದನೆಗಳು.

VENU VINOD said...

ಛೇ ಛೇ ಛೇ...
ಇದು ಮುಗಿಯದ ಕಥೆ..ಬಳ್ಳಾರಿಯಿಂದ ಮಂಗಳೂರು ವರೆಗೆ ಅದಿರು ಲಾರಿಗಳ ಅಡಿಗೆ ಸೂರ್ಯನಾರಾಯಣನಂತೆ ಸಿಲುಕಿದವರೆಷ್ಟೋ...

ಚಿತ್ರಾ ಕರ್ಕೇರಾ ದೋಳ್ಪಾಡಿ.. said...

ಬರಹ ಬೋರ್ ಹೊಡೆಸಿಲ್ಲ..ಛೇ! ಹೀಗಾಗಬಾರದಿತ್ತು ಅನಿಸ್ತು. ಹಾಗೇ ನಾನು ಬೃಹತ್ ಅದಿರು ಲಾರಿಗಳನ್ನು ಸರಿಯಾಗೇ ನೋಡಿದ್ದು ಹಂಪಿಗೆ ಪ್ರವಾಸ ಹೋದಾಗ..ಅದೂ ಚಿತ್ರದುರ್ಗದಿಂದ ಹಂಪಿಗೆ ಹೋಗುವ ಕೆಟ್ಟ ರಸ್ತೆಗಳಲ್ಲಿ ವೇಗದೂತರಂತೆ ಬರುವ ಲಾರಿಗಳು...ಕಾರಿನ ಎದುರು ಸೀಟಿನಲ್ಲಿ ಕುಳಿತ ನನ್ನೆದೆ ಝಲ್ಲೆನ್ನುತ್ತಿತ್ತು. ಸೀದಾ ಬಂದು ನಮ್ಮ ವಾಹನಕ್ಕೆ ಬಡಿಯುವ ಹಾಗೇ ಬರುತ್ತಿದ್ದವು ...
-ತುಂಬುಪ್ರೀತಿ,
ಚಿತ್ರಾ

ಹರೀಶ ಮಾಂಬಾಡಿ said...

ವೇಣು, ಇಂಥ ಕತೆಗೆ ಅಂತ್ಯ ಯಾವಾಗ?

ಚಿತ್ರಾ, ಅದಿರು ಲಾರಿಗಳನ್ನು ರಾತ್ರಿಯ ವೇಳೆ ಓಡಿಸುವವರು ಲಾರಿಯ ಕ್ಲೀನರ್ ಗಳು. ಇಂಥ ಆವಾಂತರಕ್ಕೆ ಇದೇ ಕಾರಣ. ಪೊಲೀಸರಿಗೆ ಮಾಮೂಲು ಕಡೆ ಕಣ್ಣು ಹಾಕುವುದು ಬಿಟ್ಟರೆ, ಇಂಥದ್ದಕ್ಕೆಲ್ಲಾ ಪುರುಸೊತ್ತೆಲ್ಲಿದೆ ಅಲ್ವ?

ಪ್ರತಿಕ್ರಿಯೆಗೆ ವಂದನೆ.
ನಿಮ್ಮ ಹರೀಶ ಮಾಂಬಾಡಿ